ಹಳೇಬೀಡು: ಭೂಮಿತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ ಎಂಬ ಭರವಸೆಯೊಂದಿಗೆ ವಂಶಪಾರಂಪರ್ಯವಾಗಿ ಕೃಷಿಯಲ್ಲೇ ಜೀವನ ನಡೆಸುತ್ತಿರುವ ರೈತ ನಿಂಗಪ್ಪಶೆಟ್ಟಿ…ಕಷ್ಟಕರ ಸಂದರ್ಭದಲ್ಲಿಯೂ ವ್ಯವಸಾಯ ತೊರೆಯದೆ ಯಶಸ್ವಿಯಾಗಿ ಮುನ್ನೆಡೆದು ಮಾದರಿಯಾಗಿರುವ ಕೃಷಿಕ…
45 ವರ್ಷದಿಂದ ವ್ಯವಸಾಯ ಮಾಡುತ್ತಿರುವ ಪಟ್ಟಣದ ರೈತ ನಿಂಗಪ್ಪಶೆಟ್ಟಿ, ತಾವು ಹೊಂದಿರುವ ಒಟ್ಟು 7 ಎಕರೆ ಜಮೀನಿನಲ್ಲಿ ತೆಂಗು, ಹಲಸು, ಮಾವಿನ ಮರಗಳ ಪೋಷಣೆಯೊಂದಿಗೆ ಪ್ರಮುಖವಾಗಿ ಜೋಳ, ರಾಗಿ, ಬೂದುಕುಂಬಳ ಮತ್ತು ಸಿಹಿ ಕುಂಬಳ ಬೆಳೆಯುತ್ತಿದ್ದಾರೆ. ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ತರಕಾರಿಯನ್ನೂ ಬೆಳೆಯುತ್ತಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಶೇ.90ರಷ್ಟು ಕೃಷಿ ಭೂಮಿ ನದಿ ಅಥವಾ ಜಲಾಶಯ ಮೂಲದ ನೀರಾವರಿಯಿಂದ ವಂಚಿತವಾಗಿ ರುವುದರಿಂದ ಇಲ್ಲಿನ ರೈತರು ಮಳೆಯನ್ನೇ ನೆಚಿ ವ್ಯವಸಾಯ ಮಾಡುವುದು ಅನಿವಾರ್ಯ. ಪಟ್ಟಣದ ದ್ವಾರಸಮುದ್ರ ಕೆರೆಯಲ್ಲಿ ನೀರು ತುಂಬಿದ್ದರೆ ಕೊಳವೆಬಾವಿಗಳು ಚಾಲ್ತಿಯಲ್ಲಿ ಇರುತ್ತವೆ. ಇದರಿಂದಲೇ ರೈತರು ನೀರಿನ ಸೌಲಭ್ಯ ಪಡೆದು ಎಲ್ಲ ಮಾದರಿಯ ಕೃಷಿಯನ್ನು ಮುನ್ನೆಡೆಸಿಕೊಂಡು ಹೋಗಬೇಕಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಬೇಸಾಯವನ್ನು ನಿರ್ಲಕ್ಷಿಸದೆ ಫಲವತ್ತತೆಯನ್ನೂ ಕಾಪಾಡಿಕೊಂಡು ನಿಂಗಪ್ಪಶೆಟ್ಟಿ ಭೂಮಿ ತಾಯಿಯ ಸೇವೆ ನಡೆಸುತ್ತಿದ್ದಾರೆ.
ಕೈ ಹಿಡಿಯುವ ಕುಂಬಳಕಾಯಿ: ಪಟ್ಟಣಕ್ಕೆ ಸಮೀಪದ ಚೀಲನಾಯ್ಕನ ಹಳ್ಳಿ ಗ್ರಾಮದಲ್ಲಿರುವ ತಮ್ಮ 5 ಎಕರೆ ವ್ಯಾಪ್ತಿಯ ಹೊಲದಲ್ಲಿ 100 ತೆಂಗಿನ ಮರಗಳನ್ನು ರೈತ ನಿಂಗಪ್ಪಶೆಟ್ಟಿ ಬೆಳೆಸಿದ್ದಾರೆ. ಇದರಿಂದ ಸಿಗುವ ಕೊಬ್ಬರಿ ಹಾಗೂ ತೆಂಗಿನಕಾಯಿಯನ್ನು ವರ್ಷಕ್ಕೆರೆಡು ಬಾರಿ ಮಾರಾಟ ಮಾಡಿ ಅಲ್ಪ ಪ್ರಮಾಣದ ಲಾಭವನ್ನೂ ಗಳಿಸುತ್ತಿದ್ದಾರೆ. ಹಲವು ವರ್ಷಗಳಿಂದ ಹೆಚ್ಚು ಆಸಕ್ತಿ ವಹಿಸಿ ಬೂದು ಹಾಗೂ ಸಿಹಿ ಕುಂಬಳ (ಚೇಣಿಕಾಯಿ)ವನ್ನೂ ಬೆಳೆಯುತ್ತಿದ್ದು, ಈಚಿನ ದಿನಗಳಲ್ಲಿ ಬೇಡಿಕೆಯೂ ಹೆಚ್ಚಾಗಿದೆ.
ಕುಂಬಳಕಾಯಿ ತೆಗೆದುಕೊಂಡು ಹೋಗಲು ಪಶ್ಚಿಮ ಬಂಗಾಳದ ವರ್ತಕರು ಹೆಚ್ಚಾಗಿ ಬರುವುದಲ್ಲದೆ, ಬೆಳೆಯ ಸಮಗ್ರ ಪಾಲು ತಮಗೇ ಬೇಕೆಂದು ಮುಂಗಡವಾಗಿ ಕಾಯ್ದಿರಿಸುವ ಸನ್ನಿವೇಷವೂ ಇದೆ. ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಮಾದರಿಯಲ್ಲಿ ತೆಂಗನ್ನು ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಕುಂಬಳಕಾಯಿ ಕೃಷಿ ತಮಗೆ ವರದಾನವಾಗಿದೆ ಎನ್ನುತ್ತಾರೆ ನಿಂಗಪ್ಪಶೆಟ್ಟಿ. ಇದಲ್ಲದೆ ಹೊಲದಲ್ಲಿ 5 ಮಾವು ಹಾಗೂ 3 ಹಲಸಿನ ಮರಗಳಿದ್ದು, ಹಂಗಾಮಿನ ಕಾಲದಲ್ಲಿ ಲಭ್ಯವಾಗುವ ಹಣ್ಣುಗಳನ್ನು ಕುಟುಂಬದ ಬಳಕೆಗೆ ಇಟ್ಟುಕೊಂಡು ಸಮೀಪದ ಕೃಷಿಕರಿಗೂ ಹಂಚುತ್ತಾರೆ. ವರ್ಷಕ್ಕೆ ಮನೆಗೆ ಬೇಕಾಗುವಷ್ಟು ಮಾತ್ರ ರಾಗಿಯನ್ನು ಬೆಳೆಯುವ ಇವರು, ನಿತ್ಯ ರಾಗಿಮುದ್ದೆ ಇಲ್ಲದೆ ಊಟ ಸಮಾಪ್ತಿಯಾಗುವುದಿಲ್ಲ ಎನ್ನುತ್ತಾರೆ.
ಪಟ್ಟಣದ ಹೊರವಲಯದಲ್ಲಿ ಎರಡು ಎಕರೆ ಗದ್ದೆ ಇದ್ದು, ಮುಂಗಾರು ಸಮಯದಲ್ಲಿ ಸೂರ್ಯಕಾಂತಿ ಹಾಗೂ ಹಿಂಗಾರಿನಲ್ಲಿ ಅವರೆಕಾಯಿ ಬೆಳೆಯುತ್ತಾರೆ. ಹೊಲ ಹಾಗೂ ಗದ್ದೆಯಲ್ಲಿ ಕೊಳವೆಬಾವಿ ಸೌಲಭ್ಯ ಇರುವುದರಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದ್ದು, ದ್ವಾರಸಮುದ್ರ ಕೆರೆಯಲ್ಲಿ ನೀರು ಕಡಿಮೆಯಾದರೆ ಇಲ್ಲಿನ ರೈತರ ವ್ಯವಸಾಯಕ್ಕೆ ತೀವ್ರ ತೊಂದರೆಯಾಗುತ್ತದೆ.
ಬೆನ್ನೆಲುಬಾಗಿರುವ ಜೋಡೆತ್ತು: ತಂದೆ ಕಾಲದಿಂದಲೂ ಎರಡು ಜೊತೆ ಎತ್ತುಗಳನ್ನು ಪೋಷಣೆ ಮಾಡುತ್ತಿದ್ದು, ವಾರ್ಷಿಕವಾಗಿ ಶೇ.90 ರಷ್ಟು ಉಳುಮೆಗೆ ಎತ್ತುಗಳನ್ನೇ ಬಳಸುತ್ತಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಟ್ರಾಕ್ಟರ್ ಬಳಸುವುದನ್ನು ಹೊರತುಪಡಿಸಿದರೆ, ಎತ್ತಿನ ಬೇಸಾಯವೇ ಪ್ರಧಾನ. ತಂದೆ ಬಸಪ್ಪಶೆಟ್ಟಿ ಅಂದಾಜು 50 ವರ್ಷ ಕೃಷಿ ಕಾಯಕ ಮಾಡಿದ್ದರು. ಆಗಲೂ 4 ಎತ್ತುಗಳಿದ್ದವು. ಹಾಲು -ಮೊಸರಿಗಾಗಿ 3 ಹಸು ಸಾಕಿದ್ದರು. ಈಗಲೂ 4 ಎತ್ತು, 3 ಹಸು ಹಾಗೂ 2 ಕರುವಿನ ಪಾಲನೆ ಮಾಡುತ್ತಿದ್ದೇವೆ. ಇವುಗಳನ್ನು ನಾವು ದೈವಸಮಾನವಾಗಿ ಕಾಣುತ್ತಿದ್ದು, ಅನ್ನದ ಭಾಗ್ಯ ನೀಡುವ ಭೂಮಿ ಮತ್ತು ಜಾನುವಾರುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಎನ್ನುತ್ತಾರೆ ನಿಂಗಪ್ಪಶೆಟ್ಟಿ.
ಇವರ ಕೆಲಸಕ್ಕೆ ಪತ್ನಿ ವನಿತಾ ಹಾಗೂ ಪುತ್ರ ಮಂಜುನಾಥ್ ಸಹಕಾರ ನೀಡುತ್ತಿದ್ದಾರೆ. ನಿತ್ಯ ಮುಂಜಾನೆ 4.30ಕ್ಕೆ ಕಾಯಕ ಆರಂಭವಾಗುತ್ತದೆ. ಕೊಟ್ಟಿಗೆ ಸ್ವಚ್ಛಗೊಳಿಸಿ ಸಗಣಿಯನ್ನು ಬಿದಿರು ಕುಕ್ಕೆಗಳಲ್ಲಿ ತುಂಬಿ ಗದ್ದೆ ಮತ್ತು ಹೊಲಕ್ಕೆ ಸುರಿಯುತ್ತಾರೆ. ಸಾವಯವ ಗೊಬ್ಬರವೇ ಸಾಕಷ್ಟು ಲಭ್ಯವಾಗುವುದರಿಂದ ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಜಾನುವಾರುಗಳಿಗೆ ಮೇವು, ನೀರು ಇತ್ಯಾದಿಗಳನ್ನು ಪೂರೈಸಿ ತಾವೂ ಸಿದ್ಧವಾಗಿ 7 ಗಂಟೆ ವೇಳೆಗೆ ಜಮೀನಿಗೆ ಹೊರಡುತ್ತಾರೆ.
ತಂದೆ ಕಾಲದಲ್ಲಿದ್ದ ಮರದ ಎತ್ತಿನ ಬಂಡಿ ಶಿಥಿಲವಾಗಿರುವ ಕಾರಣ, ಕೃಷಿ ಪರಿಕರ ಹಾಗೂ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಸಾಗಿಸಲು ಪ್ರಸ್ತುತ ಟೈರ್‌ಗಾಡಿಯನ್ನು ಉಪಯೋಗಿಸುತ್ತಿದ್ದಾರೆ. ತಂದೆ, ತಾತನ ಕಾಲವನ್ನೂ ಸೇರಿಸಿಕೊಂಡರೆ ನಮ್ಮ ಕೃಷಿ ಕಾಯಕ ಶತಮಾನವನ್ನು ಮೀರುತ್ತದೆ. ಅನೇಕ ಏಳು-ಬೀಳಿನ ನಡುವೆಯೂ ಸಾಂಪ್ರದಾಯಿಕ ಕೃಷಿಗೆ ಆದ್ಯತೆ ನೀಡುತ್ತಿದ್ದು, ಮಕ್ಕಳೂ ಇದರಲ್ಲೇ ಮುಂದುವರಿಯಬೇಕು ಎನ್ನುವುದು ನನ್ನ ಆಸೆ ಎನ್ನುತ್ತಾರೆ ನಿಂಗಪ್ಪಶೆಟ್ಟಿ.
ವಾರ್ಷಿಕ ಆದಾಯವನ್ನು ನಾನು ಈವರೆಗೂ ಲೆಕ್ಕ ಮಾಡಿಲ್ಲ. ಬೆಳೆ ಕೈಗೆ ಬಂದಾಗ ಚಾಲ್ತಿಯಲ್ಲಿರುವ ದರವನ್ನು ಕೊಟ್ಟು ವರ್ತಕರು ಕೊಳ್ಳುತ್ತಾರೆ. ಇದರಿಂದ ಜಮೀನು, ಕೊಳವೆ ಬಾವಿ ಹಾಗೂ ಮನೆಯ ನಿರ್ವಹಣೆ ನಡೆಯುತ್ತದೆ. ಉಳಿದ ಹಣವನ್ನು ಮತ್ತೆ ಕೃಷಿಗೇ ಹಾಕಬೇಕಾಗುತ್ತದೆ. ಹೀಗಾಗಿ ಲಾಭ-ನಷ್ಟಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ವರ್ಷಕ್ಕಾಗುವಷ್ಟು ರಾಗಿ ಬೆಳೆಯುವುದರಿಂದ ಮುದ್ದೆ, ಅಂಬಲಿಗೆ ತೊಂದರೆ ಇಲ್ಲ. ಜಾನುವಾರುಗಳನ್ನು ಪೋಷಣೆ ಮಾಡುವ ಮೂಲಕ ಹಾಲಿನ ಕೊರತೆ ನೀಗಸಿಕೊಳ್ಳುತ್ತೇವೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎನ್ನುವುದು ನನ್ನ ಅಭಿಪ್ರಾಯ.
> ನಿಂಗಪ್ಪಶೆಟ್ಟಿ ರೈತ, ಹಳೇಬೀಡು