More

    ಕಂಬಳ ಕಂಗಳಿಗೆ ರಸಗವಳ: ಕರಾವಳಿ ಗ್ರಾಮೀಣ ಕ್ರೀಡೆಗೆ ಸಾಕ್ಷಿಯಾಗಲಿರುವ ಸೆಲೆಬ್ರಿಟಿಗಳಿವರು…

    ಬೆಂಗಳೂರು: ಧಾರ್ವಿುಕ ಆಚರಣೆ, ಪ್ರತಿಷ್ಠೆಯ ಸಂಕೇತವೂ ಆಗಿರುವ ಶತಮಾನದ ಇತಿಹಾಸ ಹೊಂದಿರುವ ಕಂಬಳ ಅಪ್ಪಟ ಕರಾವಳಿ ಗ್ರಾಮೀಣ ಕ್ರೀಡೆ. ಕಂಬಳದ ಹೆಸರು ಕೇಳಿದಾಕ್ಷಣ ಆ ಭಾಗದ ಜನರಿಗೆ ಏನೋ ಹುರುಪು, ಸಂಭ್ರಮ. ಕೆಸರುಗದ್ದೆಯಲ್ಲಿ ಓಡುತ್ತಿದ್ದ ಕಂಬಳದ ಕೋಣಗಳೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿವೆ! ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಅರಮನೆ ಮೈದಾನದ 55 ಎಕರೆ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ (ನ.25 ಮತ್ತು 26) ಕರಾವಳಿ ಕಂಬಳ ಉತ್ಸವ ಆಯೋಜನೆಗೊಂಡಿದೆ. ಕಂಬಳದ ಕೋಣಗಳು ಈಗಾಗಲೇ ಸಿಲಿಕಾನ್ ಸಿಟಿ ತಲುಪಿವೆ. ಸಭಾ ಕಾರ್ಯಕ್ರಮದ ವೇದಿಕೆಗೆ ‘ಡಾ.ಪುನೀತ್ ರಾಜ್​ಕುಮಾರ್’ ಹೆಸರಿಡಲಾಗಿದೆ.

    ಕೋಣಗಳು ಓಡುವ ಕಂಬಳದ ಕರೆಗಳಿಗೆ ‘ರಾಜ-ಮಹಾರಾಜ’ ಎಂದು ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ನಿರ್ಮಾಣ ಮಾಡುವ ಕಂಬಳದ ಕರೆ 147 ಮೀಟರ್ ಇರುತ್ತದೆ. ಅರಮನೆ ಮೈದಾನದಲ್ಲಿ 155 ಮೀಟರ್ ಉದ್ದ ನಿರ್ವಿುಸಲಾಗಿದ್ದು, ಈ ಮೂಲಕ ಅತಿದೊಡ್ಡ ಕರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೇ ಬಾರಿಗೆ ಎರಡು ಜೋಡು ಕೋಣಗಳನ್ನು ಓಡಿಸಲು ಅವಕಾಶ ಕಲ್ಪಿಸಲಾಗಿದೆ. ಕರೆ ಬದಿಯಲ್ಲಿ ಅಂದಾಜು 6ರಿಂದ 7 ಸಾವಿರ ಪ್ರೇಕ್ಷಕರು ವೀಕ್ಷಿಸಲು ಗ್ಯಾಲರಿ ನಿರ್ವಿುಸಲಾಗಿದೆ.

    ಬೆಂಗಳೂರು ಕಂಬಳಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಅದರ ಕ್ರೇಜ್ ಕೂಡ ಹೆಚ್ಚಾಗುತ್ತಿದ್ದು, ವಾರಾಂತ್ಯವಾದ್ದರಿಂದ ಅಂದಾಜು 8 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಎಲ್ಲರಿಗೂ ವೀಕ್ಷಣೆಗೆ ಅನುಕೂಲವಾಗಲೆಂದು ವಿವಿಧ ಭಾಗಗಳಲ್ಲಿ ಎಲ್​ಇಡಿ ಪರದೆ ಅಳವಡಿಸಲಾಗುತ್ತಿದೆ.

    ಸಿಎಂ, ಮಾಜಿ ಸಿಎಂ ಭಾಗಿ
    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನ.25ರಂದು ಬೆಳಗಿನ ಸಭಾ ಕಾರ್ಯಕ್ರಮ ಹಾಗೂ ಸಂಜೆಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ನಿರ್ವಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಂಬಳ ಕರೆ ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂಗಳಾದ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಅನೇಕ ರಾಜಕೀಯ ಗಣ್ಯರು ಕಂಬಳದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಚಿನ್ನ ಬಹುಮಾನ
    ಕಂಬಳದಲ್ಲಿ ಪಾಲ್ಗೊಳ್ಳುವುದು, ಕೋಣಗಳನ್ನು ಸಾಕುವುದು ಮಾಲೀಕರಿಗೆ ಸಂಭ್ರಮದ ಜತೆಗೆ ಪ್ರತಿಷ್ಠೆಯ ಸಂಕೇತವೂ ಆಗಿರುತ್ತದೆ. ಪ್ರಥಮ ಬಹುಮಾನ ಪಡೆದ ಜೋಡಿಗೆ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು, ದ್ವಿತೀಯ ಬಹುಮಾನ ಪಡೆದ ಜೋಡಿಗೆ 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ., ತೃತೀಯ ಸ್ಥಾನ ಪಡೆದ ಜೋಡಿಗೆ 25 ಸಾವಿರ ರೂ. ಬಹುಮಾನವಾಗಿ ಸಿಗಲಿದೆ.

    ಹೌಸ್​ಫುಲ್!
    ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಕುಂದಾಪುರ ಭಾಗದ ಮಂದಿ ತಂಡೋಪತಂಡವಾಗಿ ರಾಜಧಾನಿಗೆ ಬರಲು ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಅನೇಕ ಮಂದಿ ಈಗಾಗಲೆ ಹೋಟೆಲ್​ಗಳಲ್ಲಿ ರೂಮ್ಳನ್ನು ಕಾಯ್ದಿರಿಸಿದ್ದಾರೆ. ಮಂಗಳೂರು- ಬೆಂಗಳೂರು ಬಸ್, ರೈಲಿನ ಟಿಕೆಟ್​ಗಳು ಈಗಾಗಲೆ ಬುಕ್ ಆಗಿವೆ. ಸಾಕಷ್ಟು ಮಂದಿ ಸ್ವಂತ ಹಾಗೂ ಬಾಡಿಗೆ ಕಾರುಗಳಲ್ಲಿ ಆಗಮಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುತ್ತಾರೆ ಕಂಬಳ ಸಮಿತಿ ಸದಸ್ಯರು.

    ಸೆಲೆಬ್ರಿಟಿಗಳ ಆಕರ್ಷಣೆ
    ಕ್ರಿಕೆಟಿಗ ಕೆ.ಎಲ್. ರಾಹುಲ್ ಸೇರಿ ವಿವಿಧ ಭಾಷೆಯ ಸಿನಿಮಾ ನಟ-ನಟಿಯರು ಕಂಬಳಕ್ಕೆ ಆಗಮಿಸುತ್ತಿದ್ದಾರೆ. ನಟರಾದ ಡಾ.ಶಿವರಾಜ್​ಕುಮಾರ್, ದರ್ಶನ್, ಉಪೇಂದ್ರ, ಸುದೀಪ್, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೇರಾಯ್, ಜೂನಿಯರ್ ಎನ್​ಟಿಆರ್, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಧ್ರುವ ಸರ್ಜಾ ಸೇರಿ ದೊಡ್ಡ ತಾರಾ ಬಳಗ ಕಂಬಳದ ರಂಗು ಹೆಚ್ಚಿಸಲಿದೆ. ನ.25ರಂದು ಗುರುಕಿರಣ್ ತಂಡ ಹಾಗೂ 26ರಂದು ಅರ್ಜುನ್ ಜನ್ಯ ತಂಡದಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ.

    ಜಾನಪದ ನೃತ್ಯಗಳ ಸೊಬಗು
    * ಯಕ್ಷಗಾನ
    * ಕರಂಗೋಲು ನೃತ್ಯ ಊ ಆಟಿ ಕಳಂಜ ಊ ಹುಲಿವೇಷ
    * ಕಂಗೀಲು ನೃತ್ಯ ಊ ಚೆನ್ನು ನಲಿಕೆ ಊ ಮಂಕಾಳಿ ನಲಿಕೆ

    ತರಹೇವಾರಿ ತಿನಿಸು
    ಕಂಬಳಕ್ಕೆ ಭೇಟಿ ನೀಡುವ ಮಂದಿಗೆ ಕರಾವಳಿ ತಿನಿಸುಗಳ ರುಚಿ ಸವಿಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಫುಡ್ ಕೋರ್ಟ್ ತೆರೆಯಲಾಗುತ್ತಿದೆ. ಇಲ್ಲಿ 150ಕ್ಕೂ ಅಧಿಕ ಸಾಂಪ್ರದಾಯಿಕ ತಿನಿಸುಗಳ ಮಳಿಗೆಗಳು ಇರಲಿವೆ.

    ರ್ಪಾಂಗ್ ವ್ಯವಸ್ಥೆ
    * 8,000 ಕಾರು ಹಾಗೂ ಬೈಕ್ ನಿಲುಗಡೆಗೆ ಸ್ಥಳಾವಕಾಶ
    * 600 ವಿಐಪಿ ಕಾರು ರ್ಪಾಂಗ್
    * 200 ಲಾರಿಗಳಿಗೆ ರ್ಪಾಂಗ್ ವ್ಯವಸ್ಥೆ

    ಪ್ರತಿಷ್ಠೆಗಾಗಿ ಸ್ಪರ್ಧೆ
    ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳ ಆರೈಕೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಅಂತೆಯೇ ಬೆಂಗಳೂರು ಕಂಬಳಕ್ಕೆ ಬರುವ ಕೋಣಗಳ ಮಾಲೀಕರು ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ. ಕೇವಲ ಲಾರಿ ಬಾಡಿಗೆ ಮಾತ್ರ ಸಮಿತಿ ಭರಿಸುತ್ತಿದೆ.

    ಕಂಬಳಕ್ಕೆ ಬರಲು ರೆಡಿಯಾಗಿದ್ದೇನೆ, ನಾನೂ ಕಂಬಳ ವೀಕ್ಷಿಸಬೇಕು. ರಾಜ್ಯದ ಜನರಿಗೂ, ರಾಜಧಾನಿಯಲ್ಲಿರುವ ದೇಶದ ನಾನಾ ರಾಜ್ಯದ ಜನತೆಗೂ, ವಿದೇಶಿ ಪ್ರವಾಸಿಗರಿಗೂ ಕಂಬಳದ ಸವಿ ಅನುಭವಿಸುವ ಯೋಗ ದೊರಕಿದೆ.

    | ಸಿದ್ದರಾಮಯ್ಯ ಮುಖ್ಯಮಂತ್ರಿ

    ಕರಾವಳಿಯ ಹೆಮ್ಮೆಯ ಕ್ರೀಡೆಯಾದ ಕಂಬಳಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಹೀಗಾಗಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಿದ್ದೇವೆ. ಹಂತಹಂತವಾಗಿ ಪ್ರತಿಯೊಂದು ತಯಾರಿ ಕೆಲಸ ನಡೆಯುತ್ತಿದೆ.

    | ಅಶೋಕ್ ಕುಮಾರ್ ರೈ ಶಾಸಕ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ

    ಬೆಂಗಳೂರು ಕಂಬಳಕ್ಕೆ ಕರಾವಳಿಯ 69 ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಿವೆ. ಕಂಬಳದಲ್ಲಿ ಪಾಲ್ಗೊಳ್ಳಲು ಸುಮಾರು 250ಕ್ಕೂ ಹೆಚ್ಚು ಕೋಣಗಳ ಮಾಲೀಕರು ಹೆಸರು ನೋಂದಾಯಿಸಿದ್ದರು. ಅಂತಿಮವಾಗಿ 200 ಜೋಡಿ ಆಯ್ಕೆ ಮಾಡಲಾಗಿದ್ದು, ಎಲ್ಲ ಸಮುದಾಯದ ಮಾಲೀಕರು ಇದರಲ್ಲಿ ಒಳಗೊಂಡಿದ್ದಾರೆ.

    | ಪ್ರಕಾಶ್ ಶೆಟ್ಟಿ ಕಂಬಳ ಸಮಿತಿ ಗೌರವಾಧ್ಯಕ್ಷ

    180 ಜೋಡಿ ಕೋಣಗಳು ಅಂತಿಮ
    ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಿಂದ 180 ಜೋಡಿ ಕೋಣಗಳು ಅಂತಿಮವಾಗಿದ್ದು, ಲಾರಿಯಲ್ಲಿ ಬೆಂಗಳೂರಿಗೆ ಆಗಮಿಸಲಿವೆ. ಎಲ್ಲ ಕೋಣಗಳಿಗೆ ಗುರುವಾರ ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ನೀಡಲಾಗಿದ್ದು, ಹಾಸನದಲ್ಲಿ ಸ್ವಾಗತಿಸಿಕೊಂಡು, ಕೆಲ ಗಂಟೆ ವಿಶ್ರಾಂತಿ ಪಡೆದು ರಾಜಧಾನಿಯತ್ತ ಪ್ರಯಾಣ ಬೆಳೆಸಿದವು. ನೆಲಮಂಗಲದಲ್ಲಿ ಅದ್ದೂರಿ ಸ್ವಾಗತ ಕೋರಿ, ಮೆರವಣಿಗೆ ಮೂಲಕ ಅರಮನೆ ಮೈದಾನಕ್ಕೆ ಕರೆತರಲಾಯಿತು.

    ಆರೈಕೆಗೆ ಟೆಂಟ್ ವ್ಯವಸ್ಥೆ
    ಕೋಣದ ಮಾಲೀಕರಿಗೆ ಖಾಸಗಿ ಹೋಟೆಲ್​ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಕೋಣಗಳನ್ನು ಆರೈಕೆ ಮಾಡುವ ತಂಡದ ಸದಸ್ಯರಿಗೆ ಉಳಿದುಕೊಳ್ಳಲು ಸುಸಜ್ಜಿತ 200 ಟೆಂಟ್, ಹೆಚ್ಚುವರಿ ಬಸ್, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಆಂಬುಲೆನ್ಸ್, ಪಶುವೈದ್ಯರು, ಕೋಣಗಳ ಆರೋಗ್ಯದ ದೃಷ್ಟಿಯಿಂದ ನಾಟಿ ವೈದ್ಯರ ಸೇವೆ ಇರಲಿದೆ.

    ವಿಶ್ವ ತುಳು ಸಾಹಿತ್ಯ ಸಮ್ಮೇಳನ
    ಕರಾವಳಿ ಭಾಗದ 18 ಲಕ್ಷ ಜನ ಬೆಂಗಳೂರಿನಲ್ಲಿ ವಾಸವಾಗಿ ದ್ದಾರೆ. ಅವರೆಲ್ಲರ ಸಂಕಲ್ಪ ಮತ್ತು ಕನಸು ‘ಬೆಂಗಳೂರು ಕಂಬಳ- ನಮ್ಮ ಕಂಬಳ’ ಮೂಲಕ ಸಾಕಾರಗೊಂಡಿದೆ. ಕಂಬಳದ ಜತೆಗೆ ಕರಾವಳಿಯ ಸಂಸ್ಕೃತಿ ಪ್ರತಿಬಿಂಬಿಸುವ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಯಕ್ಷಗಾನ, ಹುಲಿವೇಷ, ವಿವಿಧ ಜಾನಪದ ನೃತ್ಯಗಳು ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗುರುಕಿರಣ್ ಮುಂದಾಳತ್ವದಲ್ಲಿ ನಡೆಯಲಿವೆ. ತುಳುಕೂಟದ ಸುವರ್ಣ ಮಹೋತ್ಸವ ಅಂಗವಾಗಿ ಶುಕ್ರವಾರ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.

    ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ಮತ್ತೊಂದು ಅಡ್ಡಿ, ಕಾರ್ಮಿಕರಿಂದು ಹೊರಬರುವ ನಿರೀಕ್ಷೆ

    ಡಿಕೆಶಿಗೆ ಬಿಗ್ ರಿಲೀಫ್; ಅಕ್ರಮ ಆಸ್ತಿ ತನಿಖೆಗಾಗಿ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts