More

    ಮಾತೃ ಭಾಷೆ ಉಳಿಸುವ ಕಾರ್ಯ ಮಾಡಿ

    ಕುಕನೂರು: ಮಾತೃ ಭಾಷೆ ಉಳಿಸುವ ಕಾರ್ಯ ಮಾಡದಿದ್ದರೆ ಹೆತ್ತ ತಂದೆ ತಾಯಿಗೆ ಅವಮಾನಿಸದಂತೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
    ತಾಲೂಕಿನ ರಾಜೂರು ಗ್ರಾಮದ ಲಿಂ.ಶ್ರೀ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ವೇದಿಕೆಯಲ್ಲಿ ಕಸಾಪ ಆಯೋಜಿಸಿದ್ದ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ದಿಕ್ಸೂಚಿ ನುಡಿಗಳನ್ನಾಡಿದರು.

    ಕೊಪ್ಪಳ ಕನ್ನಡದ ಗಟ್ಟಿ ಜಿಲ್ಲೆ. ರಾಯಚೂರು ಕಡೆ ಹೋದರೆ ಆಂಧ್ರ, ಬೆಳಗಾವಿ ಕಡೆ ಮಹಾರಾಷ್ಟ್ರ, ಬೆಂಗಳೂರು, ಮೈಸೂರು ಕಡೆ ತಮಿಳರ ಪ್ರಭಾವ ಹೆಚ್ಚಾಗಿದೆ. ಇದರಿಂದ ಮಾತೃ ಭಾಷೆ ಬೆಳೆಸುವ ಕೆಲಸ ನಡೆಯಬೇಕು. ರಾಜೂರು ಪುಣ್ಯಭೂಮಿ. ಇಲ್ಲಿ ಸಮ್ಮೇಳನ ಜರುಗುತ್ತಿರುವುದು ಹೆಮ್ಮೆಯ ಸಂಗತಿ. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್‌ಗೆ ಹೆಚ್ಚು ಪ್ರಾಧ್ಯಾನತೆ ನೀಡಿ ಕನ್ನಡ ಮರೆಯುವ ಸ್ಥಿತಿ ಬಂದಿದೆ. ತಾಲೂಕಿನ ಚನ್ನಕವಿ, ಕಲ್ಲಿನಾಥ ಶಾಸ್ತ್ರಿ, ಸಿದ್ದಯ್ಯ ಪುರಾಣಿಕ, ನಿಜಲಿಂಗಯ್ಯ ಹಿರೇಮಠ, ಬಸವರಾಜ ಬಿನ್ನಾಳ, ಬಿ.ವಿ. ಶಿರೂರು, ರಂ.ರಾ. ನಿಡಗುಂದಿ, ಡಾ. ಬಸವರಾಜ ಸಬರದ, ಎ.ಪಿ. ಮುಧೋಳ, ಆರ್.ಪಿ. ರಾಜೂರು, ಮುನಿಯಪ್ಪ ಹುಬ್ಬಳ್ಳಿ, ಫಕೀರಪ್ಪ ವಜ್ರಬಂಡಿ, ಹನುಂತರಾವ್, ಲಕ್ಷ್ಮವ್ವ ಹರಿಜನ, ಚುಟ್ಟವ್ವ ಹರಿಜನ ಸಾಹಿತಿಗಳಾಗಿದ್ದಾರೆ. ಆಡೂರಿನ ದಿ. ಶಿರೂರು ವೀರಭದ್ರಪ್ಪ, ಪ್ರಾಮಾಣಿಕ ಶಾಸಕರಾಗಿದ್ದರು. ಅವರಂಥ ವ್ಯಕ್ತಿ ಸಿಗುವುದು ದುರ್ಬಲ ಎಂದರು.

    ದುಡಿವ ಕೈಗಳಿಗೆ ಕೆಲಸ ಸಿಗಬೇಕಿದೆ. ಭಾಷೆ ಜತೆಗೆ ವ್ಯಕ್ತಿತ್ವ ಹಸನಾಗಬೇಕು. ಭಾಷೆ, ನಾಡು, ನುಡಿಗೆ ಶ್ರಮಿಸುವ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಕಸಾಪ ಕಾರ್ಯ ಮಾಡುತ್ತಿದೆ. ಸಮ್ಮೇಳನದಲ್ಲಿ ಅಭಿವ್ಯಕ್ತಿ ಆಗುವ ಹಲವಾರು ವಿಚಾರಗಳು ನಾಡಿನ ಅಭಿವೃದ್ಧಿಗೆ ದಾರಿ ಆಗಬೇಕು ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಬಿ.ವಿ.ಶಿರೂರು, ಶಿಕ್ಷಣದ ಬುನಾದಿ ಪ್ರಾಥಮಿಕ ಶಾಲೆಗಳ ಸೊಬಗು ಹೆಚ್ಚಬೇಕಿದೆ. ಪ್ರಾಥಮಿಕ ಶಿಕ್ಷಣಕ್ಕೆ ನೀರೆರೆವ ಕಾರ್ಯ ಆಗಬೇಕು. ಕಸಾಪ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡು ಕನ್ನಡದ ಸುಸ್ತ್ರಾವ್ಯ ಕಾರ್ಯ ಮಾಡುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಭಾಷೆ, ಸಾಹಿತ್ಯ, ನಾಡಿನ ಬೆಳವಣಿಗೆಗೆ ಸಾಕ್ಷಿ. ಸಾಹಿತ್ಯ, ಸಂಸ್ಕೃತಿಗಳು ಗ್ರಾಮೀಣದಲ್ಲಿ ಜೀವಂತವಾಗಿದೆ ಎಂಬುದಕ್ಕೆ ರಾಜೂರಿನ ಈ ಸಮ್ಮೇಳನ ಸಾಕ್ಷಿಯಾಗಿದೆ. 1960ರಲ್ಲಿ ನಾವುಗಳು ಹೈಸ್ಕೂಲ್‌ಗೆ ಕುಕನೂರಿನ ಬೇರೆ ಬೇರೆ ಗ್ರಾಮದ ಶಾಲೆಗಳಿಗೆ ಹೋಗಬೇಕಿತ್ತು. ಆದರೀಗ ಎಲ್ಲ ಗ್ರಾಮದಲ್ಲಿ ಪ್ರೌಢ ಶಾಲೆಗಳು ಪ್ರಾರಂಭಗೊಂಡಿವೆ. ಇದರಿಂದ ಶಿಕ್ಷಣ ರಂಗ ಬೆಳೆದಿದೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಖಾಸಗಿ ಶಾಲೆಗಳಿಂತ ಸೊಗಸಾಗಿ ಮಾರ್ಪಾಡು ಮಾಡಬೇಕಿದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಣುತ್ತಿದೆ. ಕೊಠಡಿಗಳ ಅಭಾವ ಇರುತ್ತದೆ. ಕೊಪ್ಪಳದಲ್ಲಿ ವಿಶ್ವ ವಿದ್ಯಾಲಯ ಆರಂಭವಾಗುತ್ತಿದೆ. ಈಗಿರುವ ವಿವಿಯಲ್ಲಿ ಉಪನ್ಯಾಸಕರ ಹಾಗೂ ಸವಲತ್ತುಗಳ ಕೊರತೆ ಇದೆ. ನೂತನ ವಿವಿ ಜತೆಗೆ ಹಳೆಯ ವಿವಿ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಿದೆ ಎಂದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಕಸಾಪ ಕನ್ನಡಿಗರ ಪ್ರಾತಿನಿತ್ಯ ಸಂಸ್ಥೆಯಾಗಿದ್ದು, ಕೇಂದ್ರ ಸಾಹಿತ್ಯ ಪರಿಷತ್ ಸಬಲೀಕರಣವಾಗಬೇಕಿದೆ. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್‌ಗೆ ವರ್ಷದೊಳಗೆ ಲಕ್ಷ ಆಜೀವ ಸದಸ್ಯತ್ವ ಹೊಂದುವ ಉದ್ದೇಶ ಕಸಾಪ ಹೊಂದಿದೆ ಎಂದರು.
    ಹಿರಿಯ ಸಾಹಿತಿ ಬಸವರಾಜ ಬಿನ್ನಾಳ ಅವರ ಶ್ರೀ ಚನ್ನವೀರ ಶರಣರ ಮಹಾತ್ಮೆ ಕೃತಿ ಹಾಗೂ ಸಮ್ಮೇಳನಾಧ್ಯಕ್ಷರ ನುಡಿ ಕೃತಿಯನ್ನು ಹಿರಿಯ ಸಾಹಿತಿ ಡಾ.ಕೆ.ಬಿ. ಬ್ಯಾಳಿ ಬಿಡುಗಡೆಗೊಳಿಸಿದರು. ಲಕ್ಷ್ಮಣ ಹಿರೇಮನಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಕಸಾಪ ರಾಜ್ಯ ಸಂಚಾಲಕ ನಬಿಸಾಬ್ ಕುಷ್ಟಗಿ, ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಶ್ರೀಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಕಳಕಪ್ಪ ಕುಂಬಾರ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಆಡೂರು, ಉಪಾಧ್ಯಕ್ಷೆ ಹುಲ್ಲವ್ವ ಹಿರೇಮನಿ, ಪ್ರಮುಖರಾದ ಡಾ.ಕೆ.ಬಿ. ಬ್ಯಾಳಿ, ಶರಣಪ್ಪ ಅಂಗಡಿ, ವೀರಣ್ಣ ನಿಂಗೋಜಿ, ಲಕ್ಷ್ಮಣ ಹಿರೇಮನಿ, ಎ.ಪಿ.ಮೂಧೋಳ, ವೀರಣ್ಣ ಅಣ್ಣಿಗೇರಿ, ಬಸನಗೌಡ ತೊಂಡಿಹಾಳ, ರಾಮಣ್ಣ ಭಜಂತ್ರಿ, ಶಿವಕುಮಾರ ನಾಗಲಾಪುರಮಠ, ಅರವಿಂದಗೌಡ, ಬಸವರಾಜ ಬಿನ್ನಾಳ, ಮಹೇಶ ಸಬರದ, ಎಂ.ಬಿ. ಅಳವಂಡಿ, ವಿ.ಎಸ್.ಬೆಣಕಲ್ಲ, ಮಾರುತಿ ತಳವಾರ, ಬಸವರಾಜ ಮೇಟಿ, ಫೀರಸಾಬ್ ದಫೇದಾರ್, ನಾಗರಾಜ ಬೆಣಕಲ್ಲ, ಬಸವರೆಡ್ಡಿ ಬೀಡಿನಾಳ, ಕೃಷ್ಣ, ರಮೇಶ ಕುಲಕರ್ಣಿ, ಎಸ್.ಎಸ್. ಕೊಪ್ಪದ, ನಿಂಗಪ್ಪ ಗೊರ್ಲೆಕೊಪ್ಪ, ಕೊಟ್ರಪ್ಪ ತೋಟದ, ಭೀಮರೆಡ್ಡಿ ಶ್ಯಾಡ್ಲಗೇರಿ ಇತರರಿದ್ದರು.

    ಆಡಳಿತ ಭಾಷೆಯನ್ನಾಗಿ ಮಾಡದಿರುವುದು ತಪ್ಪು
    ಕುಕನೂರು: ಅನ್ಯ ಭಾಷೆ ಕಲಿಯುವುದು ತಪ್ಪಲ್ಲ. ನಮ್ಮ ಭಾಷೆ ನಿರ್ಲಕ್ಷಿಸುವುದು, ಆಡಳಿತ ಭಾಷೆಯನ್ನಾಗಿ ಮಾಡದಿರುವುದು ತಪ್ಪು. ಇದಕ್ಕೆ ನಾವೇ ಹೊಣೆ, ಅನ್ಯರಲ್ಲ ಎಂದು ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಆರ್.ಪಿ. ರಾಜೂರು ಹೇಳಿದರು.

    ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಮೂರು ವರ್ಗದ ಜನರು ಸಮರ್ಪಕ ಕಾರ್ಯಗೈಯ್ಯಬೇಕು. ಪಾಲಕರು, ಸಾರ್ವಜನಿಕರು, ಸರ್ಕಾರ ಕನ್ನಡ ಭಾಷೆ, ಸಾಹಿತ್ಯದ ಉಳಿವಿಗೆ ಶ್ರಮಿಸಬೇಕು. ಪಾಲಕರು ಆಂಗ್ಲ ಶಾಲೆಗೆ ಮಕ್ಕಳು ಹೋದರೆ ಹೆಚ್ಚಿನ ಜ್ಞಾನ, ಹುದ್ದೆ ಸಿಗುವುದೆಂಬ ಭಾವ ಬೀಡಬೇಕು. ಕನ್ನಡದಲ್ಲಿ ಮಾತನಾಡಿದರೆ-ಸರ್ಕಾರಿ ಶಾಲೆಗೆ ಹೋದರೆ ಅವಮಾನ ಎಂಬುದು ಬಿಡಬೇಕು. ಆಂಗ್ಲ ಕಲಿಕೆ ಪ್ರತಿಷ್ಠೆಯಲ್ಲ ಎಂಬ ಅರಿವು ತಾಳಬೇಕು. ತಾಯಿಯ ಗರ್ಭದಿಂದ ಕಲಿತ ಭಾಷೆ ಕನ್ನಡ, ಇದನ್ನು ಧಿಕ್ಕರಿಸುವ ಕಾರ್ಯ ಪಾಲಕರಿಂದ ಆಗಬಾರದು ಎಂದರು.

    ಸಾರ್ವಜನಿಕರು ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ ಮತ್ತು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡದ ಹಬ್ಬಗಳು ಬಂದಾಗ ಮಾತ್ರವಲ್ಲದೆ ಕನ್ನಡಿಗರ ತನು ಮನದಲ್ಲಿ ಶಾಶ್ವತವಾಗಿ ಮಾತೃಭಾಷೆ ಉಳಿಯಬೇಕಿದೆ. ಸರ್ಕಾರ ಇಲ್ಲಿಯವರೆಗೆ ಕನ್ನಡ ಶಾಲೆ ನಡೆಸುವಲ್ಲಿ ಎಡವಿವೆ. ಸರ್ಕಾರದ ಕನ್ನಡ ಶಾಲೆಗಳ ಯೋಜನೆಗಳು ಅದ್ಭುತವಾಗಿದ್ದರೂ ಅವುಗಳ ಅನುಷ್ಠಾನದಲ್ಲಿ ವಿಫಲವಾಗಿವೆ. ಸರ್ಕಾರ ಮಾತೃಭಾಷಾ ಮಾಧ್ಯಮವುಳ್ಳ ಗುಣಮಟ್ಟದ ಶಿಕ್ಷಣ ಜಾರಿಗೆ ತರಬೇಕು. ಕನ್ನಡ ಶಾಲೆಗಳಿಗೆ ಮೂಲ ಸೌಲಭ್ಯ, ತಾಂತ್ರಿಕ ಮತ್ತು ವೈಜ್ಞಾನಿಕ ಬೋಧನೋಪಕರಣಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts