More

    ಹೆಸರಿಗೆ ರಾಮ; ಶೌರ್ಯಕ್ಕೆ ಅರ್ಜುನ

    | ಚೇತನ್ ನಾಡಿಗೇರ್

    ‘ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಓಟಿಟಿಗೆ ಬೇಡ, ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡು …’ ಎಂದು ಸಲಹೆ ನೀಡಿ, ‘ರಾಮಾರ್ಜುನ’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಸಿದ್ದಾರೆ ರಕ್ಷಿತ್ ಶೆಟ್ಟಿ. ಅವರ ಮಾತು ಸುಳ್ಳಲ್ಲ. ಅವರ ಗ್ರಹಿಕೆ ತಪ್ಪಲ್ಲ. ಚಿತ್ರಮಂದಿರಗಳಿಗೆ ಹೇಳಿ ಮಾಡಿಸಿದ ಕಮರ್ಷಿಯಲ್ ಚಿತ್ರ ‘ರಾಮಾರ್ಜುನ’. ಇಲ್ಲಿ ಹಾಡಿದೆ, ಫೈಟಿದೆ, ಕಾಮಿಡಿ ಇದೆ, ಸೆಂಟಿಮೆಂಟ್ ಇದೆ … ಒಟ್ಟಾರೆ ಎರಡು ಗಂಟೆ ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಏನೆಲ್ಲ ಸರಕು ಬೇಕೋ ಅವೆಲ್ಲವೂ ಇದೆ. ‘ರಾಮಾರ್ಜುನ’ ಒಂದು ಸಿಂಪಲ್ ಚಿತ್ರ. ಸ್ಲಂನಲ್ಲಿ ವಾಸಿಸುವ ರಾಮ್ ಎಂಬ ಯುವಕನ ಕುರಿತ ಚಿತ್ರ. ಅವನು ಆ ಸ್ಲಂ ಮತ್ತು ಅಲ್ಲಿನ ಜನರನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲ ಮಾಡುತ್ತಾನೆ ಎಂದು ಸಾರುವ ಚಿತ್ರ ‘ರಾಮಾರ್ಜುನ’. ಇಷ್ಟೇ ಆದರೆ, ಅದರಲ್ಲೇನೂ ವಿಶೇಷವಿರುವುದಿಲ್ಲ ಎಂಬ ದಿಢೀರ್ ತೀರ್ವನಕ್ಕೆ ಬರಬೇಡಿ. ಚಿತ್ರವನ್ನು ವಿಶೇಷವಾಗಿ ರೂಪಿಸುವುದಕ್ಕೆ ಅನೀಶ್ ಸಾಕಷ್ಟು ಶ್ರಮ ಹಾಕಿದ್ದಾರೆ. ಪ್ರೇಕ್ಷಕರಿಗೆ ಉಸಿರು ಬಿಡುವುದಕ್ಕೆ ಅವಕಾಶ ಕೊಡದಂತೆ ಹಲವು ತಿರುವುಗಳನ್ನು ಚಿತ್ರಕಥೆಗೆ ಕೊಟ್ಟಿದ್ದಾರೆ. ಚಿತ್ರ ಪ್ರಾರಂಭವಾಗುವುದು ಒಂದು ಸೆಂಟಿಮೆಂಟ್ ದೃಶ್ಯದಿಂದ. ಅಲ್ಲಿಂದ ಫೈಟು, ಹಾಡು, ಕಾಮಿಡಿ, ಲವ್ವು, ಸೆಂಟಿಮೆಂಟು ಎಂದು ಒಂದೊಂದೇ ಸರಕು ತೆಗೆದು ಚಿತ್ರ ನೋಡಿಸಿಕೊಂಡು ಹೋಗುವಂತೆ ಮಾಡುತ್ತಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಕೂರಿಸುವಂತೆ ಅವರು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

    ಈ ತರಹದ ತೆಲುಗು ಫಾಮುಲಾ ಎಲ್ಲ ಸಮಯದಲ್ಲೂ ಕನ್ನಡಿಗರ ಮನಸ್ಸು ಮುಟ್ಟುವುದು ಕಷ್ಟ ಎಂದು ಅವರಿಗೆ ಗೊತ್ತಿದೆ. ದ್ವಿತೀಯಾರ್ಧದಲ್ಲಿ ಒಂದು ಗಂಭೀರವಾದ ವಿಷಯ ತರುತ್ತಾರೆ. ಅಷ್ಟೆಲ್ಲ ಆಗುತ್ತಿರುವುದು ಲ್ಯಾಂಡ್ ಮಾಫಿಯಾದಿಂದ ಅಂತೆಲ್ಲ ಅಂದುಕೊಂಡರೆ, ಅದರ ಜತೆಗೆ ಮೆಡಿಕಲ್ ಮಾಫಿಯಾ ಸಹ ಇದೆ ಎಂದು ಹೇಳುತ್ತಾರೆ. ವೈರಸ್ ತಂದು ಸಮಕಾಲೀನಗೊಳಿಸುತ್ತಾರೆ. ಅದೆಲ್ಲ ಹೇಗೆ, ಏಕೆ ಎಂದು ಹೇಳುವುದು ಕಷ್ಟ. ಅದೇನಿದ್ದರೂ ಚಿತ್ರಮಂದಿರದಲ್ಲೇ ನೋಡಬೇಕು. ಅನೀಶ್ ಇಲ್ಲಿ ನಟನೆ, ನಿರ್ದೇಶನ ಮತ್ತು ನಿರ್ಮಾಣ ಎಂಬ ಮೂರು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಅದ್ಭುತವಲ್ಲದಿದ್ದರೂ ಪ್ರೇಕ್ಷಕರಿಗೆ ಟೈಂಪಾಸ್ ಎನ್ನುವಂತಹ ಚಿತ್ರವನ್ನು ನೀಡಿದ್ದಾರೆ. ನಟರಾಗಿ ಅವರು ಆಕ್ಷನ್ ದೃಶ್ಯಗಳಲ್ಲಿ ಹೆಚ್ಚು ಮಿಂಚುತ್ತಾರೆ. ನಿಶ್ವಿಕಾ ಲವಲವಿಕೆಯಿಂದ ನಟಿಸಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ ಅಭಿನಯ ಖುಷಿಕೊಡುತ್ತದೆ. ಹಾಡಿರಲಿ, ಫೈಟ್ ಇರಲಿ ಅವೆಲ್ಲವನ್ನೂ ನವೀನ್ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ವಿಕ್ರಂ ಮೋರೆ ಅವರ ಹೊಡೆದಾಟಗಳು ಈ ಚಿತ್ರದ ಪ್ಲಸ್ಸು.

    • ಚಿತ್ರ: ರಾಮಾರ್ಜುನ
    • ತಾರಾಗಣ: ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್ ಮುಂತಾದವರು
    • ನಿರ್ಮಾಣ-ನಿರ್ದೇಶನ: ಅನೀಶ್ ತೇಜೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts