More

    ಪುರಾತನ ಪುಷ್ಕರಣಿಗಳಿಗೆ ಹೊಸ ರೂಪ: ಕಂಪ್ಲಿ ತಾಲೂಕಿನ ಒಂಬತ್ತು ಕಲ್ಯಾಣಿಗಳ ಪುನಶ್ಚೇತನ


    ಕಂಪ್ಲಿ: ತಾಲೂಕಿನ ಪುರಾತನ ಕಲ್ಯಾಣಿಗಳ ಪುನಶ್ಚೇತನಕ್ಕೆ ತಾಲೂಕು ಪಂಚಾಯಿತಿ ಮುಂದಾಗಿದೆ. ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಅಭಿವೃದ್ಧಿಪಡಿಸುತ್ತಿದ್ದು, ಒಟ್ಟು ಒಂಬತ್ತು ಪುಷ್ಕರಣಿಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

    ರಾಮಸಾಗರದ ನಾಲ್ಕು, ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಮೂರು ಹಾಗೂ ಮೆಟ್ರಿ ಗ್ರಾಪಂ ವ್ಯಾಪ್ತಿಯ ಎರಡು ಕಲ್ಯಾಣಿಗಳನ್ನು ತಾಪಂ ಗುರುತಿಸಿದ್ದು, ಸ್ಥಳೀಯ ಗ್ರಾಮಾಡಳಿತ ಅನುಷ್ಠಾನಗೊಳಿಸುತ್ತಿವೆ. ನೀರಿನ ಮೂಲ, ಜಲಚರ ಪ್ರಾಣಿಗಳನ್ನು ಸಂರಕ್ಷಿಸುವ ಜತೆಗೆ ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಅಗತ್ಯವಿದ್ದಾಗ ಬಳಸಿಕೊಳ್ಳುವ ಆಲೋಚನೆಯೊಂದಿಗೆ ಪುರಾತನ ಕಲ್ಯಾಣಿಗಳನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದೆ. ಇದರೊಟ್ಟಿಗೆ ನರೇಗಾ ಮೂಲಕ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗವೂ ಸಿಗಲಿದೆ.

    ರಾಮಸಾಗರ ಗ್ರಾಮದ ಸಿದ್ಧೇಶ್ವರ ನಗರದ ಹತ್ತಿರದ ಸಾರ್ವಜನಿಕ ಕಲ್ಯಾಣಿ ಕಸ, ಪ್ಲಾಸ್ಟಿಕ್‌ನಿಂದ ಮುಚ್ಚಿಹೋಗಿ, ದುರ್ವಾಸನೆಯಿಂದ ಕೂಡಿತ್ತು. ಪಶು ಪಕ್ಷಿಗಳು ಸಹ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಇದೀಗ 2020-21ನೇ ಸಾಲಿನ ನರೇಗಾದಡಿ ಕಲ್ಯಾಣಿಯನ್ನು 30ಕುಟುಂಬಗಳ 476 ಮಾನವ ದಿನಗಳ ಸೃಜನೆಯೊಂದಿಗೆ 3.70ಲಕ್ಷ ರೂ. ಸಾಮಗ್ರಿ ವೆಚ್ಚ ಹಾಗೂ 1.30 ಲಕ್ಷ ರೂ.ಗಳ ಕೂಲಿ ವೆಚ್ಚ ಸೇರಿ 5 ಲಕ್ಷ ರೂ.ಅಂದಾಜು ಮೊತ್ತದಲ್ಲಿ ಪುನಶ್ಚೇತನಗೊಳಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಜನತೆ ವಾಯುವಿಹಾರ, ಯೋಗ, ಧ್ಯಾನಗಳಿಗಾಗಿ ಕಲ್ಯಾಣಿಯತ್ತ ಬರುತ್ತಿದ್ದಾರೆ. ಕೃಷಿ ಸೇರಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ಆಸರೆಯಾಗಿದೆ. ಜೀಣೋದ್ಧಾರಕ್ಕೂ ಮುನ್ನ ನೀರಿನ ಸಾಮರ್ಥ್ಯ 42,684 ಗ್ಯಾಲನ್‌ನಷ್ಟಿತ್ತು.ಇದೀಗ 77,402 ಗ್ಯಾಲನ್‌ಗೇರಿದೆ. ಇದೇ ಮಾದರಿಯಲ್ಲಿ ತಾಲೂಕಿನಲ್ಲಿ ಇನ್ನು ಎಂಟು ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

    ಕೋಟ್:
    ತಾಲೂಕಿನ ಒಂಬತ್ತು ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಇದರಿಂದ ಪುಷ್ಕರಣಿಗಳಿಗೆ ಹೊಸ ರೂಪ ಕೊಡುವ ಜತೆಗೆ ಸುತ್ತಲಿನ ಪರಿಸರ, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗುವುದು. ಜಲಚರ ಜೀವಿಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ರೈತರು ನೀರಿನ ಮೂಲಗಳನ್ನು ಹಾಳುಮಾಡಬಾರದೆಂದು ತಿಳಿಸಲಾಗುತ್ತಿದೆ.
    ಮೊಹಮ್ಮದ್ ಖಿಜರ್
    ತಾಪಂ ಇಒ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts