More

    ರೈತರು ಸ್ವಾವಲಂಬಿಯಾಗಲಿ ಎಂದಿದ್ದು ತಪ್ಪೇ? ವಿಪಕ್ಷಗಳ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ

    ವಿಜಯಪುರ: ಬರಗಾಲದಂಥ ಸಂದರ್ಭದಲ್ಲಿ ಸಾಲ ಮನ್ನಾ ಬೇಡಿಕೆ ಸ್ವಾಭಾವಿಕ. ಆದರೆ, ರೈತರು ಸ್ವಾವಲಂಬಿಯಾಗಿ ಬದುಕಬೇಕು. ಯಾವುದೇ ಸರ್ಕಾರದ ಹಣದ ಮೇಲೆ ಅವಲಂಬಿತರಾಗಬಾರದು. ಅದರ ಬದಲು ಸರ್ಕಾರಕ್ಕೆ ಸಾಲ ಕೊಡುವ ಮಟ್ಟಿಗೆ ಸದೃಢರಾಗಿ ಬೆಳೆಯಬೇಕೆಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

    ರೈತರು ಪರಿಹಾರಕ್ಕಾಗಿ ಬರ ನಿರೀಕ್ಷೆ ಮಾಡುತ್ತಾರೆಂದು ಹೇಳಿದ್ದಾಗಿಯೂ, ತಮಗೆ ಮದ ಏರಿದೆ ಎಂಬುದಾಗಿಯೂ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳಿಗೆ ಸೋಮವಾರ ಗೃಹ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಇಡೀ ಭಾಷಣದ ಸಾರಾಂಶ ಬಿಟ್ಟು ಕೇವಲ ಒಂದು ವಿಡಿಯೋ ತುಣುಕು ಇಟ್ಟುಕೊಂಡು ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿವೆ ಎಂದವರು ಹರಿಹಾಯ್ದಿದ್ದಾರೆ.

    ಇಡೀ ಹಾವೇರಿ ಜಿಲ್ಲೆಯಲ್ಲಿ 126 ಕೋಟಿ ಮಧ್ಯಮಾವಧಿ ಬೆಳೆ ವಿಮೆ ಕೊಡಿಸಿದ್ದೇನೆ. ಯಾವ ಜಿಲ್ಲೆಯಲ್ಲಿ ಕೊಡಿಸಿದ್ದಾರೆ ಹೇಳಿ? ರೈತ ಪರ ಕಾಳಜಿ ಇಲ್ಲದೇ ಹೋಗಿದ್ದರೆ ಇದೆಲ್ಲ ಆಗುತ್ತಿತ್ತಾ? ಬಿಜೆಪಿಗರಿಗೆ ರೈತ ಕಾಳಜಿ ಇದ್ದರೆ, ಸಕ್ಕರೆ, ಅಕ್ಕಿ, ಈರುಳ್ಳಿ ರಫ್ತು ನಿಷೇಧ ಯಾಕೆ ಮಾಡುತ್ತಿದ್ದರು? ಇವತ್ತು ಕೊಬ್ಬರಿ ಬೆಲೆ ಕುಸಿದಿದೆ. ದೇವೇಗೌಡರು ಪ್ರಧಾನಿ ಮೋದಿಗೆ ಮನವಿ ಮಾಡುವ ಸ್ಥಿತಿ ಬಂದಿದೆ. ಇದೆಲ್ಲಾ ನೋಡಿಯೂ ಬಿಜೆಪಿಗರು ಸುಮ್ಮನೇ ಏಕಿದ್ದಾರೆ? ಒಣದ್ರಾಕ್ಷಿಗೆ ಬೆಂಬಲ ಬೆಲೆ ಕೊಡಿಸಲು ಇವರಿಂದ ಏಕೆ ಆಗುತ್ತಿಲ್ಲ. ಕಬ್ಬು ಬೆಳೆಗೆ ಕನಿಷ್ಠ ಟನ್‌ಗೆ 3500 ರೂಪಾಯಿ ಕೊಡಬಹುದಿತ್ತು, ಆದರೆ ಇಂದು 3115ರೂಪಾಯಿ ಕೊಟ್ಟಿದ್ದಾರೆ. ರಫ್ತು ಮಾಡಲು ಅವಕಾಶ ಇದ್ದರೆ 4000 ರೂ.ವರೆಗೂ ಸಿಗುತ್ತಿತ್ತು. ಇಥೆನಾಲ್ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಪರ ಚಿಂತನೆ ಮಾಡುವುದನ್ನು ಬಿಟ್ಟು ಲೋಕಸಭೆ ಚುನಾವಣೆ ದೃಷ್ಠಿಕೋನದಿಂದ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದರು.

    ಕಾಂಗ್ರೆಸ್ ರೈತರ ಪರ ಇದ್ದಲ್ಲಿಯೇ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದೇವೆ. ಈ ಹಿಂದೆ ಶೇ.3 ರ ಬಡ್ಡಿ ದರದಲ್ಲಿ ಸಿಗುತ್ತಿದ್ದ ಸಾಲ ಸೌಲಭ್ಯ ಇದೀಗ ಶೂನ್ಯ ಬಡ್ಡಿ ದರಕ್ಕೆ ಇಳಿಸಿದ್ದೇವೆ. ಹೀಗಾಗಿ ರೈತರ ಹಿತ ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಅವರಿಗೆ ಪಾರ್ಲಿಮೆಂಟ್ ಚುನಾವಣೆ ಟಾರ್ಗೆಟ್ ಇದೆ. ಹೇಗಾದರೂ ಮಾಡಿ ರೈತರನ್ನು ಸೆಳೆಯಲು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ರೈತರ ನೆರವಿಗೆ ಧಾವಿಸಲಿ. ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ಬರಬೇಕಾದ ಅನುದಾನ ಕೊಡಿಸಲಿ. ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲಿ. ಅದನ್ನು ಬಿಟ್ಟು ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ನನಗೆ ಯಾವುದೇ ರೀತಿಯ ಮದ ಏರಿಲ್ಲ. ರೈತರಿಗಾಗಿ ನಿರಂತರ ಹೋರಾಟ ಮಾಡುವೆ ಎಂದರು.

    ರಾಜ್ಯದಲ್ಲಿ ಉಚಿತ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿಲ್ಲ. ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಇದನ್ನು ಸಹಿಸದ ಬಿಜೆಪಿಗರು ಸರ್ಕಾರ ಪತನವಾಗಲಿದೆ ಎಂಬ ಊಹಾಪೋಹ ಹರಿಬಿಡುತ್ತಿದ್ದಾರೆ. 136 ಜನ ಶಾಸಕರಿದ್ದಾಗ ಸರ್ಕಾರ ಪತನವಾಗುತ್ತದೆಯಾ?ಎಂದು ಸಚಿವ ಶಿವಾನಂದ ಪಾಟೀಲ ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts