More

    ಆಗಲೇಬೇಕಾಗಿದ್ದ, ಆಗದೇಹೋದ ಒಂದು ರಾಜಕೀಯ ಮೈತ್ರಿ: ಪ್ರೇಮಶೇಖರ ಅವರ ಜಗದಗಲ ಅಂಕಣ

    ಆಗಲೇಬೇಕಾಗಿದ್ದ, ಆಗದೇಹೋದ ಒಂದು ರಾಜಕೀಯ ಮೈತ್ರಿ: ಪ್ರೇಮಶೇಖರ ಅವರ ಜಗದಗಲ ಅಂಕಣದೇಶದಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಸಮ್ಮಿಶ್ರ ರಾಜಕಾರಣ ನಿರಂತರವಾಗಿ ಚಾಲ್ತಿಯಲ್ಲಿದೆ. ಅದಕ್ಕೂ ಹಿಂದೆ ಅಂತಹ ಪ್ರಯತ್ನಗಳು ಎರಡು ಬಾರಿ ನಡೆದು ವಿಫಲಗೊಂಡಿದ್ದುಂಟು. ಆ ಎರಡೂ ಸನ್ನಿವೇಶಗಳಲ್ಲಿ ಬಿಜೆಪಿ ತನ್ನ ನಿಲುವುಗಳಿಗೆ ಹೊಂದಿಕೆಯಾಗದ ಪಕ್ಷಗಳ ಜತೆಗೂಡಿದ ಅಸಹಜ ಬೆಳವಣಿಗೆಯನ್ನು ಕಾಣುತ್ತೇವೆ. 1974ರಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ, ಪ್ರಮುಖವಾಗಿ ಹಿಂದಿ ಪ್ರದೇಶಗಳಲ್ಲಿ ಭುಗಿಲೆದ್ದ ‘ಸಂಪೂರ್ಣ ಕ್ರಾಂತಿ’ಯಲ್ಲಿ ಪ್ರಮುಖ ವಿರೋಧಪಕ್ಷಗಳು ಒಟ್ಟುಗೂಡಿದ್ದು ಅವುಗಳಲ್ಲಿ ಸಮಾನವಾಗಿದ್ದ ಇಂದಿರಾ-ವಿರೋಧಿ ಮನೋಭಾವದಿಂದಾಗಷ್ಟೇ. ನಂತರ ಇಂದಿರಾ ಸರ್ಕಾರ ಹೇರಿದ ತುರ್ತಪರಿಸ್ಥಿತಿಯಲ್ಲಿ ಸಮಾನವಾಗಿ ನೊಂದ ಈ ಪಕ್ಷಗಳು ಒಟ್ಟುಗೂಡಿ ಜನತಾ ಪಕ್ಷವನ್ನು ಹುಟ್ಟುಹಾಕಿ 1977ರ ಚುನಾವಣೆಗಳಲ್ಲಿ ಜಯಗಳಿಸಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದ್ದೀಗ ಇತಿಹಾಸ. ಅಲ್ಲಿಂದ ಆರಂಭವಾದ ಸಮ್ಮಿಶ್ರ ರಾಜಕಾರಣವನ್ನು ಎರಡು ಭಾಗಗಳಲ್ಲಿ ಅವಲೋಕಿಸೋಣ.

    ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!

    ಆಗಲೇಬೇಕಾಗಿದ್ದ, ಆಗದೇಹೋದ ಒಂದು ರಾಜಕೀಯ ಮೈತ್ರಿ: ಪ್ರೇಮಶೇಖರ ಅವರ ಜಗದಗಲ ಅಂಕಣಹಾಗೆ ನೋಡಿದರೆ ಜನತಾ ಪಕ್ಷದಲ್ಲಿ ಜತೆಗೂಡಿದ ಕಾಂಗ್ರೆಸ್ (ಓ), ಸಮಾಜವಾದಿ ಪಕ್ಷ, ಭಾರತೀಯ ಲೋಕದಲ ಮತ್ತು ಭಾರತೀಯ ಜನಸಂಘಗಳಲ್ಲಿ ಸಮಾನ ಅಂಶಗಳಿದ್ದದ್ದು ಕಡಿಮೆ. ವಿಚಿತ್ರವೆಂದರೆ ಮೊದಲ ಮೂರು ಪಕ್ಷಗಳಿಗೆ ವಿದೇಶ ನೀತಿಯೇ ಇರಲಿಲ್ಲ ಮತ್ತು ಆಂತರಿಕ ನೀತಿಗಳ ವಿಷಯಕ್ಕೆ ಬಂದರೆ ಅವುಗಳಿಗೂ ಜನಸಂಘದ ನೀತಿಗಳಿಗೂ ತಾಳಮೇಳವೇ ಇರಲಿಲ್ಲ. ಕಾಂಗ್ರೆಸ್ (ಓ) ಮತ್ತು ಬಿಎಲ್​ಡಿಯಲ್ಲಿದ್ದುದು ಹಳೆಯ ಕಾಂಗ್ರೆಸ್ಸಿಗರೇ. ಅದರಲ್ಲೂ ಕಾಂಗ್ರೆಸ್ (ಓ) ಅಂದರೆ ಸಂಸ್ಥಾ ಕಾಂಗ್ರೆಸ್​ನ ಮೊರಾರ್ಜಿ ದೇಸಾಯಿ ಇಂದಿರಾರ ಹಾಗೂ ಅವರ ಸಹಯೋಗಿ ಕಾಂಗ್ರೆಸ್ಸಿಗರಿಗಿಂತಲೂ ಹೆಚ್ಚಿನ ಕಾಂಗ್ರೆಸ್ಸಿಗರಾಗಿದ್ದರು. ಈ ಬಗ್ಗೆ ಒಂದು ಸ್ವಾರಸ್ಯಕರ ಸಂಗತಿ ಹಿಂದಿನ ಇಪ್ಪತ್ತು ವರ್ಷಗಳಿಂದಲೂ ಅಲ್ಲಲ್ಲಿ ನಗೆಚಟಾಕಿಯಂತೆ ಹರಿದಾಡುತ್ತಲೇ ಇತ್ತು. 1957ರ ಲೋಕಸಭಾ ಚುನಾವಣೆಗಳಿಗಾಗಿ ಬಿಹಾರದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಜವಾಬ್ದಾರಿಯಿದ್ದದ್ದು ದೇಸಾಯಿಯವರ ಕೈಯಲ್ಲಿ. ಆಗ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಖಾದಿ ಧೋತಿಗಳನ್ನು ಬಿಚ್ಚಿಸಿ, ಅವರ ಒಳಚಡ್ಡಿಗಳೂ ಖಾದಿಯವೇ ಆಗಿವೆಯೇ ಎಂದು ಪರೀಕ್ಷಿಸಿದರಂತೆ.

    ಇದನ್ನೂ ಓದಿ: ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ

    ಕಾಂಗ್ರೆಸ್ (ಓ) ಮತ್ತು ಬಿಎಲ್​ಡಿಗಳ ನೇತಾರರು ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದ ವಯಸ್ಕ, ಆ ಕಾರಣದಿಂದಲೇ ಆತುರಗೆಟ್ಟ ರಾಜಕಾಣಿಗಳೇ ಆಗಿದ್ದರು. ಇನ್ನು ಸಮಾಜವಾದಿ ಪಕ್ಷದ ನೀತಿನಿಲುವುಗಳು ಗೊಂದಲದ, ವಿರೋಧಾಭಾಸದ ಮೂಟೆಯಾಗಿದ್ದವು. ಈ ಮೂರೂ ಪಕ್ಷಗಳಿಗಿಂತ ಬೇರೆಯಾಗಿದ್ದುದು ಜನಸಂಘ. ಈ ಭಿನ್ನತೆ ಸ್ಪಷ್ಟವಾಗಿ ಗೋಚರಿಸುವುದು ವಿದೇಶ ನೀತಿಯಲ್ಲಿ. ಮೊದಲೇ ಹೇಳಿದಂತೆ ಜನಸಂಘದ ಹೊರತಾಗಿನ ಮೂರು ಪಕ್ಷಗಳಿಗೆ ವಿದೇಶ ನೀತಿಯೇ ಇರಲಿಲ್ಲ ಮತ್ತು ಜನತಾ ಸರ್ಕಾರದಲ್ಲಿ ಪ್ರಧಾನಮಂತ್ರಿಯಾದ ಮೊರಾರ್ಜಿ ದೇಸಾಯಿ ವೈಯಕ್ತಿಕವಾಗಿ ಪಾಕಿಸ್ತಾನದ ಬಗ್ಗೆ ತಳೆದ ನಿರ್ಧಾರವೊಂದು ದೇಶಹಿತಕ್ಕೆ ಇಂದಿಗೂ ಮಾರಕವೆನಿಸುತ್ತಿದೆ.

    ಇದನ್ನೂ ಓದಿ: 20 ವಿದೇಶಿ ತಬ್ಲಿಘಿಗಳ ಬಿಡುಗಡೆ: ಸಾಕ್ಷ್ಯಸಂಗ್ರಹಿಸುವಲ್ಲಿ ಎಡವಿದ ತನಿಖಾ ಸಂಸ್ಥೆಗಳು

    ಭಾರತಕ್ಕೆ ಅಣ್ವಸ್ತ್ರಗಳನ್ನು ಗಳಿಸಿಕೊಡುವುದರ ಜತೆಗೆ ಪಾಕಿಸ್ತಾನ ಅಣ್ವಸ್ತ್ರರಾಷ್ಟ್ರವಾಗದಂತೆ ತಡೆಯಬೇಕೆನ್ನುವುದು ಇಂದಿರಾರ ನಿಲುವಾಗಿತ್ತು. ಅದರಂತೆಯೇ 1974ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಇಂದಿರಾ ಸರ್ಕಾರ, ‘ನಮ್ಮದು ಶಾಂತಿಯುತ ಅಣ್ವಸ್ತ್ರಪರೀಕ್ಷೆ; ಇದರ ಮೂಲಕ ನಮ್ಮ ಅಣ್ವಸ್ತ್ರ ಸಾಮರ್ಥ್ಯನ್ನು ಜಗತ್ತಿನೆದುರು ಪ್ರದರ್ಶಿಸಿದ್ದೇವೆ, ಆದರೆ ಅಣ್ವಸಗಳನ್ನೆಂದೂ ನಾವು ಉತ್ಪಾದಿಸುವುದಿಲ್ಲ’ ಎಂದು ಘೊಷಿಸಿತು. ಆದರೆ ಇಂದಿರಾ ಅಣ್ವಸ್ತ್ರಗಳನ್ನು ಉತ್ಪಾದಿಸಿ ಸಿದ್ಧವಾಗಿರಿಸುವ ಕಾರ್ಯವನ್ನು ರಹಸ್ಯವಾಗಿ ಮಾಡಿದರು. ಅವರ ಈ ದ್ವಿಮುಖ ನೀತಿಗೆ ಕಾರಣ ಹಿಂದಿನ ವರ್ಷವಷ್ಟೇ ಜಾರಿಗೆ ಬಂದಿದ್ದ ‘ಅಣುಪ್ರಸರಣ ನಿಷೇಧ ಒಪ್ಪಂದ’ (ಎನ್​ಪಿಟಿ). ಅಲ್ಲಿಯವರೆಗೆ ಅಣ್ವಸ್ತ್ರಗಳನ್ನು ಗಳಿಸಿಕೊಂಡಿದ್ದ ಅಮೆರಿಕ, ಸೋವಿಯೆತ್ ಯೂನಿಯನ್, ಬ್ರಿಟನ್, ಫ್ರಾನ್ಸ್ ಹಾಗೂ ಚೀನಾಗಳನ್ನು ಮಾತ್ರ ಅಣ್ವಸ್ತ್ರ ರಾಷ್ಟ್ರಗಳು ಎಂದು ಅಧಿಕೃತವಾಗಿ ಮಾನ್ಯ ಮಾಡಿತ್ತು ಮತ್ತು ಅದರ ಪ್ರಕಾರ ಮತ್ತಾವ ರಾಷ್ಟ್ರಕ್ಕೂ ಆ ಸ್ಥಾನ ದೊರೆಯುವಂತಿರಲಿಲ್ಲ. ಹೀಗಾಗಿ ಎನ್​ಪಿಟಿಗೆ ಸಹಿ ಹಾಕದಿದ್ದರೂ ಅದರ ನಿಯಮಗಳನ್ನು ನಾವು ಉಲ್ಲಂಘಿಸುತ್ತಿಲ್ಲ ಎಂದು ಜಗತ್ತನ್ನು ನಂಬಿಸುತ್ತಲೇ, ರಹಸ್ಯವಾಗಿ ಅಣ್ವಸ್ತ್ರಗಳನ್ನು ಸಿದ್ಧವಾಗಿರಿಸುವ ಕ್ರಮಕ್ಕೆ ಮುಂದಾದ ಇಂದಿರಾ, ಪಾಕಿಸ್ತಾನ ಅಣ್ವಸ್ತ್ರ ಗಳಿಸಿಕೊಳ್ಳದಂತೆ ತಡೆಯುವ ಕ್ರಮದ ಬಗ್ಗೆಯೂ ಚಿಂತಿಸಿದ್ದರು. ಆ ಶತ್ರುದೇಶ ಅಣ್ವಸ್ತ್ರ ಕಾರ್ಯಕ್ರಮ ರೂಪಿಸಿದೆಯೆಂಬ ಮಾಹಿತಿ ದೊರೆತೊಡನೇ ಪೂರ್ಣ ವಿವರಗಳನ್ನು ಸಂಗ್ರಹಿಸುವಂತೆ ನಮ್ಮ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ)ಗೆ ಆದೇಶಿಸಿದರು. ಪಾಕಿಸ್ತಾನದ ರಿಯಾಕ್ಟರ್​ಗಳು ಇರುವ ಸ್ಥಳ ಮತ್ತು ರಿಯಾಕ್ಟರ್​ಗಳಲ್ಲಿನ ಕೆಲಸದ ಪ್ರಗತಿ ಗಮನಿಸಿ, ಅಣುವಿಕಿರಣ ಪ್ರಸರಣದ ಅಪಾಯವಿಲ್ಲದಿದ್ದಲ್ಲಿ ಅವುಗಳ ಮೇಲೆ ದಾಳಿಯೆಸಗುವ ಇಂಗಿತವನ್ನು ಇಂದಿರಾ ಹೊಂದಿದ್ದರು. ಆದರೆ ‘ರಾ’ ತನ್ನ ಕೆಲಸ ಪೂರೈಸಿ, ಕಹೂತಾದಲ್ಲಿನ ನ್ಯೂಕ್ಲಿಯರ್ ರಿಯಾಕ್ಟರ್ ಮೇಲೆ ದಾಳಿಯೆಸಗುವ ಯೋಜನೆಯನ್ನೂ ರೂಪಿಸಿ, ವರದಿ ಒಪ್ಪಿಸುವ ಹೊತ್ತಿಗೆ ಇಂದಿರಾ ಚುನಾವಣೆಯಲ್ಲಿ ಸೋತು ಪ್ರಧಾನಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಆ ಸ್ಥಾನಕ್ಕೆ ಬಂದಿದ್ದ ಮೊರಾರ್ಜಿ ದೇಸಾಯಿ ‘ರಾ’ದ ಯೋಜನೆಯನ್ನು ತಿರಸ್ಕರಿಸಿದ್ದಲ್ಲದೇ, ಪಾಕ್ ಅಧ್ಯಕ್ಷ ಜಿಯಾ-ಉಲ್-ಹಖ್​ರನ್ನು ಸಂರ್ಪಸಿ, ‘ರಾ’ ಯೋಜನೆಯ ಬಗ್ಗೆ ಹೇಳಿ, ತಮ್ಮ ರಿಯಾಕ್ಟರ್​ಗಳ ಸುರಕ್ಷೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು! ಮುಂದೆ ಘಟಿಸಿದ್ದು ದುರಂತ ಇತಿಹಾಸ. ಪಾಕಿಸ್ತಾನ ತನ್ನ ರಿಯಾಕ್ಟರ್​ಗಳ ಸುರಕ್ಷೆಗೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡಿತು, ಮೊರಾರ್ಜಿಯವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ‘ನಿಶಾನ್-ಎ-ಪಾಕಿಸ್ತಾನ್’ ಅನ್ನು ನೀಡಿತು, 1987ರಲ್ಲಿ ಅಣ್ವಸ್ತ್ರಗಳನ್ನು ಗಳಿಸಿಕೊಂಡಿತು, ಅವುಗಳನ್ನು ನಮ್ಮ ಮೇಲೆ ಪ್ರಯೋಗಿಸಲು ಜುಲೈ 1989ರಲ್ಲಿ ಮುಂದಾಯಿತು. ಆಗ ನಮ್ಮ ನೆರವಿಗೆ ಬಂದದ್ದು ಇಂದಿರಾ ರಹಸ್ಯವಾಗಿ ಸಿದ್ಧವಾಗಿರಿಸಿದ್ದ ಅಣ್ವಸ್ತ್ರಗಳು. ದೊಡ್ಡ ಪ್ರಮಾಣದಲ್ಲಿ ಅಣ್ವಸ್ತ್ರ ದಾಳಿ ನಡೆಸುವುದಾಗಿ ವಿದೇಶ ಮಂತ್ರಿ ಇಂದರ್ ಕುಮಾರ್ ಗುಜ್ರಾಲ್ ಬೆದರಿಸಿದ ಮೇಲೇ ಪಾಕಿಸ್ತಾನ ಹಿಂತೆಗೆದದ್ದು.

    ಇದನ್ನೂ ಓದಿ: ‘ಮಹಾರಾಷ್ಟ್ರದಲ್ಲಿ ಹೆಚ್ಚಾಗ್ತಿದೆ ‘ಲವ್​ ಜಿಹಾದ್​’ ಕೇಸ್​ಗಳು’!

    ಹೀಗೆ, ದೇಸಾಯಿ ಪ್ರದರ್ಶಿಸಿದ ನಿಲುವು ಹಲವು ಅರ್ಥಗಳಲ್ಲಿ ಪಾಕಿಸ್ತಾನದ ಬಗ್ಗೆ ಜವಾಹರ್​ಲಾಲ್ ನೆಹರೂ ಪ್ರದರ್ಶಿಸಿದ ದೇಶಹಿತಘಾತಕ ನಿಲುವಿನಂತೇ ಇತ್ತು ಮತ್ತು ಜನಸಂಘದ ನಿಲುವಿಗೆ ಸಂಪೂರ್ಣ ವಿರುದ್ಧವಾಗಿತ್ತು. ಇಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ವಿಚಾರವೆಂದರೆ ಇಂದಿರಾ ಗಾಂಧಿ ಮತ್ತು ಜನಸಂಘದ ನೀತಿನಿಲುವುಗಳಲ್ಲಿ ಇದ್ದ ಅಗಾಧ ಸಾಮ್ಯತೆ! ಜನಸಂಘದ ಮಾತೃಸಂಸ್ಥೆಯಾದ ಆರ್​ಎಸ್​ಎಸ್ ಪಾಕಿಸ್ತಾನದ ಹುಟ್ಟನ್ನೇ ವಿರೋಧಿಸಿತ್ತು. ಪಾಕಿಸ್ತಾನ ಸೃಷ್ಟಿಯಾಗಿಯೇ ಹೋದಾಗ ಆ ದೇಶದ ಕೈಕಾಲುಗಳನ್ನು ಕಟ್ಟಿಹಾಕಿ ಅದೆಂದೂ ನಮ್ಮ ವಿರುದ್ಧ ಕಂಟಕವಾಗದಂತೆ ಬೆಳೆಯಗೊಡದ ನೀತಿ ಭಾರತ ಸರ್ಕಾರದ್ದಾಗಬೇಕೆನ್ನುವುದು ಆರ್​ಎಸ್​ಎಸ್ ಮತ್ತು ಜನಸಂಘದ ಘೊಷಿತ ನಿಲುವೇ ಆಯಿತು. ಈ ನಿಲುವಿಗೆ, ನೆಹರೂ ನಿರ್ವಿುಸಿದ್ದ ಇತಿಮಿತಿಗಳಡಿಯಲ್ಲೇ, ಪೂರಕವಾಗುವಂತಹ ನಿಲುವನ್ನು ಅನುಸರಿಸಿದ್ದು ಇಂದಿರಾ. ಹಾಗೆ ನೋಡಿದರೆ ಪಾಕಿಸ್ತಾನ ಹಾಗೂ ಚೀನಾಗಳ ಕುರಿತಾಗಿ ಆರ್​ಎಸ್​ಎಸ್/ಜನಸಂಘ/ಬಿಜೆಪಿಯ ನೀತಿಗಳಿಗೆ ಹೊಂದಿಕೆಯಾಗುವಂತಹ ನಿಲುವನ್ನು ಅನುಸರಿಸಿದ ಏಕೈಕ ಕಾಂಗ್ರೆಸ್ ಪ್ರಧಾನಿ ಇಂದಿರಾ. ತೆರೆಯ ಹಿಂದೆ ರಾಜತಾಂತ್ರಿಕ ಹಾಗೂ ಗುಪ್ತಚರ ಹುನ್ನಾರಗಳನ್ನು ರೂಪಿಸಿ ಪಾಕಿಸ್ತಾನವನ್ನು ಅಸಹಾಯಕವಾಗಿಸಿ; ಸೇನೆಯನ್ನು ಪೂರ್ಣ ಸನ್ನದ್ಧವಾಗಿಸಿ, ಸಮಯ ನೋಡಿ ತಾನೇ ಯುದ್ಧ ಆರಂಭಿಸಿ, ಅದನ್ನು ಪಾಕಿಸ್ತಾನದ ತಲೆಗೆ ಕಟ್ಟಿ, ಅಂತಿಮವಾಗಿ ಆ ದೇಶವನ್ನು ತುಂಡರಿಸಿದರು ಇಂದಿರಾ. ಇದನ್ನೆಲ್ಲಾ ಅವರು ಸಾಧಿಸಿದ್ದು ಬಹುತೇಕ ಆಂತರಿಕ ಹಾಗೂ ಬಾಹ್ಯ ವಿರೋಧಗಳ ನಡುವೆ.

    ಇದನ್ನೂ ಓದಿ: ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ತನ್ನ ಯೋಜನೆಗಳನ್ನೇ ಇಂದಿರಾ ಅನುಸರಿಸುತ್ತಿದ್ದಾರೆಂದು ಜನಸಂಘವೂ, ತನಗೆ ಸಹಕಾರಿಯಾಗುವ ನಿಲುವು ಹೊಂದಿರುವ ಏಕೈಕ ಪ್ರಮುಖ ವಿರೋಧಪಕ್ಷ ಜನಸಂಘ ಎಂದು ಇಂದಿರಾರೂ ಗುರುತಿಸಿದ್ದರೆ?! ಆಗ ಈ ದೇಶದ ಇತಿಹಾಸವೇ ಬದಲಾಗಿಹೋಗಿರುತ್ತಿತ್ತು! ತಾನು ತನ್ನ ತಂದೆಯಂತಲ್ಲ ಎಂದು ಇಂದಿರಾ 1967ರಲ್ಲೇ ಜಗಜ್ಜಾಹೀರು ಮಾಡಿದ್ದರು. ತಾನೇ ಕಾಲುಕೆರೆದು ಚೀನಾವನ್ನು ಯುದ್ಧಕ್ಕೆ ಆಹ್ವಾನಿಸಿ, ತನ್ನ ನೀತಿಗಳಿಂದಾಗಿಯೇ ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇಲ್ಲದಿದ್ದ ನಮ್ಮ ಸೇನೆಯನ್ನು ಬಲಿಪಶುವಾಗಿಸಿದ ನೆಹರೂಗೆ ವಿರುದ್ಧವಾಗಿ ಇಂದಿರಾ ಚೀನಾವನ್ನು ಎದುರಿಸಲು ಸೇನೆಯನ್ನು ಸಜ್ಜಾಗಿರಿಸಿದರು. ಪರಿಣಾಮವಾಗಿ 1967ರ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಸಿಕ್ಕಿಂ ಗಡಿಯಲ್ಲಿ ತಂಟೆ ತೆಗೆದ ಚೀನೀ ಸೇನೆಯನ್ನು ಭಾರತೀಯ ಸೇನೆ ಬಗ್ಗುಬಡಿದದ್ದಲ್ಲದೇ ಅದನ್ನು ಚೀನೀ ಪ್ರದೇಶಗೊಳಗೆ ಮೂರು ಕಿಲೋಮೀಟರ್​ಗಳಷ್ಟು ದೂರಕ್ಕೆ ಅಟ್ಟಿಸಿಕೊಂಡು ಹೋಯಿತು, ಆಗ ಕಳೆದುಕೊಂಡ ಪ್ರದೇಶವನ್ನು ಮರಳಿ ಪಡೆಯುವ ಯತ್ನವನ್ನು ಚೀನೀಯರು ಇದುವರೆಗೂ ಮಾಡಿಲ್ಲ. ಇದು ಇಲ್ಲಿಯವರೆಗೆ ಭಾರತೀಯ ಸೇನೆ ಚೀನೀಯರ ವಿರುದ್ಧ ರಣಾಂಗಣದಲ್ಲಿ ಸಾಧಿಸಿದ ಅತಿ ದೊಡ್ಡ ವಿಜಯ. ಇದನ್ನು ಜನಸಂಘ ಗುರುತಿಸಿದ್ದರೆ?!

    ಇದನ್ನೂ ಓದಿ: 1.25 ಲಕ್ಷ ಕೋಟಿ ರೂಪಾಯಿ – ಸೈಬರ್ ಕ್ರೈಂನಿಂದಾಗಿರುವ ನಷ್ಟ: ಇನ್ನೂ ಹೆಚ್ಚಾಗಲಿದೆಯಂತೆ ಅಪರಾಧ!

    ನವೆಂಬರ್ 1969ರಲ್ಲಿ ಕಾಂಗ್ರೆಸ್ ಹೋಳಾದದ್ದು ಇಂದಿರಾರ ಶಕ್ತಿಯನ್ನು ಗಮನಾರ್ಹವಾಗಿ ಕುಗ್ಗಿಸಿಬಿಟ್ಟಿತು. ಆಗ ಸಮರ್ಥನೆ ನೀಡುವ ನೆಪದಲ್ಲಿ ಹತ್ತಿರಾದ ಎಡಪಕ್ಷಗಳು ಇಂದಿರಾರನ್ನು ತಮ್ಮ ಹಿಡಿತದಲ್ಲಿ ಸಿಕ್ಕಿಸಿಕೊಂಡುಬಿಟ್ಟವು. ಮಾರ್ಚ್ 1971ರ ಲೋಕಸಭಾ ಚುನಾವಣೆಗಳಲ್ಲಿ ಇಂದಿರಾ ತಮ್ಮ ಪಕ್ಷಕ್ಕೆ 352 ಸ್ಥಾನಗಳನ್ನು ದೊರಕಿಸಿಕೊಡುವುದರ ಮೂಲಕ ಅತಿ ದೊಡ್ಡ ಚುನಾವಣಾ ವಿಜಯ ಸಾಧಿಸಿ ಲೋಕಸಭೆಯಲ್ಲಿ ಸ್ವತಂತ್ರವಾಗಿ ನಿಲ್ಲುವ ಶಕ್ತಿಯನ್ನು ಗಳಿಸಿಕೊಂಡದ್ದೇನೋ ನಿಜ. ಆದರೆ ಕಾಂಗ್ರೆಸ್ ಹೋಳು ಮತ್ತು ಚುನಾವಣಾ ಜಯಭೇರಿಯ ನಡುವಿನ ಹದಿನಾರು ತಿಂಗಳುಗಳಲ್ಲಿ ಆ ನಾಯಕಿ ಹೊರಗಿನ ಸೋವಿಯೆತ್ ಯೂನಿಯನ್, ಒಳಗಿನ ಸಿಪಿಐ ಮತ್ತು ಅದು ಮುಂದೆ ನಿಲ್ಲಿಸಿದ ಎಡಪಂಥೀಯ ವಿಚಾರವಾದಿಗಳು, ಸಾಹಿತ್ಯಕ-ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ಇತಿಹಾಸಕಾರರ ಹಿಡಿತಕ್ಕೆ ಪೂರ್ಣವಾಗಿ ಸಿಲುಕಿಹೋಗಿದ್ದರು. ಒಮ್ಮೆ ತಮ್ಮ ಇಕ್ಕಳಕ್ಕೆ ಸಿಲುಕಿದ ಯಾರನ್ನೂ, ಯಾವುದನ್ನೂ ಕಮ್ಯೂನಿಸ್ಟರು ಸುಲಭವಾಗಿ ಬಿಟ್ಟುಕೊಡುವವರಲ್ಲ. ಹೀಗಾಗಿ ಭಾರತ ಸರ್ಕಾರದ ಜತೆ ದೇಶದ ಬದುಕಿನ ಎಲ್ಲ ಕ್ಷೇತ್ರಗಳಿರಲಿ, ಪ್ರಧಾನಮಂತ್ರಿಯ ಅತಿ ಸನಿಹದಲ್ಲೇ ಕೆಜಿಬಿ ಗುಪ್ತಚರರು ಆವರಿಸಿಕೊಂಡಾಗಿತ್ತು. ಪರಿಣಾಮವಾಗಿ ಇಂದಿರಾ ಆಂತರಿಕ ಹಾಗೂ ವಿದೇಶ ನೀತಿಗಳನ್ನು ರೂಪಿಸುವಲ್ಲಿ ಒಳಹೊರಗಿನ ಎಡಪಂಥೀಯ ಶಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯವ ಸಂಕಷ್ಟಕ್ಕೀಡಾದರು. ಒಂದುವೇಳೆ 1969ರಲ್ಲಿ ಕಾಂಗ್ರೆಸ್ ಹೋಳಾಗುತ್ತಿದ್ದಂತೇ ಇಂದಿರಾ ಮತ್ತು ಜನಸಂಘದ ನಡುವೆ ಹೊಂದಾಣಿಕೆ ಏರ್ಪಟ್ಟಿದ್ದರೆ?!

    ಇದನ್ನೂ ಓದಿ: ಅಂತಿಮ ಹಂತದಲ್ಲಿದೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಎನ್​ಸಿಎಸ್ಎಸ್​

    ದೇಶದ ದುರದೃಷ್ಟ, ಇಂದಿರಾ ಹಾಗೂ ಜನಸಂಘದ ನಾಯಕರು ಇತಿಹಾಸದ ಸಂಕೋಲೆಯೊಳಗೆ ಬಂಧಿಯಾಗಿಹೋಗಿದ್ದರು. ಇಂದಿರಾ ಕಾಂಗ್ರೆಸ್​ನವರು, ಅದಕ್ಕೂ ಮುಖ್ಯವಾಗಿ ನೆಹರೂ ಮಗಳು ಎನ್ನುವುದು ಅವರ ಬಗ್ಗೆ ಆರ್​ಎಸ್​ಎಸ್ ಹಾಗೂ ಜನಸಂಘದ ನಿಲುವನ್ನು ನಿರ್ಧರಿಸಿದರೆ, ಕಾಂಗ್ರೆಸ್​ನ, ಮುಖ್ಯವಾಗಿ ನೆಹರೂ ಮನೆತನದ ಬದ್ಧವಿರೋಧಿಗಳ ಗುಂಪು ಜನಸಂಘ ಎಂಬ ನಿಲುವು ಇಂದಿರಾರದಾಗಿತ್ತು. ಇತಿಹಾಸವನ್ನು ಪಕ್ಕಕ್ಕಿರಿಸಿ ರಾಷ್ಟ್ರದ ವರ್ತಮಾನದ ಅಗತ್ಯ ಹಾಗೂ ಭವಿಷ್ಯದ ಒಳಿತನ್ನು ಇಂದಿರಾ ಹಾಗೂ ಜನಸಂಘ ಪರಿಗಣನೆಗೆ ತೆಗೆದುಕೊಂಡ್ದಿದ್ದರೆ?! ಈ ಸಂದರ್ಭದಲ್ಲಿ ನನ್ನ ಮಾಂತ್ರಿಕ ವಾಸ್ತವ ನೀಳ್ಗಥೆ ‘ಕನ್ನಡಿ’ಯ ಪಾತ್ರವೊಂದು ಹೇಳುವ ಈ ಮಾತುಗಳು ಉಲ್ಲೇಖನೀಯ-

    ‘ಚರಿತ್ರೆಯ ಹಿಡಿತಕ್ಕೆ ಸಿಕ್ಕುಬೀಳುವವರೆಲ್ಲರೂ ಹೀಗೆ ಒಂದಲ್ಲಾ ಒಂದು ದಿನ ತಮ್ಮ ಬದುಕನ್ನೇ ಶೋಧಿಸಿಕೊಳ್ಳಬೇಕಾದ, ಪಶ್ಚಾತ್ತಾಪದ ಅಗ್ನಿಯಲ್ಲಿ ಬೇಯಬೇಕಾದ ಪರಿಸ್ಥಿತಿಗೆ ಸಿಕ್ಕಿಕೊಳ್ಳುತ್ತಾರೆ. ಯಾಕೆಂದರೆ ಚರಿತ್ರೆ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ, ಮಾನವಜನಾಂಗ ವಿವಿಧ ಕಾಲಘಟ್ಟಗಳಲ್ಲಿ ಹಿಡಿದ ಮಾರ್ಗಗಳನ್ನಷ್ಟೇ ನಮ್ಮ ಮುಂದಿಟ್ಟು ನಮ್ಮ ಆಯ್ಕೆಯನ್ನು ಸೀಮಿತಗೊಳಿಸಿಬಿಡುತ್ತದೆ. ಅದು ಒಡ್ಡುವ ಭಾವುಕ ಮಾಯಾಜಾಲದಲ್ಲಿ ಸಿಲುಕುವ ನಾವು ಅದು ತೋರುವ ಯಾವುದಾದರೊಂದು ಮಾರ್ಗವನ್ನು ಅನುಸರಿಸುವ ಸಂಮ್ಮೋಹಿನಿಗೆ ಸಿಕ್ಕಿಬಿದ್ದು ಅಷ್ಟರ ಮಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ಹೀಗೆ ನಮ್ಮ ಮನಸ್ಸುಗಳನ್ನು ತನ್ನ ಗುಲಾಮರನ್ನಾಗಿಸಿಕೊಂಡು ನಮ್ಮ ಸೃಜನಶೀಲತೆಯನ್ನೇ ನುಂಗಿ ನೊಣೆಯುವ ಅದು ನಮ್ಮನ್ನು ಹೊಸದೊಂದು ದಾರಿಯನ್ನು ಹುಡುಕಲಾರದಷ್ಟು ನಿರ್ವೀಯರನ್ನಾಗಿಸಿಬಿಡುತ್ತದೆ. ಇದಕ್ಕಿರುವ ಪರಿಹಾರ ಒಂದೇ. ಚರಿತ್ರೆಯನ್ನು ಬರೀ ಪುಸ್ತಕಗಳಿಗೆ ಸೀಮಿತಗೊಳಿಸಿ ನಮ್ಮ ಬದುಕನ್ನು ಆಧುನಿಕತೆಗೆ, ಅದು ಪ್ರತಿಪಾದಿಸುವ ಎಲ್ಲಾ ಮಾನವ ಕಾಳಜಿಗಳಿಗೆ ಅಭಿಮುಖವಾಗಿಸಿಕೊಳ್ಳುವುದು. ‘ನಿನ್ನಲ್ಲಿಲ್ಲದ ಹೊಸಹಾದಿಯೊಂದನ್ನು ನಾವು ಶೋಧಿಸಿದ್ದೇವೆ, ನೋಡು’ ಎಂದು ಚರಿತ್ರೆಗೆ ಹೇಳುವುದು.’

    ಇದನ್ನೂ ಓದಿ: ಪಟಾಕಿ ಚೀಲದ ಮೇಲೇರಿದ ಜೀಪ್ ಬಾನೆತ್ತರ ಚಿಮ್ಮಿದ್ದರಿಂದ ಆರು ಜನಕ್ಕೆ ಗಾಯ

    ಇಂದಿರಾ ಮತ್ತು ಜನಸಂಘ ಇತಿಹಾಸ ವಿಧಿಸಿದ್ದ ಸಂಕೋಲೆಗಳಿಂದ ಹೊರಬರುವಷ್ಟು ವಿವೇಕ ಪ್ರದರ್ಶಿಸಿದ್ದರೆ ದೇಶದಲ್ಲಿ ಎಡಪಂಥೀಯರ ಹಾವಳಿ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ, ಸೋನಿಯಾ ಗಾಂಧಿ ಹತ್ತುವರ್ಷ ದೇಶದ ಅಧಿನಾಯಕಿಯಾಗುತ್ತಿರಲಿಲ್ಲ, ಪಾಕಿಸ್ತಾನ ಭೂಪಟದಲ್ಲಿ ಇರುತ್ತಿರಲಿಲ್ಲ, ಇದ್ದರೂ ತನ್ನ ಮಿತಿಯಲ್ಲಿ ತಾನಿರುತ್ತಿತ್ತು. ಆದರೆ ದೇಶಕ್ಕೆ ಬೇರೆಯೇ ಹಾದಿಯನ್ನು ಇತಿಹಾಸ ನಿರ್ಧರಿಸಿತ್ತು. ಇಂದಿರಾರ ಜತೆಗೂಡಿದ ಎಡಪಂಥೀಯರ ಹಾವಳಿ ದಿನೇದಿನೇ ಏರಿದಂತೆ ಇಂದಿರಾ ಮತ್ತು ಜನಸಂಘ ದೂರದೂರಾಗುತ್ತಾ ಸಾಗಿದವು. ಅಂತಿಮವಾಗಿ ಅದು ಎಲ್ಲಿಗೆ ಮುಟ್ಟಿತೆಂದರೆ ಜನಸಂಘದ ಸಣ್ಣದೊಡ್ಡ ನೇತಾರರನ್ನೆಲ್ಲಾ ಇಂದಿರಾ ತುರ್ತಪರಿಸ್ಥಿತಿಯಡಿ ಹಿಂಸಿಸಿದರು ಮತ್ತು ಜನಸಂಘ ತನ್ನದೇ ವಿದೇಶನೀತಿಯನ್ನು ಜಾರಿಗೆ ತಂದಿದ್ದ ಇಂದಿರಾರನ್ನು ತಿರಸ್ಕರಿಸಿ, ಪಾಕಿಸ್ತಾನಕ್ಕೆ ಸಹಕಾರಿಯಾಗಿ ನಡೆದುಕೊಂಡ ಮೊರಾರ್ಜಿ ದೇಸಾಯಿಯವರ ಪ್ರಧಾನಮಂತ್ರಿತ್ವವನ್ನು ಒಪ್ಪಿಕೊಂಡಿತು! ಈ ವೈರುಧ್ಯಪೂರ್ಣ ನಡೆ ವೈಫಲ್ಯದಲ್ಲಿ ಕೊನೆಯಾಗುವುದು ನಿಶ್ಚಿತವೇ ಆಗಿತ್ತು ಮತ್ತು ಎರಡೂಕಾಲು ವರ್ಷಗಳಲ್ಲಿ ಅದು ಆಗಿಯೇಹೋಯಿತು.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts