More

    ಬೇಗ ಮನೆಗೆ ಬಂದು ಬಿಡಿ: ಆರ್​. ಅಶ್ವಿನ್​ಗೆ ಪತ್ನಿಯ ‘ಪ್ರೀತಿ’ಪೂರ್ವಕ ಸಂದೇಶ..!

    ಚೆನ್ನೈ: ಆತಿಥೇಯ ಭಾರತ ಪ್ರವಾಸಿ ಇಂಗ್ಲೆಂಡ್​ ವಿರುದ್ಧ 3-1 ಅಂತರದಿಂದ ಟೆಸ್ಟ್​ ಸರಣಿಯ ಗೆಲುವಿನಲ್ಲಿ ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಪಾತ್ರ ಪ್ರಮುಖವಾಗಿದೆ. ಸರಣಿ ಗೆದ್ದ ಬೆನ್ನಲ್ಲೇ ಅಶ್ವಿನ್​ ಧರ್ಮಪತ್ನಿ ಪ್ರೀತಿ ಅವರು ಟ್ವಿಟರ್​ನಲ್ಲಿ ಪತಿಗೆ ಪ್ರೀತಿಯ ಸಂದೇಶವೊಂದನ್ನು ಕಳುಹಿಸಿದ್ದಾರೆ.

    ಅಶ್ವಿನ್​ ಅವರು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಸ್ವೀಕರಿಸಿರುವ ಫೋಟೋವನ್ನು ಪೋಸ್ಟ್​ ಮಾಡಿರುವ ಪ್ರೀತಿ ಅವರು ಹೃದಯ ಎಮೋಜಿಯೊಂದಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಈಗ ಬಯೋ ಬಬಲ್​ ಅನ್ನು ಮುರಿದು ಎಷ್ಟು ಸಾಧ್ಯವೋ ಅಷ್ಟು ಬೇಗ ಮನೆಗೆ ಬಂದುಬಿಡಿ ಎಂದು ಪ್ರೀತಿ ಟ್ವೀಟ್​ ಮಾಡಿದ್ದಾರೆ.

    ಅನುಭವಿ ಆರ್.ಅಶ್ವಿನ್ (47ಕ್ಕೆ 5) ಹಾಗೂ ಅಕ್ಷರ್ ಪಟೇಲ್ (48ಕ್ಕೆ 5) ಸ್ಪಿನ್ ಜೋಡಿಯ ಮಾರಕ ದಾಳಿ ನೆರವಿನಿಂದ ಆತಿಥೇಯ ಭಾರತ ತಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಹಾಗೂ 25 ರನ್‌ಗಳಿಂದ ಮಣಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಪ್ರಶಸ್ತಿ ಸುತ್ತಿಗೇರಿತು.

    ಕನಿಷ್ಠ ಡ್ರಾ ಸಾಧಿಸಿದರೂ ಡಬ್ಲ್ಯುಟಿಸಿ ಫೈನಲ್‌ಗೇರುವ ಅವಕಾಶ ಹೊಂದಿದ್ದ ಭಾರತ ತಂಡ ನಿರ್ಣಾಯಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. 4 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡ ಭಾರತ ತಂಡ, ಐಸಿಸಿ ರ್ಯಾಂಕಿಂಗ್​ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತು.

    ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 7 ವಿಕೆಟ್‌ಗೆ 294 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 365 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಭಾರತ ತಂಡ 160 ರನ್ ಮುನ್ನಡೆ ಸಾಧಿಸಿತು. ಬಳಿಕ ಇನಿಂಗ್ಸ್ ಸೋಲಿನ ಭೀತಿಯಿಂದ ದ್ವಿತೀಯ ಸರದಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಅಶ್ವಿನ್-ಅಕ್ಷರ್ ಪಟೇಲ್ ಜೋಡಿಯ ಅಬ್ಬರಕ್ಕೆ ನಲುಗಿ 54.5 ಓವರ್‌ಗಳಲ್ಲಿ 135 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್ 205 ರನ್‌ಗಳಿಸಿತ್ತು. (ಏಜೆನ್ಸೀಸ್​)

    ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ಗೇರಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts