| ಪ್ರಮೋದ ಮೋಹನ ಹೆಗಡೆ
ಎಂಜಿನಿಯರಿಂಗ್ ಓದಿದ ಅನೇಕರು ಕ್ರೀಯೇಟಿವ್ ಜಗತ್ತಿನಲ್ಲಿದ್ದಾರೆ. ಅದೇ ಸಾಲಿಗೆ ಸೇರುವ ಮತ್ತೊಂದು ಹೆಸರು ಭುವನ್. ಭುವನ್ ಸತ್ಯ, ಇನ್ನೂ ಎಂಜಿನಿಯರಿಂಗ್ ಓದುತ್ತಿರುವ ಹುಡುಗ. ಬಾಲ್ಯದಿಂದಲೇ ಸಿನಿಮಾ ಆಸಕ್ತಿಯಿದ್ದ ಕಾರಣ ಡಾನ್ಸ್, ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿ ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿಂದಿ ಹಾಡುಗಳಿಗೆ ಡಾನ್ಸ್ ಮಾಡುತ್ತಿದ್ದನ್ನು ಕಂಡು, ಕನ್ನಡ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಲು ಆರಂಭಿಸಿದ್ದಾರೆ. ಈಗ ಸದ್ಯ ಭುವನ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಕಿರುತೆರೆಯ ಮೂಲಕ ವೃತ್ತಿ ಜೀವನ ಶುರು ಮಾಡಿದ್ದಾರೆ.
ಯಾವುದೇ ಹಿನ್ನೆಲೆ ಇಲ್ಲ:
ಚಿತ್ರರಂಗ ಅಥವಾ ಧಾರಾವಾಹಿ ಕ್ಷೇತ್ರದ ಯಾವುದೇ ಹಿನ್ನೆಲೆಯನ್ನು ಹೊಂದಿರದ ಹಾಸನ ಮೂಲದ ಭುವನ್ ‘ಪುಣ್ಯವತಿ’ ಧಾರಾವಾಹಿ ಮೂಲಕ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನೊಡುತ್ತಾ, ಅದರಿಂದಲೇ ಸಾಕಷ್ಟು ಕಲಿತು, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರಂತೆ ಭುವನ್. ಹೀಗಾಗಿ, ಜೀವನದ ಮೌಲ್ಯಗಳನ್ನು ಕಲಿಸಿದ ಸಿನಿಮಾ ರಂಗಕ್ಕೆ ಕೊಡುಗೆ ನೀಡಬೇಕು ಎನ್ನುವ ಕನಸು ಅವರದ್ದು.

ರಂಗಭೂಮಿಯಲ್ಲಿ ಕಲಿಕೆ:
ನಂತರ, ರಂಗಾಂತರ್ಯ ಎಂಬ ನಾಟಕ ತಂಡದ ಭಾಗಿಯಾಗಿ ಹಲವು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅನೇಕ ನಾಟಕಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ನಟನಾಗಿ ರೂಪಗೊಳ್ಳಲು ರಂಗಭೂಮಿ ಸಹಾಯ ಮಾಡಿದೆ, ಅದರ ಕಾರಣದಿಂದಲೇ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಎನ್ನುತ್ತಾರೆ ಭುವನ್.

‘ಸಿನಿಮಾ ನನ್ನ ಕನಸು’:
ನಟನೆಯ ಪಯಣವನ್ನು ಮುಂದುವರಿಸುತ್ತ ಭುವನ್ ಸದ್ಯ ‘ಪುಣ್ಯವತಿ’ ದಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿಪರದೆಯತ್ತ ಹೋಗಬೇಕು ಎನ್ನುವುದು ಭುವನ್ ಕನಸು. ಚಿತ್ರಂರಗದಲ್ಲೇ ಮಿಂಚಬೇಕು ಎಂದಿರುವ ಭುವನ್, ‘ನನಗೆ ಈಗ ಕೆಲವು ಆಫರ್‌ಗಳು ಬಂದಿವೆ. ಆದರೆ, ಸದ್ಯ ಧಾರಾವಾಹಿ ಇರುವ ಕಾರಣದಿಂದ ಸಮಯ ಹೊಂದಿಸಲು ಆಗುತ್ತಿಲ್ಲ. ಸದ್ಯದಲ್ಲೇ ಸಮಯ ಹೊಂದಿಸಿಕೊಂಡು ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಸಿನಿಮಾ ನನಗೆ ಗುರು, ಅದೇ ನನ್ನ ಗುರಿ. ಮನರಂಜನೆ ಜತೆ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ನಿಡುವ ಚಿತ್ರದಲ್ಲಿ ಅಭಿನಯಿಸಬೇಕು ಎನ್ನುವುದು ನನ್ನ ಆಸೆ. ಅಂತಹದೊಂದು ನನಗಿಷ್ಟವಾಗುವ ಕಥೆ ಸಿಕ್ಕಾಗ ಖಂಡಿತ ಕೂಡಲೇ ಒಪ್ಪಿಕೊಳ್ಳುತ್ತೇನೆ. ನಟನಾಗಿ ಮಾತ್ರವಲ್ಲ, ಒಂದು ಸಿನಿಮಾದ ಆರಂಭದಿಂದ ಪೋಸ್ಟ್ ಪ್ರೊಡಕ್ಷನ್ ಮುಗಿಯುವವರೆಗೂ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಭುವನ್.
