More

    ಶಿಕ್ಷಕರಿಗೆ ಬೇಡ ಅನ್ಯ ಕಾರ್ಯ: ಬ್ರಹ್ಮಾವರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಬಾಬು ಶಿವ ಪೂಜಾರಿ ಆಗ್ರಹ

    ಕೋಟ: ಸಾವಿರಾರು ವರ್ಷಗಳಿಂದ ಸಾಮಾನ್ಯ ಜನರು ಕನ್ನಡವನ್ನು ನೆಚ್ಚಿಕೊಂಡಿದ್ದರೂ ತಮ್ಮ ಬದುಕು ಕನ್ನಡದಿಂದ ಹಸನಾಗುವ ಪರಿ ಕಾಣದೆ ಇಂಗ್ಲಿಷ್‌ಗೆ ಮೊರೆ ಹೋಗುತ್ತಿರುವುದು ವಿಷಾದನೀಯ. ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿದ್ದಂತೆ ಕನ್ನಡ ಸರ್ಕಾರಿ ಶಾಲೆಗಳಲ್ಲೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಬೇಕು. ಶಿಕ್ಷಕರನ್ನು ಸರ್ಕಾರಿ ಕೆಲಸ, ಚುನಾವಣೆಗಳಿಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಹೇಳಿದರು.

    ಸಾಯಿಬ್ರಕಟ್ಟೆಯ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಭಾನುವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ, ಯಡ್ತಾಡಿಯ ವಿನಾಯಕ ಯುವಕ ಮಂಡಲದ ಸಾರಥ್ಯದಲ್ಲಿ ಆಯೋಜಿಸಿದ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಹಗ್ಗಿನ ಹನಿಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
    ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕರೆದೊಯ್ಯುತ್ತಿರುವುದೇ ಕನ್ನಡ ಶಾಲೆಗಳ ಅವನತಿಗೆ ಕಾರಣ. ಕನ್ನಡ ಒಂದು ಭಾಷೆ, ಒಂದು ಸಂಸ್ಕೃತಿ, ಸಹಸ್ರಾರು ವರ್ಷಗಳ ನಮ್ಮ ನಿರಂತರ ಬದುಕು. ಕನ್ನಡ ನಮ್ಮ ಧಮನಿಗಳಲ್ಲಿ ಪ್ರೇಮವಾಗಿ ಹರಿಯುತ್ತಿರಬೇಕು ಎಂದರು.

    ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ ನಿರ್ಮಿಸಲು ಎಲ್ಲ ಪ್ರಯತ್ನ ನಡೆದಿದ್ದು, ಉಡುಪಿಯ ಹೃದಯ ಭಾಗದಲ್ಲಿ 11ಸೆಂಟ್ಸ್ ಜಾಗವನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಇನ್ನೆರಡು ತಿಂಗಳೊಳಗೆ ಶಿಲಾನ್ಯಾಸ ಮಾಡಲಾಗುವುದು ಎಂದರು.

    ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ಸಮ್ಮೇಳನ ಉದ್ಘಾಟಿಸಿದ ಇಬ್ರಾಹಿಂ ಸಾಹೇಬ್ ಮಾತನಾಡಿ, ರಾಜಮನೆತನದ ಕಾಲದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿತ್ತು. ಆದರೆ ಇಂದು ದೇವಸ್ಥಾನ, ಮಠಮಂದಿರಗಳು ವ್ಯಾವಹಾರಿಕಾಗಿ ಬದಲಾದ ಕಾರಣ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗದಿರುವುದು ಬೇಸರದ ವಿಷಯ. ಸಂಸ್ಕೃತಿ ಇಲಾಖೆ ಕೂಡ ವೈಭವಿಕರಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಇದನ್ನು ಬದಲಾಯಿಸಬೇಕಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಿಗುವ ಪ್ರಾಧಾನ್ಯತೆ ಸಾಹಿತ್ಯಕ್ಕೂ ಸಿಗುವಂತೆ ಚಿಂತನೆ ನಡೆಸಿ ಕನ್ನಡ ಸಾಹಿತ್ಯ ಲೋಕವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

    ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಸಮಾಜದ ಅಂಕುಡೊಂಕು, ಮೂಢನಂಬಿಕೆಯನ್ನು ತೆಗೆದುಹಾಕುವ ಪ್ರಯತ್ನ ಸಾಹಿತ್ಯ ಕ್ಷೇತ್ರದಿಂದ ಆಗುತ್ತಿರುವುದು ಹೆಮ್ಮೆಯ ವಿಷಯ. ಮಕ್ಕಳಲ್ಲಿ ಕನ್ನಡ ಭಾಷೆಯನ್ನು ಆಸ್ವಾದಿಸುವ ಮನಸ್ಸು ಮೂಡಿಸುವ ಪ್ರಯತ್ನ ಎಲ್ಲರ ಕರ್ತವ್ಯ ಎಂದರು.
    ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಕೆದ್ಲಾಯ, ಪ್ರೇಮಾ ಪೂಜಾರಿ, ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ನಾಯ್ಕ, ಜಿಲ್ಲಾ ಘಟಕದ ಮುಖ್ಯ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಬ್ರಹ್ಮಾವರ ಬಾರ್ಕೂರು ವಲಯದ ಅಧ್ಯಕ್ಷ ಅಶೋಕ್ ಭಟ್, ಯಡ್ತಾಡಿ ವಿನಾಯಕ ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.
    ಬ್ರಹ್ಮಾವರ ತಾಲೂಕಿನ ಅಧ್ಯಕ್ಷ ನಾರಾಯಣ ಮಡಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವಿಸಿದರು. ಬ್ರಹ್ಮಾವರ ತಾಲೂಕಿನ ಕಾರ್ಯದರ್ಶಿ ಮೋಹನ್ ಉಡುಪ ವಂದಿಸಿದರು. ಸುಬ್ರಹ್ಮಣ್ಯ ಬಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

    ಭವ್ಯ ಮೆರವಣಿಗೆ, ವಿವಿಧ ಗೋಷ್ಠಿ
    ಸಮ್ಮೇಳನಕ್ಕೂ ಮೊದಲು ಬ್ರಹ್ಮಾವರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ರಾಷ್ಟ್ರ ಧ್ವಜಾರೋಹಣ, ಸೂರಾಲು ನಾರಾಯಣ ಮಡಿ ಪರಿಷತ್ತಿನ ಧ್ವಜಾರೋಹಣ ಮಾಡಿದರು. ಸಮ್ಮೇಳನದ ಅಧ್ಯಕ್ಷರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಸಮ್ಮೇಳನದಲ್ಲಿ ಬ್ರಹ್ಮಾವರ ತಾಲೂಕಿನ ಹೊಸಕವಿಗಳಿಂದ ಕವಿಗೋಷ್ಠಿ, ಡಾ.ಅನಿಲ್ ಕುಮಾರ್ ಶೆಟ್ಟಿ ಅವರಿಂದ ಬ್ರಹ್ಮಾವರ ತಾಲೂಕಿನ ಕವಿಗಳು ಒಂದು ಬೀಸು ನೋಟ, ಯಡ್ತಾಡಿಯ ಪ್ರತಿಮಾ ರಮೇಶ್ ಅವರಿಂದ ಮಹಿಳೆ ಮತ್ತು ಸವಾಲುಗಳು ವಿಷಯದ ಬಗ್ಗೆ ವಿಚಾರಗೋಷ್ಠಿ ಯಡ್ತಾಡಿಯ ಯುವವಾಹಿನಿ ಘಟಕದಿಂದ ನೃತ್ಯ ವೈವಿಧ್ಯ, ರಾಜೇಶ್ ಶ್ಯಾನುಭೋಗ್, ಸುರೇಶ್ ಕಾರ್ಕಡ, ರವಿ ಜನ್ನಾಡಿ, ಶ್ರಾವ್ಯ ಅಲ್ತಾರು, ಆಶಾ ಕೊಕ್ಕರ್ಣೆ ಅವರಿಂದ ಕನ್ನಡ ಗೀತಗಾಯನ, ದೀಕ್ಷಾ ಬ್ರಹ್ಮಾವರ, ಜಯರಾಮ ಶೆಟ್ಟಿ, ಪ್ರಭಾಕರ ಕುಂದರ್, ಅಲ್ವಿನ್ ಅಂದ್ರಾದೆ ಅವರಿಂದ ಕುಂದಾಪ್ರ ಕನ್ನಡದಲ್ಲಿ ಹರಟೆ, ಸಾಹಿತಿ ಅರವಿಂದ ಚೊಕ್ಕಾಡಿ ಅವರಿಂದ ನುಡಿಚೇತನ ಮತ್ತು ಬಹುವಿಧ ಗೋಷ್ಠಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts