More

    ಸುಂದರಿ ಸಕ್ಕರೆ ಕಾರ್ಖಾನೆ ಆರಂಭಕ್ಕಾಗಿ ಸಾರ್ವಜನಿಕ ಆಲಿಕೆ ಸಭೆ

    ಕಂಪ್ಲಿ: ಇಲ್ಲಿನ ಸುಂದರಿ ಸಕ್ಕರೆ ಕಾರ್ಖಾನೆ ಯೋಜನಾ ಪ್ರದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಆಲಿಕೆ ಸಭೆಯಲ್ಲಿ, ಕಾರ್ಖಾನೆ ಆರಂಭಕ್ಕೆ ಬಹಳಷ್ಟು ಪರ ಮತ್ತು ಕೆಲ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.

    ಅಪರ ಜಿಲ್ಲಾಧಿಕಾರಿ ಎನ್.ಮಹಮ್ಮದ್ ಜುಬೇರ್ ಮಾತನಾಡಿ, ಕಂಪ್ಲಿ ಗ್ರಾಮದ ಸರ್ವೇ ನಂಬರ್ 1424ಎ ಸೇರಿ ನಾನಾ ಸರ್ವೇ ನಂಬರ್‌ಗಳಲ್ಲಿನ ಕಬ್ಬು ಅರೆಯುವ ಘಟಕವನ್ನು 3500 ಟಿಸಿಡಿಯಿಂದ 4500 ಟಿಸಿಡಿಗೆ ಹೆಚ್ಚಿಸುವುದು, ವಿದ್ಯುತ್ ಘಟಕದ ಸಾಮರ್ಥ್ಯವನ್ನು 14 ಮೆ.ವಾಟ್‌ನಿಂದ 24 ಮೆ.ವಾಟ್‌ಗೆ ಹೆಚ್ಚಿಸುವ ಜತೆಗೆ 200 ಕೆಎಲ್‌ಪಿಡಿ ಸಾಮರ್ಥ್ಯದ ಧಾನ್ಯ ಆಧಾರಿತ ಡಿಸ್ಟಿಲರಿ ಘಟಕವನ್ನು ಮಲ್ಟಿಪೀಡ್ ಘಟಕವಾಗಿ ಪರಿವರ್ತಿಸುವ ಉದ್ದೇಶಕ್ಕಾಗಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಪರ ಮತ್ತು ವಿರೋಧ ಅರ್ಜಿಗಳಿದ್ದು ಪರಿಶೀಲಿಸಲಾಗುವುದು. ಸಕ್ಕರೆ ಕಾರ್ಖಾನೆಯ ಜಮೀನು ಮಾಲೀಕತ್ವ ಕುರಿತಂತೆ ಆಕ್ಷೇಪವ್ಯಕ್ತವಾಗಿದೆ. ಆರಂಭಗೊಳ್ಳುವ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ನೀಡುವಂತೆ, ನಿರಂತರ ಕಾರ್ಖಾನೆ ನಡೆಸುವಂತೆ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹೇಳಿದರು.

    ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡ ಪುರಸಭೆ ಮಾಜಿ ಅಧ್ಯಕ್ಷರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ರೈತರಾದ ಬಿ.ಗಂಗಾಧರ, ಕಟ್ಟೆ ಮಾರೆಪ್ಪ, ಅಳ್ಳಳ್ಳಿ ವೀರೇಶ್, ಜಿ.ಗಣೇಶಗೌಡ, ಚಿತ್ರದುರ್ಗದ ಪರಿಸರವಾದಿಗಳಾದ ಮಂಜುಳಾ, ಬಳ್ಳಾರಿಯ ಗೀತಾ ಮತ್ತಿತರರು ಮಾತನಾಡಿ, ರೈತರ ಅನುಕೂಲ ಹಾಗೂ ನಿರುದ್ಯೋಗ ನಿವಾರಣೆಗಾಗಿ ಸಕ್ಕರೆ ಕಾರ್ಖಾನೆ ಆರಂಭಿಸಿ ಸುಂದರ ಪರಿಸರ ನಿರ್ಮಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ: ಶಿವಮೊಗ್ಗ ಮೂಲದ ಅಧಿಕಾರಿ ಸಾವು

    ಸಕ್ಕರೆ ಕಾರ್ಖಾನೆ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕ ಭರತ್ ಮುಗದೂರ ಮಾತನಾಡಿ, ಕಾರ್ಖಾನೆಯ ಭೂಮಿ ಮಾಲೀಕತ್ವದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಆಲಿಕೆ ಸಭೆ ನಡೆಸಿದ್ದು ಸರಿಯಲ್ಲ. ನ್ಯಾಯಾಲಯದ ಪ್ರಕರಣ ಇತ್ಯರ್ಥ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಾಗ ಸಭೆಯಲ್ಲಿ ಗೊಂದಲ ಏರ್ಪಟ್ಟಿತು.

    ಎಡಿಸಿ ಮಧ್ಯಪ್ರವೇಶಿಸಿ, ಪರಿಸರ ಇಲಾಖೆ ಇತಿಮಿತಿಯಲ್ಲಿ ಸಭೆ ಕರೆದಿದೆ. ಪರಿಸರಕ್ಕೆ ಸಂಬಂಧಿಸಿದ ತಕರಾರು ಇದ್ದರೆ ತಿಳಿಸಿ ಎಂದು ಪರಿಸ್ಥಿತಿ ತಿಳಿಸಿಗೊಳಿಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ನಗರ ಅಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಸಹಕಾರಿ, ಸರ್ಕಾರಿ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಂತೆ, ರೈತ ನಾಗೇಂದ್ರ, ಕಬ್ಬಿನ ಬೆಳೆಗೆ ಅಗತ್ಯ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.

    ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಜಿಲ್ಲೆಯ ಪರಿಸರ ಅಧಿಕಾರಿ ಡಾ.ದೊಡ್ಡ ಶಾಣಯ್ಯ, ವಿಜಯನಗರ ಜಿಲ್ಲೆಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರುಳೀಧರ, ಸುಂದರಿ ಶುಗರ್ಸ್‌ ಸೈಟ್ ಇನ್‌ಚಾರ್ಜ್ ಅಬ್ದುಲ್ಲಾ, ನಾನಾ ಕಡೆಗಳಿಂದ ಆಗಮಿಸಿದ ಪರಿಸರವಾದಿಗಳು, ರೈತರು, ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts