More

    ನಾನು ಮೋಸದ ಆಟ ಆಡಿಲ್ಲ…; ಬಿಗ್​ಬಾಸ್ ಮನೆಯಿಂದ ಬಂದ ಧನುಶ್ರೀ ಮಾತು

    ‘ಬಿಗ್​ಬಾಸ್ ಸೀಸನ್ 8’ರ ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಟಿಕ್​ಟಾಕರ್ ಧನುಶ್ರೀ ಗೌಡ, ಕಾಕತಾಳೀಯವೆಂಬಂತೆ ಮೊದಲ ವಾರವೇ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ‘ಬಿಗ್​ಬಾಸ್’ ಕಾರ್ಯಕ್ರಮದ ಇತಿಹಾಸದಲ್ಲಿ ಮನೆಗೆ ಮೊದಲು ಎಂಟ್ರಿ ಕೊಟ್ಟು, ಮೊದಲು ನಿರ್ಗಮಿಸುತ್ತಿರುವ ಸ್ಪರ್ಧಿಯಾಗಿದ್ದಾರೆ.ಇಷ್ಟಕ್ಕೂ, ಈ ಒಂದು ವಾರದ ಕಿರು ಅನುಭವವನ್ನು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.

    ಬೆಂಗಳೂರು: ‘ಬಿಗ್​ಬಾಸ್ ಅನ್ನೋದು ಒಂದೊಳ್ಳೆಯ ವೇದಿಕೆ. ಒಳ ಪ್ರವೇಶಿಸಿದಾಗ ಸುತ್ತಲೂ ಕ್ಯಾಮರಾ. ಕೊಂಚ ನರ್ವಸ್ ಆದೆ. ಆರಂಭದಲ್ಲಿ ಹೊಂದಿಕೊಳ್ಳುವುದಕ್ಕೆ ಕಷ್ಟ ಆಯ್ತು. ಅದಕ್ಕೊಂದಿಷ್ಟು ಸಮಯ ಬೇಕು. ನಾನೂ ಟೈಮ್ ತೆಗೆದುಕೊಂಡೆ. ಅಷ್ಟರಲ್ಲಿ ನನ್ನ ಟೈಮೇ ಮುಗಿದೋಯ್ತು! …’

    ಹೀಗೆ ಬೇಸರದಲ್ಲಿಯೇ ಹೇಳಿಕೊಂಡಿದ್ದು ಟಿಕ್​ಟಾಕರ್ ಧನುಶ್ರೀ ಗೌಡ. ‘ಬಿಗ್​ಬಾಸ್’ ಶುರುವಾಗಿ ಒಂದು ವಾರವಷ್ಟೇ ಆಗಿದೆ. ಅಷ್ಟರಲ್ಲಾಗಲೇ ಅಚ್ಚರಿಯ ರೀತಿಯಲ್ಲಿ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ. ಏಳು ದಿನಕ್ಕೆ ಹೊರಬಂದಿದ್ದಕ್ಕೆ ಯಾವುದೇ ಹತಾಶೆ ಭಾವ ಅವರನ್ನು ಕಾಡುತ್ತಿಲ್ಲವಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ‘ಬಿಗ್ ಮನೆಯಿಂದ ಬೇಗನೇ ಹೊರಬಂದಿದ್ದಕ್ಕೆ ನನಗೇನು ಗಿಲ್ಟಿ ಫೀಲಿಂಗ್ ಇಲ್ಲ. ನಾನು ಮಾಡಿದ ಟಾಸ್ಕ್​ಗಳಲ್ಲಿ ಶೇ. 100 ಶ್ರಮ ಹಾಕಿದ್ದೇನೆ. ಎಲ್ಲರ ಜತೆ ಹೊಂದಾಣಿಕೆಯಿಂದ ಇರಲು ಪ್ರಯತ್ನಿಸಿದ್ದೇನೆ. ‘ಬಿಗ್​ಬಾಸ್’ ಸಲುವಾಗಿ ಟೆಕ್ನಿಕ್​ಗಳನ್ನು ಕಲಿತು ನಾನೇನು ಬಂದಿರಲಿಲ್ಲ. ಹಾಗಾಗಿ ಹೊರಬಂದಿದ್ದಕ್ಕೆ ವಿಷಾದ ಕಾಡುತ್ತಿಲ್ಲ’ ಎಂಬುದು ಅವರ ಮಾತು.

    ಸಿನಿಮಾದವಳಲ್ಲ ಅಂತ ಟಾರ್ಗೆಟ್: ‘ಒಂದು ವಾರ ‘ಬಿಗ್​ಬಾಸ್’ ಮನೆಯಲ್ಲಿ ನಾನು ಹೇಗೆ ಕಾಣಿಸಿದ್ದೇನೋ, ನಿಜ ಜೀವನದಲ್ಲಿಯೂ ನಾನು ಹಾಗೆಯೇ ಇದ್ದೇನೆ. ನನ್ನತನವನ್ನು ಎಲ್ಲಿಯೂ ಮರೆಮಾಚಿಲ್ಲ. ನಾನು ನಾನಾಗಿದ್ದೆ. ಟಾಸ್ಕ್ ವಿಚಾರದಲ್ಲಿ ನನಗೆ ಸಿಕ್ಕಷ್ಟು ಅವಕಾಶ ಬೇರೆಯವರಿಗೆ ಸಿಗಲಿಲ್ಲ. ಆದರೆ, ನಾನು ವೀಕ್ ಇದ್ದಿದ್ದರಿಂದ ಆಟದ ಸ್ಟ್ರಾಟಜಿ ಗೊತ್ತಾಗಲಿಲ್ಲ. ಬುದ್ಧಿವಂತಿಕೆಯಿಂದ ಆಡಲಿಲ್ಲ. ಅದೇ ನನಗೆ ದೊಡ್ಡ ಮೈನಸ್ ಆಯಿತು. ಇಷ್ಟೆಲ್ಲ ಆದರೂ ಎಲ್ಲಿಯೂ ನಾನು ಮೋಸದ ಆಟ ಆಡಿಲ್ಲ. ಎಲ್ಲರೊಂದಿಗೆ ಬೆರೆಯುವುದಕ್ಕೆ ಪ್ರಯತ್ನಿಸಿದ್ದೇನೆ. ಸಿನಿಮಾ ಹಿನ್ನೆಲೆ ಇಲ್ಲ ಅನ್ನೋ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಿರಬಹುದು!’ ಎನ್ನುತ್ತಾರೆ.

    ಸೀರಿಯಲ್, ಸಿನಿಮಾದಲ್ಲಿಯೇ ಮುಂದಿನ ಪಯಣ: ‘ಸಿಎ ಆಗಬೇಕೆಂಬ ಕನಸಿತ್ತು. ಅದರ ಜತೆಗೆ ಬಣ್ಣದ ಲೋಕದಲ್ಲಿಯೂ ಗುರುತಿಸಿಕೊಳ್ಳುವ ಆಸೆ ಇತ್ತು. ಹೀಗಿರುವಾಗಲೇ ಟಿಕ್​ಟಾಕ್ ರಾತ್ರೋರಾತ್ರಿ ಎಲ್ಲವನ್ನೂ ಬದಲಿಸಿತು. ಪ್ರವೀಣ್ ಸುತಾರ್ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ. ರಂಗಭೂಮಿಯಿಂದ ನಟನೆ ಕಲಿಯಬೇಕೆಂದುಕೊಂಡಿದ್ದೇನೆ. ನನ್ನ ಆಸೆಗೆ ಮನೆಯವರಿಂದಲೂ ಬೆಂಬಲ ಸಿಕ್ಕಿದೆ. ಧಾರಾವಾಹಿ, ಸಿನಿಮಾ ಎರಡರಲ್ಲೂ ಮುಂದುವರಿಯುವ ಕನಸಿದೆ’ ಎಂಬುದು ಧನುಶ್ರೀ ಮಾತು.

    ‘ಬಿಗ್​ಬಾಸ್’ ವೇದಿಕೆ ಎಲ್ಲರಿಗೂ ಸಿಗುವುದಿಲ್ಲ. ಒಂದೇ ವಾರವಾದರೂ ಪರವಾಗಿಲ್ಲ, ಅಂಥದ್ದೊಂದು ಅವಕಾಶ ನೀಡಿದ ಕಲರ್ಸ್ ಕನ್ನಡಕ್ಕೆ ಧನ್ಯವಾದ. ಸುದೀಪ್ ಅವರನ್ನು ತುಂಬ ಹತ್ತಿರದಿಂದ ನೋಡಿದ್ದು ಖುಷಿ ನೀಡಿದೆ.

    | ಧನುಶ್ರೀ ಗೌಡ ನಿರ್ಗಮಿತ ಸ್ಪರ್ಧಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts