More

    ಹೊಯ್ಸಳೇಶ್ವರ ದೇಗುಲದ ಹೊರ ಆವರಣವೀಗ ಕಸಮುಕ್ತ


    ಹಳೇಬೀಡು: ಜಿಲ್ಲಾಧಿಕಾರಿಯ ಖಡಕ್ ಆದೇಶಕ್ಕೆ ಬೆಚ್ಚಿ ಬಿದ್ದ ಗ್ರಾಮಾಡಳಿತ ಹೊಯ್ಸಳೇಶ್ವರ ದೇಗುಲದ ವಾಹನ ನಿಲುಗಡೆ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ. ಜತೆಗೆ, ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯವನ್ನು ಆವರಣದಲ್ಲಿ ತಂದು ಸುರಿಯುವವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

    ವಿಶ್ವಪರಂಪರೆ ತಾಣವಾಗಿರುವ ಹಳೇಬೀಡಿನ ಸಮೂಹ ಸ್ಮಾರಕಗಳಲ್ಲಿ ಹೊಯ್ಸಳೇಶ್ವರ ದೇಗುಲಕ್ಕೆ ಪ್ರಮುಖ ಸ್ಥಾನವಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಕಲೆಯನ್ನು ವೀಕ್ಷಿಸಿ ಸಂತೃಪ್ತಗೊಂಡರೂ, ದೇಗುಲದ ಹೊರ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ಪ್ಲಾಸ್ಟಿಕ್ ಮತ್ತು ತಿಂಡಿ-ತಿನಿಸುಗಳ ತ್ಯಾಜ್ಯವನ್ನು ಕಂಡು ಬೇಸರ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು.

    ಮಾಚ್ 11ರಂದು ‘ವಿಜಯವಾಣಿ’ಯಲ್ಲಿ ಹಳೇಬೀಡು ಪಟ್ಟಣ ಪಂಚಾಯಿತಿ ಆಗುವುದೆಂದು? ಎಂಬ ಶೀರ್ಷಿಕೆಯಡಿ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ತುಳುಕುತ್ತಿದ್ದ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಮಾರ್ಚ್ 17ರಂದು ಚುನಾವಣಾ ಚೆಕ್‌ಪೋಸ್ಟ್ ಪರಿಶೀಲನೆಗೆಂದು ಬಂದಿದ್ದ ಡಿಸಿ ಸತ್ಯಭಾಮಾ ಅವರ ಕಣ್ಣಿಗೆ ತ್ಯಾಜ್ಯದ ರಾಶಿಯೇ ಕಂಡಿತ್ತಲ್ಲದೆ, ಕೆಲವು ಯುವಕರು ಮಿತಿಮೀರಿದ ಶಬ್ದದಲ್ಲಿ ಸಿನಿಮಾ ಹಾಡು ಹಾಕಿಕೊಂಡು ಪಾರ್ಕಿಂಗ್ ಆವರಣದಲ್ಲಿ ಕುಣಿಯುತ್ತಿದ್ದುದನ್ನು ಗಮನಿಸಿ ಗ್ರಾಮಾಡಳಿತಕ್ಕೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಪರಿಣಾಮ ಕಳೆದ ಮೂರು ದಿನದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆರಂಭಿಸಿದ್ದ ಸ್ವಚ್ಛತಾ ಕಾರ್ಯ ಗುರುವಾರ ಮುಕ್ತಾಯದ ಹಂತ ತಲುಪಿತ್ತು.

    ಗೂಡಂಗಡಿ ತೆರವು: ತ್ಯಾಜ್ಯ ಸಂಗ್ರಹಣೆಗೆ ಮೂಲ ಕಾರಣವಾಗಿದ್ದ ತಿಂಡಿ-ತಿನಿಸುಗಳ ಅನಧಿಕೃತ ಗೂಡಂಗಡಿಗಳನ್ನು ದೇಗುಲದ ಆವರಣದಿಂದ ಮೊದಲು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಪಿಡಿಒ ಮತ್ತು ಸಿಬ್ಬಂದಿಗೆ ಸ್ಥಳೀಯ ವ್ಯಾಪಾರಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಕಾರಣ ಪೊಲೀಸ್ ಸಹಕಾರ ಪಡೆದು ಬೆಳಗಿನಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

    ಬುಧವಾರ ಆರಂಭಿಸಿದ್ದ ಸ್ವಚ್ಛತಾ ಕಾರ್ಯವು ಗುರುವಾರ ಮುಗಿಯುವ ಹಂತಕ್ಕೆ ಬಂದ ಬಳಿಕ, ಪಾರ್ಕಿಂಗ್ ಆವರಣದಲ್ಲಿ ಕಸ ಹಾಕುವವರಿಗೆ ಮತ್ತು ತಿಂಡಿ ತಿನಿಸು ಮಾರುವವರಿಗೆ ದಂಡ ವಿಧಿಸುವ ಬಗ್ಗೆ ಫಲಕ ಅಳವಡಿಸಿ ಎಚ್ಚರಿಕೆ ನೀಡಲಾಗಿದೆ.

    ‘ಪ್ಲಾಸ್ಟಿಕ್ ಮಾರಾಟ ಕಾನೂನುಬಾಹಿರವಾಗಿದ್ದು, ಇದನ್ನು ಉಲ್ಲಂಘಿಸುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಸದ್ಯ ಜಿಲ್ಲಾಧಿಕಾರಿ ಆದೇಶದಂತೆ ಅಂಗಡಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿದ್ದೇವೆ. ಇದನ್ನು ನಿರಂತರವಾಗಿಸಲು ಜನತೆ ಮತ್ತು ಪಂಚಾಯಿತಿ ಸದಸ್ಯರ ಸಹಕಾರ ಅತ್ಯಗತ್ಯ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ.

    ಪಂಚಾಯಿತಿ ವತಿಯಿಂದ ಪ್ರತಿನಿತ್ಯ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ, ವ್ಯಾಪಾರಿಗಳು ತಿಂಡಿ, ತಿನಿಸು ಮತ್ತು ಕಬ್ಬಿನ ಹಾಲು ಇತ್ಯಾದಿಯನ್ನು ಪ್ರವಾಸಿಗರಿಗೆ ಕೊಡಲು ಪ್ಲಾಸಿಕ್ ಮೂಲದ ವಸ್ತುಗಳನ್ನು ಅತಿಯಾಗಿ ಬಳಸುತ್ತಿದ್ದರು. ಜತೆಗೆ ಎಲ್ಲ ರೀತಿಯ ತ್ಯಾಜ್ಯವನ್ನೂ ಸ್ಥಳದಲ್ಲೇ ಬಿಸಾಡುತ್ತಿದ್ದರು. ಇದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ಪ್ರಸ್ತುತ ಆವರಣವು ಸ್ವಚ್ಛವಾಗಿದ್ದು, ದೇಗುಲದ ಸುತ್ತ ಉತ್ತಮ ವಾತಾವರಣ ಸೃಷ್ಟಿಸಿದಂತಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಮತ್ತು ಪಿಡಿಒ ಅವರು ಅಭಿನಂದನಾರ್ಹರು
    ಕೃಷ್ಣ
    ಗ್ರಾಪಂ ಮಾಜಿ ಅಧ್ಯಕ್ಷ, ಹಳೇಬೀಡು.
    =-=-=-=-=-=-=-=-=-=-=-=-=-=-=-=-=-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts