More

    ಕಡಲೆ ಬಿತ್ತನೆಗೆ ಅಕ್ಟೋಬರ್-ನವೆಂಬರ್ ಸಕಾಲ

    ಜಗಳೂರು: ಕಡಲೆ ಬಿತ್ತನೆಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಸೂಕ್ತ ಸಮಯವಾಗಿದ್ದು, ರೈತರು ಈಗಿಂದಲೇ ಭೂಮಿ ಸಿದ್ಧಗೊಳಿಸಿ ಬಿತ್ತನೆ ವೇಳೆ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಬಿ.ವಿ.ಶ್ರೀನಿವಾಸಲು ತಿಳಿಸಿದ್ದಾರೆ.

    ಹಿಂಗಾರು ಹಂಗಾಮಿನ ಮುಖ್ಯ ಬೆಳೆ ಕಡಲೆಯಾಗಿದ್ದು, ಇದನ್ನು ಹೆಚ್ಚಾಗಿ ಮಳೆಯಾಶ್ರಯದಲ್ಲಿ ಬೆಳೆಯಲಾಗುತ್ತದೆ. ಇದರ ಬಿತ್ತನೆಗೆ ಅ.2ನೇ ವಾರದಿಂದ ನ.2ನೇ ವಾರದವರೆಗೆ ಸೂಕ್ತ ಸಮಯವಾಗಿದೆ. ಪ್ರತಿ ಎಕರೆಗೆ 20 ಕೆಜಿ ಬಿತ್ತನೆ ಬೀಜಗಳು ಬೇಕಾಗುತ್ತದೆ. ಬಿತ್ತನೆಗೆ 24ಗಂಟೆ ಮುಂಚಿತವಾಗಿ ಕಾರ್ಬನ್‌ಡೈಜಿಮ್ 2 ಗ್ರಾಂ ಅಥವಾ ಟ್ರೈಕೊಡರ್ಮಾ 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಿ, ಬಿತ್ತನೆ ಮಾಡಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ಬಳಸಬೇಕೆಂದು ತಿಳಿಸಿದ್ದಾರೆ.

    ಕೂರಿಗೆಯಿಂದ ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರವನ್ನು ಏಕ ಕಾಲಕ್ಕೆ ಬಿತ್ತನೆ ಮಾಡಿದರೆ ಅಂತರದ ಸಾಲುಗಳನ್ನು ಕಾಪಾಡಬಹುದಾಗಿದೆ. ಬಿತ್ತನೆ ಮಾಡಿದ ಮೂರು ದಿನಗಳೊಳಗೆ ಪೆಂಡಿ ಮಿತಾಲಿನ್ ಒಂದು ಲೀ. ಪ್ರತಿ ಎಕರೆಗೆ (200 ಲೀಟರ್ ನೀರು) ಸಿಂಪಡಣೆ ಮಾಡುವುದರಿಂದ ಕಳೆ ನಿರ್ವಹಣೆ ಮಾಡಬಹುದು. ಕಡಲೆ ಶೇ.50ರಷ್ಟು ಹೂವಾಡುವ ಹಂತದಲ್ಲಿ 20 ಗ್ರಾಂ ಯೂರಿಯಾ ಪ್ರತಿ ಲೀ ನೀರಿಗೆ ಬರೆಸಿ ಸಿಂಪಡಣೆ ಮಾಡುವುದರಿಂದ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಬಿತ್ತನೆಯಾದ 35 ರಿಂದ 45 ದಿನಗಳಲ್ಲಿ ಕುಡಿ ಚಿವುಟುವುದರಿಂದ ಹೆಚ್ಚು ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.

    ರೈತರ ಗಮನಕ್ಕೆ: ಕಡಲೆ ಬಿತ್ತನೆ ಬೀಜ ಪಡೆಯಲು ರೈತರು ಕಡ್ಡಾಯವಾಗಿ ಆಧಾರ್‌ಕಾರ್ಡ್ ತರಬೇಕು. ಆರೋಗ್ಯ ಸರಿ ಇಲ್ಲದವರ ಪರವಾಗಿ ಬರುವವರು ಮೂಲ ಆಧಾರ್ ಕಾರ್ಡ್ ತಂದು ಬಿತ್ತನೆಬೀಜ ಪಡೆಯಬಹುದು. ಎಲ್ಲರಿಗೂ ಗರಿಷ್ಠ 5 ಎಕರೆ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆಬೀಜ ವಿತರಿಸಲಾಗುವುದು. ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ವಿ.ಶ್ರೀನಿವಾಸಲು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts