ಉತ್ತಮ ಪ್ರದರ್ಶನದ ನಡುವೆಯೆ ಸಿಎಸ್​ಕೆಗೆ ಶಾಕ್; ಐಪಿಎಲ್​ನಿಂದ ಸ್ಟಾರ್​ ಬ್ಯಾಟ್ಸ್​ಮನ್​

Chennai Super Kings
Published on

ಚೆನ್ನೈ: ವಿಶ್ವದ ಮಿಲಿಯನ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಪ್ರಾರಂಭಗೊಂಡು ಈಗಾಗಲೇ 32 ಪಂದ್ಯಗಳು ಮುಕ್ತಾಯಗೊಂಡಿದ್ದು, ಟೂರ್ನಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಇತ್ತ ಹಾಲಿ ಟೂರ್ನಿಯಲ್ಲಿ ಗಾಯದ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದ್ದು, ಇದು ತಂಡಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಾಯದ ಸಮಸ್ಯೆಯಿಂದ ಆಟಗಾರನೋರ್ವ ಟುರ್ನಿಯಿಂದ ಹೊರಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಹಾಲಿ ಆವೃತ್ತಿಯಲ್ಲಿ ಋತುರಾಜ್​ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ ಆರು ಪಂದ್ಯಗಳ ಪೈಕಿ 4ರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಉತ್ತಮ ಪ್ರದರ್ಶನ ನೀಡುತ್ತಿರುವ ನಡುವೆಯೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಶಾಕ್​ ಎದುರಾಗಿದ್ದು, ತಂಡದ ಆರಂಭಿಕ ಆಟಗಾರ ಡೆವೊನ್​ ಕಾನ್ವೇ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ.

Dewon Conway

ಐಪಿಎಲ್​ ಆರಂಭಕ್ಕೂ ಮುನ್ನ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದ ಕಾನ್ವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಕೆಲವು ವಾರಗಳ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿತ್ತು. ಹೀಗಾಗಿ ಅವರು ಐಪಿಎಲ್​ನ ಮೊದಲಾರ್ಧಕ್ಕೆ ಲಭ್ಯವಿರುವುದಿಲ್ಲ ಎಂದು ವರದಿಯಾಗಿತ್ತು. ಆದರೆ, ಕಾನ್ವೇ ಸಂಪೂರ್ಣವಾಗಿ ಗುಣಮುಖರಾಗದ ಕಾರಣ 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಕಾನ್ವೇ ಬದಲಿಯಾಗಿ ಸಿಎಸ್​ಕೆ, ಇಂಗ್ಲೆಂಡ್​ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಹಾಲಿ ಆವೃತ್ತಿಯಲ್ಲಿ ಗಾಯದ ಸಮಸ್ಯೆ ಹಾಗೂ ಆಟಗಾರರ ಅನುಪಸ್ಥಿತಿ ತಂಡಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಿಎಸ್​ಕೆ ವೇಗಿ ಮುಸ್ತಾಫಿಜುರ್​ ರೆಹಮಾನ್​ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ವಾಪಸ್​ ಆಗಿದ್ದಾರೆ. ಇದರ ನಡುವೆಯೇ ಡೆವೊನ್​ ಕಾನ್ವೇ ಅನುಪಸ್ಥಿತಿಯನ್ನು ಸಿಎಸ್​ಕೆ ಹೇಗೆ ಸರಿದೂಗಿಸಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net