More

    ಕಂಬಳ ಓಟಗಾರರ ವೇಗ ಜಗತ್ತಿನ ಶರವೇಗದ ಓಟಗಾರ ಉಸೇನ್​ ಬೋಲ್ಟ್​ರನ್ನೂ ಮೀರಿಸುತ್ತೆ!

    ಬೆಂಗಳೂರು: ಸದ್ಯ ರಾಜಧಾನಿಯಲ್ಲಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳದ ಸದ್ದು ಜೋರಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಕಂಬಳದ ಕಲರವ ಇರಲಿದೆ. ಕೆಸರುಗದ್ದೆಯಲ್ಲಿ ಓಡುತ್ತಿದ್ದ ಕಂಬಳದ ಕೋಣಗಳೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿವೆ! ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಅರಮನೆ ಮೈದಾನದ 55 ಎಕರೆ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ (ನ.25 ಮತ್ತು 26) ಕರಾವಳಿ ಕಂಬಳ ಉತ್ಸವ ಆಯೋಜನೆಗೊಂಡಿದೆ.

    ಕಂಬಳದ ವಿಶೇಷತೆಗಳ ಬಗ್ಗೆ ಪ್ರಸ್ತುತ ಸಾಕಷ್ಟು ಚರ್ಚೆಯಾಗುತ್ತಿದೆ. ಕಂಬಳದಲ್ಲಿ ಕೋಣಗಳೇ ಪ್ರಮುಖ ಆಕರ್ಷಣೆಯಾದರೂ ಕೋಣಗಳ ಹಿಂದೆ ಓಡುವ ಕಂಬಳದ ಓಟಗಾರರ ಬಗ್ಗೆಯೂ ಮಾತನಾಡಬೇಕಿದೆ. ಕಂಬಳದ ಓಟಗಾರರ ವೇಗ ಮಿಂಚಿನಂತಿರುತ್ತದೆ. ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಮತ್ತು ಜಗತ್ತಿನಲ್ಲೇ ಅತಿವೇಗದ ಓಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಜಮೈಕಾದ ಉಸೇನ್ ಬೋಲ್ಟ್ ಅವರ ವೇಗವನ್ನು ಮೀರಿಸುತ್ತದೆ.

    ಆದರೆ, ಟ್ರ್ಯಾಕ್​ ಮತ್ತು ಕಂಬಳದ ಓಟಕ್ಕೆ ತುಂಬಾ ವ್ಯತ್ಯಾಸವಿದೆ. ಉಸೇನ್ ಬೋಲ್ಡ್ ನಂಥವರು ಮೈದಾನದ ಗಟ್ಟಿ ಟ್ರ್ಯಾಕ್​ನಲ್ಲಿ ಸ್ಪೈಕ್ ಹಾಕಿ ಓಡುತ್ತಾರೆ. ಆದರೆ ಕಂಬಳದ ಓಟ ಭಿನ್ನ. ಇಲ್ಲಿ ನೀರು-ಕೆಸರು ತುಂಬಿದ ಗದ್ದೆಯಲ್ಲಿ ಬರಿಗಾಲಿನಲ್ಲಿ ಓಡಬೇಕು.

    ಖಾಲಿ ಮೈದಾನದಲ್ಲಿ ಶೂ ಧರಿಸಿ ಉಸೇನ್ ಬೋಲ್ಟ್ 100 ಮೀ. ಓಡಲು ತೆಗೆದುಕೊಂಡ ಸಮಯ 9.58 ಸೆಕೆಂಡು. ಕಂಬಳದಲ್ಲಿ 140 ಮೀ. ದೂರ 13.25 ಸೆಕೆಂಡ್​ನಲ್ಲಿ ಕ್ರಮಿಸಿದವರಿದ್ದಾರೆ. ಅಂದರೆ 100 ಮೀಟರ್ ಅಂತರವನ್ನು 9.47 ಸೆಕೆಂಡ್​ಗಳಲ್ಲಿ ಕಂಬಳ ಓಟಗಾರರು ಕ್ರಮಿಸಿದ್ದಾರೆ ಎಂಬ ಲೆಕ್ಕ.

    ಕಂಬಳದ ಉಸೇನ್​ ಬೋಲ್ಟ್​ ಶ್ರೀನಿವಾಸ್​
    ಮೂಡಬಿದಿರೆಯ‌ ಮಿಜಾರು‌ ಅಶ್ವತ್ಥಪುರ ಮೂಲದ ಶ್ರೀನಿವಾಸ ಗೌಡ ಕಂಬಳದ ಉಸೇನ್​ ಬೋಲ್ಟ್​ ಎಂದೇ ಪ್ರಖ್ಯಾತಿ ಗಳಿಸಿದ್ದಾರೆ. ಇವರು 2020ರ ಫೆಬ್ರವರಿಯಲ್ಲಿ ಕಿನ್ನಿಗೋಳಿ ಸಮೀಪದದಲ್ಲಿ ನಡೆದ ಐಕಳ ಕಂಬಳದಲ್ಲಿ 142.5 ಮೀ. ದೂರವನ್ನು ಕೇವಲ 13.62 ಸೆಕೆಂಡ್​ಗಳಲ್ಲಿ ಓಡಿದ್ದರು. ಇದನ್ನು 100 ಮೀಟರ್​ಗೆ ಪರಿವರ್ತಿಸಿ ನೋಡಿದಾಗ 9.55 ಸೆಕೆಂಡ್​ನಲ್ಲಿ ಗುರಿ ಮುಟ್ಟಿದ್ದರು. ಜಮೈಕಾದ ಉಸೇನ್​ ಬೋಲ್ಟ್​ 100 ಮೀಟರ್​ ಕ್ರಮಿಸಲು 9.58 ಸೆಕೆಂಡ್ಸ್​ ತೆಗೆದುಕೊಂಡಿದ್ದರು. ಈ ವೇಳೆ ಶ್ರೀನಿವಾಸ ಗೌಡ ಅವರು ಎಲ್ಲೆಡೆ ಮನೆ ಮಾತಾಗಿತ್ತು. ಕ್ರೀಡೆಯಲ್ಲಿ ಶ್ರೀನಿವಾಸ್​ ಅವರಿಗೆ ಪ್ರೋತ್ಸಾಹ ನೀಡುವಂತೆ ಒತ್ತಾಯಗಳು ಕೇಳಿಬಂದಿದ್ದವು. ಆಗ ಕೇಂದ್ರ ಕ್ರೀಡಾ‌ ಸಚಿವರಾಗಿದ್ದ ಕಿರಣ್‌ ರಿಜಿಜು ಅವರ ಗಮನವನ್ನು ಸೆಳೆದಿತ್ತು. ಭಾರತೀಯ‌ ಕ್ರೀಡಾ‌ ಪ್ರಾಧಿಕಾರದಲ್ಲಿ ಕೋಚ್‌ಗಳಿಂದ‌ ಶ್ರೀನಿವಾಸ ಗೌಡರಿಗೆ ಓಟದ ತರಬೇತಿ ಕೊಡಿಸುವ ಭರವಸೆ ನೀಡಿದ್ದರು. ಆದರೆ ಶ್ರೀನಿವಾಸ ಗೌಡ ಆನ್ ಟ್ರ್ಯಾಕ್‌ಗಿಂತ ಕಂಬಳ ಗದ್ದೆಯಲ್ಲಿ ಓಟ‌ ಭಿನ್ನವೆಂದು ನಿರಾಕರಿಸಿದ್ದರು.

    ಕೋಣಗಳೇ ಕೇಂದ್ರಬಿಂದು
    ಸಾಮಾನ್ಯವಾಗಿ ದಡ್ಡ, ಬುದ್ಧಿ ಇಲ್ಲದವರಿಗೆ ‘ಕೋಣ’ ಎಂದು ಬೈಯುತ್ತಾರೆ. ಬುದ್ಧಿ ಇದ್ದವನು ಹೀರೋ ಎನಿಸಿಕೊಂಡರೆ, ಬುದ್ಧಿ ಇಲ್ಲದವನು ಕೋಣ ಎನಿಸಿಕೊಳ್ಳುತ್ತಿದ್ದ ಶಾಲಾ ದಿನಗಳು ಎಲ್ಲರ ನೆನಪಿನಲ್ಲೂ ಇರಬಹುದು. ಆದರೆ ಕಂಬಳದಲ್ಲಿ ನಿಜವಾದ ಹೀರೋಗಳು ಕೋಣಗಳು. ಎಲ್ಲರ ಆಕರ್ಷಣೆಯ ಕೇಂದ್ರಬಿಂದುಗಳು ಕೂಡ. ಯಾವ ಕೋಣದ ಜೋಡಿ ಗೆಲುವು ಸಾಧಿಸುತ್ತದೆಯೋ ಅದರಿಂದ ಕೋಣನ ಯಜಮಾನ, ಕೋಣವನ್ನು ಓಡಿಸಿದವನು ಮಾತ್ರವಲ್ಲದೆ, ಯಾವ ಊರಿನಿಂದ ಕೋಣಗಳು ಬಂದಿರುತ್ತವೆ ಆ ಊರಿಗೆ ಒಂದು ಗೌರವ ಎಂಬ ಭಾವನೆ ಇದೆ. ಕಂಬಳದ ಸ್ಪರ್ಧೆ ನಡೆಯುವ ಮೂರ್ನಾಲ್ಕು ನಿಮಿಷ ಕೋಣಗಳಿಗೆ ಕೋಲಿನಿಂದ ಹೊಡೆಯುತ್ತಾರೆ ಎಂಬುದು ಹೊರತುಪಡಿಸಿ, ವರ್ಷಪೂರ್ತಿ ಕೋಣಗಳನ್ನು ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಕೋಣಗಳಿಗೆ ಈಜಲು ಸ್ವಿಮ್ಮಿಂಗ್ ಪೂಲ್, ಬಿಸಿನೀರಿನ ಸ್ನಾನ, ಎಣ್ಣೆಮಸಾಜ್, ಅವುಗಳಿಗೆ ಸೊಳ್ಳೆ ಕಚ್ಚದಂತೆ ಕೊಟ್ಟಿಗೆಯೊಳಗೆ ಫ್ಯಾನ್ ಅಳವಡಿಕೆ, ಉತ್ತಮ ಆಹಾರ ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನು ಆರೈಕೆ ಮಾಡಲಾಗುತ್ತದೆ.

    ಕಂಬಳ ಕಂಗಳಿಗೆ ರಸಗವಳ: ಕರಾವಳಿ ಗ್ರಾಮೀಣ ಕ್ರೀಡೆಗೆ ಸಾಕ್ಷಿಯಾಗಲಿರುವ ಸೆಲೆಬ್ರಿಟಿಗಳಿವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts