More

    ಅಧಿಕಾರಿಗಳೇ ಸೃಷ್ಟಿಸಿದರಾ ಬೋಗಸ್ ನರೇಗಾ ದಾಖಲೆ?

    ಪಂಚನಹಳ್ಳಿ (ಕಡೂರು ತಾ.): ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಬೆಳೆಸಿದ ಗಿಡಗಳನ್ನು ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೆಳೆಸಲಾಗಿದೆ ಎಂದು ಕಡೂರು ಸಾಮಾಜಿಕ ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ದಾಖಲೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಪಂಚಾಯತ್ ರಾಜ್ ಇಲಾಖೆಯ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯಲ್ಲಿ ಬೆಳಕಿಗೆ ಬಂದಿದೆ.

    ಉದ್ಯೋಗ ಖಾತ್ರಿ ಯೋಜನೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲು ಮಾಡಬೇಕು ಎಂದು ಗ್ರಾಮಸಭೆ ಸರ್ವಾನುಮತದಿಂದ ತೀರ್ವನಿಸಿದೆ.

    ದೇವನೂರು ರೈಲ್ವೆ ನಿಲ್ದಾಣಕ್ಕೆ ಸ್ಟೇಷನ್​ಗೆ ಮಾಸ್ಟರ್ ಆಗಿ ವರ್ಗಾವಣೆಯಾಗಿ ಬಂದ ಪುಟ್ಟಸ್ವಾಮಿ ಎಂಬುವರು ನಿವೃತ್ತಿ ಅಂಚಿನಲ್ಲಿದ್ದಾಗ ವೃತ್ತಿ ಜೀವನದ ಕೊನೆಯ ಕಾರ್ಯಕ್ಷೇತ್ರ ದೇವನೂರು ರೈಲ್ವೆ ನಿಲ್ದಾಣದಲ್ಲಿ ಸ್ವಂತ ವೆಚ್ಚದಲ್ಲಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅವರು ಈಗ ನಿವೃತ್ತಿ ಹೊಂದಿ ಹೋಗಿದ್ದರೂ ಸಮೃದ್ಧಿಯಾಗಿ ಬೆಳೆದು ನಿಂತಿರುವ ಗಿಡಗಳು ಅವರ ಹೆಸರು ಹೇಳುತ್ತಿವೆ.

    ಆದರೆ ಅವರು ನಿವೃತ್ತಿಯಾಗಿ ಹೋದ ನಂತರ ಸಾಮಾಜಿಕ ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಲಾಖೆಯಿಂದ ಗಿಡಗಳನ್ನು ಬೆಳೆಸಲಾಗಿದೆ ಎಂದು ದಾಖಲೆ ಸೃಷ್ಟಿಸಿ ಕೆಲವು ಸ್ಥಳೀಯರ ಜಾಬ್​ಕಾರ್ಡ ಪಡೆದು ಅವರ ಖಾತೆಗೆ ಹಣ ಜಮಾ ಮಾಡಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ದೂರು ನೀಡಲು ಚಿಂತನೆ: ಆತ್ಮತೃಪ್ತಿಗಾಗಿ ಸ್ವಂತ ಖರ್ಚಿನಲ್ಲಿ ಗಿಡಗಳನ್ನು ಬೆಳೆಸಿದೆ.ಯಾವ ಇಲಾಖೆಗೂ ಗಿಡ ಬೆಳೆಸಿದ್ದಕ್ಕೆ ಹಣ ಕೊಡಿ ಎಂದು ಅರ್ಜಿ ಸಲ್ಲಿಸಿಲ್ಲ. ಆದರೆ ಸಾಮಾಜಿಕ ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ನಾನು ಬೆಳೆಸಿದ ಗಿಡಗಳನ್ನು ಇಲಾಖೆಯಿಂದ ಬೆಳೆಸಲಾಗಿದೆ ಎಂದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಣ ಬಿಡುಗಡೆ ಮಾಡಿ ದುರ್ಬಳಕೆ ಮಾಡಿಕೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ದೂರು ನೀಡುವ ಬಗ್ಗೆ ಚಿಂತನೆ ಮಾಡಿದ್ದೇನೆ ಎಂದು ನಿವೃತ್ತ ರೈಲ್ವೆ ಸ್ಟೇಷನ್ ಮಾಸ್ಟರ್ ಪುಟ್ಟಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.

    ಸೇವಾಮನೋಭಾವದಿಂದ ಮಾಡಿದ್ದೇವೆ: ಗಿಡಗಳನ್ನು ಬೆಳೆಸಿರುವ ಜಾಗ ರೈಲ್ವೆ ಇಲಾಖೆಗೆ ಸೇರಿದೆ. ಶ್ರೀನಿವಾಸ , ಆಟೋ ಮಂಜುನಾಥ, ಸುನಿಲ್, ರೈಲ್ವೆ ಇಲಾಖೆ ಸಿಬ್ಬಂದಿಗಳು ಮತ್ತು ನಾನು ನಿವೃತ್ತ ಸ್ಟೇಷನ್ ಮಾಸ್ಟರ್ ಪುಟ್ಟಸ್ವಾಮಿ ಅವರೊಂದಿಗೆ ಸೇರಿ ಗಿಡಗಳನ್ನು ಬೆಳೆಸಿದ್ದೇವೆ. ಗಿಡ ನೆಟ್ಟು ಬೆಳೆಸಲು ತಗುಲಿದ ಸಂಪೂರ್ಣ ವೆಚ್ಚವನ್ನು ಸ್ಟೇಷನ್ ಮಾಸ್ಟರ್ ಪುಟ್ಟಸ್ವಾಮಿ ಭರಿಸಿದ್ದು ನಾವು ಅವರೊಂದಿಗೆ ಕೇವಲ ಸೇವಾ ಮನೋಭಾವದಿಂದ ಕೈ ಜೋಡಿಸಿದ್ದೆವು ಎಂದು ರೈಲ್ವೆ ಸ್ಟೇಷನ್ ನಿವಾಸಿ ಬಿ.ವಿ. ಕಿಶೋರ್ ತಿಳಿಸಿದ್ದಾರೆ.

    ಗಿಡ ಬೆಳೆಸಿದ್ದಕ್ಕಾಗಿ ಯಾವುದೇ ಇಲಾಖೆಯಿಂದ ಅನುದಾನ ಪಡೆದಿಲ್ಲ. ಆದರೆ ಸಾಮಾಜಿಕ ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ದ್ಯೋಗ ಖಾತ್ರಿ ಯೋಜನೆಯಲ್ಲಿ ಬೆಳೆಸಲಾಗಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯಿಂದ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

    ಗಿಡಗಳನ್ನು ರೈಲ್ವೆ ಸ್ಟೇಷನ್ ಮಾಸ್ಟರ್ ಬೆಳೆಸಿಲ್ಲ. ಸ್ಥಳೀಯ ಯುವಕರಿಬ್ಬರು ಈ ಗಿಡಗಳನ್ನು ಬೆಳೆಸಿದ್ದಾರೆ. ಅದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಅವರಿಗೆ ಹಣ ನೀಡಲಾಗಿದೆ. ಆ ಯುವಕರು ಕೂಡ ಸ್ಟೇಷನ್ ಮಾಸ್ಟರ್ ಸೂಚಿಸಿದವರೇ ಆಗಿದ್ದಾರೆ. ಆದರೆ ಅಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ವಿನಾ ಕಾರಣ ಸಮಸ್ಯೆ ಸೃಷ್ಟಿ ಮಾಡುತ್ತಿದೆ ಎಂಬುದು ವಲಯ ಅರಣ್ಯಾಧಿಕಾರಿ ಎಚ್.ಆರ್.ರಾಜಾನಾಯ್ಕ ಅವರ ಸ್ಪಷ್ಟನೆ.

    ರೈಲ್ವೆ ಸ್ಟೇಷನ್ ಮಾಸ್ಟರ್ ಹಣ ನೀಡುವಂತೆ ಕೇಳಿರಲಿಲ್ಲ. ಆದರೆ ಗಿಡಗಳ ಆರೈಕೆಗೆ ಅನುಕೂಲವಾಗಲಿ ಎಂದು ನಾವೇ ಸ್ಥಳೀಯರ ಜಾಬ್​ಕಾರ್ಡ್​ಗೆ ಹಣ ಹಾಕಿದ್ದೆವು. ಅರಣ್ಯ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಣ ಪಡೆದವರು ಸ್ಟೇಷನ್ ಮಾಸ್ಟರ್​ಗೆ ಹಣ ಕೊಡದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ – ಎಚ್.ಬಿ.ರಘು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts