ಎನ್‌ಪಿಎಸ್ ನೌಕರರ ಜತೆ ಸರ್ಕಾರ ಚೆಲ್ಲಾಟ

1 Min Read
ಎನ್‌ಪಿಎಸ್ ನೌಕರರ ಜತೆ ಸರ್ಕಾರ ಚೆಲ್ಲಾಟ
ಕಂಪ್ಲಿಯಲ್ಲಿ ಬುಧವಾರ ಆಯೋಜಿಸಿದ್ದ ಆಡಳಿತ ಸುಧಾರಣೆಯಲ್ಲಿ ನೌಕರರ ಪಾತ್ರ ಕುರಿತ ವಿಚಾರ ಸಂಕಿರಣ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಚಾಲನೆ ನೀಡಿದರು.

ಕಂಪ್ಲಿ: ನೌಕರರ ಜತೆ ಸರ್ಕಾರ ಚೆಲ್ಲಾಟವಾಡಿದರೆ, ಆಡಳಿತ ವ್ಯವಸ್ಥೆಯೇ ಸ್ತಬ್ಧವಾದೀತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಎಚ್ಚರಿಕೆ ನೀಡಿದರು.

ಇಲ್ಲಿನ ಮಾರುತಿ ನಗರದ ಸಮುದಾಯ ಭವನದಲ್ಲಿ ಬುಧವಾರ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಆಡಳಿತ ಸುಧಾರಣೆಯಲ್ಲಿ ನೌಕರರ ಪಾತ್ರ ಕುರಿತ ವಿಚಾರ ಸಂಕಿರಣ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು. ಎನ್‌ಪಿಎಸ್ ರದ್ಧತಿ, ಪೇ ಕಮಿಷನ್, ಖಾಲಿ ಹುದ್ದೆ ಭರ್ತಿ, ಕೇಂದ್ರ ಮಾದರಿ ವೇತನ ಪಡೆಯುವಿಕೆಗಾಗಿ ನಿರಂತರ ಪ್ರಯತ್ನ ಸಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರ ಸಮಸ್ಯೆ ಸರ್ಕಾರಿ ನೌಕರರ ಸಮಸ್ಯೆಯೆಂದು ಪರಿಗಣಿಸಿದೆ. ನೌಕರರ ಗುಣಾತ್ಮಕ ಸೇವೆಗೆ ಸರ್ಕಾರ ಪೂರಕ ಸೌಲಭ್ಯ ಒದಗಿಸಬೇಕು. ಪ್ರವಾಹ ಸಂಕಷ್ಟ, ಕರೊನಾ ನಿಯಂತ್ರಣದಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ನೌಕರರು ಶಿಸ್ತು, ಪ್ರಾಮಾಣಿಕತೆ, ಸಮಯ ಪಾಲನೆ, ಆತ್ಮಸ್ಥೈರ್ಯದೊಂದಿಗೆ ಕೆಲಸ ನಿರ್ವಹಿಸಬೇಕು. ಮೇಲಧಿಕಾರಿಗಳು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಆತ್ಮವಂಚನೆಯ ಕೆಲಸ ಮಾಡಬಾರದು. ಆಡಳಿತ ಮತ್ತು ಮನೆಗಳಲ್ಲಿ ಕನ್ನಡ ಭಾಷೆಯನ್ನು ಸಮೃದ್ಧವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಟಿ. ಗಿರೀಶ್‌ಬಾಬು, ಸರ್ಕಾರಿ ನೌಕರರ ಭವನ, ಕಂದಾಯ ಭವನಗಳಿಗೆ ನಿವೇಶನ ಒದಗಿಸಬೇಕು. ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರನ್ನಾಗಿ ಸರ್ಕಾರ ಪರಿಗಣಿಸಬೇಕು. ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೊಳಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಗೌಸಿಯಾಬೇಗಂ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಟಿ. ಶಿವಾಜಿರಾವ್, ಜಿ. ಮಲ್ಲಿಕಾರ್ಜುನಗೌಡ, ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ್‌ಗೌಡ, ಪದಾಧಿಕಾರಿಗಳಾದ ಬಿ.ಕುಮಾರಸ್ವಾಮಿ, ಎಚ್.ದೊಡ್ಡಬಸಪ್ಪ, ಡಿ.ವಿಶ್ವನಾಥ, ಎಂ.ಎ.ನಾಗನಗೌಡ, ಕ.ರಾ.ಪ್ರಾ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಸೇರಿ ಸರ್ವ ಸದಸ್ಯರು, ಸಂಘದ ರಾಜ್ಯ, ಜಿಲ್ಲಾ ಘಟಕಗಳ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

See also  ಸರ್ಕಾರದ ಸೂಚನೆ ಪಾಲನೆ ಮಾಡಿ
Share This Article