More

    ದೇಹವ್ಯವಸ್ಥೆ ಅರ್ಥಮಾಡಿಕೊಂಡರೆ ಶಿವನಾಗಬಹುದು!

    ದೇಹವ್ಯವಸ್ಥೆ ಅರ್ಥಮಾಡಿಕೊಂಡರೆ ಶಿವನಾಗಬಹುದು!

    ಒಮ್ಮೆ ನಮ್ಮ ಮತ್ತು ದೇಹದ ನಡುವಿನ ಅಂತರವನ್ನು ಕಂಡುಕೊಂಡರೆ, ಎಂಥ ಯಂತ್ರವನ್ನು ನಮಗೆ ಕೊಡಲಾಗಿದೆ ಎಂದು ತಿಳಿಯುತ್ತದೆ. ಇದು ಅದರೊಳಗೆಯೇ ಬಂಧನ ಮತ್ತು ಸ್ವಾತಂತ್ರ್ಯದ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಇದನ್ನು ದೈವಿಕಗೊಳಿಸಬಹುದು.

    ಅಸ್ತಿತ್ವದ ಪ್ರಮುಖ ಅಂಶವೆಂದರೆ ಭೌತಿಕ ದೇಹ!

    ದೇಹವನ್ನು ವಿಭಿನ್ನ ಚಟುವಟಿಕೆಗಳಿಗೆ, ವಿಭಿನ್ನ ಉಪಕರಣಗಳಾಗಿ ರಚಿಸಲಾಗಿದೆೆ. ದೈಹಿಕ ಶಕ್ತಿಯ ವಿಚಾರದಲ್ಲಿ ಮಾನವ ದೇಹವನ್ನು ಯಾವುದೇ ಪ್ರಾಣಿಗಳಿಗೆ ಹೋಲಿಸಲು ಸಾಧ್ಯವಾಗುವುದಿಲ್ಲ. ಮಿಡತೆ ತನ್ನ ದೇಹದ ಉದ್ದದ 50 ರಿಂದ 100 ಪಟ್ಟು ನೆಗೆಯಬಲ್ಲದು. ಆ ನಿಟ್ಟಿನಲ್ಲಿ, ಮನುಷ್ಯ ಐದು ಅಥವಾ ಆರು ಅಡಿ ಎತ್ತರವಾಗಿದ್ದರೆ 500 ಅಥವಾ 600 ಅಡಿ ಜಿಗಿಯಬೇಕಾಗುತ್ತದೆ. ಎರೆಹುಳು, ಗೆದ್ದಲು, ಮಿಡತೆ, ಹುಲಿ, ಜಿಂಕೆ, ಆನೆ ಅಥವಾ ಇನ್ಯಾವುದೇ ಪ್ರಾಣಿಯ ಮಾನದಂಡಗಳಿಂದ ಒಲಿಂಪಿಕ್ಸ್ ನಡೆಸಿದರೆ, ನಮ್ಮ ಸಾಮರ್ಥ್ಯ ಏನೇನೂ ಅಲ್ಲ.

    ದೈಹಿಕ ಶಕ್ತಿಯ ದೃಷ್ಟಿಯಿಂದ, ನಮ್ಮನ್ನು ಭೂಮಿ ಮೇಲಿನ ಯಾವುದೇ ಪ್ರಾಣಿಗೆ ಹೋಲಿಸಲು ಆಗುವುದಿಲ್ಲವಾದರೂ ನಮ್ಮ ಬದುಕುಳಿಯುವ ಪ್ರವೃತ್ತಿಯನ್ನೂ ಮೀರಿ ಮಹತ್ತರವಾದುದನ್ನು ಮಾಡುವ ನಿರ್ದಿಷ್ಟ ಸಾಮರ್ಥ್ಯದೊಂದಿಗೆ ಬಂದಿದ್ದೇವೆ; ಅದುವೇ ಮುಖ್ಯವಾದ ವಿಷಯ. ಮಾನವ ಜೀವಿಯಾಗಿ ಜೀವನವನ್ನು ಬದುಕುಳಿಯುವ ಅಗತ್ಯಗಳಿಗಾಷ್ಟೇ ಅಲ್ಲದೆ ಅದನ್ನೂ ಮೀರಿ ನಿಭಾಯಿಸಬಹುದು. ದುರದೃಷ್ಟವಶಾತ್, ಹೀಗೆ ಬದುಕುಳಿಯುವ ಅಗತ್ಯಗಳನ್ನು ಮೀರಿ ನೋಡುವ ಬದಲು, ಹೆಚ್ಚಿನ ಜನರು ಬದುಕುಳಿಯುವಿಕೆಯ ಮಾನದಂಡಗಳನ್ನು ಹೆಚ್ಚಿಸುವಲ್ಲೇ ಗಮನ ಹರಿಸುತ್ತಿದ್ದಾರೆ. ಒಂದು ಸಮಯದಲ್ಲಿ ಬದುಕುಳಿಯುವಿಕೆಯ ಅಗತ್ಯತೆ ಎಂದರೆ ದಿನಕ್ಕೆ ಒಂದು ಅಥವಾ ಎರಡು ಬಾರಿ ಊಟ ದೊರೆತರೆ ಸಾಕಾಗಿತ್ತು. ಇಂದು, ಬದುಕುಳಿಯುವಿಕೆಯ ಅಗತ್ಯತೆ ಎಂದರೆ ಒಂದು ಐಷಾರಾಮಿ ಕಾರು!

    ಯೋಗದಲ್ಲಿ, ಮಾನವ ಬೆನ್ನುಮೂಳೆಯನ್ನು ಮೇರುದಂಡ ಎನ್ನುತ್ತೇವೆ, ಅಂದರೆ ಅದು ಬ್ರಹ್ಮಾಂಡದ ಅಕ್ಷ. ಒಬ್ಬರ ಬೆನ್ನುಮೂಳೆ ಬ್ರಹ್ಮಾಂಡದ ಅಕ್ಷವಾಗುವುದು ಹೇಗೆ? ಇಂದು, ಆಧುನಿಕ ವಿಜ್ಞಾನ ಇಡೀ ಅಸ್ತಿತ್ವವನ್ನು ಒಂದು ಕಂಪನ ಎಂಬುದಾಗಿ ನೋಡುತ್ತಿದೆ. ಇನ್ನೂ ಆಳವಾಗಿ ನೋಡಿದರೆ, ಒಂದೇ ಶಕ್ತಿ ಹಲವು ವಿಧಗಳಲ್ಲಿ ಕಂಪನವನ್ನು ಸೃಷ್ಟಿಸುತ್ತಿದೆ. ಸೃಷ್ಟಿ ಎಂದು ಕರೆಯುವ ಎಲ್ಲವನ್ನೂ ವಿಶಾಲವಾದ ಶೂನ್ಯದ ಮಡಿಲಲ್ಲಿ ಹಿಡಿದಿಡಲಾಗಿದೆ ಎಂಬುದನ್ನೂ ಅರಿತಿದ್ದೇವೆ. ವಿಜ್ಞಾನಿಗಳು ಇದನ್ನು ‘ಡಾರ್ಕ್ ಎನರ್ಜಿ’ ಮುಂತಾದ ಹೆಸರುಗಳಿಂದ ಅನ್ವೇಷಿಸಲು ಪ್ರಯತ್ನಿಸುತ್ತಿದ್ದಾರೆ; ಆದರೆ ಅದನ್ನು ಮೀರಿ, ಇನ್ನೂ ಸಂಪೂರ್ಣವಾದ ಶೂನ್ಯವಿದೆ.

    ಭೌತಿಕವಾದ ಅಸ್ತಿತ್ವದಿಂದ ಹಿಡಿದು ದೈವೀಕ ಅಂಶ ಎಂದು ಏನನ್ನು ಕರೆಯುತ್ತೀರೋ ಅದರವರೆಗೆ, ಎಲ್ಲಕ್ಕೂ ಒಂದೇ ಆಧಾರವಿರುತ್ತದೆ. ಇದು ಒಂದು ಬಣ್ಣದ ಪಟ್ಟಿಯಂತೆ- ಮೊದಲು ಅದು ಗಾಢವಾಗಿದ್ದು, ಬರಬರುತ್ತ ತೆಳ್ಳಗಾಗುತ್ತ ಹೋಗುತ್ತದೆ ಮತ್ತು ಕೊನೆಯಲ್ಲಿ ಏನೂ ಇರುವುದಿಲ್ಲ ಅಥವಾ ಶೂನ್ಯವಾಗುತ್ತದೆ. ಸೃಷ್ಟಿಯ ಪ್ರಕ್ರಿಯೆಯಲ್ಲಿ, ಮನುಷ್ಯರು ಈ ಶೂನ್ಯತೆಗೆ ಸ್ವಲ್ಪ ಹತ್ತಿರದಲ್ಲಿದ್ದಾರೆ.

    ಮನುಷ್ಯರಲ್ಲಿನ ಅಗತ್ಯವಾದ ಕಂಪನ ಬೆನ್ನುಮೂಳೆಯಿಂದ ಉತ್ಪತ್ತಿಯಾಗುತ್ತದೆ. ಅದು ಸೂಕ್ಷ್ಮರೂಪ ಪಡೆದುಕೊಂಡಷ್ಟೂ, ಅದು ಮುಂದುವರಿಯುತ್ತದೆ. ಅದು ಸ್ಥೂಲವಾಗಿದ್ದರೆ, ಅದು ಅಲ್ಪಪ್ರಮಾಣಕ್ಕೆ ಸೀಮಿತಗೊಳ್ಳುತ್ತದೆ. ಅದು ತುಂಬ ಸೂಕ್ಷ್ಮವಾದರೆ, ಅದನ್ನು ಎಲ್ಲೆಡೆ ಹರಡಬಹುದು. ಒಮ್ಮೆ ಕಂಪನಗಳು ಎಲ್ಲೆಡೆ ತಮ್ಮನ್ನು ಹರಡಿಕೊಂಡ ನಂತರ, ನಮ್ಮ ಗ್ರಹಿಸುವ ಸಾಮರ್ಥ್ಯವೂ ಎಲ್ಲೆಡೆ ವ್ಯಾಪಿಸುತ್ತದೆ. ಇದೀಗ, ಸೀಮಿತ ಅಸ್ತಿತ್ವದ ದೃಷ್ಟಿಯಿಂದ ನೀವು ‘ನಾನು’ ಎಂದು ಏನನ್ನು ಕರೆಯುತ್ತಿದ್ದಿರೋ ಅದು ನಿಮ್ಮ ಸಂವೇದನೆಯ ಗಡಿಯೊಳಗಿರುತ್ತದೆ. ಇದೀಗ, ಅನುಭವದ ಗಡಿಯೊಳಗೆ ಏನಿದೆಯೋ ಅದುವೇ ನೀವು. ಆ ಗಡಿಯಿಂದ ಹೊರಗಿರುವ ಯಾವುದೇ ವಸ್ತುವಾದರೂ ಅಥವಾ ಯಾರೇ ಆದರೂ, ಅದು ಬೇರೆ. ಕಂಪನಗಳನ್ನು ಪರಿಷ್ಕರಿಸುವ ಮೂಲಕ, ಅನುಭವದ ಗಡಿಗಳನ್ನು ಅನಂತವಾಗಿ ವಿಸ್ತರಿಸಬಹುದು. ‘ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದನು’ ಎಂದು ಹೇಳಿದಾಗ, ಅವನು ಅನುಭವದ ಗಡಿಗಳನ್ನು ಅಮಿತವಾದ ರೀತಿಯಲ್ಲಿ ವಿಸ್ತರಿಸಿದ್ದಾನೆ ಎಂದು ಅರ್ಥ. ಹಾಗಾದಾಗ ಇಡೀ ಅಸ್ತಿತ್ವವು ಅವನ ಒಂದು ಭಾಗವಾಗಿದೆ ಮತ್ತು ಸ್ವಾಭಾವಿಕವಾಗಿಯೇ ಅವನೇ ಎಲ್ಲಕ್ಕೂ ಕೇಂದ್ರಬಿಂದುವಾಗಿರುತ್ತಾನೆ. ಆದರೆ ಅವನೇ ಕೇಂದ್ರಬಿಂದು ಎಂದು ನಿಮಗೆ ಹೇಗೆ ಗೊತ್ತು?

    ದೇಹವ್ಯವಸ್ಥೆ ಅರ್ಥಮಾಡಿಕೊಂಡರೆ ಶಿವನಾಗಬಹುದು!

    ಸಮಯ ಮತ್ತು ಸ್ಥಳ ಕೇವಲ ಭ್ರಮೆ: ಆಧುನಿಕ ವಿಜ್ಞಾನವು ಸಮಯ ಮತ್ತು ಸ್ಥಳ (ಆಕಾಶ)ವನ್ನೊಳಗೊಂಡ ಯಾವುದೇ ವಿಚಾರಗಳು ಕೇವಲ ಭ್ರಾಂತಿ ಎಂದು ಸಂದೇಹಕ್ಕೆ ಆಸ್ಪದವಿಲ್ಲದಂತೆ ಕಂಡುಕೊಂಡಿದೆ. ಸಮಯ ಮತ್ತು ಸ್ಥಳ ಎರಡೂ ವಿಸ್ತರಿಸಬಲ್ಲವು; ನಮಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬದಲಾಯಿಸಬಹುದು. 1000 ಬೆಳಕಿನ ವರ್ಷಗಳ ದೂರದಲ್ಲಿರುವ ಏನನ್ನಾದರೂ ನಾವು ಇಲ್ಲಿಯೇ ಮಾಡಬಹುದು. 10 ಸಾವಿರ ವರ್ಷಗಳ ಹಿಂದಿನದನ್ನು ಅಥವಾ 10 ಸಾವಿರ ವರ್ಷಗಳ ನಂತರ ಏನಾಗಬಹುದು ಎಂಬುದನ್ನು ಇದೀಗ ಮಾಡಬಹುದು; ಏಕೆಂದರೆ ಈ ಕ್ಷಣದಲ್ಲಿರುವುದು- ‘ಇಲ್ಲಿ ಮತ್ತು ಈಗ’ ಅಷ್ಟೆ. ನಾನು ಅತೀಂದ್ರಿಯತೆ ಬಗ್ಗೆ ಹೇಳುತ್ತಿಲ್ಲ.

    ಆಧುನಿಕ ವಿಜ್ಞಾನದ ಪ್ರಕಾರ, ಸಮಯ ಮತ್ತು ಸ್ಥಳ ಒಂದು ದೊಡ್ಡ ಭ್ರಮೆ. ಅದರಿಂದ ನಮಗೆ ಬೇಕಾದುದನ್ನು ಮಾಡಬಹುದು. ವಾಸ್ತವವಾಗಿ ವಿಜ್ಞಾನಿಗಳ ಒಂದು ನಿರ್ದಿಷ್ಟ ತಂಡ ಸಮಯ ಮತ್ತು ಸ್ಥಳ (ಆಕಾಶ) ಎನ್ನುವಂಥ ಯಾವುದೇ ವಿಷಯವಿಲ್ಲ ಎಂದು ವಾದಿಸಲು ಪ್ರಾರಂಭಿಸಿದೆ. ಅವರ ವಾದ ಸರಿಯೇ. ಈ ತಿಳಿವಳಿಕೆಯಿಂದಲೇ ಬೆನ್ನುಮೂಳೆಯನ್ನು ಮೇರುದಂಡ ಎಂದು ಕರೆದಿದ್ದೇವೆ; ಅದು ಬ್ರಹ್ಮಾಂಡದ ಅಕ್ಷ. ಅಥವಾ ಕನಿಷ್ಠ ಪಕ್ಷ ಒಂದು ನಿರ್ದಿಷ್ಟ ರೀತಿಯಲ್ಲಿ ಕಂಪನಗೊಂಡರೆ ಆ ಅಕ್ಷ ನೀವಾಗಬಹುದು.

    ಮೊದಲೇ ಹೇಳಿದಂತೆ ಈ ದೇಹವು ಒಂದು ಉಪಕರಣ. ಅದನ್ನು ಕೇವಲ ಆಹಾರ ಮತ್ತು ವಸ್ತುಗಳನ್ನು ಸಂಗ್ರಹಿಸಲು ಬಳಸಲಿದ್ದೀರಾ? ಸಾಹಸಗಳನ್ನು ನಿರ್ವಹಿಸಲು ಅಥವಾ ಮಹತ್ತರ ಸಾಧ್ಯತೆಗಾಗಿ ಉತ್ತಮ ರೀತಿಯಲ್ಲಿ ಬಳಸಲಿದ್ದೀರಾ? ಅದನ್ನು ಉಪಕರಣದಂತೆ ಬಳಸಲು ಬಯಸಿದರೆ, ಮೊದಲ ಮತ್ತು ಮುಖ್ಯವಾದ ವಿಷಯವೆಂದರೆ ಈ ದೇಹದಿಂದ ನಿಮ್ಮನ್ನು ಗುರುತಿಸಿಕೊಳ್ಳದೇ ಇರುವುದು. ಈ ದೇಹವನ್ನು ಕೇವಲ ಸಂಗ್ರಹಿಸಿದ್ದೀರಿ- ಇದು ಕೇವಲ ಆಹಾರದ ಸಂಗ್ರಹವಾಗಿದೆ. ಈ ರೀತಿ ಸಂಗ್ರಹಿಸಿರುವುದನ್ನೇ ‘ನಾನು’ ಎಂದು ಹೇಗೆ ಕರೆಯಬಹುದು? ಸಂಗ್ರಹಿಸಿರುವುದು ನಿರ್ದಿಷ್ಟ ಅವಧಿಗೆ ನಿಮ್ಮದಾಗಬಹುದೇ ಹೊರತು ಅದು ನೀವಾಗಿರಲು ಸಾಧ್ಯವಿಲ್ಲ.

    ಪವಾಡಸದೃಶ ಉಪಕರಣ: ಮಾನವ ದೇಹ ಪವಾಡಸದೃಶ ಉಪಕರಣವಾಗಿದೆ. ಇದನ್ನು ಒಂದು ಜೀವಿತಾವಧಿಯಲ್ಲಿ ಅನ್ವೇಷಿಸಲು ಬಯಸಿದರೆ, ಇದಕ್ಕೆ ಬಹಳಷ್ಟು ಶ್ರಮ ಬೇಕಾಗುತ್ತದೆ. ಆದರೆ ಒಂದಲ್ಲ ಒಂದು ರೀತಿಯಲ್ಲಿ, ಜನರು ದೇಹದೊಂದಿಗೆ ತುಂಬ ಆಳವಾಗಿ ಗುರುತಿಸಿಕೊಂಡಾಗ, ದೇಹವನ್ನು ಒಂದು ಉಪಕರಣವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ದೇಹದೊಂದಿಗೆ ಅವರ ಬಂಧನ ಮತ್ತು ಗುರುತಿಸುವಿಕೆ ತುಂಬ ಗಾಢವಾಗಿದೆ, ಅವರು ಇದನ್ನು ‘ನಾನು’ ಎಂದು ನೋಡುತ್ತಲೇ ಇರುತ್ತಾರೆ. ಈ ದೇಹವನ್ನು ‘ನಾನು’ ಎಂದು ನೋಡಿದ ಕ್ಷಣ, ಅದರೊಂದಿಗೆ ವಿಪರೀತ ಭಾವನೆಗಳು ಬರುತ್ತವೆ. ಹಾಗಿದ್ದಾಗ ಅದನ್ನು ಉಪಕರಣವಾಗಿ ಬಳಸಲಾಗುವುದಿಲ್ಲ.

    ಒಮ್ಮೆ ನಮ್ಮ ಮತ್ತು ದೇಹದ ನಡುವಿನ ಅಂತರವನ್ನು ಕಂಡುಕೊಂಡರೆ, ಎಂಥ ಯಂತ್ರವನ್ನು ನಮಗೆ ಕೊಡಲಾಗಿದೆ ಎಂದು ತಿಳಿಯುತ್ತದೆ. ಇದು ಅದರೊಳಗೆಯೇ ಬಂಧನ ಮತ್ತು ಸ್ವಾತಂತ್ರ್ಯದ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಇದನ್ನು ದೈವಿಕಗೊಳಿಸಬಹುದು- ನಮ್ಮ ಶಕ್ತಿ ವ್ಯವಸ್ಥೆಯನ್ನು ದೇಹವು ದೈವದಂತಾಗುವ ರೀತಿಯಲ್ಲಿ ಇಟ್ಟುಕೊಳ್ಳಬಹುದು. ಅಥವಾ ಶವದಂತೆ ಆಗಬಹುದು. ಅಂದರೆ, ಈ ದೇಹವನ್ನು ಶವವನ್ನಾಗಿ ಅಥವಾ ಶಿವನನ್ನಾಗಿ ಮಾಡಬಹುದು. ಶವ ಎಂದರೆ ಹೆಣ ಎಂದರ್ಥ. ಶಿವ ಎಂದರೆ ಪರಮಸತ್ಯ. ಇದು ಈ ಯಂತ್ರವನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದರೊಂದಿಗೆ ನಂಬಲಸಾಧ್ಯ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂಬುದನ್ನು ಅರಿಯಿರಿ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

    www.isha.sadhguru.org)

    ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

    ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts