More

    ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಗುರಿ

    ಜಮಖಂಡಿ: ಸರ್ಕಾರಿ ಶಾಲೆಗಳಲ್ಲಿ ಬೆಳೆದ ಪ್ರತಿಭೆಗಳು ಈ ನೆಲ, ನಾಡಿನ ಆಸ್ತಿಯಾಗಬೇಕು. ಅವರಿಗೆ ಪ್ರೋತ್ಸಾಹ, ಸಹಾಯ ಹಸ್ತ ನೀಡುತ್ತಿರುವ ಡಾ.ಸುಧಾ ಮೂರ್ತಿ ಅವರ ಕಾರ್ಯ ಶ್ಲಾಘನೀಯ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

    ನಗರದ ಹೊರವಲಯದ ವಿದ್ಯಾಭವನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇನ್ಫೊಸಿಸ್ ಫೌಂಡೇಷನ್‌ನಿಂದ ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆಗಳಿಗೆ 400 ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪಾಲಕರು ಶೇ.65 ರಷ್ಟು ಆದಾಯವನ್ನು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳಿಗೆ ಖರ್ಚು ಮಾಡುತಿದ್ದಾರೆ. ಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಾಲಕರು ಸರದಿ ಸಾಲಿನಲ್ಲಿ ನಿಂತು ಪ್ರವೇಶ ಪಡೆಯುವಂತೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

    ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲತ್ತುಗಳನ್ನು ನೀಡಲಾಗುತ್ತಿದೆ. ರಾಜ್ಯದ 57 ಸಾವಿರ ಶಾಲೆಗಳು 50 ವರ್ಷಗಳನ್ನು ಪೂರೈಸಿವೆ. ಅವುಗಳನ್ನು ಪುನರುತ್ಥಾನಗೊಳಿಸಲಾಗುವುದು ಎಂದರು.

    ಸರ್ಕಾರಿ ಶಾಲೆಗಳಿಗೆ ಅಪಹಾಸ್ಯ ನಿಂದನೆ ಮಾಡಬಾರದು, ಶಿಕ್ಷಕರು ಶಿಕ್ಷಣದ ಜತೆಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಬಿ.ಡಿ.ಜತ್ತಿ, ನಾರಾಯಣ ಮೂರ್ತಿ, ಸುಧಾ ಮೂರ್ತಿ ಕಲಿತು ಉನ್ನತ ಹುದ್ದೆಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.

    ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ 100 ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ವಿತರಿಸಿ ಮಾತನಾಡಿ, ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ವಾತಾವರಣ ನಿರ್ಮಾಣ ಮಾಡಬೇಕು. ನಿಮ್ಮ ಕುಟುಂಬ ಬದುಕಲಿಕ್ಕೆ ಕರ್ತವ್ಯ ನಿರ್ವಹಿಸಲು ಸರ್ಕಾರಿ ಶಾಲೆಗಳು ಬೇಕು. ಆದರೆ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವುದಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಶಾಲೆ ಶಿಕ್ಷಕರಿಗೆ ಹೊಣೆಗಾರಿಕೆ ಇದೆ. ನಿಮ್ಮ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗುವಂತೆ ಆಸಕ್ತಿ ತೋರಬೇಕು. ಎಲ್ಲ ಅಧಿಕಾರಿಗಳ, ಜನಪ್ರತಿನಿಧಿಗಳ, ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ ಆ ಶಾಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಾಗುತ್ತದೆ ಎಂದರು.

    ಸರ್ಕಾರಿ ವಸತಿ ಶಾಲೆಗಳಲ್ಲಿ ಕಡುಬಡವ, ಹಿಂದುಳಿದ ವರ್ಗದವರ ಮಕ್ಕಳು ವ್ಯಾಸಂಗ ಮಾಡಿ ಶೇ.98 ರಷ್ಟು ಲಿತಾಂಶ ಪಡೆದು ರ‌್ಯಾಂಕ್‌ಗಳಲ್ಲಿ ಉತ್ತಿರ್ಣರಾಗುತ್ತಿದ್ದಾರೆ. ಆ ದಿಸೆಯಲ್ಲಿ ಸರ್ಕಾರ ಬಜೆಟ್‌ನಲ್ಲಿ ಶೇ.20 ರಷ್ಟು ಹೆಚ್ಚು ಹಣ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂದರು.

    ಧಾರವಾಡ ಸಾ.ಶಿ. ಇಲಾಖೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಗೌರವ ಮೂಡಬೇಕಾದರೆ ಆ ವೃತ್ತಿಯನ್ನು ಪೂಜ್ಯತೆಯಿಂದ ನಿರ್ವಹಣೆ ಮಾಡಬೇಕು. ಮಗುವಿನ ಹಣೆಬರಹ ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿ ಇದೆ ಎಂದರು.

    ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದ ಮಹಾರಾಜರು ಸಾನ್ನಿಧ್ಯವಹಿಸಿ ಮಾತನಾಡಿ, ದೇಶ ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರ ಕೈಯಲ್ಲಿ ಇದೆ. ದೇಶ ವಿದೇಶಗಳಲ್ಲಿ ಡಾ.ಸುಧಾ ಮೂರ್ತಿ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.

    ಇನ್ಫೊಸಿಸ್ ಫೌಂಡೇಷನ್ ಸಂಚಾಲಕ ಶಿಕ್ಷಕ ಎನ್.ಆರ್.ಕುಲಕರ್ಣಿ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ, ಕೋವಿಡ್ ಸಂದರ್ಭದಲ್ಲಿ ಕಡು ಬಡವರಿಗೆ, ನಿರ್ಗತಿಕರಿಗೆ, ಅರ್ಚಕರಿಗೆ, ಬೀದಿ ವ್ಯಾಪಾರಸ್ಥರಿಗೆ, ಕಲಾವಿದರಿಗೆ ಹೀಗೆ ಎಲ್ಲ ವರ್ಗದ ಜನರಿಗೆ ದಿನಸಿ ಸಾಮಗ್ರಿಗಳ ಸಹಾಯ ಹಸ್ತ ನೀಡಿದ್ದಾರೆ. ಶಾಲೆ ಹಾಗೂ ಶಾಲಾ ಮಕ್ಕಳ ಜ್ಞಾನ ವೃದ್ಧಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್ ನೀಡಿದ್ದಾರೆ ಎಂದರು.

    100 ಶಾಲೆಗಳಿಗೆ ಗ್ರಂಥಾಲಯ ಪುಸ್ತಕಗಳನ್ನು, 50 ಕಲಾವಿದರಿಗೆ ತಲಾ 10 ಸಾವಿರ ಪ್ರೋತ್ಸಾಹ ಧನ, 20 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 7 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ, 100 ಜನ ಖಾಸಗಿ ಶಾಲೆ ಶಿಕ್ಷಕರಿಗೆ ತಲಾ 10 ಸಾವಿರ ಚೆಕ್‌ಗಳನ್ನು ವಿತರಿಸಲಾಯಿತು.

    ರಾಘವೇಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ತೇರದಾಳ ಶಾಸಕ ಸಿದ್ದು ಸವದಿ, ಎಂಎಲ್‌ಸಿ ಹಣಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಜಿಪಂ ಸಿಇಒ ಟಿ.ಭೂಬಾಲನ್. ಎಸಿ ಡಾ.ಸಿದ್ದು ಹುಲ್ಲೊಳ್ಳಿ, ಸಿಟಿಇ ಕಾಲೇಜಿನ ಪ್ರಾಚಾರ್ಯ ಸಹಿರಾಬಾನು ಖಾನ್, ಡಿಡಿಪಿಒ ಶ್ರೀಶೈಲ ಬಿರಾದಾರ, ಡಿವೈಎಸ್‌ಪಿ ಪಾಂಡುರಂಗಯ್ಯ, ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಆಬೀದ ಗದ್ಯಾಳ ಇತರರು ಇದ್ದರು. ಬಿಇಒ ಸಿ.ಎಂ.ನ್ಯಾಮಗೌಡ ಸ್ವಾಗತಿಸಿದರು. ಎಂ.ಎಂ.ನಾಯಕವಾಡಿ, ಸಂತೋಷಿ ರಾಮದುರ್ಗ ನಿರೂಪಿಸಿದರು. ವನಜಾಕ್ಷಿ ಕುಲಕರ್ಣಿ ವಂದಿಸಿದರು.

    ಕಲಿಸಿದ ಗುರುಗಳನ್ನು ನೆನೆದ ಡಿಸಿಎಂ
    ಡಿಸಿಎಂ ಗೋವಿಂದ ಕಾರಜೋಳ ಪ್ರಾಥಮಿಕ ಶಾಲೆಯಲ್ಲಿ ದತ್ತಾತ್ರೇಯ ದೇಶಪಾಂಡೆ ಸೇರಿ ತಮಗೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿಕೊಂಡು, ಶಿಕ್ಷಕರ ವೃತ್ತಿ ಗೌರವಿತವಾಗಿದೆ. ಗುರುವಿನ ಸ್ಥಾನ ಎಲ್ಲಕ್ಕಿಂತ ಮಿಗಿಲಾಗಿದೆ. ಶಿಕ್ಷಕರು ಆ ಸ್ಥಾನಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು ಎಂದರು.

    ಮನವಿಗಳ ಸುರಿಮಳೆ
    ನಗರಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರಿಗೆ ಅತಿಥಿ ಶಿಕ್ಷಕರು, ಪದವಿ ಶಿಕ್ಷಕರು ಸೇರಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮನವಿಗಳನ್ನು ನೀಡಿದರು.



    ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಗುರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts