More

    ಇಂಗ್ಲೆಂಡ್ ವಿರುದ್ಧ ಸರಣಿಗೆ ಕ್ವಾರಂಟೈನ್‌ನಲ್ಲಿ ಕಾರ್ಯತಂತ್ರ ಸಿದ್ಧಪಡಿಸಲಿದೆ ಟೀಮ್ ಇಂಡಿಯಾ

    ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರಿಗೆ ಕಡಿವಾಣ ಹಾಕಲು ವಿವಿಧ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿದ್ದ ಟೀಮ್ ಇಂಡಿಯಾ ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೂ ಕಾರ್ಯತಂತ್ರಗಳನ್ನು ರೂಪಿಸಲು ಸಿದ್ಧವಾಗಿರುವ ಭಾರತ ತಂಡ ಇದಕ್ಕಾಗಿ ಕ್ವಾರಂಟೈನ್ ಅವಧಿಯನ್ನು ಬಳಸಿಕೊಳ್ಳಲಿದೆ.

    ಫೆಬ್ರವರಿ 5ರಿಂದ ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಜನವರಿ 27ರಿಂದ ಒಂದು ವಾರ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಣಿಯಲು ಯೋಜನೆ ರೂಪಿಸಲಾಗುವುದು ಎಂದು ಭಾರತ ತಂಡದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

    ‘ಆಸ್ಟ್ರೇಲಿಯಾದಲ್ಲಿ ನಮ್ಮ ಕಾರ್ಯತಂತ್ರಗಳಿಗೆ ಉತ್ತಮ ರೀತಿಯ ಯಶಸ್ಸು ಲಭಿಸಿದೆ. ಆಸೀಸ್‌ನಲ್ಲಿ ದಾಖಲಿಸಿದ ಐತಿಹಾಸಿಕ ಗೆಲುವಿನ ಕ್ಷಣಗಳನ್ನು ಆನಂದಿಸಿದ್ದೇವೆ. ಇದೀಗ ಅದನ್ನು ಮರೆತು ಇಂಗ್ಲೆಂಡ್ ವಿರುದ್ಧ ಸರಣಿಗೆ ಸಜ್ಜಾಗಬೇಕಿದೆ. ಇದಕ್ಕೆ ನಮಗೆ ಸಾಕಷ್ಟು ಸಮಯವೂ ಲಭಿಸಿದೆ. ಸರಣಿಗೆ ಮುನ್ನ ನಾವು ಒಂದು ವಾರ ಕಾಲ ಕ್ವಾರಂಟೈನ್‌ನಲ್ಲಿರಲಿದ್ದೇವೆ. ಅದೇ ಸಮಯದಲ್ಲಿ ನಮ್ಮ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಿದ್ದೇವೆ’ ಎಂದು ಬೌಲಿಂಗ್ ಕೋಚ್ ಭರತ್ ಅರುಣ್ ವಿವರಿಸಿದ್ದಾರೆ.

    ‘ಇಂಗ್ಲೆಂಡ್ ತಂಡ ಸಾಕಷ್ಟು ಬಲಿಷ್ಠವಾಗಿದೆ. ಅವರನ್ನು ಮಣಿಸಬೇಕಾದರೆ ನಾವು ನಮ್ಮ ಶ್ರೇಷ್ಠ ನಿರ್ವಹಣೆಯನ್ನೇ ತೋರುವುದು ಅಗತ್ಯವಾಗಿದೆ. ಪ್ರತಿ ಪಂದ್ಯವೂ ದೊಡ್ಡ ಸವಾಲಾಗಿದೆ. ಆಸ್ಟ್ರೇಲಿಯಾಕ್ಕಿಂತ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ. ಆದರೆ ಆಸ್ಟ್ರೇಲಿಯಾವನ್ನು ಅದರದೇ ನೆಲದಲ್ಲಿ ಎದುರಿಸಿದ್ದೆವು’ ಎಂದು ಭರತ್ ಅರುಣ್ ತಿಳಿಸಿದ್ದಾರೆ.

    ಅಡಿಲೇಡ್‌ನಲ್ಲಿ ಆಸೀಸ್ ವಿರುದ್ಧ ಕೇವಲ 36 ರನ್‌ಗೆ ಆಲೌಟ್ ಆದ ಆಘಾತವನ್ನು ಮರೆಯಲು ನಮಗೆ 2 ದಿನ ಹಿಡಿದಿತ್ತು. ಅದನ್ನು ಮರೆತ ಬಳಿಕ ಮುಂದಿನ ಕೆಲಸಗಳ ಕಡೆಗೆ ಗಮನಹರಿಸಿದ್ದೆವು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೂ ಅದೇ ರೀತಿ ಗಮನಹರಿಸಬೇಕಾಗಿದೆ ಎಂದಿದ್ದಾರೆ. ಸದ್ಯ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡ, ಅದರ ಬೆನ್ನಲ್ಲೇ ಜನವರಿ 27ರಂದು ಚೆನ್ನೈಗೆ ಆಗಮಿಸಿ ಒಂದು ವಾರ ಕ್ವಾರಂಟೈನ್‌ಗೆ ಒಳಗಾಗಲಿದೆ. ಲಂಕಾ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿರದ ಆಲ್ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಜೋಫ್ರಾ ಆರ್ಚರ್ ಮತ್ತು ಆರಂಭಿಕ ರೋರಿ ಬರ್ನ್ಸ್ ಅದಕ್ಕೆ ಮುನ್ನವೇ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಆಸೀಸ್‌ಗೆ ಜುಲೈನಲ್ಲೇ ಖೆಡ್ಡಾ ರೆಡಿಯಾಗಿತ್ತು!
    ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕಳೆದ ಜುಲೈನಲ್ಲೇ ಯೋಜನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಅದರನ್ವಯ ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲಾಗಿತ್ತು ಎಂದು ಭರತ್ ಅರುಣ್ ತಿಳಿಸಿದ್ದಾರೆ. ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಸಹಿತ ಆಸ್ಟ್ರೇಲಿಯಾದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳ ರನ್‌ಗಳಿಕೆಯನ್ನು ವಿಶ್ಲೇಷಿಸಿದಾಗ ಅವರು, ಆಫ್​ಸೈಡ್‌ನಲ್ಲೇ ಹೆಚ್ಚು ರನ್ ಗಳಿಸಿದ್ದಾರೆ. ಕಟ್, ಪುಲ್‌ನಿಂದ ಅವರು ಆಫ್​ಸೈಡ್‌ನಿಂದಲೇ ಸಾಕಷ್ಟು ರನ್ ಗಳಿಸಿದ್ದಾರೆ. ಇದರಿಂದಾಗಿ ನಾವು ಆಸ್ಟ್ರೇಲಿಯನ್ನರ ಆಫ್​ಸೈಡ್‌ಗೆ ಕಡಿವಾಣ ಹಾಕುವ ಯೋಜನೆ ರೂಪಿಸಿದೆವು. ಬೌಲರ್‌ಗಳೂ ನಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದರು ಎಂದು ವಿವರಿಸಿದ್ದಾರೆ.

    ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಹೊಸ ಫಿಟ್ನೆಸ್ ಪರೀಕ್ಷೆ
    ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್ ಮಟ್ಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸಲು ಮುಂದಾಗಿರುವ ಬಿಸಿಸಿಐ, ಯೋ-ಯೋ ಟೆಸ್ಟ್ ಜತೆಗೆ 2 ಕಿಮೀ ಟೈಮ್ ಟ್ರಯಲ್‌ನ ಹೊಸ ಫಿಟ್ನೆಸ್ ಪರೀಕ್ಷೆ ಜಾರಿಗೊಳಿಸಲು ನಿರ್ಧರಿಸಿದೆ. ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗೆ ಭಾರತ ತಂಡ ಆಯ್ಕೆಯ ವೇಳೆ ಆಟಗಾರರು ಈ ಫಿಟ್ನೆಸ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿರಲಿದೆ. ಈ 2 ಕಿಮೀ ಟೈಮ್ ಟ್ರಯಲ್‌ನಲ್ಲಿ ವೇಗದ ಬೌಲರ್‌ಗಳು 8 ನಿಮಿಷ, 15 ಸೆಕೆಂಡ್‌ನಲ್ಲಿ 2 ಕಿಮೀ ದೂರ ಓಡಬೇಕಿದ್ದರೆ, ಸ್ಪಿನ್ನರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ 8 ನಿಮಿಷ, 30 ಸೆಕೆಂಡ್ ಸಮಯ ನೀಡಲಾಗುತ್ತದೆ. ಇದು ಆಟಗಾರರ ವೇಗ ಮತ್ತು ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯ ಅಳೆಯುವ ಪರೀಕ್ಷೆಯಾಗಿದೆ. ೆಬ್ರವರಿಯಲ್ಲಿ ಮೊದಲ ಬಾರಿಗೆ ಈ ಹೊಸ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಇದರ ಜತೆಗೆ ಯೋ-ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಲು 17.1 ಅಂಕದ ಮಾನದಂಡವನ್ನು ಉಳಿಸಿಕೊಳ್ಳಲಾಗಿದೆ.

    ಆಸೀಸ್ ಇನ್ನೂ ಪ್ರೈಮರಿ ಸ್ಕೂಲ್‌ನಲ್ಲಿದೆ ಎಂದ ಚಾಪೆಲ್
    ಭಾರತೀಯ ಕ್ರಿಕೆಟ್ ವ್ಯವಸ್ಥೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್, ಭಾರತದ ಯುವ ಕ್ರಿಕೆಟಿಗರಿಗೆ ಹೋಲಿಸಿದರೆ ಆಸೀಸ್ ಕ್ರಿಕೆಟಿಗರು ಇನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ‘ಭಾರತೀಯ ಆಟಗಾರರು ರಾಷ್ಟ್ರೀಯ ತಂಡದ ಆಡುವ ಹನ್ನೊಂದರ ಬಳಗವನ್ನು ತಲುಪುವಷ್ಟರಲ್ಲಿ ಸರ್ವಾಂಗೀಣ ಕಲಿಕೆ ಪೂರ್ಣಗೊಳಿಸಿರುತ್ತಾರೆ. ಇದರಿಂದಾಗಿ ಅವರಿಗೆ ತಂಡದಲ್ಲಿ ಆಡುವ ಅವಕಾಶ ಲಭಿಸಿದಾಗ ಯಶಸ್ಸು ಕಾಣುವ ಅವಕಾಶ ಹೆಚ್ಚಿರುತ್ತದೆ. ಆದರೆ ಭಾರತದ ಆಟಗಾರರಿಗೆ ಹೋಲಿಸಿದರೆ, ನಮ್ಮ ಯುವ ಆಟಗಾರರು ಸಾಕಷ್ಟು ದುರ್ಬಲರಾಗಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಪ್ರಮುಖ ಕ್ರೀಡೆಯಾಗಿರುವುದರಿಂದ ಅತ್ಯುತ್ತಮ ಆಟಗಾರರಷ್ಟೇ ದೇಶದ ಪರ ಆಡುವ ಅವಕಾಶ ಪಡೆಯುತ್ತಾರೆ. ವಿಲ್ ಪುಕೊವ್‌ಸ್ಕಿ ಮತ್ತು ಕ್ಯಾಮರಾನ್ ಗ್ರೀನ್ ಅವರನ್ನು ಅನುಭವದಿಂದ ಹೋಲಿಸಿ ನೋಡಿದಾಗಿ ಇನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಂತಿದೆ’ ಎಂದು ಚಾಪೆಲ್ ಹೇಳಿದ್ದಾರೆ.

    ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದ ಬಗ್ಗೆ ಭಾರಿ ಚರ್ಚೆ; ವಿರಾಟ್ ಕೊಹ್ಲಿ V/s ಅಜಿಂಕ್ಯ ರಹಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts