More

    ಮಂದಿರಗಳ ಪುನರ್ ನಿರ್ಮಾಣವೆಂದರೆ ಅದು ರಾಷ್ಟ್ರನಿರ್ಮಾಣವೇ…

    ಮಂದಿರಗಳ ಪುನರ್ ನಿರ್ಮಾಣವೆಂದರೆ ಅದು ರಾಷ್ಟ್ರನಿರ್ಮಾಣವೇ...ಸಂಸ್ಕೃತಿ ಮತ್ತು ಕ್ರೌರ್ಯದ ನಡುವಿನ ಸಂಘರ್ಷದಲ್ಲಿ ಯಾವತ್ತಿಗೂ ವಿಜಯದ ಗರಿ ಸಂಸ್ಕೃತಿಗೇ! ಆತ್ಮವಿಲ್ಲದ ದೇಹಕ್ಕೆ ಹೇಗೆ ಯಾವುದೇ ಬೆಲೆಯಿಲ್ಲವೋ, ಸಂಸ್ಕೃತಿ ಇರದ ರಾಷ್ಟ್ರದ್ದೂ ಅದೇ ಸ್ಥಿತಿ. ಅದರಲ್ಲೂ, ಭಾರತ ಎಂದರೆ ಇದು ಬರೀ ಭೂಮಿಯ ತುಂಡಲ್ಲ, ಭೌತಿಕ ಉದ್ದೇಶಗಳಿಗಾಗಿ ಬದುಕುವ ಕ್ಷುಲ್ಲಕ ಗುರಿಯಲ್ಲ. ಭಾರತ ಎಂದಾಕ್ಷಣವೇ ಜಗತ್ತಿನ ಕಣ್ಮುಂದೆ ಬರುವುದು ಅಧ್ಯಾತ್ಮ. ಅದಕ್ಕೆಂದೆ ಹೊರಗಿನ ಸುಖಗಳು ಒದಗಿಸುವ ಸಂತೋಷ ಕ್ಷಣಿಕ ಎಂದು ಅರಿವಾಗಿ, ಆನಂದದ ಅನ್ವೇಷಣೆಗೆ ಅದೆಷ್ಟೋ ವಿದೇಶಿಯರು ಭಾರತಾಂಬೆಯ ಮಡಿಲಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಲ್ಲಿಂದ ಅವರ ದೇಶಕ್ಕೆ ವಾಪಸ್ ಹೋದ ಮೇಲೂ ‘ಜೀವನದ ನಿಜ ಅರ್ಥ ಕಂಡುಕೊಳ್ಳಬೇಕಾದರೆ ಒಮ್ಮೆಯಾದರೂ ಭಾರತಕ್ಕೆ ಭೇಟಿ ಕೊಡಬೇಕು’ ಎಂದು ಹೇಳುತ್ತಾರೆ. ಅದಕ್ಕೆ ಕವಿಯೊಬ್ಬ, ‘ಇಲ್ಲಿಯ ಮಣ್ಣು ಚಂದನ. ಪ್ರತಿ ಗ್ರಾಮವೂ ತಪೋಭೂಮಿ. ಪ್ರತಿ ಶರೀರವೂ ಮಂದಿರದಷ್ಟೇ ಪಾವನ, ಪ್ರತಿ ಮಾನವನೂ ಉಪಕಾರಿ, ಪ್ರತಿ ಮಗುವಿನಲ್ಲೂ ರಾಮನೇ ನೆಲೆಸಿದ್ದಾನೆ, ಪ್ರತಿ ಅಂಗಳದಲ್ಲೂ ಬಾಲಸೀತೆ ಆಟವಾಡುತ್ತ, ನಲಿದಾಡುತ್ತಾಳೆ, ಜನರು ಕರ್ಮ(ಕೆಲಸ)ದಿಂದಲೇ ಭಾಗ್ಯ ಬದಲಾಯಿಸಿಕೊಳ್ಳುತ್ತಾರೆ…’ ಎಂದು ವರ್ಣಿಸಿದ್ದಾನೆ.

    ಹೌದು, ಆತ್ಮಸಾಕ್ಷಾತ್ಕಾರಕ್ಕಾಗಿ ಹಾತೊರೆಯುವ ಸಾಮಾನ್ಯ ವ್ಯಕ್ತಿಗಳೂ ಇಲ್ಲಿ ಶಕ್ತಿಯಾಗಿ ಬದಲಾಗುತ್ತಾರೆ. ಅಧ್ಯಾತ್ಮದ ಹಸಿವು ಬಾಕಿ ಎಲ್ಲ ಹಸಿವುಗಳನ್ನು ಇಲ್ಲವಾಗಿಸುತ್ತದೆ. ಆದರೆ, ಆತ್ಮವಿಸ್ಮೃತಿ ಎಂಬುದು ಆಗಾಗ ಆವರಿಸಿಕೊಂಡಾಗ ಅದನ್ನು ಕೊಡವಿಕೊಂಡು ನಿಲ್ಲಲೇಬೇಕಾದದ್ದು ವ್ಯಕ್ತಿಯ, ರಾಷ್ಟ್ರದ ಕರ್ತವ್ಯವೇ ಹೌದು. ಇದೊಳ್ಳೆಯ ತಮಾಷೆ ಅನಿಸುತ್ತೆ. ನಮ್ಮದು ಭವ್ಯ, ರೋಮಾಂಚನಕಾರಿ ಇತಿಹಾಸ ಎನ್ನುತ್ತೇವೆ. ನಾಳೆ ಬಗ್ಗೆ ಮಾತಾಡುವಾಗ ಉಜ್ವಲ ಭವಿಷ್ಯವಿದೆ ಎನ್ನುತ್ತೇವೆ. ಆದರೆ, ವರ್ತಮಾನದ ಬಗ್ಗೆ… ಊಹುಂ ಬರೀ ನಿರಾಸೆ, ಹಳಹಳಿಕೆ, ನಕಾರಾತ್ಮಕ ಸಂಗತಿಗಳನ್ನೇ ಮತ್ತೆ ಮತ್ತೆ ಆಲಾಪಿಸಿ ಎಲ್ಲದರ ಬಗ್ಗೆಯೂ ಉದಾಸೀನ ಭಾವ ತಳೆಯುತ್ತೇವೆ. ಇದರ ಪರಿಣಾಮ ವಾಸ್ತವ ನಮ್ಮೆದುರೇ ಸಮಾಧಿ ಆಗುತ್ತದೆ! ನಮಗೆ ಪ್ರೇರಣಾಚೈತನ್ಯ ತುಂಬುವ ಸ್ಥಳ, ಸಂಗತಿ ಯಾವುದನ್ನೂ ಸಕಾರಾತ್ಮಕವಾಗಿ ಗ್ರಹಿಸುತ್ತಿಲ್ಲ. ಇದು ಆತ್ಮವಿಸ್ಮೃತಿ ಅಲ್ಲದೆ ಮತ್ತೇನು? ಇದರಿಂದ ಹೊರಬರಲೇ ಬೇಕು.

    ಮಂದಿರಗಳು ಅಧ್ಯಾತ್ಮದ, ಆತ್ಮಶಿಕ್ಷಣ ಪ್ರಸಾರದ ದೊಡ್ಡ ಶಕ್ತಿ ಕೇಂದ್ರಗಳು. ದೇವಸ್ಥಾನಗಳ ಸಾನ್ನಿಧ್ಯ ಒದಗಿಸುವ ಶಾಂತಿಯ ಅನುಭೂತಿ ಅನನ್ಯ. ಆಧುನಿಕತೆಯ ಹಾದಿಯಲ್ಲಿ ಮಂದಿರಗಳ ಮೂಲಶಕ್ತಿಗೆ, ಅವುಗಳ ಸಂರಚನೆಗೆ ಯಾವುದೇ ಚ್ಯುತಿ ಒದಗಬಾರದು. ಮಂದಿರಗಳಿಂದ ನಾವು ದೂರವಾದರೆ ನಮ್ಮ ಜೀವನಧರ್ಮದಿಂದಲೇ ದೂರವಾದಂತೆ. ಹಾಗಾಗಿಯೇ, ಸರಣಿ ಹೋರಾಟಗಳನ್ನು ಮಾಡಿ ಮಂದಿರಗಳನ್ನು ಉಳಿಸಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಗುಜರಾತಿನ ಸೋಮನಾಥ ದೇವಸ್ಥಾನದ ಮೇಲೆ ಅದೆಷ್ಟು ಬಾರಿ ಮತಾಂಧರು ದಾಳಿ ನಡೆಸಿದರೂ, ಅದು ಮತ್ತೆ ಮತ್ತೆ ಎದ್ದು ನಿಂತಿತಲ್ಲ…! ಅದಕ್ಕಾಗಿ ನಡೆದ ದೀರ್ಘ ಪ್ರಯತ್ನಗಳು, ಹೋರಾಟಗಳನ್ನು ಮರೆಯಲುಂಟೆ? ಇಂದಿಗೂ ಸೋಮನಾಥ ದೇವಸ್ಥಾನ ಆ ರಾಷ್ಟ್ರಪ್ರಜ್ಞೆಯ ಹೋರಾಟವನ್ನು ನೆನಪಿಸುತ್ತದೆ, ಪ್ರೇರಣೆ ತುಂಬುತ್ತದೆ.

    ಇದನ್ನೂ ಓದಿ: ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ! ಚಿಕನ್​ ತಿಂದ್ರೆ ನಮಗೂ ಕಾಯಿಲೆ ಬರುತ್ತಾ?

    ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಶತಮಾನಗಳ ಸಂಘರ್ಷ ಇತ್ತೀಚೆಗಷ್ಟೇ ಸುಖಾಂತ್ಯ ಕಂಡಿದೆ. ಶಿಲಾನ್ಯಾಸ ಪೂರ್ಣಗೊಂಡಿದ್ದು, ಮಂದಿರ ನಿರ್ಮಾಣದ ಪ್ರಕ್ರಿಯೆಗಳು ಆರಂಭವಾಗಿವೆ. ಅಂದರೆ, ರಾಷ್ಟ್ರಸಂಸ್ಕೃತಿಯ ಪ್ರತೀಕವೊಂದು ದೀರ್ಘಕಾಲದ ಬಳಿಕ ಉದಯವಾಗುತ್ತಿದೆ. ಕೋಟ್ಯಂತರ ಜನರ ಒಂದೇ ಕನಸು ನನಸಾಗುತ್ತಿದೆ. ಹಲವು ವರ್ಷಗಳ ಕಾಲ ಅನುರಣಿಸಿದ ‘ರಾಮಲಲ್ಲಾ ಹಮ್ ಆಯೆಂಗೆ, ಮಂದಿರ ವಹೀ ಬನಾಯೆಂಗೆ’ ಘೋಷಣೆ ಸಾಕಾರಗೊಳ್ಳುತ್ತಿದೆ. ‘ರಾಮಮಂದಿರ ಅದು ಕೇವಲ ಮಂದಿರವಲ್ಲ. ಅದು ದೇವರ ಸ್ವರೂಪ. ರಾಮಮಂದಿರ ಅಧ್ಯಾತ್ಮ ತಿಳಿವಳಿಕೆ ಕೊಡುವ ಕೇಂದ್ರವಾಗಬೇಕು’ ಎಂಬ ಸದಾಶಯವನ್ನು ಖ್ಯಾತ ಸಾಹಿತಿ, ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ವ್ಯಕ್ತಪಡಿಸಿರುವುದು ಸೂಕ್ತವಾಗಿಯೇ ಇದೆ. ಅಲ್ಲದೆ, ‘ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಬುದ್ಧನ ವಿಗ್ರಹವನ್ನು ಒಡೆದು ಹಾಕಿದಂತೆ, ನಮ್ಮ ದೇಶದಲ್ಲಿ 35 ಸಾವಿರ ಮಂದಿರಗಳನ್ನು ಒಡೆದು ಹಾಕಿದ್ದಾರೆ. ಅವುಗಳ ಪುನರ್ ನಿರ್ಮಾಣ ಆಗಬೇಕು’ ಎಂದಿದ್ದಾರೆ ಎಸ್.ಎಲ್. ಭೈರಪ್ಪ. ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಆದರೆ, ಅವರು ಮುಖ್ಯವಾದ ಅಂಶವನ್ನು ಪ್ರತಿಪಾದಿಸಿದ್ದಾರೆ. ಮಂದಿರಗಳ ಪುನರ್ ನಿರ್ವಣವೆಂದರೆ ಅದು ಭಾರತದ ಪುನರ್ ನಿರ್ವಣವೇ.

    ಕೆಲವರ ಪಾಲಿಗೆ ಮಂದಿರಗಳೆಂದರೆ ಕಲ್ಲು, ಮಣ್ಣಿನಿಂದ ಕಟ್ಟಿದ ಕಟ್ಟಡಗಳಾಗಷ್ಟೇ ಕಾಣುತ್ತವೆ. ಆದರೆ, ಅವು ಬರೀ ಕಟ್ಟಡಗಳಲ್ಲ. ಹಾನಿಗೀಡಾಗಿದ್ದ/ದಾಳಿಗೊಳಗಾಗಿದ್ದ ಒಂದು ಮಂದಿರ ಪುನರ್ ನಿರ್ಮಾಣವಾದರೆ ಅದರ ಜತೆಗಿನ ಆದರ್ಶ, ಮೌಲ್ಯ, ಉನ್ನತ ಭಕ್ತಿ, ನಂಬಿಕೆ, ಶ್ರದ್ಧೆ, ಪರಂಪರೆ ಎಲ್ಲವೂ ಮತ್ತೆ ಸ್ಥಾಪಿತವಾದಂತೆಯೇ. ಅದಕ್ಕಾಗಿಯೇ, ರಾಮ ಮಂದಿರ ನಿರ್ಮಾಣಕ್ಕಾಗಿ ಶತಮಾನಗಳ ಕಾಲ ಹೋರಾಟ ನಡೆದಿದ್ದು. ರಾಮ ಇಲ್ಲಿನ ರಾಷ್ಟ್ರಪುರುಷ. ಅವನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವಾಗುತ್ತದೆ ಎಂದರೆ ಅದು ಬರೀ ಹೊಸ ಕಟ್ಟಡವಲ್ಲ. ಮರ್ಯಾದಾ ಪುರುಷೋತ್ತಮ ಶ್ರೀರಾಮನು ಪ್ರತಿಪಾದಿಸಿದ ಮೌಲ್ಯ, ಅವನು ಅನುಸರಿಸಿದ ಆದರ್ಶ, ಮಾಡಿದ ತ್ಯಾಗ, ನೀಡಿದ ಸಂದೇಶ ಇವುಗಳೆಲ್ಲದರ ಅನುಷ್ಠಾನ ಹೃದಯಮಂದಿರಗಳಲ್ಲಿ ಸಾಧ್ಯವಾಗುತ್ತದೆ! ಸಂಸ್ಕೃತಿಯ ಪ್ರವಾಹ ಸರಾಗವಾಗಿ ಹರಿಯುತ್ತದೆ. ಭಾರತೀಯತೆಯ ದರ್ಶನವಾಗಿ ಇಲ್ಲಿನ ಸತ್ವ ಮನದಟ್ಟಾಗುತ್ತದೆ.

    ಮಂದಿರಗಳ ಪುನರ್ ನಿರ್ಮಾಣವೆಂದರೆ ಅದು ರಾಷ್ಟ್ರನಿರ್ಮಾಣವೇ...
    ಸೋಮನಾಥ ದೇವಾಲಯ

    ಒಂದು ವೇಳೆ, 35 ಸಾವಿರ ಮಂದಿರಗಳು ಪುನರ್ ನಿರ್ಮಾಣವಾದರೆ ಇತಿಹಾಸದ ಆ ವೈಭವದೊಡನೆ, ವರ್ತಮಾನದ ಹೊಸ ಪ್ರಜ್ಞೆಯೊಂದಿಗೆ ಮತ್ತೆ ಬೆಸೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸರಳ ಸತ್ಯ. ಮಂದಿರಗಳು ಅಧ್ಯಾತ್ಮದ ಜ್ಞಾನ ನೀಡುವ ಜತೆಗೆ ಸಮಾಜದ ಕೊರತೆಗಳನ್ನೂ ನೀಗಿಸುತ್ತವೆ ಎಂಬುದನ್ನು ಮರೆಯಬಾರದು. ಹಿಂದಿನಿಂದಲೂ, ಅನ್ನದಾನದ ಪವಿತ್ರ ತಾಣಗಳಾಗಿ ಮಂದಿರಗಳು ಪ್ರಸಿದ್ಧಿ ಪಡೆದಿವೆ. ಹಸಿದ ಹೊಟ್ಟೆಗೆ ಯಾವ ಸಿದ್ಧಾಂತವೂ ರುಚಿಸದು ಎಂಬ ಸತ್ಯವನ್ನು ಅರಿತಿರುವ ಮಂದಿರಗಳು ಬಡವರು, ದೀನದುರ್ಬಲರ ಬಾಳಿಗೆ ಭರವಸೆಯಾಗಿ ನಿಂತಿವೆ. ಹತ್ತಿಪ್ಪತ್ತು ಜನರಿಂದ ಹಿಡಿದು ದಿನವೂ ಲಕ್ಷಾಂತರ ಜನರು ಪ್ರಸಾದ ಸ್ವೀಕರಿಸುವ ಮಂದಿರಗಳು ನಮ್ಮಲ್ಲಿವೆ. ಅಷ್ಟೇ ಅಲ್ಲ, ಸೌಹಾರ್ದ ಸ್ಥಾಪಿಸುವ, ಸಾಮರಸ್ಯ ವಿಸ್ತರಿಸುವ, ಕಲ್ಮಶರಹಿತ ಪ್ರೀತಿಯನ್ನು ಕರುಣಿಸುವ, ದಯೆ, ಮಮತೆ, ವಾತ್ಸಲ್ಯಗಳನ್ನು ಹಂಚುವ ಸ್ಪೂರ್ತಿಕೇಂದ್ರಗಳೂ ಈ ಮಂದಿರಗಳೇ. ಹಿಂದೆಲ್ಲ ಇವುಗಳ ಪ್ರಾಂಗಣಗಳಲ್ಲೇ ಊರಿನ ವಿವಾದಗಳು ಸೌಹಾರ್ದಯುತವಾಗಿ ಬಗೆಹರಿಯುತ್ತಿದ್ದವು. ನ್ಯಾಯತೀರ್ವನ ಸರಳವಾಗಿ ಆಗುತ್ತಿತ್ತು. ಇಂದಿಗೂ ಇಂಥ ಎಷ್ಟೋ ದೂರುದುಮ್ಮಾನ, ವಿವಾದಗಳನ್ನು ಹೊತ್ತು ತರುವ ಜನರಿಗೆ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನ್ಯಾಯವನ್ನೂ, ಸಾಂತ್ವನವನ್ನೂ ಒದಗಿಸುತ್ತಾರೆ. ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಸುವ ಮೂಲಕ ಹೊಸಜೋಡಿಗಳು ಧರ್ಮಮಾರ್ಗದಲ್ಲಿ ಸಾಗಲು ಪ್ರೇರಣೆ ತುಂಬುತ್ತಾರೆ.

    ಇದನ್ನೂ ಓದಿ: ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

    ನಮ್ಮಲ್ಲಿ ಅದೆಷ್ಟೋ ಹಳ್ಳಿಗಳು ದುಶ್ಚಟಮುಕ್ತ ಮತ್ತು ವ್ಯಾಜಮುಕ್ತ ಆಗಿರುವುದು ಅಲ್ಲಿನ ದೇವಸ್ಥಾನ ಮತ್ತು ದೇವತೆಗಳ ಶಕ್ತಿಯಿಂದಲೇ. ಒಳ್ಳೆಯ ಸಂಸ್ಕಾರ, ರೂಢಿಗಳಿಗೂ ಇವೇ ದಾರಿದೀಪ. ಇತ್ತೀಚಿನ ವರ್ಷಗಳಲ್ಲಂತೂ ಮನುಷ್ಯ ಹೊರಗಿನ ಗೊಂದಲ, ಗದ್ದಲಗಳಲ್ಲಿ ಅದೆಷ್ಟು ಮುಳುಗಿ ಬಿಟ್ಟಿದ್ದಾನೆ ಎಂದರೆ ತಾನು ಬಂದ ಮೂಲೋದ್ದೇಶವನ್ನೇ ಮರೆಯುವಷ್ಟು! ಇಂಥ ಸಂದರ್ಭದಲ್ಲಿ ಮತ್ತೆ ಅಂತಮುಖಿ ಪ್ರಯಾಣಕ್ಕೆ ನಮ್ಮನ್ನು ಕೊಂಡೊಯ್ದು ಅಂತರಂಗದ ಶುದ್ಧೀಕರಣಕ್ಕೆ, ಸಾತ್ವಿಕತೆ, ನೈತಿಕತೆಯ ಅನುಷ್ಠಾನಕ್ಕೆ ಪ್ರೇರೇಪಣೆ ನೀಡುವುದೇ ಮಂದಿರಗಳು. ಯಾವುದೇ ಮಂದಿರಗಳು ಸುಖಾಸುಮ್ಮನೆ ನಿರ್ವಣಗೊಂಡಿಲ್ಲ. ಅಲ್ಲಿನ ಜಾಗಕ್ಕೆ ಶಕ್ತಿಯಿದೆ, ಪೌರಾಣಿಕ ಐತಿಹ್ಯವಿದೆ, ತಪಸ್ಸು ಆಚರಿಸಿದ ತೇಜಸ್ಸಿದೆ. ಅಲ್ಲದೆ, ದೇವರೇ ನಡೆದಾಡಿದ ಜಾಗಗಳಿವೆ, ಋಷಿಗಳು ನೆಲೆಸಿದ ತಾಣಗಳಿವೆ. ಅವಧೂತರು, ಸಂತ-ಮಹಂತರು, ಸಾಧು-ಸಂನ್ಯಾಸಿಗಳು, ಧರ್ವಚಾರ್ಯರು, ಮಠಾಧಿಪತಿಗಳು ಈ ಸಮಾಜವನ್ನು ಎಚ್ಚರಿಸಿದ, ಸುಪಥಕ್ಕೆ ತಂದ ನೆನಪುಗಳಿವೆ.

    ಕಾಶಿಯಲ್ಲಿ ಅವತರಿಸಲು, ನೆಲೆಸಲು ದೇವರುಗಳ ನಡುವೆಯೇ ಸ್ಪರ್ಧೆ ನಡೆದಿತ್ತಂತೆ! ಏಕೆಂದರೆ ಅಲ್ಲಿನ ಕಣಕಣವೂ ಅಷ್ಟು ಪವಿತ್ರ, ಜತೆಗೆ ಗಂಗೆಯ ಸಾನ್ನಿಧ್ಯ! ಅದಕ್ಕೆಂದೇ ಕಾಶಿ ಇಂದು ಹಲವು ಕ್ಷೇತ್ರಗಳಿಗೆ ವಿಶ್ವಮಾನ್ಯವಾಗಿದೆ. ದೇವರು-ಭಕ್ತರ ಅದ್ಭುತ ಸಮಾಗಮವನ್ನು ಭಾರತದ ತೀರ್ಥಕ್ಷೇತ್ರಗಳಲ್ಲಿ, ಅಲ್ಲಿ ನೆಲೆಸಿರುವ ಮಂದಿರಗಳಲ್ಲಿ ಮಾತ್ರ ಕಾಣಲು ಸಾಧ್ಯ. ಇಲ್ಲಿ ಭಕ್ತಿಗೆ ಮೆಚ್ಚಿ ಭಗವಂತನೇ ಭಕ್ತನಾಗುತ್ತಾನೆ, ಅದೇ ಭಕ್ತಿಯಿಂದ ಸಾಮಾನ್ಯ ಮನುಷ್ಯನೂ ಮಾಧವನ ಎತ್ತರಕ್ಕೆ ಏರುತ್ತಾನೆ.

    ಯಾವ ದಾರಿಯಲ್ಲಿ ಸಾಗಬೇಕು ಎಂಬ ಗೊಂದಲ ಕಾಡಿದಾಗ, ನೈತಿಕತೆ ತೊರೆದ ಅಪಸವ್ಯಗಳು ಹೆಚ್ಚಿದಾಗ ನಮ್ಮನ್ನು ಅರಿತುಕೊಳ್ಳುವ, ಆ ದಿವ್ಯಶಕ್ತಿಯೆಡೆಗೆ ಸಾಗುವ ಪ್ರೇರಣೆ ಸಿಗುವುದು ಮಂದಿರಗಳಿಂದಲೇ. ಇಂಥ ಮಂದಿರಗಳು ರಾಷ್ಟ್ರವೈಭವವನ್ನೂ ಎತ್ತಿ ಹಿಡಿಯುತ್ತವೆ. ಈ ನಿಟ್ಟಿನಲ್ಲಿ ಮಂದಿರಗಳ ಪುನರ್ ನಿರ್ವಣದ ಬಗ್ಗೆ ಡಾ.ಎಸ್.ಎಲ್. ಭೈರಪ್ಪನವರು ಮಹತ್ವದ ಸಲಹೆ ನೀಡಿದ್ದು, ಅಧಿಕಾರದಲ್ಲಿ ಇರುವವರು ಗಂಭೀರವಾಗಿ ಪರಿಗಣಿಸಬೇಕಿದೆ. ಮಂದಿರಗಳು ಏಕೆ ಬೇಕು, ಜೀಣೋದ್ಧಾರ ಅಥವಾ ಪುನರ್ ನಿರ್ಮಾಣದ ಅಗತ್ಯವೇನು ಎಂಬ ಉಡಾಫೆಯ ಪ್ರಶ್ನೆ ಕೇಳುವವರು ಒಮ್ಮೆ ಮಂದಿರಗಳ ಪರಂಪರೆಯನ್ನು, ಅವು ಬಿತ್ತಿದ ಮೌಲ್ಯ, ಆದರ್ಶಗಳನ್ನು ಮತ್ತು ಅವು ಸಮಾಜಕ್ಕೆ, ಸಂಸ್ಕೃತಿಗೆ ನೀಡಿರುವ ಕೊಡುಗೆಯನ್ನು ಅರಿತುಕೊಳ್ಳಲಿ. ಆಗ ಹೊಸದೃಷ್ಟಿಯೂ ಮೂಡಿ, ನಮ್ಮ ಹೃದಯಮಂದಿರವೂ ವಿಕಾರಗಳಿಂದ ಮುಕ್ತಗೊಂಡು, ನೈಜಾನಂದವನ್ನು ಬರಮಾಡಿಕೊಳ್ಳುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇನ್ನು ಮುಂದೆ, ಮಂದಿರ ಪ್ರವೇಶಿಸುವಾಗ ನಮ್ಮ ದೃಷ್ಟಿ ಬದಲಾಗಲಿ. ನಮ್ಮ ಉದ್ಧಾರಕ್ಕಾಗಿ, ಸಮಾಜದ ಒಳಿತಿಗಾಗಿ, ರಾಷ್ಟ್ರದ ಉತ್ಕರ್ಷಕ್ಕಾಗಿ ಆ ಭಗವಂತ ಎಂಬ ಪರಮಶಕ್ತಿಯ ಮುಂದೆ ನಿಂತಿದ್ದೇವೆ ಎಂಬ ಭಾವ ಆವರಿಸಿಕೊಳ್ಳಲಿ. ಮುಂದಿನದೆಲ್ಲವೂ ಹರಿಚಿತ್ತ ಸತ್ಯ…!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts