More

    ಸೆಪ್ಟೆಂಬರ್ 3ನೇ ವಾರದಿಂದ ಐಪಿಎಲ್ ಪುನರಾರಂಭ?ಯುಎಇಯಲ್ಲಿ ಉಳಿದ 31 ಪಂದ್ಯಗಳು

    ನವದೆಹಲಿ: ಕೋವಿಡ್-19ರಿಂದಾ ಮುಂದೂಡಿಕೆಯಾಗಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇಯಲ್ಲಿ ಸೆಪ್ಟೆಂಬರ್ 18 ಅಥವಾ 19ರಂದು ಪುನರಾರಂಭಗೊಳ್ಳುವ ಸಾಧ್ಯತೆಗಳಿವೆ. ಮೂರು ವಾರ ಟೂರ್ನಿ ಆಯೋಜಿಸಲು ತೀರ್ಮಾನಿಸಿರುವ ಬಿಸಿಸಿಐ, ಉಳಿದ 31 ಪಂದ್ಯಗಳಿಗೆ ಸಂಭಾವ್ಯ ವೇಳಾಪಟ್ಟಿ ಸಿದ್ಧ ಪಡಿಸಿಕೊಂಡಿದೆ. 10 ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 9 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
    ಭಾರತದಲ್ಲಿ ಬಯೋಬಬಲ್ ವ್ಯಾಪ್ತಿಯಲ್ಲೂ ಆಟಗಾರರಿಗೆ ಕರೊನಾ ಸೋಂಕು ತಗುಲಿದ್ದರಿಂದ, ಮೇ 4 ರಂದು ಲೀಗ್ ಅನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು. ಟೂರ್ನಿ ಪುನರಾರಂಭಿಸುವ ಕುರಿತು ಈಗಾಗಲೇ ಪ್ರಾಯೋಜಕರು, ಫ್ರಾಂಚೈಸಿಗಳು ಹಾಗೂ ನೇರ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಜತೆ ಮಾತುಕತೆ ನಡೆಸಿರುವ ಬಿಸಿಸಿಐ ಸಂಭಾವ್ಯ ವೇಳಾಪಟ್ಟಿಯನ್ನು ಸಿದ್ಧ ಮಾಡಿಕೊಂಡಿದೆ. ಸೆ.18 ರಿಂದ 20ರ ನಡುವೆ ಟೂರ್ನಿಗೆ ಮರು ಚಾಲನೆ ಸಿಗಲಿದೆ. ವಾರಾಂತ್ಯ ಇರುವುದರಿಂದ ಈ ಎರಡು ದಿನಗಳಲ್ಲಿ ಒಂದು ದಿನ ಟೂರ್ನಿಗೆ ಮರುಚಾಲನೆ ನೀಡಲು ಬಿಸಿಸಿಐ ಸಿದ್ಧತೆ ನಡೆಸಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ. ಹಾಗೆಯೇ ಅಕ್ಟೋಬರ್ 9 ಹಾಗೂ 10 ರಂದು ಕೂಡ ವಾರಾಂತ್ಯ ಬರಲಿದ್ದು, ಈ ಎರಡು ದಿನಗಳಲ್ಲಿ ಒಂದು ದಿನ ಫೈನಲ್ ಪಂದ್ಯ ನಡೆಯುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಪತ್ನಿ ನತಾಶಾ ಈಜುಡುಗೆ ಫೋಟೋಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?, 

    ಸೆ.15ಕ್ಕೆ ಯುಎಇಗೆ ಆಟಗಾರರು ?
    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಸೆ.14ಕ್ಕೆ ಮ್ಯಾಚೆಂಸ್ಟರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಮರುದಿನವೇ ಭಾರತೀಯ ಆಟಗಾರರು ವಿಶೇಷ ವಿಮಾನದಲ್ಲಿ ಯುಎಇಗೆ ಆಗಮಿಸಲಿದ್ದಾರೆ. ಒಂದು ವೇಳೆ ಲೀಗ್‌ಗೆ ಇಂಗ್ಲೆಂಡ್ ಆಟಗಾರರು ಲಭ್ಯ ಆಗುವುದಾದರೆ, ಅದೇ ವಿಮಾನದಲ್ಲೇ ಅವರು ಕೂಡ ಯುಎಇ ತಲುಪಲಿದ್ದಾರೆ. ಇದಕ್ಕಾಗಿಯೇ ಮ್ಯಾಚೆಂಸ್ಟರ್‌ನಿಂದ ಯುಎಇಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಬೆನ್ನಲ್ಲೇ ವಿಂಡೀಸ್ ಆಟಗಾರರು ಕೂಡ ವಿಶೇಷ ವಿಮಾನದ ಮೂಲಕ ಯುಎಇಗೆ ಆಗಮಿಸಲಿದ್ದಾರೆ. ವಿಂಡೀಸ್ ಹಾಗೂ ಇಂಗ್ಲೆಂಡ್‌ನಿಂದ ಆಗಮಿಸಿದ ಆಟಗಾರರು ಮೂರು ದಿನ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಈ ಕುರಿತು ಬಿಸಿಸಿಐ ಕೂಡ ಈಗಾಗಲೇ ಫ್ರಾಂಚೈಸಿಗಳಿಗೆ ಮಾಹಿತಿ ರವಾನಿಸಿದೆ. ಬಿಸಿಸಿಐ ಈಗಾಗಲೇ ನಮಗೆ ಮಾಹಿತಿ ನೀಡಿದ್ದು, ಸೆ.15 ರಿಂದ 20ರ ಅವಧಿಯಲ್ಲಿ ಲೀಗ್ ಪುನರರಾಂಭಿಸುವಂತೆ ಕೇಳಿಕೊಂಡಿದ್ದೆವು ಎಂದು ತಂಡವೊಂದರ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ:ಶೀಘ್ರವೇ ಮಹಿಳಾ ತಂಡದ ಕೈ ಸೇರಲಿದೆ ಟಿ20 ವಿಶ್ವಕಪ್​ ಬಹುಮಾನದ ಮೊತ್ತ, 

    * ಭಾರತ-ದಕ್ಷಿಣ ಆಫ್ರಿಕಾ ಸರಣಿ ರದ್ದು
    ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಿಗದಿಯಾಗಿದ್ದ ಟಿ20 ಸರಣಿಯನ್ನು ರದ್ದುಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ. ಐಪಿಎಲ್ ಮುಕ್ತಾಯವಾದ 7 ಅಥವಾ 10 ದಿನಗಳ ಬಳಿಕ ಟಿ20 ವಿಶ್ವಕಪ್ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟಿ20 ವಿಶ್ವಕಪ್ ಮುಗಿದ ಬಳಿಕವೇ ದ.ಆಫ್ರಿಕಾ ವಿರುದ್ಧದ ಸರಣಿ ನಡೆಯಲಿದೆ ಎನ್ನಲಾಗಿದೆ. ಇಲ್ಲವಾದರೆ, ಭಾರತ ತಂಡ ಮುಂದಿನ ವರ್ಷ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟಿ20 ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

    * ನ್ಯೂಜಿಲೆಂಡ್ ವಿರುದ್ಧ ಸರಣಿ ಸ್ಥಳಾಂತರ ?
    ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯೂ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಪೂರ್ವನಿಗದಿಯಂತೆ ನವೆಂಬರ್‌ನಲ್ಲಿ ನ್ಯೂಜಿಲೆಂಡ್ 2 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿತ್ತು. ಟಿ20 ವಿಶ್ವಕಪ್ ವೇಳಾಪಟ್ಟಿ ಆಧಾರದ ಮೇಲೆ ನ್ಯೂಜಿಲೆಂಡ್ ವಿರುದ್ಧದ ಸರಣಿ ಭವಿಷ್ಯ ಅಡಗಿದೆ. ಬಿಸಿಸಿಐ ಇದುವರೆಗೂ ಯಾರಿಗೂ ಟೂರ್ನಿಯ ಹಕ್ಕನ್ನು ಬಿಟ್ಟುಕೊಟ್ಟಿಲ್ಲ. ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಿದೆ. ಆದರೆ, ಬಹುತೇಕ ವಿದೇಶಿ ತಂಡಗಳು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts