More

    4ನೇ ಬಾರಿ ವಿಶ್ವಕಪ್​ ಆತಿಥ್ಯಕ್ಕೆ ಸಜ್ಜಾಗಿದೆ ಭಾರತ; ಹೀಗಿತ್ತು ಹಿಂದಿನ 3 ಟೂರ್ನಿಗಳ ಆಯೋಜನೆ…

    ಬೆಂಗಳೂರು: ಜಗತ್ತಿಗೆಲ್ಲ ಕ್ರಿಕೆಟ್​ ಜ್ವರ ಹರಡುವ ಏಕದಿನ ವಿಶ್ವಕಪ್​ ಮತ್ತೆ ಬರುತ್ತಿದೆ. ಈ ಬಾರಿ ಮತ್ತೆ ಭಾರತವೇ ವಿಶ್ವಕಪ್​ಗೆ ಆತಿಥ್ಯ ವಹಿಸುತ್ತಿದೆ. ಈ ಹಿಂದೆ 3 ಬಾರಿ ಯಶಸ್ವಿಯಾಗಿ ವಿಶ್ವಕಪ್​ ಆತಿಥ್ಯ ವಹಿಸಿದ ಅನುಭವ ಭಾರತಕ್ಕಿದ್ದರೂ, ಆಗ ಉಪಖಂಡದ ಇತರ ದೇಶಗಳ ಸಾಥ್​ ದೊರೆತಿತ್ತು. ಈ ಬಾರಿ ಭಾರತ ಏಕಾಂಗಿಯಾಗಿಯೇ ವಿಶ್ವಕಪ್​ ಆಯೋಜಿಸುವ ಸವಾಲು ಹೊಂದಿದ್ದು, ತನ್ನ ಕ್ರಿಕೆಟ್​ ಶ್ರೀಮಂತಿಕೆಯ ಅನಾವರಣಕ್ಕೆ ಸಿದ್ಧಗೊಂಡಿದೆ. ದೇಶದ 10 ತಾಣಗಳಲ್ಲಿ 46 ದಿನಗಳಲ್ಲಿ 48 ಪಂದ್ಯಗಳು ಆಯೋಜನೆಗೊಳ್ಳಲಿದ್ದು, ಆತಿಥೇಯ ಭಾರತ 3ನೇ ಬಾರಿ ವಿಶ್ವಕಪ್​ ಗೆಲ್ಲುವ ಕನಸಿನಲ್ಲಿದೆ. ಈ ಸಮಯದಲ್ಲಿ ಭಾರತದಲ್ಲಿನ ಹಿಂದಿನ 3 ವಿಶ್ವಕಪ್​ಗಳ ಮೆಲುಕು ಇಲ್ಲಿದೆ…

    1987ರಲ್ಲಿ ಮೊದಲ ವಿಶ್ವಕಪ್​ ಆತಿಥ್ಯ
    ಭಾರತ ಈಗ ಕ್ರಿಕೆಟ್​ನಲ್ಲಿ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್​ ಗೆಲುವು ಯಾವ ರೀತಿ ಕಾರಣವೋ, ಅಷ್ಟೇ 1987ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್​ ಟೂರ್ನಿಯೂ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. 1987ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್​ನಿಂದ ಹೊರಗೆ ವಿಶ್ವಕಪ್​ ಆಯೋಜನೆಗೊಂಡಿತು. 1983ರಲ್ಲಿ ಭಾರತ ವಿಶ್ವಕಪ್​ ಗೆದ್ದಾಗ ಬಿಸಿಸಿಐ ಅಧ್ಯರಾಗಿದ್ದ ಎನ್​ಕೆಪಿ ಸಾಳ್ವೆ ಅವರು 1987ರಲ್ಲಿ ಭಾರತಕ್ಕೆ ವಿಶ್ವಕಪ್​ ಆತಿಥ್ಯ ಒಲಿದುಬರಲು ಪ್ರಮುಖ ಕಾರಣ. 1983ರ ವಿಶ್ವಕಪ್​ ಪಂದ್ಯದ 2 ಹೆಚ್ಚುವರಿ ಟಿಕೆಟ್​ಗಳನ್ನು ಕೇಳಿದಾಗ ಆಂಗ್ಲರು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಸಾಳ್ವೆ ವಿಶ್ವಕಪ್​ ಆತಿಥ್ಯವನ್ನೇ ಆಂಗ್ಲರಿಂದ ಕಿತ್ತುಕೊಳ್ಳಲು ಮುಂದಾದರು. ಇದಕ್ಕೆ ಪಾಕಿಸ್ತಾನವೂ ಅವರಿಗೆ ಬೆಂಬಲವಾಗಿ ನಿಂತಿತು. ಚತುರ ಕ್ರಿಕೆಟ್​ ಆಡಳಿತಗಾರರಾದ ಐಎಸ್​ ಬಿಂದ್ರಾ ಮತ್ತು ಜಗಮೋಹನ್​ ದಾಲ್ಮಿಯಾ ಕೂಡ ಭಾರತ ಯಶಸ್ವಿ ವಿಶ್ವಕಪ್​ ಆಯೋಜನೆಯ ರೂವಾರಿಗಳಾಗಿದ್ದರು. ರಿಲಯನ್ಸ್​ ಪ್ರಮುಖ ಪ್ರಾಯೋಜಕನಾಗಿ ಸಾಥ್​ ನೀಡಿದ್ದರಿಂದ ಭಾರತ-ಪಾಕ್​ ಜಂಟಿಯಾಗಿ ಆಗ 32 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್​ ಸಂಟಿಸಿತ್ತು. ಇಂಗ್ಲೆಂಡ್​ನಲ್ಲಿ ಹಗಲು ಹೆಚ್ಚಿನ ಸಮಯ ಇರುವುದರಿಂದ ಮೊದಲ 3 ವಿಶ್ವಕಪ್​ನಲ್ಲಿ ತಲಾ 60 ಓವರ್​ಗಳ ಪಂದ್ಯ ನಡೆದಿದ್ದರೆ, 1987ರಲ್ಲಿ ಅದನ್ನು ಮೊದಲ ಬಾರಿ 50 ಓವರ್​ಗಳಿಗೆ ಇಳಿಸಲಾಯಿತು. ಭಾರತದ 14 ಮತ್ತು ಪಾಕಿಸ್ತಾನದ 7 ಸೇರಿದಂತೆ ಒಟ್ಟು 21 ಕ್ರೀಡಾಂಗಣಗಳಲ್ಲಿ ಟೂರ್ನಿಯ 27 ಪಂದ್ಯಗಳು ನಡೆದವು. 8 ತಂಡಗಳ ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ ಸೆಮೀಸ್​ನಲ್ಲೇ ಹೊರಬಿದ್ದರೆ, ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಆಸ್ಟ್ರೆಲಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

    1996ರಲ್ಲಿ 2ನೇ ಬಾರಿ ಆಯೋಜನೆ
    1992ರ ವಿಶ್ವಕಪ್​ ಟೂರ್ನಿ ಆಸ್ಟ್ರೆಲಿಯಾದಲ್ಲಿ ನಡೆದ ಬಳಿಕ ಇಂಗ್ಲೆಂಡ್​ 1996ರಲ್ಲಿ ವಿಶ್ವಕಪ್​ ಮತ್ತೆ ತನ್ನ ನೆಲಕ್ಕೆ ಮರಳುತ್ತದೆ ಎಂಬ ನಿರೀಕ್ಷೆ ಇಂಗ್ಲೆಂಡ್​ನದ್ದಾಗಿತ್ತು. ಆದರೆ ಭಾರತ ಈ ಸಲವೂ ಅವಕಾಶ ಬಿಟ್ಟುಕೊಡಲಿಲ್ಲ. ಭಾರತ, ಪಾಕಿಸ್ತಾನದ ಜತೆಗೆ ಈ ಬಾರಿ ಶ್ರೀಲಂಕಾವೂ ವಿಶ್ವಕಪ್​ ಆತಿಥ್ಯಕ್ಕೆ ಕೈಜೋಡಿಸಿತು. ವಿಲ್ಸ್​ 12 ದಶಲಕ್ಷ ಡಾಲರ್​ ನೀಡಿ ಪ್ರಮುಖ ಪ್ರಾಯೋಜಕನಾದರೆ, ಮೊದಲ ಬಾರಿಗೆ ಟೂರ್ನಿಯ ಟಿವಿ ಪ್ರಸಾರ ಹಕ್ಕು 14 ದಶಲಕ್ಷ ಡಾಲರ್​ ಮೊತ್ತಕ್ಕೆ ಮಾರಾಟವಾಯಿತು. ಕೋಕಕೋಲ ಕಂಪನಿ ಕೂಡ 3.8 ದಶಲಕ್ಷ ಡಾಲರ್​ ನೀಡಿ ಟೂರ್ನಿಯ ಅಧಿಕೃತ ಪಾನೀಯ ಪ್ರಾಯೋಜನಾಯಿತು. ಆಗ ಜಿಂಬಾಬ್ವೆ 9ನೇ ಟೆಸ್ಟ್​ ಮಾನ್ಯತೆಯ ದೇಶವಾಗಿದ್ದರೆ, ಅಸೋಸಿಯೇಟ್​ ದೇಶಗಳಾದ ನೆದರ್ಲೆಂಡ್​, ಯುಎಇ, ಕೀನ್ಯಾ ಸೇರ್ಪಡೆಯೊಂದಿಗೆ 12 ತಂಡಗಳ ವಿಶ್ವಕಪ್​ ಆಗಿ ಮಾರ್ಪಟ್ಟಿತು. 37 ಪಂದ್ಯಗಳ ಟೂರ್ನಿಯಲ್ಲಿ ಭಾರತ, 17 ಪಂದ್ಯಗಳಿಗೆ 17 ಕ್ರೀಡಾಂಗಣಗಳಲ್ಲಿ ಆತಿಥ್ಯ ವಹಿಸಿದರೆ, ಪಾಕಿಸ್ತಾನದ 6 ತಾಣಗಳಲ್ಲಿ 16 ಮತ್ತು ಶ್ರೀಲಂಕಾದ 3 ಕ್ರೀಡಾಂಗಣಗಳಲ್ಲಿ 4 ಪಂದ್ಯಗಳು ನಡೆದವು. ಆದರೆ ಆಸ್ಟ್ರೆಲಿಯಾ ಮತ್ತು ವೆಸ್ಟ್​ ಇಂಡೀಸ್​ ಭದ್ರತಾ ಕಾರಣ ನೀಡಿ ಶ್ರೀಲಂಕಾದಲ್ಲಿ ಆಡಲಿಲ್ಲ ಮತ್ತು ಆ ಪಂದ್ಯಗಳ ಅಂಕವನ್ನು ಶ್ರೀಲಂಕಾಕ್ಕೆ ನೀಡಲಾಯಿತು. ಕ್ವಾರ್ಟರ್​ಫೈನಲ್​ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ, ಸೆಮಿಫೈನಲ್​ನಲ್ಲಿ ಶ್ರೀಲಂಕಾಕ್ಕೆ ಶರಣಾಯಿತು. ಹೀಗೆ ಆತಿಥೇಯ ದೇಶಗಳೇ ಪರಸ್ಪರರನ್ನು ಹೊರದಬ್ಬಿದವು. ಅಂತಿಮವಾಗಿ ಲಾಹೋರ್​ನಲ್ಲಿ ನಡೆದ ಫೈನಲ್​ನಲ್ಲಿ ಆಸ್ಟ್ರೆಲಿಯಾವನ್ನು ಮಣಿಸಿ ಶ್ರೀಲಂಕಾ ವಿಶ್ವಕಪ್​ ಗೆದ್ದು ಬೀಗಿತು. ಅರ್ಜುನ್​ ರಣತುಂಗ ಸಾರಥ್ಯದಲ್ಲಿ ಸನತ್​ ಜಯಸೂರ್ಯ-ಕಲುವಿತರಣ ಜೋಡಿಯ ಆರಂಭಿಕ ಆರ್ಭಟದಿಂದ ಆಗ ಏಕದಿನ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯೇ ಸೃಷ್ಟಿಯಾಗಿತ್ತು.

    2011ರಲ್ಲಿ ಆತಿಥ್ಯದ ಜತೆ ಟ್ರೋಫಿ ಗೆಲುವು
    ಹತ್ತನೇ ಆವೃತ್ತಿಯ ವಿಶ್ವಕಪ್​ಗೆ ಆತಿಥ್ಯ ವಹಿಸುವ ವೇಳೆ ಭಾರತ ಕ್ರಿಕೆಟ್​ನಲ್ಲಿ ಶ್ರೀಮಂತವಾಗಿ ಬೆಳೆದುನಿಂತಿತ್ತು. ಆದರೆ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯದ ನೋವು 28 ವರ್ಷಗಳಿಂದಲೂ ಕಾಡುತ್ತಿತ್ತು. 3ನೇ ಬಾರಿ ಯಶಸ್ವಿ ವಿಶ್ವಕಪ್​ ಆಯೋಜನೆಯ ಜತೆಗೆ ಎಂಎಸ್​ ಧೋನಿ ಸಾರಥ್ಯದ ತಂಡ ಆ ಕೊರತೆಯನ್ನೂ ನೀಗಿಸಿಬಿಟ್ಟಿತು ಮತ್ತು ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ 6ನೇ ಪ್ರಯತ್ನದಲ್ಲಿ ವಿಶ್ವಕಪ್​ ಟ್ರೋಫಿ ಒಲಿದುಬಿಟ್ಟಿತು. ಭಾರತ, ಪಾಕ್​, ಲಂಕಾ ಜತೆಗೆ ಈ ಬಾರಿ ಬಾಂಗ್ಲಾದೇಶವೂ ವಿಶ್ವಕಪ್​ಗೆ ಜಂಟಿ ಆತಿಥ್ಯದ ಬಿಡ್​ ಗೆದ್ದುಕೊಂಡಿತು. ಆದರೆ 2008ರಲ್ಲಿ ಲಾಹೋರ್​ನಲ್ಲಿ ಲಂಕಾ ತಂಡದ ಮೇಲೆ ನಡೆದ ಉಗ್ರರ ದಾಳಿಯಿಂದಾಗಿ ಪಾಕಿಸ್ತಾನ, ಆತಿಥ್ಯದಿಂದ ಹೊರಬಿದ್ದಿತು. ಭಾರತದ 8, ಶ್ರೀಲಂಕಾದ 3, ಬಾಂಗ್ಲಾದ 2 ಕ್ರೀಡಾಂಗಣಗಳಲ್ಲಿ ಒಟ್ಟು 49 ಪಂದ್ಯಗಳು ಆಯೋಜನೆಗೊಂಡವು. ತಂಡಗಳ ಸಂಖ್ಯೆ 14ಕ್ಕೇರಿದರೂ, 1996ರ ಸ್ವರೂಪದಲ್ಲೇ ಟೂರ್ನಿ ನಡೆಸಲಾಯಿತು. ಕ್ವಾರ್ಟರ್​ಫೈನಲ್​ನಲ್ಲಿ ಆಸ್ಟ್ರೆಲಿಯಾ, ಸೆಮಿಫೈನಲ್​ನಲ್ಲಿ ಪಾಕಿಸ್ತಾನ ಮತ್ತು ಫೈನಲ್​ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ 2ನೇ ಬಾರಿ ಪ್ರಶಸ್ತಿ ಗೆದ್ದಿತು. ಜತೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲೇ ಪ್ರಶಸ್ತಿ ಎತ್ತಿ ಹಿಡಿದ ಭಾರತ, ತವರಿನಲ್ಲೇ ವಿಶ್ವಕಪ್​ ಗೆದ್ದ ಮೊದಲ ತಂಡವೆನಿಸಿತು.

    2023ರಲ್ಲಿ ದೇಶದ ಆರ್ಥಿಕತೆಗೆ 13,500 ಕೋಟಿ ರೂ. ಕೊಡುಗೆ
    ಈ ಸಲದ ವಿಶ್ವಕಪ್​ ಟೂರ್ನಿಯ ಆಯೋಜನೆಯೂ ಭಾರತದ ಆರ್ಥಿಕತೆಗೆ ಬರೋಬ್ಬರಿ 13,500 ಕೋಟಿ ರೂ. ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ದೇಶದ 10 ತಾಣಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದು, ಎಲ್ಲ ಪಂದ್ಯಗಳ ಟಿಕೆಟ್​ಗಳು ಈಗಾಗಲೆ ಬಹುತೇಕ ಸೋಲ್ಡ್​ಔಟ್​ ಆಗಿವೆ. ಇದರಿಂದಾಗಿ ಟೂರ್ನಿಯ ವೇಳೆ ಪ್ರವಾಸಿಗರ ಹೆಚ್ಚಾಗಿರಲಿದ್ದು, ಪಂದ್ಯ ನಡೆಯುವ 10 ನಗರಗಳಲ್ಲಿ ವಿಮಾನ ಟಿಕೆಟ್​, ಹೋಟೆಲ್​ ರೂಮ್​ಗಳು ಈಗಾಗಲೆ ದುಬಾರಿಯಾಗಿವೆ. ಪ್ರತಿ ಕ್ರೀಡಾಂಗಣದ ನವೀಕರಣಕ್ಕೆ ಬಿಸಿಸಿಐ ತಲಾ 50 ಕೋಟಿ ರೂ.ನಂತೆ ಒಟ್ಟು 500 ಕೋಟಿ ರೂ. ವ್ಯಯಿಸಿದೆ. ಇನ್ನು ಕೇಂದ್ರ ಸರ್ಕಾರ ವಿಶ್ವಕಪ್​ಗೆ ತೆರಿಗೆ ವಿನಾಯಿತಿ ನೀಡದಿರುವುದರಿಂದ, ಸುಮಾರು 955 ಕೋಟಿ ರೂ.ನಷ್ಟು ತೆರಿಗೆಯನ್ನು ಐಸಿಸಿಗೆ ಬದಲಾಗಿ ಆತಿಥೇಯ ಬಿಸಿಸಿಐಯೇ ಪಾವತಿಸಬೇಕಾಗಿದೆ.

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts