More

    ಸ್ಯಾಂಡಲ್​​ವುಡ್​ ಹಿರಿಯ ನಟ, ಕನ್ನಡದ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್​ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಕನ್ನಡದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್​ ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಕುಟುಂಬದ ಮೂಲಗಳು ಖಚಿತಪಡಿಸಿದೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ, ನಾಯಕ ನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ತಮ್ಮದೇ ಛಾಪು ಮೂಡಿಸಿದರು. ಡಾ. ರಾಜ್​ಕುಮಾರ್​ ಅವರಿಂದ ಹಿಡಿದು ವಿಷ್ಣುವರ್ಧನ್​, ಅಂಬರೀಷ್​, ಶಂಕರ್​ನಾಗ್​ ಸೇರಿದಂತೆ ಹೆಸರಾಂತ ಕಲಾವಿದರ ಜತೆ ನಟಿಸಿ ಸೈ ಎನಿಸಿಕೊಂಡರು. ಇದೀಗ ದ್ವಾರಕೀಶ್​ ಅವರ ನಿಧನದಿಂದಾಗಿ ಚಿತ್ರರಂಗ ಪ್ರತಿಭಾವಂತನನ್ನು ಕಳೆದುಕೊಂಡಿದೆ. ದ್ವಾರಕೀಶ್​ ಅವರ ಸಾವಿಗೆ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ದ್ವಾರಕೀಶ್​ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದು, ನಿನ್ನೆ ರಾತ್ರಿ ಬೇದಿಯಾಯಿತು. ಅಲ್ಲದೆ, ರಾತ್ರಿಯಿಡಿ ನಿದ್ದೆಯನ್ನೇ ಮಾಡಿರಲಿಲ್ಲ. ಬೆಳಗ್ಗೆ ಎದ್ದಾಗ ಕಾಫಿ ಕುಡಿದು ಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ಹೇಳಿದರು. ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತವಾಗಿದೆ ಎಂದು ದ್ವಾರಕೀಶ್​ ಕುಟುಂಬ ತಿಳಿಸಿದೆ.

    ದ್ವಾರಕೀಶ್​ ಅವರು 1942, ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಶಮಾರಾವ್ ಮತ್ತು ಜಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ತಮ್ಮ ಬಾಲ್ಯ ಜೀವನವನ್ನು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಕಳೆದರು. ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ಮುಗಿಸಿದರು. ಬಳಿಕ ಸಿಪಿಸಿ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ಇದಾದ ಬಳಿಕ ಸೋದರನ ಜತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1963ರಲ್ಲಿ ವ್ಯಾಪಾರವನ್ನು ಬಿಟ್ಟು ಸಿನೆಮಾ ನಟನೆಯನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಸಾಹಸಿಂಗ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧವಾಗಿತ್ತು. ಇಬ್ಬರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

    ಕಳ್ಳಕುಳ್ಳ, ಗುರು ಶಿಷ್ಯರು, ಪ್ರಚಂಡ ಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರಿನಲ್ಲಿ ರಾಜಕುಳ್ಳ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಮಂಕುತಿಮ್ಮ, ಪೊಲೀಸ್​ ಪಾಪಣ್ಣ, ಆಪ್ತಮಿತ್ರ, ಮುದ್ದಿನ ಮಾವ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

    1966ರಲ್ಲಿ ದ್ವಾರಕೀಶ್ ಅವರು ತುಂಗಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಮತೆಯ ಬಂಧನ ಚಲನಚಿತ್ರವನ್ನು ಸಹ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಡ್ತಿಪಡೆದರು. 1969ರಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಸಿನಿಮಾ ದ್ವಾರಕೀಶ್​ ಸ್ವತಂತ್ರವಾಗಿ ನಿರ್ಮಿಸಿದ ಮೊದಲ ಸಿನಿಮಾ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಮೇಯರ್ ಮುತ್ತಣ್ಣನ ನಂತರ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ಕಾಲ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ನೀಡಿದರು.

    1985ರಿಂದ ದ್ವಾರಕೀಶ್ ಅವರು ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ನಿರ್ದೇಶಕರಾಗಿ ಅವರ ಮೊದಲ ಚಿತ್ರ ವಿಷ್ಣುವರ್ಧನ್​ ನಟನೆಯ ನೀ ಬರೆದ ಕಾದಂಬರಿ ಸಿನಿಮಾ. ನಿರ್ದೇಶಕರಾಗಿ ಡ್ಯಾನ್ಸ್ ರಾಜ ಡ್ಯಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    ದ್ವಾರಕೀಶ ನಿಧನಕ್ಕೆ ಡಾ. ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಕಂಬನಿ :
    ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್ನರಾದ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಸಂತಾಪ ವ್ಯಕ್ತಪಡಿಸಿದ್ದಾರೆ.

    ಕನ್ನಡ ಚಿತ್ರರಂಗ ಅಪಾರ ಕೊಡುಗೆ ನೀಡಿದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತೀವ್ರ ದುಃಖಕರ ಸಂಗತಿಯಾಗಿದೆ. ದ್ವಾರಕೀಶ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಅವರು ಕಂಬನಿ ಮಿಡಿದಿದ್ದಾರೆ.

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯ ಜತೆ ವರು ನಿಶ್ಚಿತಾರ್ಥ! ಶಾಕಿಂಗ್​ ಕಾಮೆಂಟ್​ ಮಾಡಿದ ವಿಶಾಲ್

    ಬಾಲಿವುಡ್​ ಬ್ಯೂಟಿ ಮಲೈಕಾರ ಖಾಸಗಿ ಕ್ಷಣದ ವಿಡಿಯೋ ಸೆರೆ! ನಿಮಗೆ ನಾಚಿಕೆ ಆಗಲ್ವಾ ಅಂದ್ರು ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts