More

    ಅಭಿವೃದ್ಧಿ ಹೆಸರಲ್ಲಿ ಗುಡ್ಡದ ಮಣ್ಣಿಗೆ ಕನ್ನ

    ಹೊಸದುರ್ಗ: ಹಿರಿಯೂರು-ಹೊಸದುರ್ಗ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ಕೂಗಳತೆ ದೂರದಲ್ಲಿ ಇರುವ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಿತ ಇಲಾಖೆ ಜಾಣ ಕುರುಡುತನ ತೋರುತ್ತಿದೆ.

    ಮಾಡದಕೆರೆ ಹೋಬಳಿಯ ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಕಟ್ಟಡಗಳು ಹಾಗೂ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಅಭಿವೃದ್ಧಿ ಕಾಮಗಾರಿಗಾಗಿ ಮಾಡದಕೆರೆಯ 300 ಎಕರೆ ವಿಸ್ತೀರ್ಣದ ಗುಡ್ಡದಲ್ಲಿರುವ ಫಲವತ್ತಾದ ಮಣ್ಣನ್ನು ಹಗಲು ರಾತ್ರಿ ಎನ್ನದೆ ಬೃಹತ್ ಯಂತ್ರಗಳನ್ನು ಬಳಸಿ ಅಗೆದು ಟಿಪ್ಪರ್ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ.

    ಕಳೆದ ಎರಡ್ಮೂರು ತಿಂಗಳಿಂದ ಮಣ್ಣು ದೋಚುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಗುಡ್ಡವನ್ನು ಬೃಹತ್ ಹಿಟಾಚಿ ಯಂತ್ರಗಳನ್ನು ಬಳಸಿ ಅಗೆಯುತ್ತಿದ್ದರೂ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಪ್ರಾಕೃತಿಕ ಸಂಪನ್ಮೂಲ ಹಾಳು ಮಾಡುತ್ತಿರುವುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ.

    ಯಾರೇ ಆಗಲಿ ಸರ್ಕಾರಿ ಜಮೀನಿನ ಮಣ್ಣು ಬಳಸುವ ಮೊದಲು ಗಣಿ, ಅರಣ್ಯ ಹಾಗೂ ಕಂದಾಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ರೈತರು ಜಮೀನಿನ ಮಣ್ಣನ್ನು ಕೃಷಿಗಾಗಿ ಸಾಗಿಸಿದರೂ ಹಿಡಿದು ಪ್ರಕರಣ ದಾಖಲಿಸುವ ಅಧಿಕಾರಿಗಳು ಈಗ ಸಾವಿರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಸುಮ್ಮನಿರುವುದು ಅನುಮಾನ ಮೂಡಿಸುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

    ಮಣ್ಣಿನ ಸವಕಳಿ ಹಾಗೂ ಪರಿಸರ ಸಂರಕ್ಷಣೆಗಾಗಿ ಪ್ರತಿ ವರ್ಷ ಗಿಡ ನೆಡುವ, ಜಾಗೃತಿ ಮೂಡಿಸುವ ಆರಣ್ಯ ಇಲಾಖೆ ತನಗೇ ಸೇರಿದ ಜಾಗದಲ್ಲಿ ಅಕ್ರಮ ಮಣ್ಣು ಸಾಗಣೆ ತಡೆಯುವಲ್ಲಿ ವಿಫಲವಾಗಿರುವುದು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.

    ಮಾಡದಕೆರೆ ಸರ್ವೇ ನಂ.30ರಲ್ಲಿರುವ ಗುಡ್ಡ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದು, ಅಲ್ಲಿ ಮಣ್ಣು ಸಾಗಿಸುತ್ತಿರುವ ಕುರಿತು ಯಾವುದೇ ಮಾಹಿತಿಯಿಲ್ಲ. ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸಲಾಗುವುದು.
    ಸುಜಾತಾ, ಆರ್‌ಎಫ್‌ಒ, ಅರಣ್ಯ ಇಲಾಖೆ, ಹೊಸದುರ್ಗ.

    ಮಾಡದಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಅರಣ್ಯ ಇಲಾಖೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಮಾಹಿತಿ ನೀಡಲಾಗಿದೆ.
    ಮಲ್ಲಿಕಾರ್ಜುನ, ತಹಸೀಲ್ದಾರ್, ಹೊಸದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts