More

    ಡಿಕೆಶಿಗೆ ಬಿಗ್ ರಿಲೀಫ್; ಅಕ್ರಮ ಆಸ್ತಿ ತನಿಖೆಗಾಗಿ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್

    ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ 2019ರಲ್ಲಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ವನಿಸಿದೆ.

    ಸಿಬಿಐ ತನಿಖೆಯನ್ನು ಬಹುಪಾಲು ಪೂರ್ಣಗೊಳಿಸಿರುವ ಹಂತದಲ್ಲಿ ಪ್ರಕರಣವನ್ನು ಹಿಂಪಡೆಯುವುದು ಸರಿಯೇ ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಸ್ಪೀಕರ್ ಅನುಮತಿಯೇ ಇಲ್ಲದೆ, ಎಫ್​ಐಆರ್ ದಾಖಲಿಸದೆ ಅಂದಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿರುವುದು ಕಾನೂನಾತ್ಮಕವಾಗಿ ವಿರುದ್ಧ್ದಾಗಿದೆ ಎನ್ನುವ ಅಭಿಪ್ರಾಯವನ್ನು ಸಂಪುಟ ವ್ಯಕ್ತಪಡಿಸಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನೀಡಿರುವ 28 ಪುಟಗಳ ಅಭಿಪ್ರಾಯದ ಮೇಲಿನ ಟಿಪ್ಪಣಿ ಮೇಲೆ ಚರ್ಚೆ ಸಂದರ್ಭದಲ್ಲಿ ಸಾಧಕ- ಬಾಧಕಗಳ ಪರಾಮಶಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಪುಟದ ಹಿರಿಯ ಸಚಿವರೊಬ್ಬರು ಖಚಿತಪಡಿಸಿದ್ದಾರೆ. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2019ರ ಸೆ.25ರಂದು ಶಿವಕುಮಾರ್ ಮತ್ತಿತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಆದರೆ, ಬಿಜೆಪಿಯವರ ಆರೋಪ ಪ್ರಕರಣಗಳನ್ನು ಪರಿಗಣಿಸದೆ, ಕೇವಲ ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರ ಹಿಂದೆ ರಾಜಕೀಯ ದ್ವೇಷ ಅಡಗಿರುವುದನ್ನು ತೋರಿಸುತ್ತದೆ ಎಂದು ಸಂಪುಟ ಸಭೆ ಅಭಿಪ್ರಾಯಪಟ್ಟಿದೆ.

    ತನಿಖೆಯ ಕೊನೆಯ ಹಂತದಲ್ಲಿರುವ ಕೇಸನ್ನು ಈಗ ವಾಪಸ್ ಪಡೆಯುವುದು ಕಾನೂನು ಬಾಹಿರ ಕ್ರಮವಾಗ ಬಹುದೇ? ಎನ್ನುವ ಪ್ರಶ್ನೆಯನ್ನು ಸಂಪುಟ ಸದಸ್ಯ ರೊಬ್ಬರು ಕೇಳಿದ್ದಕ್ಕೆ, ಹಿಂದೆ ಸಿಬಿಐಗೆ ಹೋಗಿರುವ 3 ಪ್ರಕರಣಗಳಲ್ಲಿ ಸಂಪುಟ ನಿರ್ಣಯ ಮಾಡಿ ಕೇಸ್ ವಾಪಸ್ ಪಡೆಯಲಾಗಿದೆ.

    ಆಗಲೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿಲ್ಲ ಮತ್ತು ಯಾವ ಸಮಸ್ಯೆಯೂ ಉದ್ಭವಿಸಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿಯೂ ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ತೀರ್ವನವನ್ನು ಅದೇ ರಾಜ್ಯ ಸರ್ಕಾರವೇ ವಾಪಸ್ ಪಡೆಯುತ್ತಿರುವುದರಿಂದ ಸಮಸ್ಯೆ ಏನೂ ಆಗುವುದಿಲ್ಲ ಎನ್ನುವ ವಿವರಣೆಯನ್ನು ನೀಡಲಾಗಿದೆ.

    ಸಿಬಿಐ ತನಿಖೆಗೆ ವಹಿಸಿರುವ ತೀರ್ವನವನ್ನು ಮಾತ್ರ ವಾಪಸ್ ಪಡೆಯುತ್ತಿದ್ದೇವೆ. ಹೊರತು ತನಿಖೆ ಬೇಡ ಎಂದು ಸರ್ಕಾರ ಹೇಳುತ್ತಿಲ್ಲ. ಲೋಕಾಯುಕ್ತ ಅಥವಾ ಸಿಒಡಿ ಮೂಲಕವೂ ತನಿಖೆ ಮಾಡಿಸಬಹುದಾಗಿದೆ ಎನ್ನುವುದು ಸರ್ಕಾರದ ನಿಲುವಾಗಿದೆ ಎಂದು ಸಭೆಯಲ್ಲಿ ಪ್ರತಿಪಾದಿಸಲಾಗಿದೆ.

    ಕರ್ನಾಟಕ ವ್ಯವಹಾರ ಹಂಚಿಕೆ ನಿಯಮಾವಳಿ 1977 1ನೇ ಅನುಸೂಚಿ ಐಟಂ 30ರ ಅನ್ವಯ 2019ರಲ್ಲಿ ಸಿಬಿಐ ತನಿಖೆಗೆ ವಹಿಸಿರುವ ಆದೇಶವನ್ನು ವಾಪಸ್ ಪಡೆದು ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್​ಗೆ ವಹಿಸಬಹುದು. ಯಾಕೆಂದರೆ ಹಿಂದೆ ಸಿಬಿಐಗೆ ವಹಿಸುವ ಮುನ್ನ ರಾಜ್ಯ ಪೊಲೀಸರ ಅಸಮರ್ಥತೆಯನ್ನು ಯಾವ ರೀತಿಯಲ್ಲಿಯೂ ಪರಿಶೀಲಿಸಿರುವುದಿಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಪ್ರೊಫಾರ್ಮದಲ್ಲಿ ಕಡ್ಡಾಯಗೊಳಿಸಿರುವ ಅಂತರರಾಜ್ಯ ಅಥವಾ ದೇಶವ್ಯಾಪ್ತಿಯ ಪರಿಣಾಮಗಳು ಇರುವಂಥ ಯಾವ ಸಮರ್ಥನೆಯೂ ಇರುವುದಿಲ್ಲ. ಹೀಗಾಗಿ ಸಿಬಿಐಗೆ ವಹಿಸಿರುವುದಕ್ಕೆ ಯಾವುದೇ ಸಮರ್ಥನೀಯ ಕಾರಣಗಳು ಇಲ್ಲ ಎಂದು ಸಂಪುಟ ಸಭೆ ವ್ಯಾಖ್ಯಾನಿಸಿದೆ.

    28 ಪುಟಗಳ ಅಭಿಪ್ರಾಯ: ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಡಿ.ಕೆ. ಶಿವಕುಮಾರ್ ಪ್ರಕರಣದಲ್ಲಿ 28 ಪುಟಗಳ ಅಭಿಪ್ರಾಯವನ್ನು (ಕಡತ ಸಂಖ್ಯೆ ಎಚ್​ಡಿ 4 ಸಿಒಡಿ 2023 ವಿಷಯ ಸಂಖ್ಯೆ ಸಿ 552/2023) ಮಂಡಿಸಿದ್ದಾರೆ. ಹಿಂದಿನ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪಡೆಯದೆ ಆಗಿನ ಯಡಿಯೂರಪ್ಪ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಈ ಪ್ರಕ್ರಿಯೆ ಕಾನೂನುಗಳ ಲೋಪಕ್ಕೆ ಕಾರಣವಾಗಿದೆ ಎನ್ನುವ ಅಂಶವನ್ನು ಉಲ್ಲೇಖಿಸಲಾಗಿದೆ.

    29ಕ್ಕೆ ಹೈಕೋರ್ಟ್ ವಿಚಾರಣೆ: ತನಿಖೆಗೆ ತಡೆಯಾಜ್ಞೆ ತೆರವು ಕೋರಿ ಸಿಬಿಐ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣವನ್ನು ಹೈಕೋರ್ಟ್ನಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಪ್ರಕರಣ ನ.29ರಂದು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮಹತ್ವ ಪಡೆದುಕೊಂಡಿದೆ. ವಿರೋಧ ಪಕ್ಷಗಳಿಗೆ ಈ ನಿರ್ಣಯ ರಾಜಕೀಯ ಅಸ್ತ್ರವಾಗುವ ಸಾಧ್ಯತೆಯಿದೆ.

    ಮುಂದೇನು?: ಸಂಪುಟ ತೀರ್ಮಾನ ಇನ್ನೆರಡು ದಿನದಲ್ಲಿ ಆದೇಶವಾಗಿ ಹೊರಬೀಳಲಿದೆ. ಇದನ್ನು ಸಿಬಿಐಗೆ ಕಳುಹಿಸಿ ಪ್ರಕರಣವನ್ನು ಹಿಂಪಡೆಯುವಂತೆ ಕೋರಲಾಗುವುದು. ಹೈಕೋರ್ಟ್​ನಲ್ಲೂ ಸರ್ಕಾರದ ತೀರ್ಮಾನ ತಿಳಿಸಲಾಗುವುದು.

    ಸಂಪುಟಕ್ಕೆ ಡಿಸಿಎಂ ಡಿಕೆಶಿ ಗೈರು

    ಸಚಿವ ಸಂಪುಟದಲ್ಲಿ ತಮ್ಮ ಪ್ರಕರಣದ ವಿಷಯ ಚರ್ಚೆಗೆ ಬರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆಗೆ ಗೈರಾಗಿದ್ದರು. ತಮ್ಮ ವಿರುದ್ಧ ಸಿಬಿಐಗೆ ವಹಿಸಿರುವ ಪ್ರಕರಣವನ್ನು ವಾಪಸ್ ಪಡೆಯುವ ವಿಷಯ ಸಂಪುಟದಲ್ಲಿ ಚರ್ಚೆಗೆ ಬರುವುದರಿಂದ ತಾವು ಸಭೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎನ್ನುವ ಸಲಹೆ ಹಿನ್ನೆಲೆಯಲ್ಲಿ ಸಂಪುಟಕ್ಕೆ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

    ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣವನ್ನು ಸಿಬಿಐಗೆ ವಹಿಸಲು ಹಿಂದಿನ ಸರ್ಕಾರ ಸಿಎಂ ಮೌಖಿಕ ಆದೇಶದ ಮೇಲೆ ನಿರ್ಣಯ ಕೈಗೊಂಡಿತ್ತು. ಕಾನೂನು ಹಾಗೂ ನಿಯಮಗಳ ಅನುಸಾರ ಸ್ಪೀಕರ್ ಒಪ್ಪಿಗೆ ಪಡೆದಿರಲಿಲ್ಲ. ಹೀಗಾಗಿ ಹಿಂದಿನ ಸರ್ಕಾರದ ಕ್ರಮ ಕಾನೂನು ಬದ್ಧವಾಗಿಲ್ಲ ಎಂದು ತೀರ್ವನಿಸಿ ಸಿಬಿಐಗೆ ನೀಡಿರುವ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ಸಭೆ ತೀರ್ವನಿಸಿದೆ.

    | ಎಚ್.ಕೆ.ಪಾಟೀಲ ಕಾನೂನು ಸಚಿವ

    ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂದಿಸಿದಂತೆ ಡಿಸಿಎಂ ವಿರುದ್ದ ಸಿಬಿಐ ತನಿಖೆಗೆ ವಹಿಸಿರುವುದನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಣಯಿಸಿರುವುದು ಕಾನೂನುಬಾಹಿರ ಕ್ರಮ. ಇದನ್ನು ಖಂಡಿಸುತ್ತೇನೆ.

    | ಆರ್. ಅಶೋಕ್ ವಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts