More

    ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಇಂದು ಆಸೀಸ್ ಎದುರಾಳಿ

    ದುಬೈ: ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ ಭಾರತ ತಂಡ ಬುಧವಾರ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಟಿ20 ವಿಶ್ವಕಪ್‌ಗೆ ತಂಡದ ಸಂಯೋಜನೆಗೆ ಒತ್ತು ನೀಡಲು ಉತ್ತಮ ಅವಕಾಶ ಲಭಿಸಿದ್ದು, ಬಲಿಷ್ಠ ಆಸ್ಟ್ರೇಲಿಯ ತಂಡದ ಸವಾಲಿಗೆ ಟೀಮ್ ಇಂಡಿಯಾ ಸನ್ನದ್ಧವಾಗಿದೆ. ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಹನ್ನೊಂದರ ಬಳಗದ ಆಯ್ಕೆಗೆ ಈ ಪಂದ್ಯ ಪೂರ್ವ ತಯಾರಿಯಂತಿದೆ. ವಿರಾಟ್ ಕೊಹ್ಲಿ ಟಿ20 ನಾಯಕತ್ವ, ಮುಖ್ಯ ಕೋಚ್ ರವಿಶಾಸಿ ಮಾರ್ಗದರ್ಶನದಲ್ಲಿ ಭಾರತ ಆಡುತ್ತಿರುವ ಕಡೇ ಟೂರ್ನಿ ಇದಾಗಿದೆ. ಪ್ರತಿಷ್ಠಿತ ಟ್ರೋಫಿ ಜಯಿಸುವ ಮೂಲಕ ಈ ಜೋಡಿಗೆ ವಿದಾಯ ಹೇಳಲು ತಂಡ ಸರ್ವ ಸನ್ನದ್ಧವಾಗಿದೆ.

    ಸೋಮವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್, ಇಶಾನ್ ಕಿಶನ್ ಆರಂಭದಲ್ಲಿ ಸ್ಫೋಟಿಸಿ ಗಮನಸೆಳೆದಿದ್ದಾರೆ. ಐಪಿಎಲ್‌ನಲ್ಲಿದ್ದ ಭರ್ಜರಿ ಫಾರ್ಮ್ ಅನ್ನೇ ರಾಹುಲ್ ಮುಂದುವರಿಸಿದ್ದಾರೆ. ಇದರಿಂದ ಹನ್ನೊಂದರ ಬಳಗದಲ್ಲಿ ಆರಂಭಿಕ ಸ್ಥಾನಕ್ಕೆ ನಾನು ಅರ್ಹ ಎಂದು ರಾಹುಲ್ ಸಾಬೀತುಪಡಿಸಿದಂತಾಗಿದೆ. ಮತ್ತೊಂದೆಡೆ, ಇಶಾನ್ ಕಿಶನ್ ಕೂಡ ಸ್ಫೋಟಿಸಿ ಆಯ್ಕೆಗೆ ಲಭ್ಯ ಎಂದು ನಿರೂಪಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಫೋಟಿಸಲು ವಿಫಲರಾಗಿದ್ದಾರೆ. ರಿಷಭ್ ಪಂತ್ (29*) ಹಾಗೂ ಹಾರ್ದಿಕ್ ಪಾಂಡ್ಯ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಆದರೆ, ಇಂಗ್ಲೆಂಡ್ ಎದುರು ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೆ ಕೇವಲ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದರು. ತಂಡದ ಚಿಂತಕರ ಚಾವಡಿಗೆ ಪಾಂಡ್ಯ ಬೌಲಿಂಗ್ ಮಾಡದಿರುವುದು ಚಿಂತೆಯಾಗಿದೆ. ಬೌಲಿಂಗ್ ವಿಭಾಗದಲ್ಲಿ ಹೇಳುವುದಾದರೆ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಉತ್ತಮ ದಾಳಿ ಮೂಲಕ ಗಮನಸೆಳೆದರು. ಭುವನೇಶ್ವರ್ ಕುಮಾರ್ ಕೊಂಚ ದುಬಾರಿಯಾದರು. ರಾಹುಲ್ ಚಹರ್ ಒಂದು ವಿಕೆಟ್ ಕಬಳಿಸಿದರೆ, ಆರ್. ಅಶ್ವಿನ್ ವಿಕೆಟ್ ಪಡೆಯಲು ವಿಫಲರಾಗಿದ್ದರೂ ರನ್‌ಗೆ ಕಡಿವಾಣ ಹಾಕಿದ್ದರು. ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮ ಬುಧವಾರ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ಆಸೀಸ್‌ಗೆ ವಾರ್ನರ್ ಫಾರ್ಮ್ ಚಿಂತೆ
    ಐಪಿಎಲ್‌ನಲ್ಲಿ ನೀರಸ ಫಾರ್ಮ್‌ನಿಂದಾಗಿಯೇ ನಾಯಕತ್ವ ಕಳೆದುಕೊಂಡು, ಬಳಿಕ ಹನ್ನೊಂದರ ಬಳಗದಿಂದಲೂ ಹೊರಬಿದ್ದಿದ್ದ ಡೇವಿಡ್ ವಾರ್ನರ್, ಮೊದಲ ಅಭ್ಯಾಸ ಪಂದ್ಯದಲ್ಲೂ ವಿಫಲರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಖಾತೆ ತೆರೆಯಲು ವಿಫಲರಾಗಿದ್ದರು. ಸ್ಪಿನ್ನರ್ ಆಡಂ ಜಂಪಾ (17ಕ್ಕೆ 2), ವೇಗಿ ಕೇನ್ ರಿಚರ್ಡ್‌ಸನ್ (24ಕ್ಕೆ 3) ಉತ್ತಮ ನಿರ್ವಹಣೆ ತೋರಿದ್ದರು. ಆಸ್ಟ್ರೇಲಿಯಾ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿತ್ತು. ಬಲಿಷ್ಠ ತಂಡವಾಗಿದ್ದರೂ ಇದುವರೆಗೆ ಟಿ20 ವಿಶ್ವಕಪ್ ಜಯಿಸಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಈ ಬಾರಿ ಶತಾಯಗತಾಯ ಟ್ರೋಫಿ ಜಯಿಸುವ ಉತ್ಸಾಹದಲ್ಲಿದೆ.

    *ಎಂಎಸ್ ಧೋನಿ ಡ್ರೆಸ್ಸಿಂಗ್ ರೂಂಗೆ ಮರಳಿರುವುದು ಅಮೋಘ ಅನುಭವ ನೀಡಿದೆ. ನಾವೆಲ್ಲರೂ ಅವರ ನಾಯಕತ್ವದಲ್ಲಿ ಆಡಿದ್ದೇವೆ ಮತ್ತು ಸದಾ ಅವರ ಮಾರ್ಗದರ್ಶನ ಪಡೆಯುತ್ತಿದ್ದೆವು. ಅವರ ಶಾಂತಚಿತ್ತ ನಮಗಿಷ್ಟ. ಅವರೊಂದಿಗೆ ಸಮಯ ಕಳೆಯುತ್ತಿರುವುದನ್ನು ಆನಂದಿಸುತ್ತಿರುವೆ.
    | ಕೆಎಲ್ ರಾಹುಲ್

    ಇಂದಿನ ಅಭ್ಯಾಸ ಪಂದ್ಯಗಳು
    *ಭಾರತ-ಆಸ್ಟ್ರೇಲಿಯಾ
    *ಇಂಗ್ಲೆಂಡ್-ನ್ಯೂಜಿಲೆಂಡ್
    ಆರಂಭ: ಮಧ್ಯಾಹ್ನ 3.30
    *ದಕ್ಷಿಣ ಆಫ್ರಿಕಾ-ಪಾಕಿಸ್ತಾನ
    *ವೆಸ್ಟ್ ಇಂಡೀಸ್-ಅ್ಘಾನಿಸ್ತಾನ
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಟಿ20 ವಿಶ್ವಕಪ್‌ನಲ್ಲಿ ಓಮನ್ ಎದುರು ಗೆದ್ದ ಬಾಂಗ್ಲಾದೇಶ ಆಸೆ ಜೀವಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts