More

    ಅಫ್ಘನ್‌ನಿಂದ ಸ್ವದೇಶ ತಲುಪಿದ ಕನ್ನಡಿಗರು

    ಉಳ್ಳಾಲ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಿಲಿಟರಿ ಬೇಸ್ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಉದ್ಯೋಗದಲ್ಲಿದ್ದ ಕೊಲ್ಯ ಕಣೀರು ತೋಟ ನಿವಾಸಿ ಪ್ರಸಾದ್ ಆನಂದ್(39) ಸೋಮವಾರ ಬೆಳಗ್ಗೆ ಮನೆ ಸೇರಿದ್ದಾರೆ. ಇದರಿಂದಾಗಿ ಉಳ್ಳಾಲ ಭಾಗದ ಇಬ್ಬರು ಸ್ವನಿವಾಸ ತಲುಪಿದಂತಾಗಿದೆ.

    2013ರಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿದ್ದ ಪ್ರಸಾದ್, ಕಾಬೂಲಿನ ನ್ಯಾಟೋ ಮಿಲಿಟರಿ ಬೇಸ್‌ನಲ್ಲಿ ಲಂಡನ್ ಮೂಲದ ಓವರ್‌ಸೀಸ್ ಸಪ್ಲೈ ಸರ್ವೀಸಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ನಾಲ್ಕು ದಿನಗಳ ಹಿಂದೆ ಅಮೆರಿಕದ ನ್ಯಾಟೊ ಪಡೆ ಏರ್‌ಲಿಫ್ಟ್ ಮಾಡಿದ್ದ ವಿಮಾನದಲ್ಲಿ ಪ್ರಸಾದ್ ಇದ್ದರು. ವಿಮಾನ ಕಾಬೂಲ್‌ನಿಂದ ಕತಾರ್ ತಲುಪಿದ್ದರಿಂದ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಮೂರು ದಿನ ಬಾಕಿಯಾಗಿದ್ದರು. ಭಾರತೀಯ ರಾಯಭಾರಿ ಕಚೇರಿ ಸಹಕಾರದಲ್ಲಿ ಶನಿವಾರ ಕತಾರ್‌ನಿಂದ ವಿಮಾನ ಏರಿದ್ದು, ಭಾನುವಾರ ಬೆಳಗ್ಗೆ ದೆಹಲಿ ತಲುಪಿ, ಅಲ್ಲಿಂದ ಸೋಮವಾರ ಬೆಳಗ್ಗೆ ಕೊಲ್ಯ ಸೇರಿದ್ದಾರೆ.

    ದೆಹಲಿ ತಲುಪಿದ ಮೊಂತೆರೋ: ಕಾಬೂಲ್‌ನ ಖಾಸಗಿ ಸಂಸ್ಥೆಯಲ್ಲಿ ಮೆಕಾನಿಕ್ ವಿಭಾಗದಲ್ಲಿ ಕೆಲಸದಲ್ಲಿದ್ದ ಉಳ್ಳಾಲ ಉಳಿಯ ನಿವಾಸಿ ಡೆನ್ಝಿಲ್ ಮೊಂತೆರೋ ದೆಹಲಿ ತಲುಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಐದು ವರ್ಷಗಳ ಹಿಂದೆ ಅಲ್ಲಿನ ಇಕೊಲಾಗ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಮೆಕಾನಿಕಲ್ ವಿಭಾಗದಲ್ಲಿ ನಿರ್ವಾಹಕರಾಗಿ ಸೇರಿದ್ದರು. ಕಾಬೂಲ್‌ನಲ್ಲಿದ್ದ ಸಹೋದರ ಮೆಲ್ವಿನ್ ಮೊಂತೆರೋ ಕಳೆದ ಗುರುವಾರವೇ ಮನೆಗೆ ಬಂದಿದ್ದರು. ಆ ಸಂದರ್ಭ ಡೆನ್ಝಿಲ್ ಸಂಪರ್ಕದಲ್ಲಿ ಇಲ್ಲದಿದ್ದರೂ ಕತಾರ್ ತಲುಪಿರುವ ಮಾಹಿತಿ ನೀಡಿದ್ದರು. ಡೆನ್ಝಿಲ್ ಭಾನುವಾರವೇ ಕತಾರ್‌ನಿಂದ ದೆಹಲಿ ತಲುಪಿದ್ದು, ಮಂಗಳವಾರ ಊರು ತಲುಪುವ ನಿರೀಕ್ಷೆಯಿದೆ.

    ಊರಿಗೆ ಬಂದ ರಾಕಿ ಚರಣ್: ಉಪ್ಪಿನಂಗಡಿ (ದ.ಕ.): ಅಫ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಮಂಗಳೂರು ಬಿಕರ್ನಕಟ್ಟೆಯ ನಿವಾಸಿ ರಾಕಿ ಚರಣ್ ಮೊಂತೆರೋ ಸೋಮವಾರ ಊರಿಗೆ ತಲುಪಿದ್ದಾರೆ.

    9 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಪಡೆಯ ಮೆಕಾನಿಕಲ್ ವಿಭಾಗದಲ್ಲಿ ಮೆಕಾನಿಕಲ್ ಇನ್‌ಚಾರ್ಜ್ ಆಗಿದ್ದ ಚರಣ್ ಮಾರ್ಚ್ ತಿಂಗಳಲ್ಲ್ಲಿ ಊರಿಗೆ ಬಂದಿದ್ದರು. ಈ ಮಧ್ಯೆ ಅಮೆರಿಕ ಸೇನಾ ವಿಭಾಗದ ಕಂಪನಿಯಿಂದ ತುರ್ತು ಕರೆ ಬಂದು, ಆಗಸ್ಟ್ 9ರಂದಷ್ಟೇ ಕೆಲಸಕ್ಕೆ ಹಿಂತಿರುಗಿದ್ದರು. ಇದೇ ಸಂದರ್ಭ ಅಫ್ಘನ್ ದೇಶವನ್ನು ತಾಲಿಬಾನ್ ಆವರಿಸಿತು. ರಾಕಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳ ಕಾಬೂಲ್ ವಿಮಾನ ನಿಲ್ದಾಣದ ಬಳಿಯೇ ಇದ್ದ ಕಾರಣ ಅಮೆರಿಕ ಸೇನೆ ಭದ್ರತೆ ನೀಡಿದೆ.

    ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಆ.16ರಂದು ರಾತ್ರಿ ನಮ್ಮನ್ನು ಕಾಬೂಲ್‌ನಿಂದ ಏರ್‌ಲಿಫ್ಟ್ ಮಾಡಲಾಗುವುದೆಂಬ ಮಾಹಿತಿ ಬಂತು. ವಿಮಾನ ನಿಲ್ದಾಣದ ಬಳಿ ಗುಂಡಿನ ಮೊರೆತ ಕೇಳಿಸುತ್ತಿತ್ತು. ಜನರು ಜೀವ ರಕ್ಷಣೆಗಾಗಿ ಬಸ್ ನಿಲ್ದಾಣಕ್ಕೆ ನುಗ್ಗಿದಂತೆ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸುತ್ತಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿತ್ತು. ವಿಶೇಷ ಭದ್ರತೆಯಲ್ಲಿ ನಮ್ಮನ್ನು ಕತಾರ್ ದೇಶದ ಅಮೆರಿಕ ಸೇನಾ ನೆಲೆಗೆ ತಂದು ಬಿಡಲಾಯಿತು. ಆ.21ರಂದು ಭಾರತೀಯ ದೂತವಾಸದ ಸಿಬ್ಬಂದಿ ನೆರವಿನೊಂದಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಿದರು ಎಂದು ರಾಕಿ ವಿವರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರು ತೋರುವ ಕಾರ್ಯಕ್ಷಮತೆಯನ್ನು ಅಫ್ಘನ್ ಸೈನಿಕರು ತೋರಿಸದ ಕಾರಣ ಸುಲಭವಾಗಿ ತಾಲಿಬಾನಿಗಳು ನುಗ್ಗಿದ್ದಾರೆ ಎಂಬುದು ಚರಣ್ ಅವರ ಅಭಿಪ್ರಾಯ.

    ಅಫ್ಘನ್‌ನಿಂದ ಮರಳಿದ ಐವರು ಮನೆಗೆ: ಅಫ್ಘಾನಿಸ್ತಾನದಿಂದ ಭಾನುವಾರ ದೆಹಲಿಗೆ ತಲುಪಿದ್ದ ದಕ್ಷಿಣ ಕನ್ನಡದ ಐವರು ತಮ್ಮ ಮನೆಗಳಿಗೆ ಮರಳಿದ್ದಾರೆ.
    ಆದರೆ ಬಂಟ್ವಾಳ ಮೂಲದ ಧರ್ಮಗುರು ಜೆರೋಮ್ ಸಿಕ್ವೇರಾ ಹಾಗೂ ಚಿಕ್ಕಮಗಳೂರು ಮೂಲದ ರಾಬರ್ಟ್ ಕ್ಲೈವ್ ಎಂಬುವರು ಇನ್ನೂ ಕಾಬೂಲ್ ಏರ್‌ಪೋರ್ಟ್‌ನಲ್ಲೇ ಇದ್ದು ಅವರು ಬರುವ ಬಗ್ಗೆ ಮಾಹಿತಿ ಇಲ್ಲ. ಭಾನುವಾರ ದೆಹಲಿಗೆ ಆಗಮಿಸಿದ್ದ ತೊಕ್ಕೊಟ್ಟಿನ ಪ್ರಸಾದ್ ಆನಂದ್ ಅವರು ಹೈದರಾಬಾದ್ ಮೂಲಕ ಸೋಮವಾರ ಊರಿಗೆ ಬಂದಿದ್ದಾರೆ. ಮೂಡುಬಿದಿರೆಯ ಜಗದೀಶ್ ಪೂಜಾರಿ, ಬಜ್ಪೆಯ ದಿನೇಶ್ ರೈ, ಡೆಸ್ಮಾಂಡ್ ಡೇವಿಡ್ ಡಿಸೋಜ, ಶ್ರವಣ್ ಅಂಚನ್ ದೆಹಲಿಯಿಂದ ಮುಂಬೈಗೆ ಆಗಮಿಸಿ ಬಳಿಕ ಅಲ್ಲಿಂದ ರಾತ್ರಿ ವೇಳೆ ಮಂಗಳೂರಿಗೆ ಬಂದಿಳಿದಿದ್ದಾರೆ. ಮಂಗಳೂರಿನ ಸಿಸ್ಟರ್ ತೆರೆಸಾ ಕ್ರಾಸ್ತಾ ಅಫ್ಘಾನಿಸ್ತಾನದಿಂದ ನೇರವಾಗಿ ಇಟಲಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿದ್ದ ಮಿಲಿಟರಿ ಬೇಸ್‌ನಲ್ಲಿ ಇಟಲಿ ಸೈನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಆ ದೇಶಕ್ಕೆ ಏರ್‌ಲಿಫ್ಟ್ೃ ಮಾಡಿರುವ ಸಾಧ್ಯತೆಗಳಿವೆ. ಆದರೆ ಆ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡಿದ್ದರೂ, ಅಮೆರಿಕನ್ ಮಿಲಿಟರಿ ಬೇಸ್ ಇರುವ ಕಾಬುಲ್ ಏರ್‌ಪೋರ್ಟ್‌ಗೆ ಇನ್ನೂ ಪೂರ್ಣಪ್ರಮಾಣದಲ್ಲಿ ದಾಳಿ ನಡೆಸುವ ಧೈರ್ಯ ತೋರಿಲ್ಲ. ಇನ್ನೂ ಅಮೆರಿಕನ್ ಮಿಲಿಟರಿ ಅಲ್ಲಿ ಕಾರ್ಯಾಚರಿಸುತ್ತಿದೆ. ಹಾಗಾಗಿ ಅವರೊಂದಿಗೆ ಇನ್ನೂ ಅನೇಕ ಭಾರತೀಯರು, ಕನ್ನಡಿಗರು ಇರುವ ಸಾಧ್ಯತೆ ಹೆಚ್ಚಿದೆ ಎಂದು ಅಫ್ಘಾನಿಸ್ತಾನದಿಂದ ವಾಪಸಾದವರು ತಿಳಿಸಿದ್ದಾರೆ.

    ಮತ್ತೆ ಅಫ್ಘಾನ್‌ಗೆ ತೆರಳುವುದು ಕಷ್ಟ: ಮಂಗಳೂರು: ಸದ್ಯಕ್ಕೆ ಅಫ್ಘನ್ ಸರಿಯಾಗುವ ಲಕ್ಷಣ ಕಾಣುವುದಿಲ್ಲ, ಹಾಗಾಗಿ ಇನ್ನು ಆ ಕಡೆ ತೆರಳುವುದು ಕಷ್ಟ..ಈಗ ತಾಯ್ನಡಿಗೆ ಬಂದಿದ್ದೇವೆ, ಅದೇ ಖುಷಿ…ಇದು ಅಫ್ಘಾನಿಸ್ತಾನದಿಂದ ಮನೆಯತ್ತ ಮರಳಿರುವ ಜಿಲ್ಲೆಯ ನಾಲ್ವರ ಅಭಿಮತ.

    ಮೂಡುಬಿದಿರೆಯ ಜಗದೀಶ್ ಪೂಜಾರಿ, ಬಜ್ಪೆಯ ದಿನೇಶ್ ರೈ, ಡೆಸ್ಮಾಂಡ್ ಡೇವಿಡ್ ಡಿಸೋಜ, ಶ್ರವಣ್ ಅಂಚನ್ ಅವರು ಭಾನುವಾರ ಕತಾರ್‌ನಿಂದ ದೆಹಲಿಗೆ ಆಗಮಿಸಿದ್ದರು. ಸೋಮವಾರ ಮುಂಬೈಗೆ ಆಗಮಿಸಿ ಬಳಿಕ ಅಲ್ಲಿಂದ ರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೆಲ್ಲ ನ್ಯಾಟೊ ಮಿಲಿಟರಿ ನೆಲೆಯ ಒಳಗೇ ಇದ್ದ ಕಾರಣ ಅಪಾಯವಾಗಿಲ್ಲ. ನಮ್ಮನ್ನು ಮಿಲಿಟರಿ ರಕ್ಷಿಸುವ ವಿಶ್ವಾಸ ಇತ್ತು ಎಂದರು.

    ನಾನು 10 ವರ್ಷದಿಂದ ಅಫ್ಘನ್‌ನಲ್ಲಿ ಎಸ್‌ಒಎಸ್ ಎಂಬ ಕಂಪನಿಯಲ್ಲಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ಕೋಚ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ, ಅಲ್ಲಿ ತಾಲಿಬಾನಿಗರ ಉಪಟಳ ಹೆಚ್ಚಾದಾಗ ನಮ್ಮನ್ನು ಅಮೆರಿಕದ ಮಿಲಿಟರಿ ದೋಹಾ ಕತಾರ್‌ಗೆ ಏರ್‌ಲಿಫ್ಟ್ ಮಾಡಿದರು, ಅಲ್ಲಿಂದ ದೆಹಲಿಗೆ ಬಂದು ಈಗ ಮಂಗಳೂರು ತಲಪಿದ್ದೇವೆ ಎಂದು ಜಗದೀಶ್ ಪೂಜಾರಿ ತಿಳಿಸಿದರು.

    ಅಫ್ಘಾನಿಸ್ತಾನದ ಸೇನಾ ನೆಲೆಯಲ್ಲಿ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡೆಸ್ಮಾಂಡ್ ಡೇವಿಡ್ ಕೂಡ ಕತಾರ್‌ಗೆ ಏರ್‌ಲಿಫ್ಟ್ ಆಗಿ ಅಲ್ಲಿಂದ ದೆಹಲಿ ಮೂಲಕ ಆಗಮಿಸಿದವರು. ಅಲ್ಲಿ ಆಗುತ್ತಿರುವ ವಿದ್ಯಮಾನಗಳಿಂದ ಭಯವಾಗಿದ್ದು ನಿಜ ಆದರೆ ಮಿಲಿಟರಿಯ ರಕ್ಷಣೆಯಲ್ಲಿದ್ದ ಕಾರಣ ನಮಗೆ ಭಾರತಕ್ಕೆ ಬರುವ ಎಲ್ಲಾ ಭರವಸೆಯೂ ಇತ್ತು ಎನ್ನುತ್ತಾರೆ.

    ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಜೋರಾಗಿದೆ. ಆದರೆ ನಾವು ಮಿಲಿಟರಿ ಬೇಸ್ ಒಳಗಡೆ ಇದ್ದು ತಾಲಿಬಾನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸದ ಕಾರಣ ನಮಗೇನೂ ತೊಂದರೆ ಆಗಿಲ್ಲ. ತಾಲಿಬಾನಿಗಳ ಅಟ್ಟಹಾಸದಿಂದಾಗಿ ಕಾಬೂಲ್‌ನಲ್ಲಿ ಮೂರು ದಿನಗಳಿಂದ ವಿಮಾನಗಳ ಹಾರಾಟ ತಡೆಹಿಡಿಯಲಾಗಿತ್ತು. ಆದ್ದರಿಂದ ಅಲ್ಲಿಂದ ಹೊರಬರಲು ಕಷ್ಟವಾಯಿತು. ಮೂರು ದಿನಗಳಿಂದ ನಮಗೆ ವಿಮಾನ ಕಾಯುವುದೇ ಕೆಲಸವಾಗಿತ್ತು. ಒಂದೆಡೆ ಕಾತರ, ಮತ್ತೊಂದೆಡೆ ಆತಂಕವೂ ಇತ್ತು. ನಮ್ಮ ಗುಂಪಿನಲ್ಲಿ ಐವರು ಕನ್ನಡಿಗರಿದ್ದರು, ನಮ್ಮ ಕಂಪನಿಯ ಯಾರೊಬ್ಬರೂ ಕನ್ನಡಿಗರು ಅಲ್ಲಿ ಬಾಕಿಯಾಗಿಲ್ಲ. ಇನ್ನು ಯಾರೂ ಇರುವ ನಿರೀಕ್ಷೆಯೂ ಇಲ್ಲ.

    ಪ್ರಸಾದ್ ಆನಂದ್
    ಕೊಲ್ಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts