More

    9.5 ವರ್ಷಗಳಲ್ಲಿ 40,000 KM ರೈಲ್ವೆ ವಿದ್ಯುದೀಕರಣ: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ಕೇಂದ್ರ ರೈಲ್ವೆ ಸಚಿವ

    ನವದೆಹಲಿ: ರೈಲ್ವೆ ವಿದ್ಯುದೀಕರಣದಲ್ಲಿ ನಡೆದ ಮಹತ್ವದ ಸಾಧನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ಶುಕ್ರವಾರ ಒತ್ತಿ ಹೇಳಿದರು. 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಳೆದ 9.5 ವರ್ಷಗಳಲ್ಲಿ 40 ಸಾವಿರ ಕಿ.ಮೀ ರೈಲ್ವೆ ವಿದ್ಯುದೀಕರಣ ಸಾಧಿಸಲಾಗಿದೆ ಎಂದು ಹೇಳಿದರು.

    ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಧಿಸಲು, ನಾವು ನಮ್ಮ ಶಕ್ತಿ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕಿದೆ. ಇಡೀ ರೈಲ್ವೆಯನ್ನು ವಿದ್ಯುದೀಕರಣಗೊಳಿಸಿದ ಭಳಿಮ ಇದು ಸಾಧ್ಯವಾಗುತ್ತದೆ. 2014ರಲ್ಲಿ ಪ್ರಧಾನಿ ಮೋದಿ ಅವರು ವಿದ್ಯುದೀಕರಣ ಕೆಲಸಕ್ಕೆ ಚಾಲನೆ ನೀಡಿದರು. ಕಳೆದ 9.5 ವರ್ಷಗಳಲ್ಲಿ 40 ಸಾವಿರ ಕಿ.ಮೀ ರೈಲ್ವೆ ಟ್ರ್ಯಾಕ್​ ಅನ್ನು ವಿದ್ಯುದೀಕರಣಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ (IRPS) ಸಮ್ಮೇಳನವನ್ನು ಉದ್ದೇಶಿಸಿ ಅಶ್ವಿನಿ ವೈಷ್ಣವ್​ ಅವರು ಹೇಳಿದರು.

    ರೈಲ್ವೆಯಲ್ಲಿ ದೇಶೀಯವಾಗಿ ಉತ್ಪಾದಿಸುವ ವಿದ್ಯುತ್ ಬಳಸುವುದರಿಂದ ತೈಲ ಆಮದು ವೆಚ್ಚ ಕಡಿಮೆಯಾಗುತ್ತದೆ ಎಂಬುದನ್ನು ವೈಷ್ಣವ್​ ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಇದು ಪ್ರಧಾನಿ ಮೋದಿಯವರ ದೂರದೃಷ್ಟಿಯ ಚಿಂತನೆಯನ್ನು ತೋರಿಸುತ್ತದೆ ಎಂದರು.

    ಉತ್ತಮ ನಿರ್ವಹಣೆ, ವಿಶ್ವಾಸಾರ್ಹತೆ, ವೇಗ ಮತ್ತು ಸುರಕ್ಷತೆ
    ರೈಲ್ವೆ ಮೂಲಕ ಹೆಚ್ಚಿನ ಸಾರಿಗೆ ವ್ಯವಸ್ಥೆಯನ್ನು ಬೆಂಬಲಿಸಲು ಉತ್ತಮ ನಿರ್ವಹಣೆ, ವಿಶ್ವಾಸಾರ್ಹತೆ, ವೇಗ ಮತ್ತು ಸುರಕ್ಷತೆಗೆ ಆದ್ಯತೆಯ ಜತೆಗೆ ಕೊಡುಗೆ ನೀಡುವಂತೆ ವೈಷ್ಣವ್ ಅವರು ರೈಲ್ವೆ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಸುಮಾರು ಒಂದು ವರ್ಷದ ಹಿಂದೆ ಪರಿಚಯಿಸಲಾದ ರೋಲಿಂಗ್ ಬ್ಲಾಕ್ ವ್ಯವಸ್ಥೆಯ ಸಕಾರಾತ್ಮಕ ಪರಿಣಾಮವನ್ನು ಅವರು ಶ್ಲಾಘಿಸಿದರು. ಎರಡು ವಾರಗಳ ಮುಂಚಿತವಾಗಿ ಕಾರ್ಯಗತಗೊಳಿಸಲಾದ ಯೋಜನೆ, ನಿರ್ವಹಣೆ, ದುರಸ್ತಿ ಮತ್ತು ಬದಲಿ ಕೆಲಸವು ರೈಲ್ವೆ ಕಾರ್ಯಾಚರಣೆಯಲ್ಲಿ ವಿಶ್ವಾಸಾರ್ಹತೆ ಮತ್ತು ನಿಶ್ಚಿತತೆಯನ್ನು ಹೆಚ್ಚಿಸಿದೆ ಎಂದು ಒತ್ತಿ ಹೇಳಿದರು.

    ರೈಲ್ವೆಯಲ್ಲಿನ ಹೂಡಿಕೆಗಳು ಮತ್ತು ಸುಧಾರಣೆಗಳು ರೈಲ್ವೆಯನ್ನು ಸಂಪೂರ್ಣವಾಗಿ ಪರಿವರ್ತಿಸುತ್ತವೆ. ಈ ಹಿಂದೆ ಈ ಪರಿವರ್ತನೆ ಏಕೆ ಆಗಲಿಲ್ಲ ಅಂತಾ ಇಂದು ಎಲ್ಲರೂ ಕೇಳುತ್ತಿದ್ದಾರೆ. ನಿಮ್ಮೆಲ್ಲರಿಗೂ ತುಂಬಾ ಸಾಮರ್ಥ್ಯವಿದೆ ಎಂಬುದನ್ನು ಇಂದಿನ ಪರಿವರ್ತನೆ ತೋರಿಸುತ್ತದೆ, ನೀವು ಪರಸ್ಪರ ಕೆಲಸ ಮಾಡಿದರೆ, ನೀವು ಇಂತಹ ಮತ್ತಷ್ಟು ಅದ್ಭುತಗಳನ್ನು ಸಾಧಿಸಬಹುದು ಎಂದು ರೈಲ್ವೆ ಸಿಬ್ಬಂದಿಯನ್ನು ಉದ್ದೇಶಿಸಿ ವೈಷ್ಣವ್ ಹೇಳಿದರು.

    ವಾರ್ಷಿಕವಾಗಿ 5000 ಕಿ.ಮೀ ಟ್ರ್ಯಾಕ್ಸ್​
    ರೈಲ್ವೆ ವಲಯದಲ್ಲಿ ಯೋಜನೆ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಮೂಲಸೌಕರ್ಯ ಮಾರ್ಪಾಡುಗಳಲ್ಲಿ ಪ್ರಗತಿಯನ್ನು ಎತ್ತಿ ತೋರಿಸುತ್ತಾ, ವಾರ್ಷಿಕವಾಗಿ 5,000 ಕಿಮೀ ಟ್ರ್ಯಾಕ್‌ಗಳನ್ನು ನಿರ್ಮಿಸುವ ಸರ್ಕಾರದ ಯೋಜನೆಯನ್ನು ಇದೇ ಸಂದರ್ಭದಲ್ಲಿ ವೈಷ್ಣವ್ ಘೋಷಣೆ ಮಾಡಿದರು. (ಏಜೆನ್ಸೀಸ್​)

    ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!

    ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದೊಯ್ಯಲಿಲ್ಲ ಅಂತ ತಾಳಿ ಕಟ್ಟಿದ ಗಂಡನನ್ನೇ ಕೊಂದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts