More

    ‘ಕಾರು ಬಾಗಿಲು ಬಡಿದು ದೀದಿ ಕಾಲಿಗೆ ಗಾಯ’ : ಅಧಿಕೃತ ವರದಿ

    ಕೊಲ್ಕತಾ: ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮಾರ್ಚ್​ 10 ರಂದು ಟಿಎಂಸಿ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಾಲಿಗೆ ಏಟು ಬಿದ್ದಿದ್ದು ಹೇಗೆ ಎಂದು ಭಾರೀ ಚರ್ಚೆಗಳೇ ನಡೆದಿವೆ. ಇದೀಗ ಮುಖ್ಯ ಕಾರ್ಯದರ್ಶಿ ಅಲಪನ್ ಬಂದ್ಯೋಪಾಧ್ಯಾಯ ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದು, “ಕಾರಿನ ಬಾಗಿಲು ಜೋರಾಗಿ ಮುಚ್ಚಿಕೊಂಡಿದ್ದರ ಪರಿಣಾಮವಾಗಿ ಅವರ ಕಾಲಿಗೆ ಏಟು ಬಿದ್ದಿದೆ” ಎಂದಿದ್ದಾರೆ.

    ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆಂದು ನಂದೀಗ್ರಾಮಕ್ಕೆ ಹೋದ ಸಂದರ್ಭದಲ್ಲಿ ಅವರ ಕಾಲಿಗೆ ತೀವ್ರ ಗಾಯವಾಗಿತ್ತು. ತಕ್ಷಣ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬ್ಯಾನರ್ಜಿ ತಮ್ಮನ್ನು ನಾಲ್ಕೈದು ಮಂದಿ ತಳ್ಳಿ ಬೀಳಿಸಿದರು ಎಂದು ದೂರಿದ್ದರು. ಆದರೆ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಇದಕ್ಕೆ ವಿರುದ್ಧವಾಗಿ ಸಾಕ್ಷಿ ಹೇಳಿದ್ದರು.

    ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಟಿಎಂಸಿ ನಾಯಕರು, ಬಿಜೆಪಿಯತ್ತಲೇ ಬೆರಳು ಮಾಡಿ ರಾಜಕೀಯ ಸಂಚು ಎಂದಿದ್ದರು. ಮತ್ತೊಂದೆಡೆ ಬಿಜೆಪಿ ನಾಯಕರು, ಮತದಾರರ ಸಿಂಪೆಥಿ ಗಳಿಸಲು ದೀದಿ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು. ಆಯೋಗದ ನಿರ್ದೇಶನದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ನಿನ್ನೆ(ಮಾರ್ಚ್ 12) ಸಂಜೆ ವರದಿ ಸಲ್ಲಿಸಿದ್ದು, ವರದಿಯ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚೆ ನಡೆಯುತ್ತಿದೆ.

    ವರದಿಯಲ್ಲಿ ಏನಿದೆ ? : ವರದಿಯ ಪ್ರಕಾರ, ಕಾರಿನ ಬಾಗಿಲು ದಡಾರನೇ ಹಾಕಿಕೊಂಡು ಬ್ಯಾನರ್ಜಿ ಕಾಲಿಗೆ ಪೆಟ್ಟು ಬಿದ್ದಿದೆ. ಆದರೆ ಬಾಗಿಲು ಜೋರಾಗಿ ಹಾಕಿಕೊಂಡದ್ದಕ್ಕೆ ಯಾವುದೇ ಕಾರಣವನ್ನು ತಿಳಿಸಿಲ್ಲ. ಟಿಎಂಸಿ ದೂರಿರುವ ಹಾಗೆ ಯಾರಾದರೂ ಉದ್ದೇಶಪೂರ್ವಕವಾಗಿ ಬಾಗಿಲನ್ನು ನೂಕಿದ್ದರೇ ಎಂಬುದಕ್ಕೂ ಉತ್ತರವಿಲ್ಲ. ಮಾರ್ಚ್​ 10 ರಂದು ನಂದಿಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಾಗ, ಭಾರೀ ಜನಸಂದಣಿ ಸೇರಿತ್ತು ಎಂದಿದೆ. ಜೊತೆಯಲ್ಲಿ ಕಾರಿನ ಸ್ವಲ್ಪ ದೂರದಲ್ಲೇ ಒಂದು ಕಬ್ಬಿಣದ ಕಂಬ ಇತ್ತು ಎಂದೂ ವರದಿ ಹೇಳುತ್ತದೆ. ಆದರೆ ಅದಕ್ಕೆ ಡಿಕ್ಕಿ ಹೊಡೆದು ಬಾಗಿಲು ಹಾಕಿಕೊಂಡಿತೇ ಹೇಗೆ ಎಂದು ಯಾವುದೇ ವಿವರ ನೀಡಿಲ್ಲ.

    ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್: ಆ ಐವರ ಬಗ್ಗೆ ದಿನೇಶ್​ ಕಲ್ಲಹಳ್ಳಿ ಹೇಳಿದ್ದೇನು?

    ಅತ್ತ ಎರಡು ದಿನಗಳ ಕಾಲ ಕೊಲ್ಕತಾದ ಎಸ್​​ಎಸ್​ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬ್ಯಾನರ್ಜಿ, ನಿನ್ನೆ ಸಂಜೆ ಡಿಸ್ಚಾರ್ಜ್​ ಆಗಿದ್ದಾರೆ. ಆಕೆಗೆ ಮತ್ತಷ್ಟು ರೆಸ್ಟ್​ ತೆಗೆದುಕೊಳ್ಳಲು ಹೇಳಿರುವ ವೈದ್ಯರು ಅನಗತ್ಯವಾಗಿ ಓಡಾಡಬಾರದೆಂದು ಸಲಹೆ ನೀಡಿದ್ದಾರೆ. ಫ್ರಾಕ್ಚರ್ ಹಾಕಿಸಿಕೊಂಡು ವೀಲ್​ ಚೇರ್​ನಲ್ಲಿ ಆಚೆ ಬಂದ ದೀದಿ ಚುನಾವಣಾ ಪ್ರಚಾರ ಮುಂದುವರಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಒಂದೇ ಡೋಸ್​ ಬೇಕಾಗುವ ಹೊಸ ಕರೊನಾ ಲಸಿಕೆಗೆ ಡಬ್ಲ್ಯೂಹೆಚ್​ಒ ಅನುಮೋದನೆ

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts