More

    ಇಸ್ರೇಲ್​​​ ಮೇಲೆ ಇರಾನ್​ನಿಂದ 100ಕ್ಕೂ ಅಧಿಕ ಡ್ರೋನ್​ಗಳಿಂದ ದಾಳಿ: ಮತ್ತೊಂದು ಭೀಕರ ಯುದ್ಧದ ಭೀತಿ

    ಜೆರುಸಲೇಮ್​: ಶನಿವಾರ ತಡರಾತ್ರಿ ಇಸ್ರೇಲ್​ ಮೇಲೆ ಇರಾನ್​ ನೇರವಾಗಿ ಡ್ರೋನ್ಸ್ ದಾಳಿ ಮಾಡಿರುವುದಾಗಿ ಭಾನುವಾರ ವರದಿಯಾಗಿದೆ. ಇದರಿಂದ ಉಭಯ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ರಷ್ಯಾ-ಯೂಕ್ರೇನ್​ ಹಾಗೂ ಇಸ್ರೇಲ್​-ಪ್ಯಾಲೆಸ್ತೀನ್​ ಭೀಕರ ಯುದ್ಧಕ್ಕೆ ಸಾಕ್ಷಿಯಾಗಿರುವ ಜಗತ್ತು ಇದೀಗ ಇಸ್ರೇಲ್​-ಇರಾನ್​ ರಾಷ್ಟ್ರಗಳ ಸಮರಕ್ಕೆ ಸಾಕ್ಷಿಯಾಗಲಿದೆ.

    ಸುಮಾರು 100ಕ್ಕೂ ಅಧಿಕ ಡ್ರೋನ್​ಗಳನ್ನು ಇರಾನ್ ಹಾರಿಸಿರುವುದಾಗಿ ಇಸ್ರೇಲ್​ ಮಿಲಿಟರಿ ಪಡೆ ಹೇಳಿದೆ. ಅಲ್ಲದೆ, ಡಜನ್​ಗಟ್ಟಲೆ ಡ್ರೋನ್​ಗಳು ಹಾದು ಹೋದವು ಎಂದು ಇರಾಕ್​ ಮತ್ತು ಜೋರ್ಡಾನ್​ ರಕ್ಷಣಾ ಪಡೆಗಳು ಸಹ ತಿಳಿಸಿವೆ. ಇಸ್ರೇಲ್ ಕಡೆಗೆ ಹೋಗುತ್ತಿದ್ದ ಇರಾನಿನ ಡ್ರೋನ್ ವಿಮಾನವನ್ನು ಯುಎಸ್ ಮಿಲಿಟರಿ ಪಡೆ ಹೊಡೆದುರುಳಿಸಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಿತ್ರ ರಾಷ್ಟ್ರ ಇಸ್ರೇಲ್​ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ಈ ಘರ್ಷಣೆಯಿಂದ ದೂರ ಉಳಿಯಿರಿ ಎಂದು ಇರಾನ್​ ಅಮೆರಿಕಕ್ಕೆ ಎಚ್ಚರಿಸಿದೆ. ಇದರ ನಡುವರೆಯೂ ಅಮೆರಿಕ ಮಾತ್ರ ತನ್ನ ಮಿತ್ರನನ್ನು ಬಿಟ್ಟುಕೊಟ್ಟಿಲ್ಲ. ಈ ದಾಳಿಯಿಂದ ಮತ್ತೊಂದು ಭೀಕರ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

    ರಾಯಿಟರ್ಸ್ ವರದಿಯ ಪ್ರಕಾರ ಇಸ್ರೇಲ್‌ ಮೇಲೆ 100ಕ್ಕೂ ಹೆಚ್ಚು ಸ್ಫೋಟಕ ಡ್ರೋನ್‌ಗಳನ್ನು ಇರಾನ್ ಉಡಾವಣೆ ಮಾಡಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೊಂಡಿದೆ. ಇರಾನ್‌ನ ಮೇಲಿನ ದಾಳಿಗೆ ತನ್ನ ವಾಯುಪ್ರದೇಶ ಸೇರಿದಂತೆ ಯಾವುದೇ ಪ್ರದೇಶವನ್ನು ತೆರೆಯುವ ಯಾವುದೇ ದೇಶಕ್ಕೆ ಟೆಹ್ರಾನ್ (ಇರಾನ್​ ರಾಜಧಾನಿ) ದೃಢವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ ರಕ್ಷಣಾ ಸಚಿವ ಮೊಹಮ್ಮದ್ ರೆಜಾ ಅಶ್ಟಿಯಾನಿ ಇಸ್ರೇಲ್​ಗೆ ಎಚ್ಚರಿಸಿದ್ದಾರೆ.

    ಇರಾನ್, ಡ್ರೋನ್ ದಾಳಿಯನ್ನು ಪ್ರಾರಂಭಿಸಿದ ಬೆನ್ನಲ್ಲೇ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಜಧಾನಿ ಟೆಲ್ ಅವಿವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಲ್ಲಿ ಕ್ಯಾಬಿನೆಟ್ ಸಭೆ ಕರೆದು, ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

    ಇದರ ನಡುವೆ ಇಸ್ರೇಲ್​ ಮೇಲಿನ ಇರಾನ್​ ದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್​ ಮಾತನಾಡಿ, ಈ ದಾಳಿಗಳು ಉದ್ವಿಗ್ನತೆಯನ್ನು ಉಂಟುಮಾಡುವ ಮತ್ತು ಶಾಂತಿ ನೆಲೆಸಿರುವ ಪ್ರದೇಶವನ್ನು ಅಸ್ಥಿರಗೊಳಿಸುವ ಅಪಾಯವನ್ನು ಉಂಟುಮಾಡುತ್ತವೆ. ಇರಾನ್ ತನ್ನ ಸ್ವಂತ ಹಿತ್ತಲಿನಲ್ಲಿ ಅವ್ಯವಸ್ಥೆಯನ್ನು ಬಿತ್ತುವ ಉದ್ದೇಶವನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಸುನಕ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ದಾಳಿಗೆ ಕಾರಣವೇನು?
    ಕಳೆದ ಸೋಮವಾರ ಶಂಕಿತ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದಲ್ಲಿರುವ ಇರಾನ್​ ರಾಯಭಾರ ಕಚೇರಿಯ ಮೇಲೆ ಬಾಂಬ್​ ದಾಳಿ ನಡೆಸಿದ ಪ್ರತೀಕಾರವಾಗಿ ಇರಾನ್​ನಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇಸ್ರೇಲ್​ ನಡೆಸಿದ ದಾಳಿಯಲ್ಲಿ ಮೂವರು ಹಿರಿಯ ಕಮಾಂಡರ್​ಗಳು ಸೇರಿದಂತೆ ಏಳು ಮಿಲಿಟರಿ ಸಲಹೆಗಾರರನ್ನು ಇಸ್ರೇಲ್​ ಕೊಂದಿದೆ ಎಂದು ಇರಾನ್​ ಆರೋಪ ಮಾಡಿದೆ. ಈ ಘಟನೆಯೇ ಇಸ್ರೇಲ್​ ಮೇಲಿನ ದಾಳಿಗೆ ಪ್ರಚೋದನೆಯಾಗಿದೆ ಎನ್ನಲಾಗಿದೆ.

    ಇಸ್ರೇಲ್​ ಹೇಳುವುದೇನು?
    ಸಿರಿಯಾದಲ್ಲಿ ನಡೆದ ದಾಳಿಯ ಹೊಣೆಯನ್ನು ಇಸ್ರೇಲ್​ ಹೊತ್ತುಕೊಂಡಿಲ್ಲ. ಆದರೆ, ಇರಾನ್​ ಪ್ರತೀಕಾರದ ಬಗ್ಗೆ ಮೊದಲೇ ಮಾತನಾಡಿದ್ದ ಇಸ್ರೇಲ್​ ಪ್ರಧಾನಿ ನೇತುನ್ಯಾಹು, ವರ್ಷಗಳಿಂದ ಇರಾನ್ ನೇರವಾಗಿ ಮತ್ತು ಅದರ ಪ್ರಾಕ್ಸಿಗಳ ಮೂಲಕ ನಮ್ಮ ವಿರುದ್ಧ ಸಂಚು ಮಾಡುತ್ತಲೇ ಇದೆ. ಹೀಗಾಗಿ ಇಸ್ರೇಲ್, ಇರಾನ್ ಮತ್ತು ಅದರ ಪ್ರಾಕ್ಸಿಗಳ ವಿರುದ್ಧ ರಕ್ಷಣಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

    ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂದು ನಮಗೆ ತಿಳಿದಿದೆ ಮತ್ತು ಯಾರು ನಮಗೆ ಹಾನಿ ಮಾಡುತ್ತಾರೋ ಅಥವಾ ನಮಗೆ ಹಾನಿ ಮಾಡಲು ಯೋಜಿಸಿದರೂ ನಾವು ಅವರಿಗೆ ಹಾನಿ ಮಾಡುತ್ತೇವೆ ಎಂಬ ಸರಳ ತತ್ವದ ಪ್ರಕಾರ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಬೆಂಜಮಿನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಹ್ಯಾಟ್ರಿಕ್ ಸಾಧನೆಯತ್ತ ಹೆದ್ದಾರಿಗಳ ಸರದಾರ?: ಆರೆಸ್ಸೆಸ್ ಕೇಂದ್ರಸ್ಥಾನ ನಾಗ್ಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಹಣಾಹಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts