More

    ಅನಿಸಿಕೆ: ಹಿತ್ತಲ ಗಿಡ ಮಾತ್ರ ಮದ್ದು ಎಂದು ಅರಿಯುವ ಕಾಲ

    ಅನಿಸಿಕೆ: ಹಿತ್ತಲ ಗಿಡ ಮಾತ್ರ ಮದ್ದು ಎಂದು ಅರಿಯುವ ಕಾಲ

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಲೋಕಲ್ ಪೆ ವೋಕಲ್’ ಮಂತ್ರ ದೇಶದ ತುಂಬ ವೇಗದಲ್ಲಿ ಹರಿದಾಡುತ್ತಿದೆ. ದೇಶದ ಸಣ್ಣ ಸಣ್ಣ ಗೃಹ ಉದ್ಯೋಗಗಳು, ಕೈಮಗ್ಗ, ಖಾದಿಬಟ್ಟೆ, ಮನೆಯಲ್ಲಿ ತಯಾರಾಗುವ ಸರಳ ಊಟ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಚಟ್ನಿಗಳ ಬಗ್ಗೆ ನಾವು ಪ್ರಚಾರ ಮಾಡಬೇಕು ಮತ್ತು ಕೊಳ್ಳಬೇಕು ಎಂಬುದು ಪ್ರಧಾನಮಂತ್ರಿಗಳ ಅಂಬೋಣವಾಗಿದೆ. ನಾವು ಈ ಉತ್ಪಾದನೆಗಳನ್ನು ಉಪಯೋಗಿಸುತ್ತೇವೆ ಕೂಡ. ಖಾದಿಬಟ್ಟೆ, ಸಾಬೂನು, ಎಣ್ಣೆ, ಎಣ್ಣೆಕಾಳು, ಸಿರಿಧಾನ್ಯ, ಕೋದೊ, ಕುಟಕಿ, ನವಣೆ, ಸಜ್ಜೆ, ಜೋಳ, ಬರಗು, ಊದಲು, ರಾಗಿ ಮುಂತಾದವುಗಳ ಉಪಯೋಗವನ್ನು ಆಗಾಗ್ಗೆ ನಾವು ಮಾಡುತ್ತೇವೆ. ಆದರೆ ಈ ಸಿರಿಧಾನ್ಯಗಳ ಬಗ್ಗೆ ನಮ್ಮಲ್ಲಿ ಆಗಬೇಕಾಗಿದ್ದ ಚಳವಳಿ ಥರದ ಸಾಮಾಜಿಕ ಎಚ್ಚರ ಇನ್ನೂ ಆಗಿಲ್ಲ. ದೇಸಿ ಉತ್ಪಾದನೆಗಳ ಮಹತ್ವದ ಬಗ್ಗೆ, ಅವುಗಳ ಔಷಧೀಯ ಗುಣಗಳ ಬಗ್ಗೆ, ಅವುಗಳ ಬಳಕೆಯಿಂದ ರೈತರ ಆರ್ಥಿಕ ಸುಧಾರಣೆಯ ಬಗ್ಗೆ, ಸ್ವದೇಶಿ ಮಾರುಕಟ್ಟೆಯ ವಿಸ್ತರಣೆ ಬಗ್ಗೆ ನಮ್ಮ ‘ಕಂಜ್ಯೂಮರ್ ಎಕ್ಸ್​ಪರ್ಟ್ಸ್’ ತಮ್ಮ ಸಂಶೋಧನೆಗಳನ್ನು ವಿಸ್ತರಿಸಬೇಕು. ಪಠ್ಯಪುಸ್ತಕಗಳಲ್ಲಿ ದೇಸಿ ಆಹಾರ, ತಿನಿಸು, ದಿರಿಸುಗಳ ಬಗ್ಗೆ ಪಾಠಗಳು ಬರಬೇಕು. ನಮ್ಮ ‘ಬಿಜಿನಸ್ ಸ್ಕೂಲ್’ಗಳಲ್ಲಿ ಸ್ಥಳೀಯ ಉದ್ಯಮಿಗಳ ಯಶೋಗಾಥೆಗಳು ಪಠ್ಯವಾಗಬೇಕು.

    ಕೋದೊ, ಕುಟಕಿ, ನವಣೆ, ಸಜ್ಜೆ, ಸಾವಿ, ಎಳ್ಳು, ಗುರೆಳ್ಳು ಬಡರೈತರು ಮತ್ತು ಆದಿವಾಸಿಗಳು ಮಾತ್ರ ಬೆಳೆಯುತ್ತಿದ್ದಾರೆ. ಈ ಸಿರಿಧಾನ್ಯಗಳ ಅಪಾರ ಔಷಧೀಯ ಗುಣಗಳ ಬಗ್ಗೆ ನಾವು ಮೌನವಾಗಿದ್ದೇವೆ. ಈ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಬಡರೈತರಿಗೆ ಆರ್ಥಿಕ ಸಬಲತೆ ಸಿಗಲಿದೆ, ಆದರೆ ಅಗ್ರೋ-ಎಕಾನಮಿಸ್ಟ್ ಮೌನವಾಗಿದ್ದಾರೆ. ನಮ್ಮ ‘ಬಳಕೆದಾರ ವಿಷಯದ ಪಂಡಿತ’ರಿಗೆ ಸಿರಿಧಾನ್ಯಗಳ ಬಗ್ಗೆ ನಮ್ಮ ದೇಶದಲ್ಲಿ ಒಂದು ವರ್ಕ್​ಶಾಪ್ ಮಾಡಬೇಕಾದ ಅಗತ್ಯವಿದೆ, ಅಂದಾಗ ಮಾತ್ರ ಮಹಾನಗರಗಳಲ್ಲಿ ಇರುವ ‘ಕಂಜ್ಯೂಮರ್ ಎಕ್ಸ್​ಪರ್ಟ್ಸ್’ ಬಿಳಿಅಕ್ಕಿ ತ್ಯಜಿಸಿ ‘ಕೋದೊ’ ಅಕ್ಕಿಗೆ ಶರಣು ಹೋಗಬಲ್ಲರು. ಭಾರತದ ಬಳಕೆದಾರರ ಮನೋವಿಜ್ಞಾನದ ಬಗ್ಗೆ ಬರೆಯುವವರಿಗೆ ಉತ್ಪಾದಕರು-ಬಳಕೆದಾರರಿಗೆ ಯಾವುದು ಹಿತವಾದುದು ಎಂಬ ಅರಿವು ಇರಬೇಕಾದುದು ಮುಖ್ಯ. ಪ್ರಧಾನಮಂತ್ರಿ ಈ ಲೆಕ್ಕಾಚಾರವನ್ನೇ ‘ಲೋಕಲ್ ಪೆ ವೋಕಲ್’ ಆಗಬೇಕೆಂದು ಒತ್ತಾಯಿಸಿರುವುದು.

    ‘ಔಡಲ’ (Castor) ಎಲ್ಲಿ ಬೇಕಾದರೂ ಬೆಳೆದು ಫಲ ಕೊಡಬಲ್ಲದು. ಇದೊಂದು ಚಮತ್ಕಾರಿ ಬೆಳೆ. ಇದರ ಹಸಿರು ಎಲೆಗಳು ವಾತಾವರಣದ ತಾಪವನ್ನು ಕಡಿಮೆ ಮಾಡಿ ತಂಪನ್ನು ಬೀರುತ್ತವೆ. ಬಿಸಿಲಿನ ತಾಪದಿಂದ ತಲೆಯನ್ನು ತಂಪಾಗಿಡಬಲ್ಲ ಗುಣ ಔಡಲ ಎಣ್ಣೆಗಿದೆ. ತೀರಾ ಸಾದಾ ಸಾಬೂನು ಕೂಡ ಇವತ್ತು ಮಾರುಕಟ್ಟೆಯಲ್ಲಿ -ಠಿ; 80 ಬೆಲೆ ಬಾಳುತ್ತದೆ. ಇದೇ ಗುಣ, ಆಕಾರ, ಗಾತ್ರದ; ಜಾರ್ಖಂಡ್​ದ ಆದಿವಾಸಿ ಮಹಿಳೆಯರು ತಯಾರಿಸಿದ ಸ್ನಾನದಸಾಬೂನು ಕೇವಲ -ಠಿ; 20ಕ್ಕೆ ಲಭ್ಯವಿದೆ. ಆದಿವಾಸಿಗಳು ತಯಾರಿಸಿದ ಈ ಗೃಹಕೈಗಾರಿಕೆಯ ಸಾಬೂನಿನಲ್ಲಿ, ಅರಣ್ಯದ ಕಿರು ಉತ್ಪನ್ನಗಳಾದ- ಶೀಗೆಕಾಯಿ, ಹುಣಸೇ ಹುಳಿ, ಹುಲುಗಲ ಬೀಜದ ಎಣ್ಣೆ, ಮಹುವಾದ ಜಿಡ್ಡು, ಅನೇಕ ತಾಜಾ ತರಕಾರಿಗಳ ರಸ ಕೂಡಿರುತ್ತದೆ. ಬುಡಕಟ್ಟು ಜನರ ಈ ತಾಜಾ ಉತ್ಪನ್ನವನ್ನು ವ್ಯಾಪಾರಸ್ಥರು, ಮಾಲ್​ಗಳ ಮಾಲೀಕರು ತಮ್ಮ ಅಂಗಡಿಗಳ ‘ಪ್ರೖೆಮ್ ಪ್ಲೇಸ್’ನಲ್ಲಿ ಪ್ರದರ್ಶನ ಮಾಡಲು ಸಾಧ್ಯವೇ? ಇದರ ಜಾಹೀರಾತು ಸಾಮಗ್ರಿಯನ್ನು ಬಳಕೆದಾರರ ಕೈಗೆ ನೀಡಲು ಸಾಧ್ಯವೇ? ಕರೊನಾ ಉಪಟಳದ ಕಾರಣದಿಂದ ಜರ್ಜರಿತರಾಗಿ ತಮ್ಮ ಹಳ್ಳಿ ತಲುಪಿರುವ ಕೆಲಸಗಾರರು ಮರಳಿ ಬೆಂಗಳೂರಿಗೆ ಬರಲಿಕ್ಕಿಲ್ಲ, ಯಾಕೆಂದರೆ ಮಹಾನಗರಗಳು ‘ಜನ ಜಂಗಲ್’ ಎಂಬುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಹಳ್ಳಿಯಲ್ಲಿ ಇವರು ಸುಮ್ಮನೆ ಕೂಡಲು ಸಾಧ್ಯವಿಲ್ಲ. ಶಹರದಲ್ಲಿ ಇವರು ವಾಚ್​ವುನ್​ರಾಗಿ, ರಾಜಮೇಸ್ತ್ರಿ ಆಗಿ, ಸೈಕಲ್​ರಿಕ್ಷಾ ಚಾಲಕರಾಗಿ ಅನೇಕ ತರಹದ ಕೆಲಸ ಕಲಿತಿದ್ದಾರೆ. ಇವರ ಹೆಂಡಿರು ಮನೆಗಳ ಕಸ ಗುಡಿಸುವ, ನೆಲ ಒರೆಸುವ, ಧೂಳು ಒರೆಸುವ, ಪಾತ್ರೆ-ಪಡಗ ತಿಕ್ಕಿ, ಕಸ ಮುಸರೆ ಮಾಡುವ ಕೆಲಸ ಕಲಿತಿದ್ದಾರೆ. ಇಷ್ಟೆಲ್ಲ ಕೆಲಸ ಮಾಡುತ್ತಲೇ ಕೆಲವು ಮಹಿಳೆಯರು ರಾಟಿ ಕಲಿತಿದ್ದಾರೆ, ಕೌದಿ ಹೊಲಿಯುವುದು ರೂಢಿ ಮಾಡಿಕೊಂಡಿದ್ದಾರೆ, ತಮಗೆ ಗೊತ್ತಿಲ್ಲದಂತೆಯೇ ಬೇಬಿ ಸಿಟ್ಟಿಂಗ್ ಕಲಿತಿದ್ದಾರೆ, ಇವರ ಹರೆಯದ ಹುಡುಗರು, ಕಾರು ಹೊಡೆಯುವುದು ಕಲಿತಿದ್ದಾರೆ, ಸಣ್ಣಪುಟ್ಟ ರಿಪೇರಿ ಮಾಡಿಕೊಳ್ಳುತ್ತಾರೆ, ಮೋಟರ್ ಪಂಪ್ ಆಫ್, ಆನ್ ಮಾಡುತ್ತ ಅದನ್ನು ರಿವೈಂಡಿಂಗ್ ಮಾಡಬಲ್ಲವರಾಗಿದ್ದಾರೆ. ಇಷ್ಟೆಲ್ಲ ಕಲೆ ಕಲಿತ ಈ ಜನ ಈಗ ಧಗಧಗಿಸುವ ಕೆಂಡವಾಗಿದ್ದಾರೆ. ಅವರ ಹೊಟ್ಟೆಯ ಕಿಚ್ಚು, ರಟ್ಟೆಯ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಇವರು ಹಳ್ಳಿಯಲ್ಲಿ ಎಷ್ಟು ದಿನ ಅಂತ ಸುಮ್ಮನೆ ಕುಳಿತಾರು? ಇವರ ತಲೆಯಲ್ಲೀಗ ನೂರಾರು ಕನಸುಗಳಿವೆ.

    ಇದನ್ನೂ ಓದಿ: ಯುಎಸ್​ ಔಷಧ ತಯಾರಿಕಾ ಸಂಸ್ಥೆಯಿಂದ ಗುಡ್​ನ್ಯೂಸ್​: ಕೊವಿಡ್​ ಲಸಿಕೆ ಮೊದಲ ಪ್ರಯೋಗದಲ್ಲಿ ಪಾಸ್​ !

    ಕರೊನಾ ಈ ಬಡವರ ಬದುಕಿನಲ್ಲಿ ಗೊತ್ತಿಲ್ಲದಂತೆಯೇ ಬದಲಾವಣೆ ತಂದಿದೆ. ಮೌನವಾಗಿದ್ದ ಇವರೀಗ ಮಾತುಗಾರರಾಗಿದ್ದಾರೆ. ಶಹರದ ಜನರು ಉತ್ಪನ್ನಗಳನ್ನು ಮಾರುವ ಕಲೆಯ ಮಾಂತ್ರಿಕತೆಯನ್ನು ನೋಡಿದ್ದಾರೆ. ಹಳ್ಳಿಯ ತಲೆ ತಲಾಂತರದ ಕೌಶಲಗಳಾದ ಕುಂಬಾರ, ಕಮ್ಮಾರ, ಬಡಿಗ, ಕಲ್ಲುಶಿಲ್ಪಿ, ಕೋಳಿಸಾಕಾಣಿಕೆ, ಕುರಿಸಾಕಾಣಿಕೆ, ಹಾಲಿನ ಮಾರಾಟ ಮತ್ತು ಉದ್ಯೋಗಗಳನ್ನು ಈ ಶಹರ ನೋಡಿ ಬಂದ ಜನ ತಮ್ಮ ಕಲಿತ ಕೌಶಲದಿಂದ ಹೊಸ ರೂಪ ಕೊಡಬಲ್ಲರು, ಈ ಹಳ್ಳಿಕಲೆಗೆ ಒಂದು ಶಹರದ ಮಾರ್ಕೆಟ್ಟನ್ನು ಹುಡುಕಬಲ್ಲರು. ಶಹರದಿಂದ ಸಾಮಾನು ತಂದು ಊರಲ್ಲಿ ಮಾರುವ ಪರಂಪರಗೆ ಸಡ್ಡು ಹೊಡೆದು, ಊರಲ್ಲೇ ಬಿತ್ತಿ ಬೆಳೆದು, ಮೈ ಮುರಿದು ದುಡಿದು, ಹೊಸದನ್ನು ಹುಟ್ಟಿಸಿ, ಊರವರಿಗೆ ಬೇಕಾದುದನ್ನು ಸೃಷ್ಟಿಸಿ, ಮಾರುವ ಮೂಲಕ ಹಳ್ಳಿಯನ್ನು ಸ್ವಾವಲಂಬಿ ಮಾಡುವ ಕೌಶಲ ಈ ಪೇಟೆಯಿಂದ ಹಳ್ಳಿಗೆ ಬಂದವರಲ್ಲಿ ಅಡಗಿದೆ. ಈ ಲೋಕಲ್ ಜನರ ಕೌಶಲದ ಬಗ್ಗೆ ನಾವೀಗ ಮೆಚ್ಚುಗೆಯ ಮಾತನಾಡುವ ಅವಶ್ಯಕತೆಯಿದೆ.

    ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ‘ಬೈಗಾ ಚೆಕ್’ ಎಂಬ ಕಾಡಿನಲ್ಲಿ 52 ಹಳ್ಳಿಗಳಿವೆ. ಬೈಗಾ ಬುಡಕಟ್ಟಿಗರ ಹಾಡಿಗಳು. ಈ 52 ಹಾಡಿಗಳ ಬುಡಕಟ್ಟಿಗರು ಕಾಡಿನಿಂದ ಕಿರು ಉತ್ಪನ್ನಗಳಾದ- ತೆಂದೂ ಎಲಿ, ಜೇನು, ಮರದ ಅಂಟು, ಕಂದಮೂಲ, ಹಣ್ಣು, ಮಹುವಾ, ಅಣಬೆ, ಗಿಡ ಮೂಲಿಕೆಗಳನ್ನು ಸಂಗ್ರಹಿಸಿ, ಕಾಲ್ನಡಿಗೆಯಲ್ಲಿ ಸಮೀಪದ ‘ಬಜಗ್’ ಪೇಟೆಗೆ ಬಂದು ‘ಶಾಹೂ’ ಸಾಹುಕಾರರಿಗೆ ಮಾರಿ ತಮ್ಮ ದಿನನಿತ್ಯದ ವಸ್ತುಗಳಾದ, ಉಪ್ಪು, ಬೆಲ್ಲ, ಮೆಣಸಿನಕಾಯಿ, ಚಿಮಣಿ ಎಣ್ಣೆ ಖರೀದಿಸಿ ‘ಹಾಡಿ’ಗೆ ಮರಳುತ್ತಾರೆ. ‘ಬಜಗ್’ದ ಶಾಹೂಗಳು ತಮ್ಮ ಅಂಗಡಿಗಳಲ್ಲಿ ಆದಿವಾಸಿಗಳು ಇಷ್ಟಪಡುವ ಪಾತ್ರೆ-ಪಡಗಗಳನ್ನು ಇಟ್ಟಿರುತ್ತಾರೆ. ಹಿತ್ತಾಳೆ, ತಾಮ್ರದ ತಟ್ಟೆ, ಲೋಟ, ತಂಬಿಗೆ; ಸಿಲಾವರದ ತಗಡಿನ ವಿಶಿಷ್ಟ ಸಂದೂಕಗಳನ್ನು ನಾವಿಲ್ಲಿ ನೋಡಬಹುದು. ಈ ‘ಶಾಹೂ’ ಸಾಹುಕಾರರಲ್ಲಿಯೇ ಹಣವುಳ್ಳವರು ‘ಮಹುವಾ’ದಿಂದ ತಯಾರಿಸಬಹುದಾದ ಕೇಕ್, ಚಾಕಲೆಟ್, ಜ್ಯೂಸ್​ಗಳನ್ನು ಮಾರ್ಕೆಟ್ ಮಾಡತೊಡಗಿದರೆ, ಇದಕ್ಕೆ ಬೇಕಾದ ಯುನಿಟ್ ಆರಂಭಿಸಿದರೆ, ಯಥೇಚ್ಛವಾಗಿ ಸಿಗುವ ಮಹುವಾಕ್ಕೆ ಬೆಲೆ ಬರುತ್ತದೆ ಹಾಗೂ ಅಪೌಷ್ಟಿಕತೆಯಿಂದ ಬಳಲುವ ಬುಡಕಟ್ಟು ಗರ್ಭಿಣಿಯರು, ಮಕ್ಕಳಿಗೆ ಪೋಷಕಾಂಶ ಲಭ್ಯವಾಗುತ್ತದೆ. ಸ್ಥಳೀಯ ಉತ್ಪನ್ನಗಳ ಮಾರ್ಕೆಟ್ ಬೆಲೆ ದುಪ್ಪಟ್ಟು ಮಾಡುವ ಕಲೆಯನ್ನು ಕುರಿತು ನಾವೀಗ ವೋಕಲ್ ಆಗಬೇಕಾಗಿದೆ.

    ಕಲ್ಯಾಣ ಕರ್ನಾಟಕದ 25 ಸಾವಿರ ಜನ ಬೆಂಗಳೂರಿನಿಂದ ವಾಪಸು ಹಳ್ಳಿಗಳಿಗೆ ಹೋಗಿದ್ದಾರೆಂದು ಒಂದು ವರದಿ, ಈ ಜನರ ಹೊಟ್ಟೆಯ ಸಿಟ್ಟಿನ ಬಗ್ಗೆ ನಾವೀಗ ಮಾತನಾಡಬೇಕಾದ ಕಾಲ ಬಂದಿದೆ. ‘ನಾವು ಬೇಕಾದರೆ ತರಕಾರಿ ಮಾರಲು ರೆಡಿ’, ‘ಮಿರ್ಚಿ ಭಜಿ ಮಾಡಿ ಬದುಕಬಲ್ಲೆವು. ಆದರೆ ಬೆಂಗಳೂರಿಗೆ ಹೋಗಲಾರೆವು’ ಎಂಬ ಇವರ ಇಚ್ಛಾಶಕ್ತಿಯನ್ನು ಕನ್ನಡನಾಡು ಎನ್​ಕ್ಯಾಶ್ ಮಾಡಿಕೊಂಡಿದ್ದಾದರೆ- ಹಳ್ಳಿಯ ಕ್ರಿಯಾಶಕ್ತಿ ಊರಿಗೊಂದು ಕಸುವು ತುಂಬಬಲ್ಲದು. ಒಕ್ಕಲುತನದ ಕೆಲಸಕ್ಕೆ ಮತ್ತೆ ಮಾನವ ಶಕ್ತಿ ಲಭ್ಯವಾಗುವ ಮೂಲಕ ಉತ್ಪಾದನೆಯಲ್ಲಿ ಏರಿಕೆ ಕಾಣಬಲ್ಲದು. ಈ ಸ್ಥಳೀಯ ಶಕ್ತಿಯನ್ನು ಹೇಗೆ ದುಡಿಸಿಕೊಳ್ಳಬೇಕೆಂಬುದನ್ನು ಉದ್ದಿಮೆದಾರರು ಯೋಜನೆ ರೂಪಿಸಿಬೇಕು. ನಮ್ಮ ದೇಶದ- ಕಂಜ್ಯೂಮರ್ಸ್ ವಿಶೇಷಜ್ಞರು, ಮಾಮ್ ಆಂಡ್ ಪಾಪ್ ಅಂಗಡಿ ಸರಣಿಗಳ ಮೇಲೆ ಸಂಶೋಧನೆ ಮಾಡುವವರು; ಶಹರದಲ್ಲಿ ತಯಾರಾಗಿ ಮರಳಿರುವ ಈ ಕುಶಲ ಕೈಗಳನ್ನು ಸಬಲೀಕರಣಗೊಳಿಸುವ ಬಗ್ಗೆ ತಕ್ಷಣ ಕಾರ್ಯತತ್ಪರರಾಗಬೇಕು. ಸ್ಥಳೀಯ ಬ್ಯಾಂಕುಗಳು ಇವರ ಕೌಶಲಗಳಿಗೆ ಹೊಂದುವ ಹಣಕಾಸು ಯೋಜನೆಗಳನ್ನು ರೂಪಿಸುವ ಜೊತೆಗೆ ಇವರ ವ್ಯಾಪಾರ-ವಹಿವಾಟಿಗೆ ಪೂರಕವಾಗುವ ತಾಂತ್ರಿಕತೆಯನ್ನು ಸರ್ಕಾರದ ಇಲಾಖೆಗಳು ರೂಪಿಸಬೇಕು.

    ‘ಹಿತ್ತಲ ಗಿಡ ಮದ್ದಲ್ಲ’ ಎಂಬ ನಾಣ್ಣುಡಿಯನ್ನು ‘ಹಿತ್ತಲ ಗಿಡ ಮಾತ್ರ ಮದ್ದು’ ಎಂದು ಬದಲಾಯಿಸಬೇಕೆಂದು ಕರೊನಾ ನಮಗೆ ಕರೆ ಕೊಟ್ಟಿದೆ. ಮಹಾನಗರದ ಜನಗಳೀಗ ಹಳ್ಳಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಹಳ್ಳಿಗಳ- ಶುದ್ಧಹವೆ, ಶುದ್ಧನೀರು, ತಾಜಾ ತರಕಾರಿ, ಹಾಲು- ಇವರಿಗೆ ಅಮೃತ ಸಮಾನ ಎಂದು ಅನ್ನಿಸುತ್ತಿವೆ. ನಮ್ಮ ಮಾರುಕಟ್ಟೆ ಪರಿಣಿತರೀಗ ಸ್ಥಳೀಯ ತಾಜಾತನದ ಬಗ್ಗೆ ವೋಕಲ್ ಆಗಬೇಕಾಗಿದೆ. ದೇಶದ ಹಳ್ಳಿಗಾಡಿನ ಕತೃತ್ವ ಶಕ್ತಿಯ ಬಗ್ಗೆ ವೋಕಲ್ ಆಗಲು ವಿದೇಶಿ ಅರ್ಥಶಾಸ್ತ್ರಜ್ಞರು ಬೇಕಾಗಿಲ್ಲ; ನಮ್ಮ ಮಣ್ಣಿನ ಅರ್ಥಶಾಸ್ತ್ರಜ್ಞರು ಈ ಸತ್ಯದ ಬಗ್ಗೆ ಸದಾ ಮಾತನಾಡುತ್ತಲೇ ಬಂದಿದ್ದಾರೆ. ಬಾಪೂಜಿ, ದೀನದಯಾಲ ಉಪಾಧ್ಯಾಯ ಇವರಲ್ಲಿ ಪ್ರಮುಖರು.

    (ಲೇಖಕರು ಮಧ್ಯಪ್ರದೇಶ ಅಮರಕಂಟಕದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts