More

    ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡಕ್ಕೆ ಆರಂಭಿಕ ಶಾಕ್

    ಬ್ರಿಸ್ಬೇನ್: ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಆಘಾತ ಎದುರಿಸಿದೆ. ಗಾಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ದಿನದಾಟದ ಕೊನೆ ಅವಧಿ ಮಳೆಯಿಂದ ರದ್ದುಗೊಂಡಿತು. ಈ ವೇಳೆ ಭಾರತ ತಂಡ 2 ವಿಕೆಟ್‌ಗೆ 62 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 307 ರನ್ ಪೇರಿಸಬೇಕಿದೆ. ಇದಕ್ಕೂ ಮೊದಲು 5 ವಿಕೆಟ್‌ಗೆ 274 ರನ್‌ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ 369 ರನ್‌ಗಳಿಗೆ ಸರ್ವಪತನ ಕಂಡಿತು. ತ್ರಿಮೂರ್ತಿಗಳಾದ ಟಿ.ನಟರಾಜನ್ (78ಕ್ಕೆ 3), ಶಾರ್ದೂಲ್ ಠಾಕೂರ್ (94ಕ್ಕೆ 3) ಹಾಗೂ ವಾಷಿಂಗ್ಟನ್ ಸುಂದರ್ (89ಕ್ಕೆ 3) ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಆಸೀಸ್ ಓಟಕ್ಕೆ ಬ್ರೇಕ್ ಹಾಕಿದರು.

    ಇದನ್ನೂ ಓದಿ: VIDEO: ಚೆಂಡು ಎಸೆಯುವ ಭರದಲ್ಲಿ ಪೃಥ್ವಿ ಷಾ ಮಾಡಿದ ಎಡವಟ್ಟೇನು ಗೊತ್ತಾ..?, 

    * ಭಾರತಕ್ಕೆ ಆರಂಭಿಕ ಆಘಾತ
    ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಕಳೆದ ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಶುಭಮಾನ್ ಗಿಲ್ (7) ನಿರಾಸೆ ಅನುಭವಿಸಿದರು. ಪ್ಯಾಟ್ ಕಮ್ಮಿನ್ಸ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದಾಗ ಎಡ್ಜ್ ಆದ ಚೆಂಡು ನೇರವಾಗಿ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್ ಕೈಸೇರಿತು. ಭಾರತ ತಂಡ 11 ರನ್‌ಗೆ ಮೊದಲ ವಿಕೆಟ್ ಕೈಚೆಲ್ಲಿತು. ರೋಹಿತ್ ಶರ್ಮ ಹಾಗೂ ಪೂಜಾರ ಜೋಡಿ ಸಮಯೋಚಿತ ನಿರ್ವಹಣೆಗೆ ಮುಂದಾಯಿತು. ರೋಹಿತ್ ಶರ್ಮ 6 ಬೌಂಡರಿ ಸಿಡಿಸುವ ಮೂಲಕ ರನ್‌ವೇಗಕ್ಕೂ ಚಾಲನೆ ನೀಡಿದರು. ಆದರೆ, ಲ್ಯಾನ್ ಎಸೆತದಲ್ಲಿ ದುಡುಕಿದ ರೋಹಿತ್ ಶರ್ಮ ದೊಡ್ಡ ಹೊಡೆತಕ್ಕೆ ಮುಂದಾಗಿ ಮಿಡ್ ಆನ್‌ನಲ್ಲಿದ್ದ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚ್ ನೀಡಿದರು. ಬಳಿಕ ಮಂದಗತಿಯಲ್ಲಿ ಆರಂಭ ಕಂಡಿರುವ ನಾಯಕ ರಹಾನೆ ಹಾಗೂ ಪೂಜಾರ ಚಹಾ ವಿರಾಮದವರೆಗೂ ಬ್ಯಾಟಿಂಗ್ ಕಾಯ್ದುಕೊಂಡರು.

    ಇದನ್ನೂ ಓದಿ: VIDEO: ನೆಟ್ ಬೌಲರ್ ಕೋಟಾದಲ್ಲಿ ಆಸೀಸ್‌ಗೆ ಹೋದವ…ಈಗ ಟೀಮ್ ಇಂಡಿಯಾದ ಭರವಸೆ..!, 

    * ಆಸೀಸ್ ಹಿಗ್ಗಿಸಿದ ಬಾಲಂಗೋಚಿಗಳು
    28 ರನ್‌ಗಳಿಂದ ಕ್ಯಾಮರಾನ್ ಗ್ರೀನ್ ಹಾಗೂ 38 ರನ್‌ಗಳಿಂದ ದಿನದಾಟ ಆರಂಭಿಸಿದ ನಾಯಕ ಟಿಮ್ ಪೇನ್ ಜೋಡಿ ದಿನದ ಆರಂಭದಲ್ಲೇ ಭಾರತದ ಬೌಲರ್‌ಗಳಿಗೆ ತಿರುಗೇಟು ನೀಡಿತು. ಈ ಜೋಡಿಗೆ ವೇಗಿ ಶಾರ್ದೂಲ್ ಠಾಕೂರ್ ಕಡಿವಾಣ ಹಾಕಿದರು. ದಿನದಾಟದಲ್ಲಿ 39 ರನ್ ಒಟ್ಟಾರೆ 6ನೇ ವಿಕೆಟ್‌ಗೆ 98 ರನ್ ಪೇರಿಸಿದ್ದ ವೇಳೆ ಟಿಮ್ ಪೇನ್‌ಗೆ ಶಾರ್ದೂಲ್ ಪೆವಿಲಿಯನ್ ದಾರಿ ತೋರಿದರು. ಇದರ ಬೆನ್ನಲ್ಲೇ ಕ್ಯಾಮರಾನ್ ಗ್ರೀನ್ (47) ಕೂಡ ವಾಪಸಾದರು. ಬಾಲಂಗೋಚಿಗಳಾದ ಮಿಚೆಲ್ ಸ್ಟಾರ್ಕ್ (20*), ನಾಥನ್ ಲ್ಯಾನ್ (24), ಜೋಸ್ ಹ್ಯಾಸಲ್‌ವುಡ್ (11) ತಂಡದ ಮೊತ್ತವನ್ನು 370ರ ಗಡಿಗೆ ತಂದು ನಿಲ್ಲಿಸಿತು.

    ಇದನ್ನೂ ಓದಿ: ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    ಆಸ್ಟ್ರೇಲಿಯಾ: 369 (ಕ್ಯಾಮೆರೊನ್ ಗ್ರೀನ್ 47, ಟಿಮ್ ಪೇನ್ 50, ಟಿ.ನಟರಾಜನ್ 78ಕ್ಕೆ 3, ಶಾರ್ದೂಲ್ ಠಾಕೂರ್ 94ಕ್ಕೆ 3, ವಾಷಿಂಗ್ಟನ್ ಸುಂದರ್ 89ಕ್ಕೆ 3), ಭಾರತ: 26 ಓವರ್‌ಗಳಲ್ಲಿ 2 ವಿಕೆಟ್‌ಗೆ 62 (ರೋಹಿತ್ ಶರ್ಮ 44, ಶುಭಮಾನ್ ಗಿಲ್ 7, ಚೇತೇಶ್ವರ್ ಪೂಜಾರ 8*, ಅಜಿಂಕ್ಯ ರಹಾನೆ 2*).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts