More

    ಕನ್ನಡದ ಸಿರಿಬೆಳಕನ್ನು ಜಗಕೆ ಹರಡಿದ ಮಹಾನ್ ಚೇತನ

    ಕನ್ನಡದ ಸಿರಿಬೆಳಕನ್ನು ಜಗಕೆ ಹರಡಿದ ಮಹಾನ್ ಚೇತನವೈ.ಕೆ.ಮುದ್ದುಕೃಷ್ಣ

    ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಕವಿಗಳಲ್ಲಿ ಡಾ. ನಿಸಾರ್ ಅಹಮದ್ ಪ್ರಮುಖರು. ಪದ್ಮಶ್ರೀ, ನಾಡೋಜ, ನೃಪತುಂಗ ಮುಂತಾದ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಜೊತೆಗೆ ತಮ್ಮ ನಿತ್ಯೋತ್ಸವ ಗೀತೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಿಸಾರರು ಕಾವ್ಯಲೋಕದ ಶಕ್ತಿಯನ್ನು ಅನಾವರಣಗೊಳಿಸಿದವರು. ಇಂದು (ಫೆ.5) ಅವರ ಜನ್ಮದಿನದ ನಿಮಿತ್ತ ನಿಸಾರರ ಪ್ರತಿಭಾಶಕ್ತಿ, ವಿಶಿಷ್ಟ ವ್ಯಕ್ತಿತ್ವವನ್ನು ಮೆಲುಕು ಹಾಕಿದ್ದಾರೆ ನಿತ್ಯೋತ್ಸವ ಕವಿಯೊಂದಿಗೆ ಒಡನಾಡಿದವರು.

    ಜೀವನಮಂತ್ರ ಹೇಳಿಕೊಟ್ಟ ನಿಗರ್ವಿ ಕವಿ 

    ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶಕ್ತಿ ತುಂಬಿದವರು ಡಾ. ಕೆ.ಎಸ್. ನಿಸಾರ್ ಅಹಮದ್. ಅದರಲ್ಲೂ, ನಿತ್ಯೋತ್ಸವ ಕೌತುಕದ ಕಾವ್ಯ. ನಿತ್ಯೋತ್ಸವ ಬರೀ ಪ್ರಕೃತಿವರ್ಣನೆಯಿಂದ ಕೂಡಿಲ್ಲ. ಕಾವ್ಯದ ಒಳಮರ್ಮವನ್ನು ಅರಿತರೆ ಅದರಲ್ಲಿನ ಹೊಳಹುಗಳ ಸೊಗಸು ಮನದಟ್ಟಾಗುತ್ತದೆ. ವೃತ್ತಿಯಲ್ಲಿ ಭೂ ವಿಜ್ಞಾನಿಯಾಗಿದ್ದರೂ, ಭೂಗರ್ಭದಿಂದ ಸಾಹಿತ್ಯದ ಶಕ್ತಿಯನ್ನು ಅಗೆದೆಗೆದು ಕೊಟ್ಟವರು ನಿಸಾರರು. 1968-69ರಲ್ಲಿ ನಾನು ಸಂಗೀತ ಕ್ಷೇತ್ರಕ್ಕೆ ಬಂದೆ. ಕಾಳಿಂಗರಾವ್ ಅವರ ಶಿಷ್ಯನಾಗಿದ್ದೆ. 1973-74ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ನಿಸಾರರ ಭೇಟಿಯಾಯಿತು. ಹರಟೆ ಹೊಡೆಯುವುದು, ಸಾಹಿತ್ಯಿಕ ವಿಷಯಗಳ ಬಗ್ಗೆ ರ್ಚಚಿಸುವುದು ನಡೆಯುತ್ತಲೇ ಇತ್ತು.

    ಕಾವ್ಯದ ಬಗೆಗಿನ ಅವರ ಅಗಾಧ ಪ್ರೀತಿ, ಹೊಸಬಗೆಯಲ್ಲಿ ಚಿಂತಿಸುತ್ತಿದ್ದ ರೀತಿ, ಸೃಜನಶೀಲತೆಗೆ ಒತ್ತು ನೀಡುತ್ತಿದ್ದ ಅವರ ಸ್ವಭಾವ ನನ್ನನ್ನು ಬಹುವಾಗಿ ಪ್ರಭಾವಿಸಿತು. ಮೇಷ್ಟ್ರಾಗಿದ್ದರೂ, ಅವರದ್ದು ಬಿಗುಮಾನದ ವ್ಯಕ್ತಿತ್ವ. ಅಂದರೆ, ಯಾವುದೋ ಕಾರ್ಯಕ್ರಮವನ್ನು, ಆಮಂತ್ರಣವನ್ನು ಸರಳವಾಗಿ ಅಥವಾ ದಿಢೀರನೆ ಒಪ್ಪಿಕೊಳ್ಳುತ್ತಿರಲಿಲ್ಲ. ಏಕೆಂದರೆ, ಅದು ಘನತೆಗೆ ಸಂಬಂಧಿಸಿದ ವಿಷಯ ಎಂದು ನಂಬಿದ್ದರು.

    ಹೊರಗಡೆಯಿಂದ ಗಂಭೀರವದನರಾಗಿ ಕಂಡರೂ, ಅವರು ತಮಾಷೆ ಮಾಡುತ್ತಿದ್ದರು, ಚರ್ಚೆಗಳನ್ನು ರಂಗೇರಿಸುತ್ತಿದ್ದರು. 2012ರಲ್ಲಿ ‘ಅಕ್ಕ’ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಹೋಗಿದ್ದಾಗ ಹನ್ನೆರಡು ದಿನಗಳ ಕಾಲ ನಿಸಾರ್ ಅವರೊಂದಿಗೆ ಇರುವ ಅವಕಾಶ ದೊರೆಯಿತು. ಅವರ ಪ್ರತಿಭಾವಲಯ ಎಷ್ಟು ಸಮೃದ್ಧವಾಗಿತ್ತೆಂದರೆ, ಪ್ರತಿದಿನವೂ ಹೊಸ ವಿಷಯಗಳನ್ನು ಹೇಳುತ್ತಿದ್ದರು. ರ್ಚಚಿಸುತ್ತಿದ್ದರು. ಪ್ರಪಂಚದ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಿದ್ದರು. ನನ್ನ ಮಕ್ಕಳ ಮೇಲೂ ಅವರು ಗಾಢ ಪ್ರಭಾವ ಬೀರಿದ್ದಾರೆ.

    ಸ್ವಾಭಿಮಾನದ ಪಾಠ: ‘ನಮ್ಮ ಪಾಲಿಗೆ ಬಂದ ಕೆಲಸವನ್ನು ನಾವು ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಮಾಡಬೇಕು. ಪ್ರತಿಫಲಕ್ಕೆ ಜೋತು ಬೀಳಬಾರದು ಮತ್ತು ಸ್ವಾಭಿಮಾನಕ್ಕಿಂತ ಮುಖ್ಯ ಮತ್ತೊಂದಿಲ್ಲ. ಸ್ವಾಭಿಮಾನ ಮರೆತು ಮತ್ತೊಬ್ಬರ ಮನೆಬಾಗಿಲಿಗೆ ಎಡತಾಕಬಾರದು’ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದ್ದರು. ನಾನು ಆ ಮಾತನ್ನು ಪಾಲಿಸಿಕೊಂಡು ಬರುತ್ತಿದ್ದು, ಸಂಗೀತಗಾರನಾಗಿ ನನ್ನ ಕೆಲಸ ಮಾಡುತ್ತಿದ್ದೆನೆ, ಹೊರತು ನೆರವಿಗಾಗಿ ಯಾವ ರಾಜಕಾರಣಿಯ ಬಳಿಯೂ ಹೋಗಿಲ್ಲ.

    ಅವರ ನೆನಪಿನ ಶಕ್ತಿ ಮತ್ತು ಸಂಪರ್ಕ ಪರಿಧಿ ಅಗಾಧ. ಕಾರ್ಯಕ್ರಮದಲ್ಲಿ ಮಾತನಾಡಲು ನಿಂತರೆ ಆ ಸಭಾಂಗಣದಲ್ಲಿರುವ ಅದೆಷ್ಟೋ ಜನರನ್ನು ಹೆಸರಿನಿಂದ ಸಂಬೋಧಿಸಿ, ಅವರ ಕೊಡುಗೆಯನ್ನು ಶ್ಲಾಘಿಸುತ್ತಿದ್ದ ನಿಗರ್ವಿ ಮತ್ತು ವಿಶಿಷ್ಟ ವ್ಯಕ್ತಿತ್ವ ನಿಸಾರರದು.

    ‘ಕವಿಯನ್ನು ನೋಡಿ, ಕವಿತೆಯನ್ನು ಕೇಳಿ’ ಕಾರ್ಯಕ್ರಮ ಸರಣಿಯನ್ನು ಮಾಡಿದ್ದೆವು. ಅದರಲ್ಲಿ, ಪಾಲ್ಗೊಂಡು ಕವನ ವಾಚಿಸಿದ್ದ ನಿಸಾರರು, ಗಾಯಕ-ಗಾಯಕಿಯರ ಗಾಯನಕ್ಕೆ ಮನಸೋತರು. ಅವರು ಬರೆದ ಗೀತೆಗಳು, ಕವನಗಳು ಇಂದಿಗೂ ಅನುರಣಿಸುತ್ತಿವೆ. ಇಂಥ ಸಜ್ಜನ ವ್ಯಕ್ತಿಗೆ ಕರೊನಾ ಕಾರಣದಿಂದ ಗೌರವಯುತ ವಿದಾಯ ಹೇಳಲು ಆಗಲಿಲ್ಲ (ನಿಧನ: 2020 ಮೇ 3) ಎಂಬ ನೋವು ಈಗಲೂ ಕಾಡುತ್ತಿದೆ. ಅವರು ಬರೆದ ಹಾಡುಗಳನ್ನು ಹಾಡುತ್ತಿದ್ದ ಕಲಾವಿದರು, ಅಭಿಮಾನಿಗಳು ಸಾಹಿತಿಗಳು, ಬಂಧುಗಳಿಗೆ ಕರೊನಾ ನಿರ್ಬಂಧದಿಂದಾಗಿ ಅಂದು ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ನಿಸಾರರು ಅವರ ಕಾವ್ಯಸಾಧನೆ ಮೂಲಕ ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಮುಂದಿನ ಪೀಳಿಗೆಗಳಿಗೂ ಅವರಿಂದ ಪ್ರೇರಣೆ ಸಿಗಲಿದೆ.

    ನೋವು ತೋರ್ಪಡಿಸಲಿಲ್ಲ: ನಿಸಾರ್ ಅಹಮದ್​ರಿಗೆ ವೈಯಕ್ತಿಕ ಬದುಕಿನಲ್ಲಿ ಹಲವು ಸಮಸ್ಯೆಗಳಿದ್ದವು. ಅಂತರಂಗದಲ್ಲಿ ನೋವು ಮಡುಗಟ್ಟಿದರೂ, ಹೊರಗಡೆ ಮಾತ್ರ ಅವರು ಸದಾ ಹಸನ್ಮುಖಿಯಾಗಿಯೇ ಇರುತ್ತಿದ್ದರು. ನೋವು ಹೊರಗಡೆ ತೋರ್ಪಡಿಸುತ್ತಿರಲಿಲ್ಲ. ಸೂಟುಬೂಟು ಧರಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ತುಂಬ ಗಂಭೀರ ಸಮಸ್ಯೆ ಇದ್ದಾಗ ಮಾತ್ರ ಕೆಲವೇ ಕೆಲವು ಆತ್ಮೀಯರೊಂದಿಗೆ ಹಂಚಿಕೊಳ್ಳುತ್ತಿದ್ದರು.

    ನಿಸಾರರು ನನ್ನ ಪ್ರೀತಿಯ ಮೇಷ್ಟ್ರು

     ಕನ್ನಡದ ಸಿರಿಬೆಳಕನ್ನು ಜಗಕೆ ಹರಡಿದ ಮಹಾನ್ ಚೇತನನಗರ ಶ್ರೀನಿವಾಸ ಉಡುಪ (ಲೇಖಕರು: ಖ್ಯಾತ ಸುಗಮ ಸಂಗೀತ ಗಾಯಕರು)

    ಪದ್ಮಶ್ರೀ ನಿಸಾರ್ ಅಹಮದ್ ಅವರು ನನ್ನ ಅತ್ಯಂತ ಪ್ರೀತಿಯ ಗುರುಗಳು. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೆ ಜೀವನದುದ್ದಕ್ಕೂ ಮಾರ್ಗದರ್ಶಿಯಾಗಿ ನಿಂತ ನನ್ನ ಪಾಲಿನ ಮಹಾನ್ ಚೇತನ. 1966-67ರ ಸಮಯದಲ್ಲಿ ಶಿವಮೊಗ್ಗದ ಗೋಪಿ ಹೋಟೆಲ್​ನಲ್ಲಿ ಮೊದಲ ಬಾರಿ ನಿಸಾರ್​ರನ್ನು ನೋಡಿದೆ. ನನ್ನ ಸೋದರ ಬಂಧುವಾದ ಶಿವಮೊಗ್ಗ ಸುಬ್ಬಣ್ಣ ಅವರಿಗೆ ನನ್ನನ್ನು ಪರಿಚಯಿಸಿ, ಹಾಡಲು ಅಪ್ಪಣೆ ಮಾಡಿದ. ಹಿಂಜರಿಯುತ್ತಲೇ ಎರಡು ಕವಿಗೀತೆಗಳನ್ನು ಹಾಡಿದೆ. ನನ್ನ ಹಾಡನ್ನು ಕೇಳಿದ ನಿಸಾರರು, ನನ್ನ ಬೆನ್ನು ತಟ್ಟಿ, ಪ್ರಶಂಸಿಸಿದರು. ಅವರ ಸರಳ, ಮಗುವಿನಂಥ ಮನಸ್ಸು ನನ್ನನ್ನು ಬಹಳವಾಗಿ ಆಕ ರ್ಷಿಸಿತು. ಕಾಲೇ ಜಿನ ಪ್ರಾರಂಭದ ದಿನಗಳಲ್ಲೂ ನನಗೆ ಕವಿಗೀತೆಗಳನ್ನು ಹಾಡಲು ಪ್ರೋತ್ಸಾಹಿಸಿದರು. ಮೇಷ್ಟ್ರ ಕೃಪೆಯಿಂದ ಮೈಸೂರು ಅನಂತಸ್ವಾಮಿಯವರ ಶಿಷ್ಯತ್ವ ದೊರಕಿತು. ಅವರಿಂದ ಅನೇಕ ಗೀತೆಗಳನ್ನು ಕಲಿತು, ನನ್ನ ಗುರುಗಳ ನಿತ್ಯೋತ್ಸವ ಕವನ ಸಂಕಲನದ ಗೀತೆಗಳನ್ನಲ್ಲದೆ ಇತರ ಕವಿಗೀತೆಗಳನ್ನು ಹಾಡಲು ಆರಂಭಿಸಿದೆ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಬಲವಾದ ಹೆಜ್ಜೆಗಳನ್ನೂರಲು ನನ್ನ ಮೇಷ್ಟ್ರು ಕಾರಣ.

    ನನ್ನ ಅವರ ಬಾಂಧವ್ಯ ಎಷ್ಟರ ಮಟ್ಟಿಗೆ ಇತ್ತೆಂದರೆ ನಾಲ್ಕು ದಿನ ನಾನು ಕಾಣಸಿಗದಿದ್ದರೆ ನಮ್ಮ ಮನೆಗೇ ಸಂಜೆ ಹುಡುಕಿಕೊಂಡು ಬರುತ್ತಿದ್ದರು. ಬಹಳಷ್ಟು ಸಂಜೆಯ ಸಮಯ ಅವರೊಡನೆ ಕಳೆಯುತ್ತಿದ್ದೆ. ಸಾಕಷ್ಟು ರಾಗಜ್ಞಾನವಿದ್ದ ಅವರು ನನಗೆ ರಾಗ ಸಂಯೋಜನೆಗೆ ಪ್ರೇರೇಪಿಸುತ್ತಿದ್ದರು. ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ನೆಲೆಸುವ ಮುನ್ನ ಶಿವಮೊಗ್ಗ ಜಿಲ್ಲೆಯ ನಗರವೆಂಬ ಚಿಕ್ಕ ಗ್ರಾಮದಲ್ಲಿದ್ದೆ. ಆಕಾಶವಾಣಿಯ ಕಾರ್ಯಕ್ರಮಗಳಿಗಾಗಿ ಆಗಾಗ ಬೆಂಗಳೂರಿಗೆ ಬರುತ್ತಿದ್ದೆ. ಒಮ್ಮೆ, ಬೆಂಗಳೂರು ಆಕಾಶವಾಣಿಯಿಂದ ತಿಂಗಳ ಹೊಸಹಾಡು ‘ನವಸುಮ’ ಕಾರ್ಯಕ್ರಮದಲ್ಲಿ ಹಾಡಲು ಆಹ್ವಾನ ಬಂತು. ವಿಶೇಷವೆಂದರೆ ಅನಂತಸ್ವಾಮಿಯವರ ಸಂಗೀತ ನಿರ್ದೇಶನದಲ್ಲಿ ನಿಸಾರ್ ಅಹ್ಮದರ ಗೀತೆ! ಸಂತೋಷ, ಉತ್ಸಾಹದಿಂದ ಆಕಾಶವಾಣಿ ನಿಲಯಕ್ಕೆ ಆಗಮಿಸಿದಾಗ ಮೇಷ್ಟ್ರ ಕವನ ಇನ್ನೂ ಬಂದಿಲ್ಲವೆಂದು ತಿಳಿಯಿತು. ಅನಂತಸ್ವಾಮಿಯ ವರು ಆಗಲೇ ಬಂದು ಕುಳಿತಿದ್ದರು.

    ಮೇಷ್ಟ್ರಲ್ಲಿ ಇರುವ ಸಲುಗೆಯಿಂದ ನಾನೇ ಅವರ ಮನೆಗೆ ಹೋಗಿ ಕವನ ತರುತ್ತೇನೆಂದು, ಪದ್ಮನಾಭನಗರದ ಅವರ ಮನೆಗೆ ಧಾವಿಸಿದೆ. ನನ್ನ ಪುಣ್ಯಕ್ಕೆ ಮೇಷ್ಟ್ರು ಮನೆಯಲ್ಲೇ ಇದ್ದರು. ಆದರೆ, ಅದೇನೋ ಬೇಸರದಿಂದ ಇದ್ದರು. ನಾನು ಬಂದ ಕಾರಣವನ್ನು ತಿಳಿಸಿದಾಗ ಕವನವನ್ನು ಕೊಡಲು ನಿರಾಕರಿಸಿದರು. ಸ್ವಲ್ಪ ಗಲಿಬಿಲಿಗೊಂಡೆ. ಆದರೆ, ನನಗೆ ಅವರ ಮಗುವಿನಂಥ ಸ್ವಭಾವ ತಿಳಿದಿದ್ದರಿಂದ, ಅವರಿಂದ ಯಾವ ರೀತಿ ಕವನ ಪಡೆಯಬೇಕೆಂದು ತಿಳಿದಿತ್ತು. ಬೇಸರ, ಕೋಪ ತೋರ್ಪಡಿಸಿ ತಕ್ಷಣ ಅವರ ಮನೆಯಿಂದ ಹೊರಟುಬಿಟ್ಟೆ. ಕೂಡಲೇ ನನ್ನ ಹಿಂದೆಯೇ ಬಂದು, ನನ್ನನ್ನು ಸಮಾಧಾನ ಪಡಿಸಿ, ಕಾಫಿ-ತಿಂಡಿ ಕೊಟ್ಟು ಉಪಚರಿಸಿ, ಕವನ ಕೊಟ್ಟು ಕಳುಹಿಸಿದರು. ಈ ರೀತಿ ತಂದೆ, ಮಕ್ಕಳ ಬಾಂಧವ್ಯದ ಸವಿಯನ್ನು ಸವಿದಿದ್ದೇನೆ. ಅವರ ಅನೇಕ ಕವನಗಳಿಗೆ ರಾಗ ಸಂಯೋಜನೆ ಮಾಡಿದ್ದೇನೆ. ಅದರಲ್ಲಿ ಅವರ, ‘ಓ ಅಸೀಮ ಶಕ್ತಿ’ ಗೀತೆಗೆ ನಾನು ಮಾಡಿದ ರಾಗ ಸಂಯೋಜನೆ ಅವರಿಗೆ ತುಂಬ ಮೆಚ್ಚುಗೆಯಾದ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರೇ ಆಯ್ದುಕೊಟ್ಟ ಕೆಲವು ಕವನಗಳಿಂದ ‘ಸುಶ್ರಾವ್ಯ’ ಮತ್ತು ‘ಅಪೂರ್ವ’ ಎಂಬ ಎರಡು ಧ್ವನಿಸುರಳಿಗಳನ್ನು ಲೋಕಾರ್ಪಣೆ ಮಾಡಿದ್ದು ವಿಶೇಷ.

    ಸಾಹಿತ್ಯ ಕೃಷಿ

    21 ಕವನ ಸಂಕಲನ

    14 ವೈಚಾರಿಕ ಕೃತಿ

    05 ಮಕ್ಕಳ ಸಾಹಿತ್ಯ ಕೃತಿ

    05 ಅನುವಾದ ಕೃತಿ

    13 ಸಂಪಾದನಾ ಗ್ರಂಥ

    8 ಧ್ವನಿಸುರಳಿ

    5 ಸಿಡಿ ಪ್ರಕಟಗೊಂಡಿವೆ

    ‘ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ನಾವು ಮಾಡೋದು 40%! ಪ್ರಧಾನಿ ವಿರುದ್ಧ ದೆಹಲಿ ಸಿಎಂ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts