More

    ಹೊಲಗದ್ದೆಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳು; ರೈತರಿಗೆ ಜೀವ ಭಯ

    ಕಂಪ್ಲಿ: ತಾಲೂಕಿನ ನಂ.1 ಇಟಗಿ ಗ್ರಾಮದ ಹೊಲಗದ್ದೆಗಳಲ್ಲಿ ಎಳೆದಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

    ಇಟಗಿ ಗ್ರಾಮದ ಬಾಬುರಾವ್, ಪ್ರಸಾದಗೌಡ, ರಾಯನಗೌಡರ ಗದ್ದೆ, ಮಾಗಿ(ಅಂಚೆ)ಪ್ರದೇಶ ಸೇರಿ ಗ್ರಾಮದ ಹೊಲ ಗದ್ದೆಗಳಲ್ಲಿ ಮೋಟರ್‌ಗಳಿಗಾಗಿ ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ. ಇವು ನೆಲ ಸಮೀಪಕ್ಕೆ ಜೋತು ಬಿದ್ದಿವೆ.

    ಅಲ್ಲದೆ ಅಲ್ಲಲ್ಲಿ ಜಾಯಿಂಟ್ ಮಾಡಿದ್ದರಿಂದ ಭಯ ಹೆಚ್ಚಿದಿದೆ. ಆಗಾಗ್ಗೆ ಸ್ಪಾರ್ಕ್ ಆಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು, ಮೋಟರ್‌ಗಳಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಮೋಟರ್ ಸುಟ್ಟಲ್ಲಿ ಐದಾರು ಸಾವಿರ ರೂ. ವ್ಯಯಿಸಬೇಕು. ಸತುವಿನ ಚೀಲ, ಮೇವು, ಕಟ್ಟಿಗೆಯ ಹೊರೆ ಹೊತ್ತು ಬಂದರೆ ವಿದ್ಯುತ್ ತಂತಿಗಳು ತಾಗುವಷ್ಟು ಎತ್ತರದಲ್ಲಿದ್ದು, ಬದುವಿನ ಮೇಲೆ ಓಡಾಡುವುದು ಕಷ್ಟವಾಗಿದೆ.

    ಹೀಗಾಗಿ ಭಯ ಆಂಕದಿಂದಲೇ ಹೊಲಗದ್ದೆಗಳಲ್ಲಿ ಓಡಾಡುವಂತಾಗಿದೆ. ಹೊಸ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ತಂತಿಗಳನ್ನು ಎತ್ತರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರಾದ ಎನ್.ಜಡೆಪ್ಪ, ಸೂಗೂರು ಪಕ್ಕೀರಪ್ಪ, ಮಣ್ಣೂರು ಅಂಜಿನಪ್ಪ, ಟಿ.ಜಡೆಪ್ಪ ಇತರರು ಆಗ್ರಹಿಸಿದ್ದಾರೆ.

    ವಿದ್ಯುತ್ ತಂತಿ, ಕಂಬಗಳನ್ನು ಬದಲಿಸುವಂತೆ ಇಟಗಿ ಭಾಗದ ರೈತರು ಮನವಿ ಮಾಡಿಕೊಂಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಸೆಕ್ಷನ್ ಆಫೀಸರ್‌ಗೆ ಸೂಚಿಸಲಾಗಿದೆ. 15 ದಿನದೊಳಗೆ ಸರಿಪಡಿಸಲಾಗುವುದು.
    | ನರೇಶ್ ಜೆಸ್ಕಾಂ ಎಇಇ, ಹೊಸಪೇಟೆ ಗ್ರಾಮೀಣ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts