More

    ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಎತ್ತಂಗಡಿ

    ಕೋಲಾರ:ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುತ್ತೇನೆ. ಸಹೋದರರಂತೆ ನೋಡಿಕೊಳ್ಳುತ್ತೇನೆ, ಇದನ್ನು ದುರುಪಯೋಗಪಡಿಸಿಕೊಳ್ಳಲು ನೋಡಿದರೆ ಜಾಗದಿಂದ ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಎಚ್ಚರಿಕೆ ನೀಡಿದರು.

    ತಾಲೂಕಿನ ನರಸಾಪುರದಲ್ಲಿ ಗ್ರಾಮದಲ್ಲಿ ಬುಧವಾರ 12.40 ಕೋ.ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸರಿಯಾದ ಸಮಯಕ್ಕೆ ಸಾರ್ವಜನಿಕರಿ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಅದು ಬಿಟ್ಟು ಉದಾಸೀನ ತೋರಿದರೆ ದಂಡ ತೆರಬೇಕಾಗುತ್ತದೆ ಎಂದರು.
    ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗಾಂಚಾಲಿ ತೋರಿದರೆ ಏನು ಮಾಡಬೇಕೆಂಬುದು ನನಗೆ ಗೊತ್ತಿದೆ. ಈ ಅಧಿಕಾರಿ ಇಲ್ಲದಿದ್ದರೆ ಮತ್ತೊಬ್ಬ ಅಧಿಕಾರಿ ನಿಯೋಜಿಸಲಾಗುವುದು. 10 ಜನ ಹೋದರೆ ಹನ್ನೊಂದನೆಯವರು ಬರುತ್ತಾರೆ ಎಂದು ಹೇಳಿದರು.
    ಅಧಿಕಾರಿಗಳ ಜತೆ ಪರ್ಸೆಂಟೇಜ್​ ವ್ಯವಹಾರ ಮಾಡುವವರು ನಾವಲ್ಲ. ತಾಳ್ಮೆಯಿಂದ ಇರುತ್ತೇನೆ. ತಾಳ್ಮೆ ಕಳೆದುಕೊಂಡರೆ ಸುಮ್ಮನಿರುವುದಿಲ್ಲ. ನ್ಯಾಯಯುತವಾಗಿ ಜನರಿಗೆ, ರೈತರಿಗೆ ಕೆಲಸ ಮಾಡಿಕೊಡಬೇಕು ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದರು.
    ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿಮಾರ್ಣ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಗಡುವು ನೀಡಲಾಗಿದೆ. ಒಂದು ತಿಂಗಳು ವ್ಯತ್ಯಾಸವಾಗಬಹುದು. ಮುಂದಿನ ಜನವರಿಗೆ ಉದ್ಘಾಟನೆ ಮಾಡಬೇಕು ಎಂದು ಹೇಳಿದರು.
    ಕಳೆದ ಬಾರಿಯ ಕೆ.ಶ್ರೀನಿವಾಸಗೌಡ ಶಾಸಕರಾಗಿದ್ದ ಅವಧಿಯಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿತ್ತು. ಜಾಗ ಸಾಕಾಗದೆ ಗೊಂದಲ ಉಂಟಾಗಿತ್ತು. ಪಕ್ಕದಲ್ಲಿ ಕೆರೆ, ಕುಂಟೆ ಇದೆ. ಭವಿಷ್ಯದಲ್ಲಿ ಕೆರೆಯಲ್ಲಿ ಸೋರಿಕೆಯಾದರೆ ಸಮಸ್ಯೆ ಆಗಬಹುದೆಂದು ಸ್ಥಳಾಂತರಿಸಲಾಗಿದೆ. ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಬೇಡಿಕೆ ಬಂದಿದೆ. ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
    ಆಸ್ಪತ್ರೆ, ಪೊಲೀಸ್​ ಠಾಣೆ ನಿರ್ಮಾಣಕ್ಕೆ ಪ್ರಸ್ತಾವ:
    ನರಸಾಪುರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು ಅಭಿವೃದ್ಧಿ ಹೊಂದುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಲಾಗುವುದು. ಇಎಸ್​ಐ ಆಸ್ಪತ್ರೆ ನಿರ್ಮಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ನಿಮಾರ್ಣವಾಗಲಿದೆ. ನರಸಾಪುರದಲ್ಲಿ ಪೊಲೀಸ್​ ಠಾಣೆ ಸ್ಥಾಪನೆ ಮಾಡಲು ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಗಿದ್ದು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದನದಲ್ಲೂ ಚರ್ಚಿಸಿ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.
    ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದ್ದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಧ್ಯತೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲೆಗೆ ಮಾದರಿಯಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್​, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಇಂಜಿನಿಯರ್​ ವಿಶ್ವನಾಥ್​, ಮುಖಂಡರಾದ ನಾಗನಾಳ ಸೋಮಣ್ಣ, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಮಂಜುನಾಥ್​, ಬೆಳ್ಳೂರು ವೆಂಕಟಸ್ವಾಮಿ, ಜನಪನಹಳ್ಳಿ ನವೀನ್​, ಶಿವಕುಮಾರ್​, ನಾರಾಯಣಪ್ಪ, ಎಂಟಿಬಿ ಶ್ರೀನಿವಾಸ್​, ಪರ್ಜೇನಹಳ್ಳಿ ನಾಗೇಶ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts