More

    ಖಾನಾಪುರ ತಾಲೂಕಾದ್ಯಂತ ಮಳೆ

    ಖಾನಾಪುರ: ಕಳೆದ ಮೂರ್ನಾಲ್ಕು ತಿಂಗಳಿಂದ ಸತತವಾಗಿ ಉರಿ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪು ನೀಡಿದೆ. ಹಲವು ದಿನಗಳಿಂದ ಖಾನಾಪುರ ತಾಲೂಕಿನಾದ್ಯಂತ ವರ್ಷಧಾರೆ ಆರಂಭವಾಗಿದೆ. ಮಳೆರಾಯನ ಆಗಮನ ರೈತ ಸಮೂಹದಲ್ಲಿ ಹರ್ಷ ಮೂಡುವಂತೆ ಮಾಡಿದ್ದು, ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ.

    ಮೂರು ದಿನಗಳಿಂದ ಸತತವಾಗಿ ಸುರಿದ ಮಹಾ ಮಳೆ ಬುಧವಾರ ಶಾಂತಗೊಂಡಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಈಗ ತಮ್ಮ ಜಮೀನುಗಳಲ್ಲಿ ತೇವಾಂಶ ಹೆಚ್ಚಿದ್ದರಿಂದ ಮುಂಗಾರು ಬಿತ್ತನೆಗಾಗಿ ಭೂಮಿಯನ್ನು ಅಣಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವರ್ಷದ ಕೊರೊನಾ ಆತಂಕ ಮತ್ತು ಬಿರುಬಿಸಿಲಿನಿಂದ ಕಂಗಾಲಾಗಿದ್ದ ತಾಲೂಕಿನ ನಾಗರಿಕರು ಸಕಾಲದಲ್ಲಿ ಪ್ರಾರಂಭಗೊಂಡ ಮಳೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ, ಬೈಲ್ ನದಿಯನ್ನು ಸಂಗಮಿಸುವ ಹಳ್ಳ-ಕೊಳ್ಳಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. ತಾಲೂಕಿನ ಅರಣ್ಯ ಪ್ರದೇಶದ ಅಲ್ಲಲ್ಲಿ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಪೂರೈಕೆ ಮತ್ತು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾದ ವರದಿಯಾಗಿದೆ. ಇದುವರೆಗೂ ಮಳೆಯಿಂದಾಗಿ ಯಾವುದೇ ಗಂಭೀರ ಅವಘಡಗಳು ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

    ನೇಸರಗಿ ವರದಿ: ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಮಳೆ ಸುರಿದಿದೆ. ರೈತರ ಮೊಗದಲ್ಲಿ ಸಂತಸ ತಂದಿದ್ದು, ಮುಂಗಾರು ಬಿತ್ತನೆ ಕಾರ್ಯಕ್ಕಾಗಿ ಸಜ್ಜಾಗಿದ್ದಾರೆ.

    ವರ್ಷಧಾರೆ ಆರಂಭ, ಅನ್ನದಾತರು ನಿರಾಳ..

    ಬೆಟಗೇರಿ: ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದು, ಇಲ್ಲಿಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಸಕ್ತ ಮುಂಗಾರು ಮಳೆ ಯಾಗದೆ, ರೈತರು ಹಾಗೂ ಜನಸಾಮಾನ್ಯರಲ್ಲಿ ಮಳೆಯಾಗುವ ಲಕ್ಷಣ ಗೋಚರಿಸದೆ ಆತಂಕ ಮೂಡಿಸಿತ್ತು. ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಕೆಲವು ಹಳ್ಳಿಗಳಲ್ಲಿ ದಿನ ಬೆಳಗಾದರೆ ರೈತರು ಆಕಾಶದತ್ತ ಮುಖ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದರು. ಮಂಗಳವಾರ ಮತ್ತು ಬುಧವಾರ ಸುರಿದ ಮಳೆ ಭೂಮಿ ತಂಪಾಗಿಸಿದ್ದರಿಂದ ಜನರು ನಿಟ್ಟಿಸಿರು ಬಿಡುವಂತಾಗಿದೆ. ತೋಟಗಾರಿಕೆ ಬೆಳೆಗಳಿಗೆ ಇನ್ನು ಹೆಚ್ಚಿನ ಮಳೆಯಾಗಬೇಕು ಎಂದು ರೈತ ಪತ್ರೆಪ್ಪ ನೀಲಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts