More

    ಜನಸ್ನೇಹಿ ಪೊಲೀಸ್ ಠಾಣೆ

    ಹಾವೇರಿ: ಪೊಲೀಸ್ ಠಾಣೆ ಎಂದ ಕೂಡಲೆ ಜನರಲ್ಲಿ ಒಂದು ರೀತಿಯ ಭಯ ಮೂಡುವುದು ಸಹಜ. ಹೀಗಾಗಿ, ಅನ್ಯಾಯಕ್ಕೊಳಗಾದರೂ ದೂರು ನೀಡಲು ಹಿಂದೇಟು ಹಾಕುವವರೂ ಇದ್ದಾರೆ. ಆದರೆ, ಇಲ್ಲೊಂದು ಪೊಲೀಸ್ ಠಾಣೆ ಇದೆ. ಇಲ್ಲಿ ನೊಂದು ಬಂದವರಿಗೆ ವಿಶೇಷ ಆತಿಥ್ಯ, ಬಿಸಿ ಬಿಸಿ ಕಷಾಯ, ಉಲ್ಲಾಸಭರಿತ ಮಾತು, ಓದಲು ಪುಸ್ತಕ, ನಂತರ ಸಮಸ್ಯೆಗೆ ಪರಿಹಾರ…!

    ತಾಲೂಕಿನ ಗುತ್ತಲ ಪೊಲೀಸ್ ಠಾಣೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ‘ಜನಸ್ನೇಹಿ’ ಠಾಣೆಯಾಗಿ ಪರಿವರ್ತನೆಗೊಂಡಿದೆ. ಈ ಮೂಲಕ ಇಡಿ ಜಿಲ್ಲೆಯಲ್ಲಿಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಜನಸ್ನೇಹಿ ಹೇಗೆ?: ಠಾಣೆಗೆ ಯಾರೇ ಬಂದರೂ ಮೊದಲಿಗೆ ಅವರನ್ನು ಆದರದಿಂದ ಸ್ವಾಗತಿಸಿಕೊಳ್ಳಲಾಗುತ್ತದೆ. ಮಹಿಳೆಯರು, ವೃದ್ಧರು, ಮಕ್ಕಳನ್ನು ಸ್ವಾಗತಿಸಲು ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನೇಮಕ ಮಾಡಿ, ತರಬೇತಿ ನೀಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಈಗ ಬಿಸಿ ಬಿಸಿ ಕಷಾಯ ನೀಡುತ್ತಾರೆ. ಅವರ ಸ್ವ-ವಿವರವನ್ನು ಪ್ರತ್ಯೇಕವಾಗಿ ಪುಸ್ತಕದಲ್ಲಿ ಬರೆಯಿಸಿಕೊಂಡು ಅವರ ದೂರಿನ ಬಗ್ಗೆ ಮನೆ ಸದಸ್ಯರಂತೆ ಎಲ್ಲ ರೀತಿಯ ಮಾಹಿತಿ ಹೇಳುತ್ತಾರೆ. ನಂತರ ಅವರ ಸಮಸ್ಯೆಯ ಬಗ್ಗೆ ದೂರು ತೆಗೆದುಕೊಳ್ಳಲಾಗುತ್ತದೆ. ದೂರು ಕೊಟ್ಟವರು ಮನೆಗೆ ಮುಟ್ಟಿದ ಬಗ್ಗೆ ಪೊಲೀಸರೇ ಫೋನ್ ಮಾಡಿ ಖಾತರಿಪಡಿಸಿಕೊಳ್ಳುತ್ತಾರೆ.

    ದೂರು ನೀಡಲು ಬಂದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಪುಟ್ಟ ಗ್ರಂಥಾಲಯ ಮಾಡಲಾಗಿದ್ದು, ಕಥೆ-ಕಾದಂಬರಿ, ಸಾಹಿತ್ಯ ಹಾಗೂ ದೇಶದ ಇತಿಹಾಸ ಪುರುಷರ ಜೀವನ ಚರಿತ್ರೆಯನ್ನು ಒಳಗೊಂಡ ಪುಸ್ತಕಗಳನ್ನು ಇಡಲಾಗಿದೆ. ಟಿ.ವಿ. ವ್ಯವಸ್ಥೆಯೂ ಇದೆ.

    ಠಾಣೆಯ ಕಾಂಪೌಂಡ್ ಸುತ್ತಲೂ ನಾನಾ ಬಗೆಯ ಹೂವಿನ ತೋಟ ಮಾಡಲಾಗಿದೆ. ಹೊಡೆದಾಟ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿಯೇ ರಾಜಿಯಾದವರಿಗೆ ಪೊಲೀಸರು ತೋಟದ ಹೂವುಗಳನ್ನು ನೀಡಿ ಕಳುಹಿಸುತ್ತಾರೆ.

    ಪಿಎಸ್​ಐ ಗ್ರಾಮ ವಾಸ್ತವ್ಯ: ಗುತ್ತಲ ಠಾಣೆ ವ್ಯಾಪ್ತಿಗೆ 54 ಗ್ರಾಮಗಳು ಬರುತ್ತವೆ. ಠಾಣೆಯ ಪಿಎಸ್​ಐ ಸಿದ್ಧಾರೂಢ ಬಡಿಗೇರ ನೇತೃತ್ವದಲ್ಲಿ ಪೊಲೀಸರು ವಾರಕ್ಕೊಂದರಂತೆ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಪ್ರಾಯೋಗಿಕ ಎಂಬಂತೆ ಕಳೆದ ವಾರ ಬರಡಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದು, ಸಂಪೂರ್ಣ ಗ್ರಾಮವನ್ನು ಸಾರಾಯಿ ಮುಕ್ತವನ್ನಾಗಿ ಮಾಡಿದ್ದಾರೆ.

    ಇನ್ನುಳಿದ ಗ್ರಾಮ ವಾಸ್ತವ್ಯದಲ್ಲಿ ಗ್ರಾಮ ಸಭೆ, ದಲಿತ ಸಭೆ, ಸುಧಾರಿತ ಬೀಟ್ ಪದ್ಧತಿ ಕುರಿತು ರ್ಚಚಿಸಲು ತೀರ್ವನಿಸಲಾಗಿದೆ. ‘ಮಹಿಳೆಯರಿಗೆ, ವೃದ್ಧರಿಗೆ ಹಾಗೂ ಮಕ್ಕಳಿಗೆ ನ್ಯಾಯ ಪಡೆದುಕೊಳ್ಳಲು ಕಾನೂನಿನಡಿ ಇರುವ ಅವಕಾಶಗಳ ಬಗ್ಗೆ ತಿಳಿಹೇಳಲು ಯೋಜನೆ ರೂಪಿಸಿದ್ದೇವೆ. ಜತೆಗೆ, ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ಹೊಡೆದಾಟ, ಜಾತಿ ಸಂಘರ್ಷ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದವರನ್ನು ಸ್ಥಳದಲ್ಲಿಯೇ ಕರೆಯಿಸಿ ರಾಜೀ ಪಂಚಾಯಿತಿ ಮಾಡುವ ಉದ್ದೇಶ ಹೊಂದಲಾಗಿದೆ. ಜನತೆ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಲು ಇದೊಂದು ವೇದಿಕೆಯಾಗಲಿದೆ’ ಎಂದು ಪಿಎಸ್​ಐ ಸಿದ್ಧಾರೂಢ ಬಡಿಗೇರ ‘ವಿಜಯವಾಣಿ’ಗೆ ತಿಳಿಸಿದರು.

    ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡುವ ಕುರಿತು ಮೇಲಧಿಕಾರಿಗಳಿಂದ ಈ ಹಿಂದೆಯೇ ಆದೇಶ ಬಂದಿದೆ. ನಾವು ಐಜಿಪಿ, ಎಸ್ಪಿ ಅವರ ಮಾರ್ಗದರ್ಶನ ಪಡೆದು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನದಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣರಲ್ಲಿ ಅರಿವು ಮೂಡಿಸಿ, ರಾಜಿ ಪಂಚಾಯಿತಿ ಮೂಲಕ ಬಗೆಹರಿಸಬಹುದಾದ ಪ್ರಕರಣಗಳಿಗೆ ಅಂತ್ಯ ಹಾಡುವುದು. ಗ್ರಾಮಗಳನ್ನು ಸಾರಾಯಿ ಮುಕ್ತ ಮಾಡುವ ಉದ್ದೇಶವಿದೆ.

    | ಸಿದ್ಧಾರೂಢ ಬಡಿಗೇರ, ಗುತ್ತಲ ಜನಸ್ನೇಹಿ ಠಾಣೆ ಪಿಎಸ್​ಐ

    ಗುತ್ತಲ ಠಾಣೆಯನ್ನು ಜನಸ್ನೇಹಿಗೊಳಿಸಿರುವುದು ಜನರಲ್ಲಿ ಸಂತಸ ತಂದಿದೆ. ಠಾಣೆಗೆ ಹೋದರೆ ನಮ್ಮ ಸಮಸ್ಯೆ ಬಗ್ಗೆ ಪೊಲೀಸರೇ ಎಲ್ಲ ರೀತಿಯ ಮಾಹಿತಿ ಪಡೆದು, ಯಾವ ರೀತಿ ದೂರು ಕೊಡಬೇಕು ಎಂಬುದನ್ನು ತಿಳಿಸಿ ಹೇಳುತ್ತಾರೆ. ಒಳ್ಳೆಯ ಸ್ನೇಹದಿಂದ ಮಾತನಾಡುತ್ತಾರೆ.

    | ವಸಂತ ಕೆ., ಗುತ್ತಲ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts