More

    ನಿರುದ್ಯೋಗ ಸಮಸ್ಯೆ ಹೋಗಲಾಡಿಸುವಂತೆ ಒತ್ತಾಯ ಎಐಡಿವೈಒ ನೇತೃತ್ವದಲ್ಲಿ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳ ಪ್ರತಿಭಟನೆ

    ಮೈಸೂರು: ವಿದ್ಯಾರ್ಥಿ ವೇತನ ನೀಡಬೇಕು, ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು, ಹೆಚ್ಚು ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿ ಎಐಡಿವೈಒ ನೇತೃತ್ವದಲ್ಲಿ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ನಗರದ ಅಶೋಕ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿದ್ಯಾರ್ಥಿಗಳು, ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳು ವಿವಿಧ ಟ್ರೇಡ್‌ಗಳಲ್ಲಿ ನಿರ್ದಿಷ್ಟ ಕೌಶಲ್ಯದೊಂದಿಗೆ ಹೊರಬರುತ್ತಾರೆ. ಆದರೆ ಐಟಿಐ ತರಬೇತಿ ಪಡೆದುಕೊಂಡರೆ ತಕ್ಷಣ ಉದ್ಯೋಗ ಸಿಗುತ್ತದೆ ಎಂಬುದು ಅವರ ನಂಬಿಕೆ ಹುಸಿಯಾಗುತ್ತಿದೆ ಎಂದು ದೂರಿದರು.
    ಐಟಿಐ ತರಬೇತಿ ಪಡೆದವರಿಗೆ ರೈಲ್ವೆ, ಕೆಎಸ್‌ಆರ್‌ಟಿಸಿ ವರ್ಕ್‌ಶಾಪ್, ಕೆಇಬಿ ಸೇರಿದಂತೆ ಕೆಲವು ಸರ್ಕಾರಿ ಉದ್ದಿಮೆಗಳಲ್ಲಿ ಉದ್ಯೋಗ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ಅಲ್ಪಸ್ವಲ್ಪ ಉದ್ಯೋಗಗಳೂ ಕ್ಷೀಣಿಸುತ್ತಿವೆ. ನೂರಾರು ಉದ್ಯೋಗಗಳನ್ನು ಸೃಷ್ಟಿಸಲು ಅವಕಾಶ ಇರುವ ಸರ್ಕಾರದ ಕೆಲ ಉತ್ಪಾದನಾ ಚಟುವಟಿಕೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
    ಸರ್ಕಾರದ ಇಂತಹ ನಿರ್ಧಾರಗಳು ನಿರುದ್ಯೋಗ ಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತಿವೆ. ಇದರ ಜತೆಗೆ ಹಲವು ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಕೂಡ ಉದ್ಯೋಗಾವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ಅಪ್ರೆಂಟಿಸ್ ಹೆಸರಿನಲ್ಲಿ ಖಾಸಗಿ ಕಾರ್ಖಾನೆಗಳು ಮತ್ತು ಸರ್ಕಾರಿ ಉದ್ದಿಮೆಗಳಲ್ಲೂ ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಶೋಷಣೆ ಮಾಡಲಾಗುತ್ತಿದೆ. ಈಗಿನ ಅಪ್ರೆಂಟಿಷಿಪ್ ಕಾಯ್ದೆ ಪ್ರಕಾರ ತರಬೇತಿ ಸಮಯದಲ್ಲಿ ಅನುಭವದ ಆಧಾರದ ಮೇಲೆ ಕನಿಷ್ಠ ಕೂಲಿಗೆ ಸಮನಾಗಿ ವೇತನ ನೀಡಬೇಕು. ನಿರ್ದಿಷ್ಟ ಅವಧಿಯ ನಂತರ ಅಲ್ಲಿಯೇ ಕಾಯಂ ನೌಕರರಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
    ಚುನಾವಣೆ ಸಂದರ್ಭದಲ್ಲಿ ಮಾತ್ರ ಯುವ ಜನರನ್ನು ಸ್ಮರಿಸದೆ, ನಿರುದ್ಯೋಗ ಹೋಗಲಾಡಿಸಲು ಹಾಗೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗಾವಕಾಶಗಳ ಕಡಿತ ನಿಲ್ಲಬೇಕು. ಹೆಚ್ಚೆಚ್ಚು ಶ್ರಮಾಧಾರಿತ ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಐಟಿಐ ತರಬೇತಿದಾರರಿಗೆ ಅಪ್ರೆಂಟಿಸ್ ಸಂದರ್ಭದಲ್ಲಿ ಕನಿಷ್ಠ ಕೂಲಿಗೆ ಸಮನಾದ ವೇತನ ನೀಡಬೇಕು. ಐಟಿಐ ತರಬೇತಿ ಪಡೆಯಲು ಬರುವವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರಾಗಿದ್ದು, ಅವರಿಗೆ ಸಹಾಯವಾಗುವಂತೆ ತರಬೇತಿ ಹಂತದಲ್ಲಿ ಯೋಗ್ಯ ರೀತಿಯ ಶಿಷ್ಯವೇತನ ನೀಡಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
    ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ನಿರಂಜನ್, ಕಾರ್ಯದರ್ಶಿ ಸುಮಾ, ಜಂಟಿ ಕಾರ್ಯದರ್ಶಿ ನೀತುಶ್ರೀ, ವಿವಿಧ ಕಾಲೇಜಿನ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts