More

    ಮನೆಗೆ ಮಾರಿ, ಪರರಿಗೆ ಉಪಕಾರಿ ಎನ್​ಜಿಓಗಳು…

    ಮನೆಗೆ ಮಾರಿ, ಪರರಿಗೆ ಉಪಕಾರಿ ಎನ್​ಜಿಓಗಳು...‘ಲಿಬರಲ್’ (ಉದಾರವಾದಿ) ‘ಪ್ರೊಗ್ರೆಸ್ಸಿವ್’ (ಪ್ರಗತಿಪರ) ಎಂದು ಹಣೆಪಟ್ಟಿ ಹಚ್ಚಿಕೊಂಡು, ಸುಳ್ಳು ಬರಹ/ಮಾತುಗಳಿಗಾಗಿ ಸೋವಿಯತ್ ಗುಪ್ತಚರ ಸಂಸ್ಥೆ ‘ಕೊಮಿತೆತ್ ಗೊಸುದರ್ಸ್ತ್​ವೆನ್ನೋನಿ ಬೆಜೋಪಾಸ್ನೋಸ್ತಿ’ ಅಂದರೆ ‘ಕೆಜಿಬಿ’ಯಿಂದ ಹಣ ಪಡೆಯುತ್ತಿದ್ದ ಸಹಸ್ರಾರು ವಿಚಾರವಾದಿಗಳು, ಪತ್ರಕರ್ತರು, ಪ್ರಾಧ್ಯಾಪಕರು ಹಾಗೂ ರಾಜಕಾರಣಿಗಳು ಪೂರ್ವ ಪಶ್ಚಿಮಗಳಲ್ಲಿ ನಡೆಸುತ್ತಿದ್ದುದು ಬೇರೆಬೇರೆಯೇ ಕೃತ್ಯಗಳು. ಅಮೆರಿಕ, ಕೆನಡಾ ಮತ್ತು ಪಶ್ಚಿಮ ಯುರೋಪಿನಲ್ಲಿ ಅವರ ಪ್ರಮುಖ ಕೆಲಸ ಸೋವಿಯತ್ ಯೂನಿಯನ್ ಆರ್ಥಿಕವಾಗಿ ಸದೃಢ, ಜನ ಸಕಲಸುಖಗಳನ್ನೂ ಅನುಭವಿಸುತ್ತಿದ್ದಾರೆ, ಅಂತಾರಾಷ್ಟ್ರೀಯ ಶಾಂತಿಗಾಗಿ ಅಮೆರಿಕಗಿಂತಲೂ ಸೋವಿಯತ್ ಯೂನಿಯನ್ ಹೆಚ್ಚು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆಯೆಂಬ ಮಹಾಸುಳ್ಳುಗಳನ್ನು ಪ್ರಚಾರ ಮಾಡುವುದು. ಇವರ ಕುತ್ಸಿತ ಪ್ರಚಾರಕ್ಕೆ ತಾವು ಬಲಿಯಾಗಬಾರದೆಂದೇ ಪಶ್ಚಿಮದ ಬೃಹತ್ ಕೈಗಾರಿಕಾ ಹಾಗೂ ವ್ಯವಹಾರ ಸಂಸ್ಥೆಗಳೂ ಇವರಿಗೆ ದೇಣಿಗೆಯ ರೂಪದಲ್ಲಿ ಹೇರಳ ಹಣ ನೀಡಿ ಬಾಯಿ ಮುಚ್ಚಿಸುತ್ತಿದ್ದವು. ಪೂರ್ವದ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇವರ ಕೆಲಸ ಮಾಸ್ಕೋಪರ ಪ್ರಚಾರ ಮಾಡುವುದಾದರೂ, ಕಮ್ಯೂನಿಸಂ ಅನ್ನು ಜನರಿಗೆ ಹತ್ತಿರವಾಗಿಸುವುದು ಮುಖ್ಯ ಜವಾಬ್ದಾರಿಯಾಗಿತ್ತ್ತು. ಶೋಷಣೆ, ವರ್ಗ/ಜಾತಿ ತಾರತಮ್ಯಗಳ ಹೆಸರಿನಲ್ಲಿ ಒಂದು ವರ್ಗವನ್ನು ಇನ್ನೊಂದರ ವಿರುದ್ಧ ಸದಾ ಎತ್ತಿಕಟ್ಟುತ್ತ ಸಮಾಜಗಳಲ್ಲಿನ ಬಿರುಕುಗಳನ್ನು ಮತ್ತಷ್ಟು ಅಗಲಗೊಳಿಸುತ್ತ ರಾಜಕಾರಣಿಗಳು ಮತಗಳನ್ನು ಗಳಿಸಲು ಹವಣಿಸಿದರೆ, ವಿಚಾರವಾದಿ/ಬುದ್ಧಿಜೀವಿಗಳದು ಮತ್ತೊಂದು ವರಸೆ. ತಂತಮ್ಮ ಸಮಾಜಗಳಲ್ಲಿನ ಘರ್ಷಣೆ, ಅಶಾಂತಿ, ಸಮಾಜೋ-ಧಾರ್ವಿುಕ ಪಲ್ಲಟಗಳನ್ನು ಮಾರ್ಕ್ಸಿಸ್ಟ್ ವಿಚಾರಧಾರೆಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುತ್ತ, ಸಿದ್ಧಾಂತಗಳನ್ನು ಹೊಸೆಯುತ್ತ ಇವರು ಕೆಜಿಬಿಯಿಂದ ಹೇರಳ ಹಣವನ್ನೂ, ಎಡಪಂಥೀಯ ಒಲವುಳ್ಳ ಸರ್ಕಾರಗಳಿಂದ ಪ್ರಶಸ್ತಿಪುರಸ್ಕಾರಗಳನ್ನೂ, ಸ್ಥಾನಮಾನಗಳನ್ನೂ ಗಳಿಸಿಕೊಂಡು Elite ವರ್ಗವಾಗಿ ಮೆರೆಯುತ್ತಿದ್ದರು. ಆಸಕ್ತಿಕರ ವಿಷಯವೆಂದರೆ ಈಎಡಜನರು ಕಮ್ಯೂನಿಸ್ಟ್ ಚೀನಾದಲ್ಲಿ ಬಾಲ ಬಿಚ್ಚುವಂತೇ ಇರಲಿಲ್ಲ. ಅದಕ್ಕೆ ಎರಡು ಕಾರಣಗಳಿದ್ದವು. ಡೆಂಗ್ ಷಿಯಾವೋಪಿಂಗ್ ಸರ್ಕಾರ 1978ರ ನಂತರ ಪಶ್ಚಿಮದ ಬಂಡವಾಳಶಾಹಿ ಗಳನ್ನು ಚೀನಾಗೆ ಆಹ್ವಾನಿಸತೊಡಗಿ, ಕಾರ್ಖಾನೆಗಳನ್ನು ಸ್ಥಾಪಿಸಲು ಸವಲತ್ತುಗಳನ್ನೂ ನೀಡತೊಡಗಿತಷ್ಟೇ. ಅಂತಹ ಸನ್ನಿವೇಶದಲ್ಲಿ ಈ ‘ಪ್ರಗತಿಪರ’ರೇನಾದರೂ ಬಂಡವಾಳಶಾಹಿಗಳ ವಿರುದ್ಧ ಜನಾಭಿಪ್ರಾಯ ರೂಪಿಸಹೊರಟು ತನ್ನ ‘ಅಭಿವೃದ್ಧಿ’ಯೋಜನೆಗಳನ್ನು ಹಾಳುಗೆಡವ ಕೂಡದೆಂದು ಅವರು ತಲೆಯೆತ್ತದಂತೇ ಕಠಿಣ ಕ್ರಮಗಳನ್ನು ಕಮ್ಯೂನಿಸ್ಟ್ ಸರ್ಕಾರ ಕೈಗೊಂಡಿತ್ತು. ಆದರೆ ಅದೇ ‘ಪ್ರಗತಿಪರರು’ ಇತರ ದೇಶಗಳಲ್ಲಿ, ಮುಖ್ಯವಾಗಿ ಭಾರತದಲ್ಲಿ ನಿರಂತರವಾಗಿ ಸಾಮಾಜಿಕ ಅಶಾಂತಿಯನ್ನೂ, ಅಡಿಗಡಿಗೆ ಕಾರ್ವಿುಕ ಮುಷ್ಕರಗಳನ್ನೂ ಉಂಟುಮಾಡುವಂತೆ ಚೀನಿ ಸರ್ಕಾರ ನೋಡಿಕೊಂಡಿತು. ವಿದೇಶೀ ಬಂಡವಾಳಶಾಹಿಗಳು ಹಣ ಹೂಡಲು ಭಾರತದತ್ತ ಹೋಗದೇ ತನ್ನತ್ತಲೇ ಬರಲಿ ಎನ್ನುವುದು ಹುನ್ನಾರ. ಚೀನೀ ಸರ್ಕಾರ ಸಹ ಈ ಮನೆಗೆ ಮಾರಿ, ಪರರಿಗೆ ಉಪಕಾರಿ ‘ಪ್ರಗತಿಪರರಿಗೆ’ ನಿಯಮಿತವಾಗಿ ‘ಕಾಣಿಕೆ’ ನೀಡುತ್ತಿತ್ತು!

    1990ರ ಆಸುಪಾಸಿನಲ್ಲಿ ಶೀತಲಸಮರ ಕೊನೆಯಾಗಿ, ಸೋವಿಯತ್ ಯೂನಿಯನ್ ಮತ್ತು ಪೂರ್ವ ಯುರೋಪ್​ನ ಕಮ್ಯೂನಿಸ್ಟ್ ವ್ಯವಸ್ಥೆಗಳು ಒಂದೊಂದಾಗಿ ಉರುಳತೊಡಗಿದಾಗ ಅದುವರೆಗೂ ಕೆಜಿಬಿ ‘ಪೇ ರೋಲ್’ನಲ್ಲಿದ್ದ ಸಹಸ್ರಾರು ಪತ್ರಕರ್ತರು, ವಿಚಾರವಾದಿಗಳು, ಪ್ರಾಧ್ಯಾಪಕರು ಹಾಗೂ ರಾಜಕಾರಣಿಗಳಿಗೆ ಮಾಸ್ಕೋದಿಂದ ಹಣ ಬರುವುದು ನಿಂತುಹೋಯಿತು. ಆದರೆ ಇವರ ‘ಉಪಯುಕ್ತತೆ’ಯನ್ನು ಕೆಲ ಜಾಗತಿಕ ಶಕ್ತಿಗಳು ಗುರುತಿಸಿ ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳಲು ಹಂಚಿಕೆ ಹಾಕಿದವು. ಶೀತಲಸಮರದ ಅಂತ್ಯವನ್ನು ಇತಿಹಾಸಕಾರ ಫ್ರಾನ್ಸಿಲ್ ಫುಕುಯಾಮಾ ವರ್ಣಿಸಿದ್ದು ‘ಇತಿಹಾಸದ ಅಂತ್ಯ’ (End of History) ಎಂದು. ಫುಕುಯಾಮಾರ ಸಿದ್ಧಾಂತವನ್ನು ಸರಳವಾಗಿ ಹೀಗೆ ಸಂಕ್ಷೇಪಿಸಬಹುದು- ಸರ್ವಾಧಿಕಾರಿ ಮತ್ತು ಸಮತಾವಾದಿ ಮೌಲ್ಯಗಳ ವಿರುದ್ಧ ಪ್ರಜಾಪ್ರಭುತ್ವವಾದಿ ಮತ್ತು ಬಂಡವಾಳಶಾಹಿ ಮೌಲ್ಯಗಳು ಗಳಿಸಿದ ‘ವಿಜಯ’ದಿಂದಾಗಿ ಜಗತ್ತು ಘರ್ಷಣೆಗಳಿಂದ ಮುಕ್ತವಾಗುತ್ತದೆ, ಅಂದರೆ ಇನ್ನು ಮುಂದೆ ಇತಿಹಾಸದಲ್ಲಿ ದಾಖಲಿಸಬಹುದಾಂತಹ ಬೆಳವಣಿಗೆಗಳು ಘಟಿಸುವುದಿಲ್ಲ. ಫುಕಯಾಮಾರ ಈ ಆಶಾವಾದ ವಿಶ್ವಾದ್ಯಂತ ಅದೆಷ್ಟೋ ಮಂದಿಗೆ ನೆಮ್ಮದಿ ಉಂಟುಮಾಡಿದರೆ ಒಂದಷ್ಟು ಜನ ಕಂಗೆಟ್ಟರು.

    ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಅರಾಜಕತೆಯನ್ನೂ, ಘರ್ಷಣೆಗಳನ್ನೂ, ಯುದ್ಧಗಳನ್ನೂ, ಯುದ್ಧಗಳ ಭೀತಿಯನ್ನೂ ದಿನನಿತ್ಯವೂ ರೋಚಕವಾಗಿ ಬಣ್ಣಿಸಿಯೇ ಜಾಗತಿಕ ಮಾಧ್ಯಮಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿ ದ್ದುದು. ಈಗ ಏಕಾಏಕಿ ಎಲ್ಲವೂ ಶಾಂತವಾಗಿ ‘ಸುದ್ದಿ’ಗಳೇ ಇಲ್ಲವಾದರೆ ಬದುಕುವುದಾದರೂ ಹೇಗೆ? ಹಾಗೆಯೇ, ಮತಪ್ರಚಾರಕ್ಕೆ ವಿಪುಲ ಅವಕಾಶ ಒದಗಿಸುತ್ತಿದ್ದ ತೃತೀಯ ಜಗತ್ತಿನ ಅರಾಜಕತೆ ಹಾಗೂ ಸಾಮಾಜಿಕ ಅಶಾಂತಿಯೇ ಧಾರ್ವಿುಕ ಸಂಸ್ಥೆಗಳನ್ನು ಜೀವದಿಂದಿರಿಸಿದ್ದದ್ದು. ಇನ್ನು ಫುಕುಯಾಮಾ ಹೇಳಿದಂತೆ ಪ್ರಪಂಚ ಘರ್ಷಣೆರಹಿತವಾದರೆ, ಪ್ರಜಾಪ್ರಭುತ್ವ ಸಾರ್ವತ್ರಿಕವಾದರೆ ಮಾಧ್ಯಮಗಳು ಮತ್ತು ಧಾರ್ವಿುಕ ಸಂಸ್ಥೆಗಳ ಅಂತ್ಯವಾದಂತೇ ಮತ್ತು ಎಡ ವೈಚಾರಿಕ ಸಂಘಟನೆಗಳು ಹಾಗೂ ಬುದ್ಧಿಜೀವಿ ವರ್ಗ ಅಪ್ರಸ್ತುತವಾದಂತೇ. ಆದರೆ ಸೋಲೊಪ್ಪಿಕೊಳ್ಳಲು ಇವು ತಯಾರಿರಲಿಲ್ಲ. ತಂತಮ್ಮ ಭವಿಷ್ಯಕ್ಕಾಗಿ ಕರಾಳ ಯೋಜನೆಗಳನ್ನವು ತರಾತುರಿಯಲ್ಲಿ ರೂಪಿಸಿದವು. ಅದರ ಪರಿಣಾಮವಾಗಿ ಇಸ್ಲಾಮಿಕ್ ಮೂಲಭೂತವಾದ ರಕ್ಕಸನಂತೆ ಎದ್ದುನಿಂತಿತು; ಏಷ್ಯಾ, ಆಫ್ರಿಕಾ ಮತ್ತು ಪೂರ್ವ ಯುರೋಪ್​ನಲ್ಲಿ ವಿಭಜನಾಶಕ್ತಿಗಳು ತಲೆಯೆತ್ತಿ ಕೆಲ ದೇಶಗಳು ರಕ್ತಸಿಕ್ತವಾಗಿ ಛಿದ್ರಗೊಂಡವು; ಮತ್ತೆ ಕೆಲವು ನಿರಂತರ ಅಂತರ್ಯುದ್ಧ-ಅಶಾಂತಿ-ಅರಾಜಕತೆಯಲ್ಲಿ ಬೇಯತೊಡಗಿದವು. ಈ ಮೇಲೆ ಉಲ್ಲೇಖಿಸಿದವರು ಹೆಚ್ಚಿನ ಉತ್ಸಾಹದಲ್ಲಿ ದಿನಗಳೆಯತೊಡಗಿದರು.

    ಅದೇ ಸಮಯದಲ್ಲಿ ಏಕಾಏಕಿ ಉಲ್ಬಣಗೊಂಡಿದ್ದ (ಉಲ್ಬಣಗೊಳಿಸಲ್ಪಟ್ಟಿದ್ದ) ಕಾಶ್ಮೀರ ಸಮಸ್ಯೆ ಹಾಗೂ ಮಂಡಲ್-ಮಸ್ಜಿದ್ ಗಲಾಟೆಯಿಂದಾಗಿ 1990ರ ದಶಕದ ಭಾರತ ದುಷ್ಟ ಚತುಷ್ಟಯರಿಗೆ ಈಗಾಗಲೇ ಫಲವತ್ತಾದ ನೆಲದಂತೆ ಕಂಡಿತ್ತು. ಇನ್ನು ಮಾವೊವಾದಿ ಹಿಂಸಾಚಾರವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆ ಭಾರತ ಅನಂತ ಕಾಲದವರೆಗೆ ಸುದ್ದಿಯೆಂಬ ಚಿನ್ನದ ಮೊಟ್ಟೆ ಇಡುವ ಬಾತುಕೋಳಿಯೇ ಸರಿ! ಇದನ್ನು ಸಾಧಿಸಲೆಂದೇ ಎನ್​ಜಿಓಗಳನ್ನು ಹೇರಳವಾಗಿ ಹುಟ್ಟುಹಾಕುವ ಅಂತಾರಾಷ್ಟ್ರೀಯ ಯೋಜನೆ ರೂಪುಗೊಂಡಿತು.

    ಆದಾಗಲೇ ಆರಂಭವಾಗಿದ್ದ ಜಾಗತೀಕರಣ ವಿಪುಲ ವೃತ್ತಿ ಅವಕಾಶಗಳನ್ನು ಒದಗಿಸಿದರೂ ಅವುಗಳಲ್ಲಿ ಹೆಚ್ಚಿನ ಪಾಲು ಹೋದದ್ದು ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಿಗೆ. ಮಾನವಿಕ ಹಾಗೂ ಸಮಾಜವಿಜ್ಞಾನ ಕ್ಷೇತ್ರಗಳಲ್ಲಿದ್ದ ಸೀಮಿತ ಉದ್ಯೋಗಾವಕಾಶ ವರ್ಷವರ್ಷವೂ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿದ್ದ ಸಹಸ್ರಾರು ವಿದ್ಯಾರ್ಥಿಗಳನ್ನು ನಿರಾಶೆಗೊಳಿಸುತ್ತಿದ್ದುದು ಸಹಜವೇ ಆಗಿತ್ತು. ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ಸಮಾಜವಿಜ್ಞಾನ ಶಿಕ್ಷಣದಲ್ಲಿ ಎಡ ವಿಚಾರಧಾರೆ ಪ್ರಾಮುಖ್ಯ ಪಡೆದುಕೊಂಡಿದ್ದರಿಂದಾಗಿ ಆ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಭಾರತಿಯ ಇತಿಹಾಸ, ಸಮಾಜೋ-ಧಾರ್ವಿುಕ ವ್ಯವಸ್ಥೆಯ ಬಗ್ಗೆ ಕೀಳರಿಮೆ, ಅಸಹನೆ, ಅಸಡ್ಡೆ ಇದ್ದದ್ದು ಸಹಜವೇ ಆಗಿತ್ತು ಮತ್ತು ಅವರ ಈ ಮನೋಭಾವ ವಿದೇಶೀ ದುಷ್ಟಶಕ್ತಿಗಳ ಮತ್ತು ಇಲ್ಲಿನ ಎಡಪಂಥೀಯ ಬೌದ್ಧಿಕ ವರ್ಗದ ಆಶಯಗಳಿಗೆ ಹೊಂದುವಂತಹದ್ದೇ ಆಗಿತ್ತು. ಶೀತಲಸಮರೋತ್ತರ ಕಾಲದಲ್ಲಿ ಪ್ರಾಮುಖ್ಯ ಪಡೆದುಕೊಂಡ ಎರಡು ‘ಬಝå್ವರ್ಡ್’ಗಳೆಂದರೆ ‘ಮಾನವ ಹಕ್ಕುಗಳು’ ಮತ್ತು ‘ಪರಿಸರ ಕಾಳಜಿ’. ಸಹಜವಾಗಿಯೇ ಈ ಎರಡು ಮೂಲಮಂತ್ರಗಳು ಭಾರತವನ್ನು ಮತಾಂತರಾವಕಾಶಗಳ, ನಕ್ಸಲ್ ಹಿಂಸಾಚಾರದ, ಪ್ರಶಸ್ತಿಪುರಸ್ಕಾರಗಳ ಗಣಿಯನ್ನಾಗಿಸುವ ಹಿಡನ್ ಅಜೆಂಡಾದೊಂದಿಗೆ ತಲೆಯೆತ್ತತೊಡಗಿದ ಎನ್​ಜಿಓಗಳಿಗೆ ಮುಖವಾಡಗಳಾದವು. ಇವುಗಳಿಗೆ ಅಂದಿನ ಕಾಂಗ್ರೆಸ್ ನಾಯಕತ್ವ ಪೂರ್ಣ ಸಹಕಾರ ನೀಡಿತು. ಅರ್ಥಮಂತ್ರಿಯಾಗಿ ಮನಮೋಹನ್ ಸಿಂಗ್ 1991ರಲ್ಲಿ ಮಂಡಿಸಿದ ಮೊದಲ ಬಜೆಟ್​ನಲ್ಲೇ ನೆಹರು-ಗಾಂಧಿ ಮನೆತನ ಹುಟ್ಟುಹಾಕಿದ್ದ ‘ರಾಜೀವ್ ಗಾಂಧಿ ಫೌಂಡೇಷನ್’ ಎಂಬ ಎನ್​ಜಿಓಗೆ ನೂರು ಕೋಟಿ ರೂಪಾಯಿ ತೆಗೆದಿರಿಸಿದರು! ಮುಂದಿನ ವರ್ಷಗಳಲ್ಲಿ ಅದು 350 ಕೋಟಿ ರೂ.ಗೇರಿತು. ಹೀಗೆ ಆಡಳಿತಾರೂಢರೇ ಎನ್​ಜಿಓಗಳನ್ನು ಕಟ್ಟಿ ಆರ್ಥಿಕ-ರಾಜಕೀಯ ಲಾಭ ಮಾಡಿಕೊಳ್ಳಹೊರಟರೆ ಇತರರಿಗೆ ಅದು ‘ದಾರಿ’ ತೋರಿದಂತಾಗದೇ ಮತ್ತೇನಾಗುತ್ತದೆ?

    ಇಷ್ಟಾಗಿಯೂ, 1996ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ, ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಭಾರತ ಸ್ವತಂತ್ರ ನೀತಿಗಳ ಮೂಲಕ ಸ್ವಾಭಿಮಾನಿ ರಾಷ್ಟ್ರವಾಗಿ ಬದಲಾಗುವ ಸೂಚನೆಯನ್ನೂ ನೀಡತೊಡಗಿದಾಗ ವಿದೇಶಿ ದುಷ್ಟಚತುಷ್ಟಯರೂ, ಅವರ ಸ್ವದೇಶೀ ನೆರಳುಗಳೂ ತರಾತುರಿಯಲ್ಲಿ ಕಾರ್ಯಪ್ರವೃತ್ತರಾದರು. ಬಿಜೆಪಿಯ ಬೆಂಬಲದ ಮೂಲ ಹಿಂದೂ ಸಮಾಜವಷ್ಟೇ ಎಂದು ತಿಳಿದು ಆ ಮೂಲಕ್ಕೇ ಕೊಡಲಿಯೇಟು ಹಾಕುವ ಉದ್ದೇಶದಿಂದ ಹಿಂದೂಯೇತರ, ಹಿಂದೂ-ವಿರೋಧಿ ಬರಹಗಾರ/ಗಾರ್ತಿಯರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ, ಅವರನ್ನು ‘ಭಾರತದ ದನಿಗಳು’ ಎಂದು ಪ್ರತಿಷ್ಠಾಪಿಸುವ, ಅವುಗಳಿಗೆ ವಿರುದ್ಧವಾದ ದನಿಗಳು ಹೊರಜಗತ್ತಿಗೆ ಇನಿತೂ ತಲುಪದಂತೆ ತಡೆಯುವ ಪ್ರಯತ್ನಗಳು ಆರಂಭವಾದವು. ಅದು ಯಶಸ್ವಿಯಾಗುತ್ತಿದ್ದಂತೇ, ‘ವಿದೇಶೀಯರಿಂದ ಮಾನ್ಯತೆ ಪಡೆದ ಭಾರತದ ದನಿ’ಗಳನ್ನು ಭಾರತೀಯರೂ ಸ್ವೀಕರಿಸುವಂತೆ ಪ್ರೇರೇಪಿಸಲು, ಆ ದನಿಗಳನ್ನು ಬಿಜೆಪಿಯ ವಿರುದ್ಧದ ಕಹಳೆಗಳನ್ನಾಗಿ ಮೊಳಗಿಸಲು ವ್ಯವಸ್ಥಿತ ಕಾರಸ್ಥಾನಗಳ ಅಂಗವಾಗಿ ಇಂಗ್ಲಿಷ್ ವಾಹಿನಿಯೊಂದರ ಚಾಲನೆ, ನಿಯತಕಾಲಿಕವೊಂದರ ಪ್ರಕಟಣೆ ಆರಂಭವಾಯಿತು. ನಂತರದ ದಿನಗಳಲ್ಲಿ ಅದಾಗಲೇ ಇದ್ದ ಜನಪ್ರಿಯ ಪತ್ರಿಕೆಗಳಲ್ಲಿ ಕೆಲವನ್ನು ಖರೀದಿಸಲಾಯಿತು. ಹೀಗೆ ಸಂಯೋಜಿತ ಕಾರ್ಯಯೋಜನೆಗಳ ಪರಿಣಾಮವಾಗಿ ಕಾಶ್ಮೀರದ ಅಶಾಂತಿ ನಿರಂತರವಾಯಿತು, ಪಶ್ಚಿಮ ಬಂಗಾಳದಿಂದ ಕರ್ನಾಟಕದವರೆಗೆ ‘ರೆಡ್ ಕಾರಿಡಾರ್’ ತಲೆಯೆತ್ತಿತು, ರೈಲುಬೋಗಿಗೆ ಬೆಂಕಿ ಹಚ್ಚಿ ಹಿಂದೂಗಳನ್ನು ಸುಟ್ಟು ಕೊಲ್ಲುವ ಮೂಲಕ ಗುಜರಾತ್​ನಲ್ಲಿ ಕೋಮು ಹಿಂಸಾಚಾರಕ್ಕೆ ಚಾಲನೆ ನೀಡಲಾಯಿತು ಮತ್ತು ಅದರ ಒಂದು ಮುಖವನ್ನು ಮಾತ್ರ ವರದಿ ಮಾಡಲಾಯಿತು! ಪರಿಣಾಮವಾಗಿ ಅವು ಯೋಜಿಸಿದ್ದಂತೇ ಬಿಜೆಪಿಯ ಬೆಂಬಲದ ಮೂಲ ಕುಗ್ಗತೊಡಗಿತು.

    ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದಿಗೆ ‘ಭಾರತದ ದನಿ’ ಎಂದು ಹೊರಜಗತ್ತಿನಲ್ಲಿ ಸ್ಥಾಪನೆಗೊಂಡ ಕ್ರಿಶ್ಚಿಯನ್ ಲೇಖಕಿಯೊಬ್ಬರು ಕಾಶ್ಮೀರಕ್ಕೆ ‘ಆಜಾದಿ’ ನೀಡಬೇಕೆಂದು ವಾದಿಸತೊಡಗಿದ್ದು, ಅನತಿಕಾಲದಲ್ಲೇ ತಮ್ಮ ಕಾರ್ಯಕ್ಷೇತ್ರವನ್ನು ಮತ್ತೊಂದು ‘ಸುದ್ದಿಗಣಿ’ ದಂಡಕಾರಣ್ಯಕ್ಕೆ ವಿಸ್ತರಿಸಿಕೊಂಡು ಅಲ್ಲಿನ ನಕ್ಸಲರ ‘ಸಾತ್ವಿಕ ಮುಖ’ವನ್ನೂ, ಭದ್ರತಾ ಪಡೆಗಳ ‘ಕ್ರೌರ್ಯ’ವನ್ನೂ ಜಗತ್ತಿಗೆ ಬಿತ್ತರಿಸತೊಡಗಿದ್ದು; ಮಾನವ ಹಕ್ಕುಗಳ ಹೋರಾಟಗಾರ್ತಿ ಎಂದು ಬಣ್ಣಿಸಿಕೊಂಡು, ಎನ್​ಜಿಓವನ್ನೂ ಹುಟ್ಟುಹಾಕಿಕೊಂಡ ಮಹಿಳೆಯೊಬ್ಬರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿರುದ್ಧ ಅಪಪ್ರಚಾರ ಮಾಡುತ್ತಾ, ಅದಕ್ಕಾಗಿ ಗುಜರಾತ್ ಕೋಮು ಹಿಂಸಾಚಾರದಲ್ಲಿ ನೊಂದ ಮಹಿಳೆಯರನ್ನು ಬಳಸಿಕೊಳ್ಳುತ್ತ, ತಾನೇ ಉತ್ಪ್ರೇಕ್ಷಿಸಿ ಬರೆದ ದೂರುಪತ್ರಗಳಿಗೆ ಅನಕ್ಷರಸ್ತರಾದ ಆ ಮಹಿಳೆಯರಿಂದ ಸಹಿ ಹಾಕಿಸಿ ಪೊಲೀಸ್ ಸ್ಟೇಷನ್​ಗಳಲ್ಲಿ, ನ್ಯಾಯಾಲಯಗಳಲ್ಲಿ ದಾಖಲಿಸುತ್ತ ಹೋದದ್ದನ್ನು ನೀವು ಈಗ ಮತ್ತೊಮ್ಮೆ ನೆನಪಿಸಿಕೊಂಡರೆ ಕಾರಸ್ಥಾನದ ಚಿತ್ರಣ ದೊರೆಯಬಹುದು.

    ದೇಶದಲ್ಲಿಂದು ಸುಮಾರು 22.50 ಲಕ್ಷ ಎನ್​ಜಿಓಗಳಿವೆ. ಇವುಗಳಲ್ಲಿ ಹೆಚ್ಚಿನವು ಎಡಪಂಥೀಯರವು ಮತ್ತು ಹೆಚ್ಚು ಹಣ ಬರುತ್ತಿರುವುದು ಚೀನಾದಿಂದ. ಪ್ರಸಕ್ತ ‘ರೈತ ಆಂದೋಲನ’ವನ್ನು ಮೊದಲಿಗೆ ಮಾವೊವಾದಿಗಳೇ ಏಕೆ ಆರಂಭಿಸಿದರು ಎಂದು ಇದರಿಂದ ತಿಳಿಯುತ್ತದೆ. ಯುಪಿಎ ಆಡಳಿತಾವಧಿಯಲ್ಲೇ ಇಂಟಲಿಜೆನ್ಸ್ ಬ್ಯೂರೋ (ಐಬಿ) ಸಲ್ಲಿಸಿದ್ದ ವರದಿಯೊಂದು ಹಲವಾರು ಎನ್​ಜಿಓಗಳು ಮತಾಂತರ, ಪ್ರತ್ಯೇಕತಾವಾದ ಮತ್ತು ನಕ್ಸಲ್ ಹಿಂಸಾಚಾರಕ್ಕೆ ಬೆಂಬಲ ನೀಡುವ ಕೃತ್ಯಗಳಲ್ಲಿ ನಿರತವಾಗಿವೆ ಎಂದು ಹೇಳಿತ್ತು. ಮೋದಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ಮೊದಲಿಗೆ ಮಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಎಂದು ಸೌದಿ ಅರೇಬಿಯಾದಿಂದ ಹಣ ಪಡೆದು ಅದನ್ನು ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ವಹಾಬಿ ಪಂಥದ ಪ್ರಚಾರಕ್ಕೆ ಮತ್ತು ಮತೀಯವಾದಕ್ಕೆ ಪ್ರೇರಣೆ ನೀಡುವುದಕ್ಕಾಗಿ ಬಳಸುತ್ತಿದ್ದ ಎನ್​ಜಿಓಗಳ ಲೈಸನ್ಸ್ ರದ್ದುಮಾಡಿತು. ಅಲ್ಲಿಂದೀಚೆಗೆ ಸುಮಾರು 20,000 ಎನ್​ಜಿಓಗಳ ಲೈಸನ್ಸ್ ರದ್ದಾಗಿದೆ.

    ಮೋದಿ ಸರ್ಕಾರದ ಕ್ರಮ ಉತ್ತುಂಗಕ್ಕೇರಿದ್ದು ಕಳೆದ ಸೆಪ್ಟೆಂಬರ್​ನಲ್ಲಿ ಅದು ಸಂಸತ್ತಿನ ಅನುಮೋದನೆಯ ಮೂಲಕ ‘ವಿದೇಶೀ ದೇಣಿಗೆ ನಿಯಂತ್ರಣ (ತಿದ್ದುಪಡಿ) ಕಾಯಿದೆ’ಯನ್ನು (ಎಫ್​ಸಿಆರ್​ಎ) ಜಾರಿಗೊಳಿಸಿದಾಗ. ಈ ಕಾನೂನು ಎನ್​ಜಿಓಗಳ ಮೇಲೆ ಕಡ್ಡಾಯವಾಗಿ ವಿಧಿಸುವ ಕೆಲವು ನಿಯಮಗಳೆಂದರೆ-ಎನ್​ಜಿಓಗಳು ವಿದೇಶೀ ನೆರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅದಕ್ಕಾಗಿಯೇ ತೆರೆದ ಖಾತೆಯ ಮೂಲಕವೇ ಸ್ವೀಕರಿಸಬೇಕು. ಅಂದರೆ ವಿದೇಶದಿಂದ ಬರುವ ಒಂದೊಂದು ಪೈಸೆಯ ಲೆಕ್ಕವೂ ಸರ್ಕಾರಕ್ಕೆ ದೊರೆಯುತ್ತದೆ.

    ಎನ್​ಜಿಓಗಳು ವಾರ್ಷಿಕ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಇನ್​ಕಂ ಟ್ಯಾಕ್ಸ್ ರಿಟರ್ನ್ಸ್ ಕಡ್ಡಾಯವಾಗಿ ದಾಖಲಿಸಬೇಕು. ಹಿಂದೆ 90% ಎನ್​ಜಿಓಗಳು ಇದಾವುದನ್ನೂ ಮಾಡುತ್ತಿರಲಿಲ್ಲ. ಹೊಸ ಕಾನೂನಿನಿಂದಾಗಿ ಎನ್​ಜಿಓಗಳಿಗೆ ಕಳ್ಳಮಾರ್ಗದಲ್ಲಿ ಬರುವ ಹಣ ಮತ್ತು ಅದು ಬಳಕೆಯಾದ ವಿಧಾನದ ಸುಳಿವು ಸಿಗುತ್ತದೆ. ಲೆಕ್ಕಪತ್ರ ತಪಾಸಣೆಯಲ್ಲಿ ಯಾವುದೇ ಗೋಲ್‍ಮಾಲ್ ಕಂಡುಬಂದಲ್ಲಿ ಆ ಎನ್​ಜಿಓ ಪರವಾನಗಿಯನ್ನು 180 ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ ಹಾಗೂ ಮತ್ತೂ 180 ದಿನಗಳವರೆಗೆ ವಿಸ್ತರಿಸಲೂಬಹುದಾಗಿದೆ.

    ಹಿಂದೆ ವಿದೇಶದಿಂದ ಬಂದ ಹಣದ ಅರ್ಧದಷ್ಟನ್ನು ಎನ್​ಜಿಓಗಳ ಅಧಿಕಾರಿಗಳು ಸಂಬಳಕ್ಕೆ ಬಳಸಿಕೊಳ್ಳಬಹುದಾಗಿತ್ತು. ಹೊಸ ಕಾನೂನು ಆ ಬಳಕೆಯನ್ನು ಕೇವಲ 20%ಗೆ ಇಳಿಸಿದೆ. ಅಂದರೆ ವಿದೇಶಿ ಹಣ ಯಾವ ಘೊಷಿತ ಉದ್ದೇಶಕ್ಕಾಗಿ ಬರುತ್ತದೆಯೋ ಅದಕ್ಕಾಗಿಯೇ ಬಳಕೆಯಾಗಬೇಕು. ಇದರಿಂದಾಗಿ ಎನ್​ಜಿಓಗಳ ಆದಾಯ ಕುಗ್ಗಿಹೋಗಿದೆ. ಈ ಹೊಸ ಕಾನೂನಿನ ಪರಿಣಾಮವೇನಾಗಿದೆ? ಮಸೂದೆ ಸಂಸತ್ತಿನಲ್ಲಿ ಮಂಡನೆಯಾದದ್ದು ಸೆಪ್ಟೆಂಬರ್ 20ರಂದು. ಒಂದೇ ವಾರದಲ್ಲಿ ದೇಶಾದ್ಯಂತ ರೈತ ಆಂದೋಲನ ಆಯೋಜನೆಯಾಯಿತು! ಮತ್ತೆರಡು ತಿಂಗಳಲ್ಲಿ ‘ಯಾರುಯಾರೋ’ ಸೇರಿಕೊಂಡು ಅದು ದೆಹಲಿಯ ಗಡಿಯಲ್ಲಿ ನೆಲೆಯೂರಿತು.

    ಲೆಕ್ಕಪತ್ರ ನೀಡದಿದ್ದ, ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಿದ್ದ, ಅಜ್ಮಲ್ ಕಸಬ್​ಗೆ ವಿಧಿಸಿದ ಗಲ್ಲು ಶಿಕ್ಷೆಯ ವಿರುದ್ಧ ಹುಯಿಲೆಬ್ಬಿಸಿದ್ದ ಆಮ್ನೆಸ್ಟಿ ಇಂಟರ್​ನ್ಯಾಷನಲ್ ಭಾರತದಿಂದ ಕಾಲ್ತೆಗೆದಿದೆ, ಗ್ರೀನ್​ಪೀಸ್ ಜತೆ ಇನ್ನೂ ಹಲವಾರು ಎನ್​ಜಿಓಗಳು ಅಂಗಡಿ ಮುಚ್ಚಿವೆ. ಇನ್ನು ಸದ್ಯಕ್ಕೆ ಕೊನೆಯ ಮಾತೆಂದರೆ ಜನವರಿ 26ರಂದು ನೂರಕ್ಕೂ ಹೆಚ್ಚಿನ ಎಡಪಂಥೀಯ ಎನ್​ಜಿಓಗಳು ದೆಹಲಿಗೆ ರೈತರ ಹೆಸರಿನಲ್ಲಿ ಗಲಭೆಕೋರರನ್ನು ಕರೆತಂದಿವೆ! ಅಂದರೆ ಗಲಭೆಯೆಬ್ಬಿಸಿದ್ದು ಎನ್​ಜಿಓಗಳು, ಕೆಟ್ಟ ಹೆಸರು ಬಂದದ್ದು ಮಾತ್ರ ನಮ್ಮ ರೈತ ಬಡ ಬೋರೇಗೌಡನಿಗೆ!

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts