More

  ಮತದಾರ ಋಣ ತೀರಿಸುವುದು ಅಸಾಧ್ಯ

  ಬಸವನಬಾಗೇವಾಡಿ: ಮತಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ, ಆತ್ಮೀಯತೆಯ ಋಣವನ್ನು ಎಷ್ಟು ಜನ್ಮವೆತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

  ತಾಲೂಕಿನ ಡೋಣೂರದಲ್ಲಿ 2017/18 ಸಾಲಿನ ಮುಖ್ಯಮಂತ್ರಿ ವಿಕಾಸ ಯೋಜನೆಯಡಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ರಂಗಮಂದಿರ, ಗರಡಿ ಮನೆ, ಕಾಮಣ್ಣನ ಮಂದಿರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

  1952ರಿಂದ ಅನೇಕ ಶಾಸಕರು ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ನಿರೀಕ್ಷೆಯಷ್ಟು ಅಭಿವೃದ್ಧಿ ಆಗಿರಲಿಲ್ಲ. ನಾನು ಶಾಸಕನಾದ ಬಳಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಹೀಗಾಗಿ ಕ್ಷೇತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು.

  ಈ ಹಿಂದೆ ಡೋಣಿ ನದಿ ಭಾಗದ ಜನತೆ ಸುಸಜ್ಜಿತ ರಸ್ತೆ, ವಿದ್ಯುತ್, ಕುಡಿಯುವ ನೀರು, ಶಾಲೆ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದರು. ಸದ್ಯ ಆ ಭಾಗ ಸೇರಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೂ 2050ಕ್ಕೆ ಕ್ಷೇತ್ರದ ಜನಸಂಖ್ಯೆಗನುಗುಣವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಈ ಕ್ಷೇತ್ರದಲ್ಲಿ ಆಲಮಟ್ಟಿ ಅಣೆಕಟ್ಟು ಇದ್ದು, 2ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಮಹಾದಾಸೆ ಹೊಂದ್ದಿದ್ದೇನೆ. ಆದರೆ, ಕೃಷ್ಣಾನದಿ ನೀರಿನ ನ್ಯಾಯಾಧಿಕರಣದ ಕಾನೂನಿನ ತೊಡಕಿನಿಂದ ಆ ಕಾರ್ಯ ವಿಳಂಬವಾಗಿದೆ. ಈ ವರ್ಷ 3.20 ಕೋಟಿ ರೂ.ಗಳಲ್ಲಿ ಕ್ಷೇತ್ರದ ವಿವಿಧ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

  ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ, ಕಾಂಗ್ರೆಸ್ ಮುಖಂಡ ಎ.ಎಂ.ಪಾಟೀಲ ಮಾತನಾಡಿ, ಮತಕ್ಷೇತ್ರದಲ್ಲಿ ಶಾಸಕ ಶಿವಾನಂದ ಪಾಟೀಲರು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ ಎಂದು ಹೇಳಿದರು.

  ಕೊಟ್ಟೂರ, ಡೋಣೂರ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರವಿ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಸವರಾಜ ಸೊಂಪೂರ, ಗ್ರಾಪಂ ಉಪಾಧ್ಯಕ್ಷ ಮಡಿವಾಳವ್ವ ಪೂಜಾರಿ, ಅಶೋಕ ಚಲವಾದಿ, ಸುಭಾಸ ಕಲ್ಯಾಣಿ, ರಾಜುಗೌಡ ಪಾಟೀಲ, ಎಲ್.ಜಿ. ಕಾಗವಾಡ, ಅಶೋಕ ಪಾಟೀಲ, ಎಂ.ಜಿ.ಪಡಗಾನೂರ, ಮಹಾಂತಪ್ಪ ಗುಜಗೊಂಡ, ಶಿವಾನಂದ ಮಂಗಾನವರ, ಆನಂದ ಸ್ವಾಮಿ, ಎಂ.ಎಸ್.ಇವಣಗಿ ಇತರರಿದ್ದರು. ಸಿದ್ದರಾಮ ಹಳ್ಳಿ ಸ್ವಾಗತಿಸಿದರು. ಎಂ.ಜಿ.ಬಿರಾದಾರ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts