More

    ವಿಶ್ವಕಪ್ ಕೈತಪ್ಪಿದಾಗಲೇ ನಗುತ್ತಿದ್ದ ಕ್ರಿಕೆಟಿಗ ಐಪಿಎಲ್‌ನಲ್ಲಿ ಕೋಪಗೊಂಡಿದ್ದೇಕೆ?

    ದುಬೈ: ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವಿಗೆ ಅರ್ಹವಾಗಿದ್ದ ನ್ಯೂಜಿಲೆಂಡ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಟೈಗೆ ತೃಪ್ತಿಪಟ್ಟು, ಬಳಿಕ ಸೂಪರ್ ಓವರ್‌ನಲ್ಲಿ ಟೈ ಆದ ಕಾರಣ ಬೌಂಡರಿ ಕೌಂಟ್‌ನಲ್ಲಿ ಪ್ರಶಸ್ತಿ ಕಳೆದುಕೊಂಡಿತ್ತು. ಆದರೂ ಐಸಿಸಿಯ ಈ ವಿಚಿತ್ರ ನಿಯಮದ ಬಗ್ಗೆ ಯಾವುದೇ ರೀತಿಯ ಮುನಿಸು ತೋರಿಸಿಕೊಳ್ಳದೆ ಮೈದಾನದಲ್ಲಿ ಶಾಂತಚಿತ್ತದಿಂದಲೇ ಇದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ಕ್ರೀಡಾ ಸ್ಫೂರ್ತಿ ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂಥ ವಿಲಿಯಮ್ಸನ್ ಇದೀಗ ಐಪಿಎಲ್‌ನಲ್ಲಿ ಕೋಪಗೊಂಡಿದ್ದಾರೆ!

    ಇದನ್ನೂ ಓದಿ: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ರಾಬಿನ್ ಉತ್ತಪ್ಪ!

    ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ ಪರ ಕಣಕ್ಕಿಳಿದ ಕೇನ್ ವಿಲಿಯಮ್ಸನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ತಂಡಕ್ಕೆ ಆಧಾರವಾಗಬೇಕಾಗಿದ್ದ ಹಂತದಲ್ಲಿ ಅವರು ಸಹ-ಬ್ಯಾಟ್ಸ್‌ಮನ್ ಪ್ರಿಯಂ ಗಾರ್ಗ್ ಜತೆಗಿನ ವಿಕೆಟ್ ನಡುವಿನ ಓಟದ ಗೊಂದಲದಿಂದಾಗಿ ರನೌಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ವಿಲಿಯಮ್ಸನ್ ಕೋಪದಿಂದ ಚೀರಾಡಿದ್ದು ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ.

    ವಿಲಿಯಮ್ಸನ್ ಮಿಡ್‌ವಿಕೆಟ್‌ನತ್ತ ಚೆಂಡನ್ನು ಬಾರಿಸಿ ರನ್ ಕದಿಯಲು ಓಡಿದ್ದರು. ಆದರೆ 19 ಭಾರತದ ವಯೋಮಿತಿ ತಂಡದ ಮಾಜಿ ನಾಯಕ ಪ್ರಿಯಂ ಗಾರ್ಗ್ ಅವರಿಗೆ ಸೂಕ್ತ ಸ್ಪಂದನೆ ನೀಡಲಿಲ್ಲ. ಇದರಿಂದಾಗಿ ವಿಲಿಯಮ್ಸನ್ ಕ್ರೀಸ್‌ಗೆ ಮರಳುವ ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲಾಗಲೆ ಅಂಬಟಿ ರಾಯುಡು ಚೆಂಡನ್ನು ವಿಕೆಟ್ ಕೀಪರ್ ಎಂಎಸ್ ಧೋನಿ ಅವರತ್ತ ಎಸೆದರು. ವಿಲಿಯಮ್ಸನ್ ಕ್ರೀಸ್‌ಗೆ ಮರಳುವುದರೊಳಗೆ ಧೋನಿ ಬೇಲ್ಸ್ ಉರುಳಿದರು. ಇದರಿಂದ ವಿಲಿಯಮ್ಸನ್ ಕೋಪದಿಂದ ಪ್ರಿಯಂ ಗಾರ್ಗ್‌ರತ್ತ ದೃಷ್ಟಿ ಬೀರಿದರು. ಶಾಂತ ಚಿತ್ತದ ವಿಲಿಯಮ್ಸನ್ ಈ ರೀತಿ ಕೋಪಗೊಂಡಿದ್ದನ್ನು ನಾವು ಇದೇ ಮೊದಲ ಬಾರಿ ನೋಡಿರುವುದು ಎಂದು ಅನೇಕ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts