More

    ಉಡುಪಿಯಲ್ಲಿ ಜಲಶಕ್ತಿ ಅಭಿಯಾನಕ್ಕೆ ಹಿನ್ನಡೆ

    ಉಡುಪಿ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಸಮಸ್ಯೆ ಹಾಗೂ ಕುಡಿಯುವ ನೀರಿನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಜಲಶಕ್ತಿ ಅಭಿಯಾನಕ್ಕೆ ಜಿಲ್ಲೆಯಲ್ಲಿ ಲಾಕ್ಡೌನ್ ಹಾಗೂ ತೌಕ್ತೆ ಚಂಡಮಾರುತ ಪರಿಣಾಮ ಸ್ವಲ್ಪ ಹಿನ್ನಡೆಯಾಗಿದೆ. 2398 ಕಾಮಗಾರಿಗಳಿಗೆ ಗುರಿ ನಿಗದಿ ಮಾಡಲಾಗಿದ್ದು, 1770 ಕಾಮಗಾರಿಗಳನ್ನು ಮಾತ್ರ ಪ್ರಾರಂಭಿಸಲು ಸಾಧ್ಯವಾಗಿದೆ.

    ಮುಂಗಾರು ಪೂರ್ವದ 100 ದಿನ ಅವಧಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ನೀರು ಹರಿದು ಹೋಗುವ ನಾಲೆ, ಕಾಲುವೆಗಳ ಪುನಶ್ಚೇತನ, ಹೊಸ ಕೆರೆ, ಗೋಕಟ್ಟೆಗಳ ನಿರ್ಮಾಣ, ಕಿಂಡಿಆಣೆಕಟ್ಟು, ಬೋರ್‌ವೆಲ್ ರಿಚಾರ್ಜ್, ಕಟ್ಟಡಗಳಿಗೆ ಮಳೆ ನೀರುಕೊಯ್ಲು, ನೀರಾವರಿ ಬಾವಿ ನಿರ್ಮಾಣ, ಸೋಕ್‌ಪಿಟ್‌ಗಳ ನಿರ್ಮಾಣ, ಕೃಷಿಹೊಂಡ ಮೊದಲಾದ ಕಾಮಗಾರಿಗೆ ಸಿದ್ಧತೆ ನಡೆಸಲಾಗಿತ್ತು. ಏಪ್ರಿಲ್‌ನಲ್ಲಿ ಸುಮಾರು 1.2 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದರೆ ಮೇಯಲ್ಲಿ ನಿರಂತರ ಲಾಕ್‌ಡೌನ್ ಹಾಗೂ ಚಂಡ ಮಾರುತ ಕಾರಣ ಕೇವಲ 70 ಸಾವಿರ ಮಾನವ ದಿನಗಳಿಗೆ ಸೀಮಿತವಾಗಿದೆ.

    ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ ಅಂಗವಾಗಿ ಪ್ರತೀ ಗ್ರಾಮಕ್ಕೆ ಕನಿಷ್ಟ 1 ಕೆರೆಯನ್ನು ಗುರುತಿಸಿ ಅದರ ಸಮಗ್ರ ಅಭಿವೃದ್ಧಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಒಟ್ಟು 141 ಕೆರೆಗಳಲ್ಲಿ 91 ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ. 160 ಕಾಲುವೆಗಳಲ್ಲಿ 121 ಕಾಲುವೆ ಪುನಶ್ಚೇತನಕ್ಕೆ ಚಾಲನೆ ನೀಡಲಾಗಿದೆ. ಉಳಿದಂತೆ 20 ಕಿಂಡಿ ಆಣೆಕಟ್ಟು ನಿರ್ಮಾಣ ಗುರಿ ನಿಗದಿಯಾಗಿದ್ದು, ಕೇವಲ 2 ಅಣೆಕಟ್ಟು ಕಾಮಗಾರಿ ನಡೆಯುತ್ತಿದೆ. 1158 ಸೋಕ್‌ಪೀಟ್‌ಗಳಲ್ಲಿ 674 ಕಾಮಗಾರಿ, 50 ಬೋರ್ ವೆಲ್ ಮರುಪೂರಣಕ್ಕೆ ಗುರಿ ನಿಗದಿಯಾಗಿದ್ದು, ಕೇವಲ 10 ಬೋರ್‌ವೆಲ್ ಕೆಲಸ ಪ್ರಾರಂಭಿಸಲಾಗಿದೆ. ಆದರೆ 728 ತೆರೆದ ಬಾವಿ ನಿರ್ಮಾಣಕ್ಕೆ ಗುರಿ ನಿಗದಿಯಾಗಿದ್ದರೂ 873 ಕಾಮಗಾರಿ ನಡೆಯುತ್ತಿದೆ.

    ಕೂಲಿ ಹೆಚ್ಚಳ
    ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರೂ ಪ್ರಾರಂಭದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಿತ್ತು. ಆದರೆ ನಂತರ ಅದಕ್ಕೂ ನಿರ್ಬಂಧ ವಿಧಿಸಿದ್ದರಿಂದ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿದರ ರೂ.275 ರಿಂದ ರೂ.289 ಕ್ಕೆ ಹೆಚ್ಚಿಸಲಾಗಿದ್ದರೂ ಕರೊನಾದಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 6.68 ಲಕ್ಷ ಮಾನವದಿನಗಳ ಸೃಜನೆ ಮಾಡಲಾಗಿದ್ದು, ಒಟ್ಟು 7,687 ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ.

    ಜಲಶಕ್ತಿ ಅಭಿಯಾನ ಎಪ್ರಿಲ್‌ನಲ್ಲಿ ಚೆನ್ನಾಗಿ ನಡೆದಿದೆ. ನಂತರ ಮೇಯಲ್ಲಿ ಕೋವಿಡ್-19 ಎರಡನೇ ಅಲೆಯ ಕಾರಣಕ್ಕೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಸೈಕ್ಲೋನ್‌ನಿಂದ ಮಳೆ ಬಂದು ಕೆರೆಗಳು ತುಂಬಿದ ಕಾರಣ ಕರೆ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಅದರೂ 2 ತಿಂಗಳಲ್ಲಿ 1.9 ಲಕ್ಷ ಮಾನವ ದಿನಗಳ ಕೆಲಸ ಮುಗಿಸಿದ್ದೇವೆ. ಸ್ವಂತ ಮನೆಗಳಲ್ಲಿ ಮಳೆ ನೀರುಕೊಯ್ಲು, ನೀರು ಇಂಗಿಸುವಿಕೆ, ಸೋಕ್‌ಪಿಟ್ ನಿರ್ಮಾಣ ಇತ್ಯಾದಿ ಕಾಮಗಾರಿ ನಡೆಸಲು ಯೋಜನೆಯಲ್ಲಿ ಅವಕಾಶವಿದೆ.
    ಡಾ. ನವೀನ್ ಭಟ್, ಜಿಪಂ ಸಿಇಒ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts