More

    ನಿಮಗೆ ಈ ಲಕ್ಷಣಗಳು ಇದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಇದೆ ಎಂದರ್ಥ; ತಪಾಸಣೆ ಮಾಡಿಕೊಳ್ಳಿ..

    ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಇದು ಹೆಚ್ಚಾಗಿ ಪುರುಷರಲ್ಲೇ ಕಂಡುಬರುವ ಒಂದು ವಿಧದ ಕ್ಯಾನ್ಸರ್. ಈ ಮೊದಲು ವೃದ್ಧರನ್ನು ಕಾಡುತ್ತಿದ್ದ ಈ ರೋಗ, ಇತ್ತೀಚೆಗೆ ವಯಸ್ಕರನ್ನೂ ಬಾಧಿಸತೊಡಗಿದೆ. ಆದರೂ ಹೆಚ್ಚಿನವರಿಗೆ ಇದರ ಅರಿವೇ ಇಲ್ಲ. ಬೊಜ್ಜು ಹೊಂದಿರುವವರಿಗೆ ಇದು ಬರುವುದು ಸಾಮಾನ್ಯ. ಅದಲ್ಲದೇ, ಆನುವಂಶಿಕವಾಗಿಯೂ ಈ ಕಾಯಿಲೆ ಬರಬಹುದು. ಈ ಕ್ಯಾನ್ಸರ್‌ನ ಅರಿವಿಲ್ಲದೆ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೆ ಇದ್ದರೆ, ಇದು ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

    ಏನಿದು ಪ್ರಾಸ್ಟೇಟ್ ಕ್ಯಾನ್ಸರ್?

    ಪ್ರಾಸ್ಟೇಟ್ ಎಂಬುದು ಪುರುಷರ ಜನನೇಂದ್ರಿಯದಲ್ಲಿ ಸಣ್ಣ ವಾಲ್‌ನಟ್ (ಅಕ್ರೋಟು) ಗಾತ್ರದಲ್ಲಿ ಕಂಡುಬರುವ ಒಂದು ಗ್ರಂಥಿ. ಇದು ವೀರ್ಯವನ್ನು ಪೋಷಿಸುವ ಮತ್ತು ಸಾಗಿಸುವ ಸೆಮಿನಲ್ ದ್ರವವನ್ನು ಉತ್ಪಾದಿಸುತ್ತದೆ. ಈ ಪ್ರಾಸ್ಟೇಟ್ ಗ್ರಂಥಿಯಲ್ಲಿನ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆಯುವುದರಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಸಂಭವಿಸಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ, ಎಲ್ಲ ವಯೋಮಾನದ ಪುರುಷರನ್ನು ಕಾಡುವ ಸಮಸ್ಯೆಯಾಗಿದೆ. ಕ್ಯಾನ್ಸರ್ ಕಾಣಿಸಿಕೊಂಡ ಆರಂಭದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಜೀವಕೋಶಗಳು ವೃದ್ಧಿಯಾಗಿ, ಪ್ರಾಸ್ಟೇಟ್ ಆಚೆಗೂ ವಿಸ್ತರಿಸಲು ಆರಂಭಿಸಿದಾಗ, ದೇಹದಲ್ಲಿ ಇದರ ಲಕ್ಷಣಗಳು ಕಾಣಿಸಿ, ಇತರ ಭಾಗಗಳಿಗೆ ಗಂಭೀರ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕ್ಯಾನ್ಸರ್ ಹರಡುವಿಕೆಯಿಂದಾಗಿ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗಬಹುದು.

    ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು

    ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಾಗ ದೇಹದಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ…
    1. ಮೂಳೆ ನೋವು, ಆಯಾಸ, ಮೂತ್ರದ ಹರಿವಿನಲ್ಲಿ ಶಕ್ತಿ ಕಡಿಮೆಯಾಗುವುದು, ಮೂತ್ರ ಸೋರಿಕೆ, ಮೂತ್ರದಲ್ಲಿ ರಕ್ತ, ವೀರ್ಯದಲ್ಲಿ ರಕ್ತ, ಪ್ರಯತ್ನ ಪಡದೆ ತೂಕ ಕಳೆದುಕೊಳ್ಳುವುದು, ನಿಮಿರುವಿಕೆಯ ಕೊರತೆ.
    2. ಸಾಮಾನ್ಯವಾಗಿ ಕೆಳ ಬೆನ್ನು ನೋವು, ಸೊಂಟ ಅಥವಾ ಎದೆ ನೋವು, ಕಾಲುಗಳು ಅಥವಾ ಪಾದಗಳಲ್ಲಿ ಮರಗಟ್ಟುವಿಕೆ.
    3. ಪ್ರಾಸ್ಟೇಟ್ ಕ್ಯಾನ್ಸರ್‌ನಿಂದಾಗಿ ಕೆಳ ಬೆನ್ನಿನಲ್ಲಿ ಮತ್ತು ಶ್ರೋಣಿಯ ಪ್ರದೇಶದಲ್ಲಿ ಅಸ್ವಸ್ಥತೆ ಮತ್ತು ನೋವುಂಟಾಗುವುದು.
    4. ನಿರ್ಲಕ್ಷಿಸಬಾರದ ಇತರ ರೋಗಲಕ್ಷಣಗಳೆಂದರೆ ಪದೇ ಪದೆ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಮತ್ತು ಮೂತ್ರ ವಿಸರ್ಜಿಸುವಾಗ ಆಯಾಸಗೊಳ್ಳುವುದು ಅಥವಾ ದುರ್ಬಲ ಹರಿವು.

    ಪ್ರಾಸ್ಟೇಟ್ ಕ್ಯಾನ್ಸರ್‌ನಿಂದಾಗುವ ಅಪಾಯಗಳು

    1. ಕ್ಯಾನ್ಸರ್ ಹರಡುವಿಕೆ: ಪ್ರಾಸ್ಟೇಟ್ ಕ್ಯಾನ್ಸರ್ ಮೊದಲು ಮೂತ್ರಕೋಶದಂತಹ ಹತ್ತಿರದ ಅಂಗಗಳಿಗೆ ಹರಡಬಹುದು. ರಕ್ತಪ್ರವಾಹ ಅಥವಾ ದುಗ್ಧರಸ ವ್ಯವಸ್ಥೆಯ ಮೂಲಕ ಮೂಳೆಗಳು ಅಥವಾ ಇತರ ಅಂಗಗಳಿಗೆ ಹರಡುತ್ತದೆ. ಮೂಳೆಗಳಿಗೆ ಹರಡುವ ಪ್ರಾಸ್ಟೇಟ್ ಕ್ಯಾನ್ಸರ್ ನೋವು ಮತ್ತು ಮುರಿದ ಮೂಳೆಗಳಿಗೆ ಕಾರಣವಾಗಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭದಲ್ಲೇ ಕಂಡುಕೊಳ್ಳದೆ, ದೇಹದ ಇತರ ಅಂಗಗಳಿಗೆ ಹರಡಿದ ಬಳಿಕ ಚಿಕಿತ್ಸೆ ಪಡೆದರೆ, ಇದಕ್ಕೆ ದೇಹ ಸ್ಪಂದಿಸಬಹುದು ಮತ್ತು ಕಾಯಿಲೆಯನ್ನು ನಿಯಂತ್ರಿಸಬಹುದು. ಆದರೆ ಈ ಕ್ಯಾನ್ಸರ್ ಅನ್ನು ಗುಣಪಡಿಸುವುದು ಅಸಾಧ್ಯ ಎನ್ನುತ್ತವೆ ವೈದ್ಯಕೀಯ ಸಂಶೋಧನೆಗಳು.
    2. ಮೂತ್ರ ಸೋರಿಕೆ: ಪ್ರಾಸ್ಟೇಟ್ ಕ್ಸಾನ್ಸರ್ ಮತ್ತು ಇದಕ್ಕೆ ತೆಗೆದುಕೊಳ್ಳುವ ಚಿಕಿತ್ಸೆಯಿಂದ ಮೂತ್ರ ಸೋರಿಕೆ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಯಾವ ಪ್ರಕಾರದ ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿದ್ದೀರಿ ಎಂಬುದರ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.
    3. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ: ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ, ವಿಕಿರಣ ಅಥವಾ ಹಾರ್ಮೋನ್ ಚಿಕಿತ್ಸೆಗಳನ್ನು ನೀಡುವುದರಿಂದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಉಂಟಾಗಬಹುದು.

    ಈ ಕ್ಯಾನ್ಸರ್ ತಡೆಗೆ ಅನುಸರಿಸಬಹುದಾದ ಮಾರ್ಗಗಳು

    • ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿದ ಆರೋಗ್ಯಕರ ಆಹಾರವನ್ನು ಸೇವಿಸುವುದು
    • ಸಪ್ಲಿಮೆಂಟ್‌ಗಳಿಗೆ ಬದಲಾಗಿ ಆರೋಗ್ಯಕರ ಆಹಾರ ಸೇವಿಸುವುದು
    • ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು
    • ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts