More

    ಸ್ವಾಭಿಮಾನಿ ಭಾರತದಿಂದ ಆತ್ಮನಿರ್ಭರ ಭಾರತ

    ಸ್ವಾಭಿಮಾನಿ ಭಾರತದಿಂದ ಆತ್ಮನಿರ್ಭರ ಭಾರತ| ಚಂದ್ರಶೇಖರ ನಾವಡ

    ಕಳೆದ 4 ತಿಂಗಳುಗಳಿಂದ ಲಡಾಖ್​ನಲ್ಲಿ ಗಡಿತಗಾದೆ ಸೃಷ್ಟಿಸಿರುವ ಚೀನೀಯರ ಹಠಮಾರಿತನಕ್ಕೆ ಪೆಟ್ಟು ಕೊಡಲು ನಮ್ಮ ಸೈನಿಕರು ಹಗಲಿರುಳೆನ್ನದೆ ಸನ್ನದ್ಧರಾಗಿ ಸವೋಚ್ಚ ಬಲಿದಾನಕ್ಕೂ ಸಿದ್ಧವಾಗಿ ನಿಂತಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯನ್ನು ಬದಲಿಸಲು ಯತ್ನಿಸುತ್ತಿರುವ ಚೀನಾದ ಕುತಂತ್ರ ವಿಫಲಗೊಳಿಸಲು ಸಾವಿರಾರು ಸೈನಿಕರನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಸೈನಿಕರು ತಂಗಲು ಸೂಕ್ತ ವಾಸಸ್ಥಾನ, ವಿದ್ಯುತ್, ಶೌಚ ಮತ್ತಿತರ ದೈನಂದಿನ ಅವಶ್ಯಕತೆ ಪೂರೈಸಲು ಯೋಗ್ಯ ಮೂಲಭೂತ ಸೌಕರ್ಯವಿಲ್ಲದ ಗುಡ್ಡಗಾಡಿನಲ್ಲಿ ಸೈನಿಕರು ಕಳೆದ ನಾಲ್ಕು ತಿಂಗಳಿನಿಂದ ಹಗಲಿರುಳು ಕಳೆಯುತ್ತಿದ್ದಾರೆ.

    ಬಾಯಲ್ಲಿ ಶಾಂತಿ ಪಠಿಸುತ್ತ ಬಗಲಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿರುವ ಚೀನಾವನ್ನು ಸರ್ಕಾರ ಆರ್ಥಿಕ, ರಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಒತ್ತಡಗಳ ಮೂಲಕ ಸರಿದಾರಿಗೆ ತರಲು ಯತ್ನಿಸುತ್ತಿದೆ. ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ-‘ಭಾರತೀಯರು ಚೀನಾದ ಸರಕುಗಳ ದಾಸರು. ಸ್ವಾಭಿಮಾನವಿಲ್ಲದ ಭಾರತೀಯರು ನಮ್ಮ ಸರಕುಗಳಿಲ್ಲದೆ ಬದುಕಲು ಸಾಧ್ಯವಿಲ್ಲ’ ಎಂದು ಹಂಗಿಸುವ ಲೇಖನ ಪ್ರಕಟಿಸಿದೆ.

    ನಿಜಕ್ಕೂ ನಾವು ಅಭಿಮಾನಶೂನ್ಯರೇ? ದೇಶದ ಸರಹದ್ದಿನ ಮೇಲೆ ಕೆಟ್ಟದೃಷ್ಟಿ ಇಟ್ಟಿರುವ ನಮ್ಮ ಶತ್ರುಗಳನ್ನು ಎದುರಿಸುವುದನ್ನು ಸೈನಿಕರ ಜವಾಬ್ದಾರಿಗೆ ಬಿಟ್ಟು ನಾವು ಶತ್ರುಗಳ ಕಿಸೆ ತುಂಬಿಸುವುದು ಸರಿಯೇ? ಚೀನೀ ಆಟದ ಸಾಮಾನುಗಳಿಲ್ಲದೆ ನಮ್ಮ ಕಂದಮ್ಮಗಳನ್ನು ರಂಜಿಸಲಾಗದೇ? ಸರಳ ಜೀವನ ನಡೆಸಿ ಆದರ್ಶ ಸ್ಥಾಪಿಸಿದ್ದ ಹಿರಿಯರ ಪ್ರೇರಣೆಯಿಂದ ವಿಮುಖರಾಗಿ ಐಶಾರಾಮಿ ಬದುಕಿನ ಅಡಿಯಾಳಾಗುತ್ತಿರುವ ಯುವಜನರಲ್ಲಿ ಮತ್ತು ಆರ್ಥಿಕಸಂಪನ್ನ ಮಧ್ಯಮ ವರ್ಗದಲ್ಲಿ ಜಾಗೃತಿ ಮೂಡುವಂತಾಗಲಿ.

    ಪ್ರಧಾನಮಂತ್ರಿಯವರು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ. ಆತ್ಮನಿರ್ಭರ ಭಾರತದ ದಾರಿ ಸ್ವಾಭಿಮಾನಿ ಭಾರತದ ರಸ್ತೆಯಲ್ಲಿ ಹಾದುಹೋಗುತ್ತದೆ ಎನ್ನುವುದನ್ನು ದೇಶದ ಪ್ರತಿಯೋರ್ವ ನಾಗರಿಕ ಮನಗಾಣಬೇಕು. ಪ್ರಧಾನಿ ಮೋದಿ, ‘ಮನ್ ಕೀ ಬಾತ್’ನಲ್ಲಿ ಹೇಳಿದ ಚನ್ನಪಟ್ಟಣದ ಆಟಿಕೆಗಳು, ಮುಧೋಳ ಶ್ವಾನ-ಸ್ವಾಭಿಮಾನಿ ಭಾರತದ ಸಂಕೇತಗಳು. ಚೀನೀ ಅವಲಂಬನೆಯಿಂದ ಮುಕ್ತಿ ಪಡೆಯಲು ಸ್ವದೇಶೀ ಚಿಂತನೆ ನಮಗುಳಿದಿರುವ ಆಯ್ಕೆ. ದೇಶದ ಹಿತಕ್ಕೆ ಮಾರಕವಾಗುವ ಶತ್ರುಗಳ ಕುರಿತಂತೆ ರೋಷವಿರದವರು ನಿಜಕ್ಕೂ ಸ್ವಾರ್ಥಿಗಳು.

    ವಿಸ್ತಾರವಾದಿ ಚೀನಾದ ವಿರೋಧ ಸೈನಿಕರು ಮತ್ತು ಸರ್ಕಾರಕ್ಕಷ್ಟೇ ಸೀಮಿತವಲ್ಲ. ನಮ್ಮ ನೆಮ್ಮದಿಯ ಬದುಕು, ಸ್ವಾತಂತ್ರ್ಯ ಎಲ್ಲವೂ ಗಡಿಯಲ್ಲಿನ ಶಾಂತಿಯ ಮೇಲೆ ಆಧಾರಿತ ಎನ್ನುವುದನ್ನು ಮರೆಯದಿರೋಣ.

    ಮಾಜಿ ಸೈನಿಕರು, ಬೈಂದೂರು

    ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನದ ಬಳಿಕ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts