More

    ಕನ್ನಡ ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರ ದೊಡ್ಡದು: ಡಾ. ಎಸ್.ಪಿ.ಪದ್ಮಪ್ರಸಾದ್

    ಶಿವಮೊಗ್ಗ: ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂಬ ಪೂರ್ವಾಗ್ರಹದಲ್ಲಿ ಪಾಲಕರಿದ್ದಾರೆ. ಇದರಿಂದ ಸಹಜವಾಗಿಯೇ ಕನ್ನಡ ಶಾಲೆಗಳು ಸೊರಗುತ್ತಿದ್ದು ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ದೊಡ್ಡದಿದೆ ಎಂದು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ಕಳವಳ ವ್ಯಕ್ತಪಡಿಸಿದರು.

    ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿಸುವುದು ಸರ್ಕಾರ, ಶಾಲಾಭಿವೃದ್ಧಿ ಸಮಿತಿ ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಅದು ಸಾಧ್ಯವಾಗದ ಹೊರತು ಕನ್ನಡ ಶಾಲೆಗಳ ಏಳಿಗೆ ಆಗಲ್ಲ ಎಂದರು.
    ಒಂದರಿಂದ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಲಭ್ಯವಿರುವ ಅರ್ಹತೆ ಆಧಾರದ ಮೇಲೆ ಶೇ.50 ಸೀಟುಗಳನ್ನು ಮೀಸಲಿಡುವುದಾಗಿ ಸರ್ಕಾರ ಆದೇಶಿಸಬೇಕು. ಆ ಕೆಲಸವಾದರೆ ಕನ್ನಡ ಮಾಧ್ಯಮ ಶಾಲೆಗಳು ಭರ್ತಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
    ಮಾತನಾಡಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಸಾಹಿತಿ ಲಕ್ಷ್ಮಣ ಕೊಡಸೆ ಕನ್ನಡ ಧ್ವಜ ಹಸ್ತಾಂತರ ಮಾಡಿದರು. ಹಿರಿಯ ಸಾಹಿತಿ ಎಲ್.ಎನ್.ಮಕುಂದರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮನೋರೋಗ ತಜ್ಞ ಡಾ. ಕೆ.ಆರ್.ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಪಾಲಿಕೆ ಮಾಜಿ ಸದಸ್ಯ ಶಂಕರನಾಯ್ಕ, ತಾಲೂಕು ಅಧ್ಯಕ್ಷರಾದ ಶಿಕಾರಿಪುರದ ಎಚ್.ಎಸ್.ರಘು, ತೀರ್ಥಹಳ್ಳಿಯ ರಮೇಶ್ ಶೆಟ್ಟಿ, ಸಾಗರದ ವಿ.ಟಿ.ಸ್ವಾಮಿ, ಸೊರಬದ ಶಿವಾನಂದ ಪಾಣಿ, ಭದ್ರಾವತಿಯ ಕೋಡ್ಲುಯಜ್ಞಯ್ಯ, ಶಿವಮೊಗ್ಗದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷ ಎಂ.ನವೀನ್‌ಕುಮಾರ್, ಕಾರ್ಯದರ್ಶಿ ಎನ್.ಎಂ.ಸ್ವಾಮಿ, ಪ್ರಮುಖರಾದ ಸಿ.ಎಂ.ನೃಪತುಂಗ, ಷಣ್ಮುಖಪ್ಪ ಉಪಸ್ಥಿತರಿದ್ದರು.

    ಸಮ್ಮೇಳನಕ್ಕೆ ಸರ್ಕಾರದಿಂದ ಅನುದಾನ ಬಂದಿಲ್ಲ
    ಸಾಂಸ್ಕೃತಿಕ ಜಗತ್ತು ರಾಜಕಾರಣದ ಹಿಡಿತಕ್ಕೆ ಸಿಲುಕಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು. ಆಶಯ ನುಡಿಗಳನ್ನಾಡಿದ ಅವರು, ಸಮ್ಮೇಳನಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ಸರ್ಕಾರ ಅನ್ನಮಯ ಕೋಶದೆಡೆ ಹಣ ವಿನಿಯೋಗ ಮಾಡುತ್ತಿರುವ ಕಾರಣ ಜ್ಞಾನಮಯ ಕಾರ್ಯಕ್ರಮಕ್ಕೆ ಹಣ ನೀಡುತ್ತಿಲ್ಲ ಎಂದರು. ಕುಟೀರ ಸೇರಿ ಹಲವು ಕಾಮಗಾರಿಗಳಿಗೆ 2.5 ಕೋಟಿ ರೂ. ಬೇಕಾಗಿದೆ ಎಂದರು.

    ಸಮ್ಮೇಳನಾಧ್ಯಕ್ಷರ ರಾಜಬೀದಿ ಉತ್ಸವ
    ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್ ಅವರನ್ನು ತೆರೆದ ವಾಹನದಲ್ಲಿ ಗೋಪಾಳದ ಪೊಲೀಸ್ ಚೌಕಿಯಿಂದ ಸಾಹಿತ್ಯಗ್ರಾಮದವರೆಗೆ ರಾಜಬೀದಿ ಉತ್ಸವದ ಮೂಲಕ ಕರೆತರಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮೆರವಣಿಗೆಗೆ ಚಾಲನೆ ನೀಡಿದರು. ಮಾದಾಪುರದ ಶ್ರೀ ಶನಿಪರಮೇಶ್ವರ ಯುವಕ ಸಂಘದಿಂದ ಡೊಳ್ಳು ಕುಣಿತ ಸೇರಿ ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಅನನ್ಯ ವಿದ್ಯಾಪೀಠ, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಸನ್‌ಸಿಟಿ ವಿದ್ಯಾಲಯದ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts