More

    ವಿಶ್ವಕಪ್ ಫೈನಲ್​​ ಸೋಲಿನ ಆಘಾತದಿಂದ ಹೊರಬಂದಿದ್ದು ಹೇಗೆ? ರೋಹಿತ್​ ಶರ್ಮ ಹೇಳಿದ್ದು ಹೀಗೆ…

    ಮುಂಬೈ: ತವರಿನಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಮಿಫೈನಲ್​ ವರೆಗೂ ಒಂದೇ ಒಂದು ಪಂದ್ಯವನ್ನು ಸೋಲದೆ, ಅಜೇಯವಾಗಿ ಫೈನಲ್​ ಪ್ರವೇಶಿಸಿ, ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಹೀನಾಯವಾಗಿ ಸೋಲುಂಡುವ ಮೂಲಕ ಟೀಮ್​ ಇಂಡಿಯಾ ಅಸಂಖ್ಯಾತ ಕ್ರೀಡಾಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಇಂದಿಗೂ ಈ ಪಂದ್ಯವನ್ನು ನೆನೆದರೆ ಭಾರತೀಯರಲ್ಲಿ ಬೇಸರ ತುಂಬಿಕೊಳ್ಳುತ್ತದೆ. ಫೈನಲ್​ ಸೋಲಿನಿಂದ ತೀವ್ರವಾಗಿ ಕುಗ್ಗಿ ಹೋಗಿದ್ದ ನಾಯಕ ರೋಹಿತ್​ ಶರ್ಮ ಅಂದಿನಿಂದ ಇಂದಿನವರೆಗೂ ಈ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ರೋಹಿತ್​, ಮುಕ್ತ ಮನಸ್ಸಿನಿಂದ ಎಲ್ಲವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.

    ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಚಾಟಿಂಗ್​ನಲ್ಲಿ ಎಲ್ಲವನ್ನು ತಿಳಿಸಿದ್ದಾರೆ. ರೋಹಿತ್​ ಖಿನ್ನತೆಗೆ ಜಾರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇನ್​ಸ್ಟಾಗ್ರಾಂ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಫೈನಲ್​ ಪಂದ್ಯ ಸೋಲಿನಿಂದ ರೋಹಿತ್​ ತುಂಬಾ ಕುಗ್ಗಿರುವಂತೆ ಮತ್ತು ಇನ್ನೂ ಪೂರ್ತಿಯಾಗಿ ಅದರಿಂದ ಹೊರ ಬರದಿರುವುದು ಗೋಚರವಾಗುತ್ತದೆ.

    ಮೊದಲ ಕೆಲವು ದಿನಗಳಲ್ಲಿ ಸೋಲನ್ನು ಮರೆತು ಹೇಗೆ ಹಿಂತಿರುಗಬೇಕು ಎಂದು ನನಗೆ ತಿಳಿದಿರಲಿಲ್ಲ. ಏನು ಮಾಡಬೇಕೆಂಬುದು ಸಹ ನನಗೆ ತಿಳಿದಿರಲಿಲ್ಲ. ನಿಮಗೆ ಗೊತ್ತಾ, ನನ್ನ ಕುಟುಂಬ, ನನ್ನ ಸ್ನೇಹಿತರು ನನ್ನನ್ನು ಸಹಜ ಸ್ಥಿತಿಗೆ ತರಲು ಸಾಕಷ್ಟು ಪ್ರಯತ್ನಿಸಿದರು. ನನ್ನ ಸುತ್ತಲೂ ಇದ್ದ ವಿಷಯಗಳನ್ನು ಸಾಕಷ್ಟು ಹಗುರವಾಗಿರಿಸಿದರು. ಇದು ನನಗೆ ತುಂಬಾ ಸಹಾಯವಾಯಿತು. ಸೋಲನ್ನು ಜೀರ್ಣಿಸಿಕೊಳ್ಳುವುದು ಸುಲಭವಾಗಲಿಲ್ಲ. ಆದರೆ, ಜೀವನ ಮುಂದೆ ಸಾಗಲೇಬೇಕಲ್ಲ. ಜೀವನದಲ್ಲಿ ನೀವು ಖಂಡಿತ ಮುಂದೆ ಸಾಗಬೇಕು. ಆದರೆ, ಪ್ರಾಮಾಣಿಕವಾಗಿ, ಇದು ಕಠಿಣವಾಗಿತ್ತು. ಸುಮ್ಮನೇ ಮುಂದೆ ಸಾಗಲು ಇದು ಅಷ್ಟೊಂದು ಸುಲಭವಾಗಿರಲಿಲ್ಲ. ನಾನು ಯಾವಾಗಲೂ 50 ಓವರ್ ವಿಶ್ವಕಪ್​ ಟೂರ್ನಿ ನೋಡುತ್ತಾ ಬೆಳೆದಿದ್ದೇನೆ ಮತ್ತು ನನಗೆ ಅದು ಅಂತಿಮ ಬಹುಮಾನವಾಗಿತ್ತು. ಹೀಗಾಗಿ ಇದರಿಂದ ಹೊರಬರುವುದು ತುಂಬಾನೇ ಕಷ್ಟವಾಯಿತು ಎಂದು ರೋಹಿತ್​ ಹೇಳಿದ್ದಾರೆ.

    ನಾವು ವಿಶ್ವಕಪ್‌ಗಾಗಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ ಮತ್ತು ಅದು ಇಂದು ನಿರಾಶಾದಾಯಕವಾಗಿದೆ ಸರಿ? ನೀವದನ್ನು ಸಾಧಿಸದಿದ್ದರೆ, ನಿಮಗೆ ಬೇಕಾದುದನ್ನು ನೀವು ಪಡೆಯದಿದ್ದರೆ, ನೀವು ಇಷ್ಟು ದಿನ ಏನು ಹುಡುಕುತ್ತಿದ್ದೀರಿ, ನೀವು ಏನು ಕನಸು ಕಂಡಿದ್ದೀರಿ ಅದೆಲ್ಲವೂ ಹುಸಿಯಾದಾಗ ನೀವು ನಿರಾಶೆಗೊಳ್ಳುತ್ತೀರಿ ಮತ್ತು ಹತಾಶರಾಗುತ್ತೀರಿ. 10 ಪಂದ್ಯಗಳನ್ನು ಗೆದ್ದ ನಿಮಗೆ ಫೈನಲ್​ನಲ್ಲಿ ಏನಾಯಿತು ಎಂದು ಕೇಳಿದಾಗ, ಹೌದು ನಾವು ತಪ್ಪು ಮಾಡಿದ್ದೇವೆ. ಆದರೆ, ಅದೇ ಸಂದರ್ಭದಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿದ್ದೇವೆ ಎಂದು ಹೇಳುತ್ತೇನೆ. ಎಲ್ಲ ಪಂದ್ಯಗಳಲ್ಲೂ ತಪ್ಪುಗಳು ನಡೆಯುತ್ತವೆ. ಪರಿಪೂರ್ಣ ಆಟವಾಡಲು ಸಾಧ್ಯವಿಲ್ಲ. ಅದೇ ರೀತಿ ಇನ್ನೊಂದು ಬದಿಯಿಂದ ನೋಡಿದರೆ, ನಮ್ಮ ತಂಡದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ಏಕೆಂದರೆ, ನಾವು ಹೇಗೆ ಆಡಿದ್ದೇವೆ ಎಂಬುದು ಅತ್ಯುತ್ತಮವಾಗಿದೆ. ಪ್ರತಿ ವಿಶ್ವಕಪ್‌ನಲ್ಲಿ ನೀವು ಈ ರೀತಿಯ ಪ್ರದರ್ಶನ ಕಾಣುವುದಿಲ್ಲ ಎಂದು ರೋಹಿತ್​ ತಮ್ಮ ತಂಡದ ಪರ ಬ್ಯಾಟ್​ ಬೀಸಿದರು.

    ಫೈನಲ್​ನಲ್ಲಿ ತಂಡವು ಆಡುವುದನ್ನು ನೋಡುವುದು ಜನರಿಗೆ ಬಹಳಷ್ಟು ಸಂತೋಷವನ್ನು ನೀಡುತ್ತದೆ ಮತ್ತು ಬಹಳಷ್ಟು ಹೆಮ್ಮೆಯನ್ನು ನೀಡುತ್ತದೆ. ಆದರೆ, ಸೋಲಿನ ನಂತರ ಸಹಜ ಸ್ಥಿತಿಗೆ ವಾಪಾಸ್ಸಾಗಲು ತುಂಬಾ ಕಷ್ಟಕರವಾಗಿತ್ತು, ಅದಕ್ಕಾಗಿಯೇ ನಾನು ಎಲ್ಲೋ ಹೋಗಬೇಕು ಮತ್ತು ನನ್ನ ಮನಸ್ಸನ್ನು ದೂರ ಕೊಂಡೊಯ್ಯಬೇಕು ಎಂದು ನಿರ್ಧರಿಸಿದೆ. ಆದರೆ ನಾನು ಎಲ್ಲಿದ್ದರೂ ಜನರು ನನ್ನ ಬಳಿಗೆ ಬರುತ್ತಿದ್ದರು. ಅವರೆಲ್ಲ ನಮ್ಮ ತಂಡದ ಪ್ರಯತ್ನವನ್ನು ಶ್ಲಾಘಿಸಿದರು ಎಂದು ತಿಳಿಸಿದರು.

    ಆ ಒಂದೂವರೆ ತಿಂಗಳಲ್ಲಿ ಜನರು ನಮಗಾಗಿ ಏನು ಮಾಡಿದ್ದಾರೆ ಎಂಬುದನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಆದರೆ, ಮತ್ತೆ ಮತ್ತೆ ಅದರ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಿದರೆ, ನನಗೆ ತುಂಬಾ ನಿರಾಶೆಯಾಗುತ್ತದೆ. ಆದರೆ, ಜನರು ನನ್ನ ಬಳಿಗೆ ಬಂದು ನಮ್ಮ ಮೇಲೆ ತುಂಬಾ ಹೆಮ್ಮೆಪಡುತ್ತಾರೆ ಮತ್ತು ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಈ ಬೆಳವಣಿಗೆ ನನ್ನಲ್ಲಿ ಒಳ್ಳೆಯ ಭಾವನೆ ಮೂಡಿಸಿದೆ. ಇದರಿಂದ ನಾನು ಸಹ ಗುಣಮುಖನಾಗಿದ್ದೇನೆ. ಮತ್ತೆ ಹಿಂತಿರುಗಲು ಮತ್ತು ಮತ್ತೆ ಕೆಲಸ ಮಾಡಲು ಹಾಗೂ ಇನ್ನೊಂದು ಅಂತಿಮ ಬಹುಮಾನವನ್ನು ಹುಡುಕಲು ಇದು ಪ್ರೇರಣೆ ನೀಡುತ್ತದೆ ಎಂದು ರೋಹಿತ್ ಹೇಳಿದರು. (ಏಜೆನ್ಸೀಸ್​)

    View this post on Instagram

    A post shared by Team Ro (@team45ro)

    VIDEO| ರೋಹಿತ್ ಶರ್ಮ​ ಬೌಲಿಂಗ್​ ಸ್ಟೈಲ್​ಗೆ ಪತ್ನಿ ಕ್ಲೀನ್​ ಬೋಲ್ಡ್​! ವೈರಲ್​ ಆಯ್ತು ರಿತಿಕಾ ರಿಯಾಕ್ಷನ್​

    ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts