More

    ನೀರಾವರಿ ಯೋಜನೆಗೆ ಆದ್ಯತೆ

    ಚಿಕ್ಕೋಡಿ: ಖಡಕಲಾಟ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪಟ್ಟಣಕುಡಿ ಹಾಗೂ ವಾಳಕಿ ಗ್ರಾಮಗಳಿಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಆಗಬೇಕಿತ್ತು. ಆದರೆ, ಶಾಸಕರ ನಿರ್ಲಕ್ಷೃದಿಂದ ವಾಳಕಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಪರಿಶೀಲಿಸಿ ಶೀಘ್ರ ಕುಡಿಯುವ ನೀರು ಯೋಜನೆ ಮಂಜೂರು ಮಾಡಲಾಗುವುದು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ತಾಲೂಕಿನ ವಾಳಕಿ ಗ್ರಾಮದಲ್ಲಿ ಬುಧವಾರ ನೀರಾವರಿ ಇಲಾಖೆಯಿಂದ ಮಂಜೂರಾದ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯು ವಾಳಕಿ ಹಾಗೂ ಪಟ್ಟಣಕುಡಿ ರೈತರಿಗೆ ವರದಾನವಾಗಿರುವ ಯೋಜನೆಯಾಗಿದೆ. ಇದು 5 ವರ್ಷದ ಹಿಂದೆಯೇ ಮಂಜೂರು ಆಗಬೇಕಿತ್ತು. ಆದರೆ, ಹಿಂದಿನ ಸರ್ಕಾರದಿಂದ ಸಾಧ್ಯವಾಗಿಲ್ಲ. ಇದೀಗ ಬಿಜೆಪಿ ಸರ್ಕಾರ ಯೋಜನೆ ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲಿದೆ ಎಂದರು. ಈ ಕುರಿತು ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರ ಜತೆಗೆ ಮಾತುಕತೆ ನಡೆಸಲಾಗಿದ್ದು, ಈ ಯೋಜನೆಗೆ ಆದ್ಯತೆ ನೀಡಿ ವರ್ಷ 100 ಕೋಟಿ ರೂ. ಒದಗಿಸಲಾಗುವುದು ಎಂದು ವಾಗ್ದಾನ ಮಾಡಿದ್ದಾರೆ. ಅಲ್ಲದೆ, ಸಿಎಂ ಯಡಿಯೂರಪ್ಪ ಅವರಿಂದ ಯೋಜನೆಗೆ ಚಾಲನೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಬಸಗೌಡ ಖೋತ, ಪ್ರಕಾಶ ಪಾಟೀಲ, ಸಚಿನ್ ಖೋತ, ಕಲ್ಲಪ್ಪ ಪಾಟೀಲ, ಅಶೋಕ ಪಾಟೀಲ, ಅಶೋಕ ಚೌಗಲಾ, ಮಹಾದೇವ ಪಾಟೀಲ, ರಾಮಾ ಕಮತೆ ಹಾಗೂ ವಿವಿಧ ಗ್ರಾಮಸ್ಥರು ಇದ್ದರು.

    ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಸೂಚನೆ

    ನೀರಾವರಿ ನಿಗಮದಿಂದ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕುಗಳಲ್ಲಿ 10 ಕೋಟಿ ರೂಪಾಯಿ ವೆಚ್ಚದ 10 ಬ್ಯಾರೇಜ್ ಕಾಮಗಾರಿ ನಡೆದಿವೆ. ಈಗಾಗಲೇ ವಾಳಕಿ ಬ್ಯಾರೇಜ್ ಕಾಮಗಾರಿ ಕೈಗೊಳ್ಳಲಾಗಿದೆ. ಕಾಲಮಿತಿಯೊಳಗೆ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಂಎಲ್‌ಸಿ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ. ವಾಳಕಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಮಹಾಂತೇಶ ಕವಟಗಿಮಠ ಅವರು ಕರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕಾರ್ಮಿಕರು ದೈಹಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಅಧಿಕಾರಿಗಳು ಕಾರ್ಮಿಕರಿಗೆ ಸ್ಯಾನಿಟೈಸರ್ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

    ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ದತ್ತು ಪಡೆದು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದವರಿಗೆ ಬಿಜೆಪಿ ಸರ್ಕಾರ ಸರಿಯಾದ ಉತ್ತರ ಕೊಡಲಿದೆ.
    | ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts