More

    ಈಡೇರಲಿದೆ ಭಕ್ತರ ಮನೋಭಿಲಾಷೆ

    ಹಳೇಬೀಡು: ಬೇಡಿ ಬರುವ ಭಕ್ತರ ಮನೋಭಿಲಾಷೆಯನ್ನು ಈಡೇರಿಸುವ ಮೂಲಕ ಜನಮಾನಸದಲ್ಲಿ ನೆಲೆಯೂರಿರುವ ವಿಠ್ಠಲ ಮತ್ತು ರಖುಮಾಯಿ ಅಮ್ಮನವರ ಸನ್ನಿಧಾನ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

    ಪಟ್ಟಣದಲ್ಲಿನ ದೇಗುಲಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದಿದ್ದು, ಶ್ರೀ ಕ್ಷೇತ್ರ ಪಂಢರಪುರದಲ್ಲಿರುವ ಸ್ವಯಂ ಭೂವಿಠ್ಠಲನ ಮೂರ್ತಿ ಮಾದರಿಯಲ್ಲೇ ಪಾಂಡುರಂಗನ ಮೂರ್ತಿಯನ್ನು ಇಲ್ಲೂ ಪ್ರತಿಷ್ಠಾಪಿಸಲಾಗಿದೆ. ಇದರ ಪಕ್ಕದಲ್ಲೇ ರಖುಮಾಯಿ ಅಮ್ಮನವರೂ ನೆಲೆಸಿರುವುದು ಮತ್ತೊಂದು ವಿಶೇಷ.

    ಸಾಮಾನ್ಯವಾಗಿ ವಿಠ್ಠಲ ಮತ್ತು ರಖುಮಾಯಿ ಮೂರ್ತಿ ಒಂದೇ ದೇಗುಲದ ಪ್ರತ್ಯೇಕ ಗರ್ಭಗುಡಿ ಯಲ್ಲಿ ಸ್ಥಾಪನೆಯಾಗಿರುತ್ತದೆ. ಆದರಿಲ್ಲಿ ಶಿಲೆಯ ಪ್ರಭಾವಳಿ ಸಹಿತವಾಗಿ 2013ರಲ್ಲಿ ಒಟ್ಟಿಗೆ ಪ್ರತಿಷ್ಠಾಪಿಸಲಾಗಿದ್ದು, ಪ್ರತಿ ದಿನ ನಿತ್ಯಾರ್ಚನೆ ನೆರವೇರಲಿದೆ. ಇದರೊಂದಿಗೆ ವಾರ್ಷಿಕ ಮಹೋತ್ಸವವೂ ವೈಭವದಿಂದ ನಡೆಯಲಿದೆ.

    ಏಕಾದಶಿ ದಿನದಂದು ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾದಿಗಳು ನೆರವೇರಲಿವೆ. ಅಂದು ಭಕ್ತರು ಉಪವಾಸ ವ್ರತ ಆಚರಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸ್ತುತ ದೇಗುಲದ ಆಡಳಿತವನ್ನು ಭಾವಸಾರ್ ಕ್ಷತ್ರಿಯ ಮಂಡಳಿ ಮತ್ತು ವಿಠ್ಠಲ-ರಖುಮಾಯಿ ದೇಗುಲ ಟ್ರಸ್ಟ್ ನಿರ್ವಹಿಸುತ್ತಿದೆ.

    ಪಾಂಡುರಂಗನ ದರ್ಶನಕ್ಕೆ ಬರುವ ಭಕ್ತರಿಗೆ ಸ್ವತಃ ವಿಠ್ಠಲ ದರ್ಶನವಾದಂತಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಆರಂಭದಲ್ಲಿ ಸಂತರಿಗೆ ಪೂಜೆ ಸಲ್ಲಿಸಿ, ಬಳಿಕ ಪಾಂಡುರಂಗನ ಅರ್ಚನೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಸಂತ ಪರಂಪರೆಯಲ್ಲಿ ನಿವೃತ್ತಿನಾಥ, ಸೋಪಾನದೇವ, ಜ್ಞಾನೇಶ್ವರ ಹಾಗೂ ಮುಕ್ತಾಬಾಯಿ ಅವರಿಗೆ ಅಗ್ರಸ್ಥಾನವನ್ನು ನೀಡಲಾಗಿದ್ದು, ಅಂತೆಯೇ ಆರಾಧನಾ ಕ್ರಮವೂ ನಡೆದು ಬಂದಿದೆ.

    ಅತ್ಯಾಕರ್ಷಕ ದಿಂಡಿ ಉತ್ಸವ: ದೇಗುಲದಲ್ಲಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವಾರ್ಷಿಕ ಉತ್ಸವ ನಡೆಯಲಿದೆ. ಸಪ್ತಾಹದ ಮಾದರಿಯಲ್ಲಿ ವಿವಿಧ ಹೋಮ, ಹವನ, ಗ್ರಂಥ ಪಾರಾಯಣ ಹಾಗೂ ವಿಶೇಷ ಪೂಜೆ ನಡೆಯಲಿದೆ. ಮೊದಲ ದಿನ ಮೂಲ ದೇವರಿಗೆ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಬಳಿಕ ವಾರ್ಕರಿಗಳು ಮತ್ತು ಭಕ್ತರು ಕೀರ್ತನೆ, ಭಜನೆ ಮೂಲಕ ಜ್ಞಾನೇಶ್ವರಿ ಗ್ರಂಥವನ್ನು ತಲೆಯ ಮೇಲೆ ಹೊತ್ತು ತಂದು ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಎರಡು ದಿನ ಗ್ರಂಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ.

    ಮೊದಲ ದಿನ ರಾತ್ರಿ ಕೀರ್ತನೆಯೊಂದಿಗೆ ಆರಂಭವಾಗುವ ಕಾರ್ಯಕ್ರಮ, ಅಖಂಡ ಭಜನೆ, ಪಾಳಿ ಭಜನೆ, ಸಂತವಾಣಿ, ಭಾರೂಡ್ ಹಾಗೂ ಬೆಳಗಿನ ಜಾವದ ಕಾಕಡಾರತಿಯೊಂದಿಗೆ ಒಂದು ಹಂತದ ಕಾರ್ಯಕ್ರಮವು ಸಂಪನ್ನವಾಗುತ್ತದೆ. ಆನಂತರ ಮತ್ತೆ ಮೂಲ ದೇವರ ಪೂಜೆಯನ್ನು ನೆರವೇರಿಸಿ ಉತ್ಸವ ಮೂರ್ತಿ ಮತ್ತು ಜ್ಞಾನೇಶ್ವರಿ ಗ್ರಂಥವನ್ನು ಪುಷ್ಪಮಂಟಪದಲ್ಲಿಟ್ಟು ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಉತ್ಸವ ದೇಗುಲ ತಲುಪಲಿದ್ದು, ಬಳಿಕ ಸಾಂಪ್ರದಾಯಿಕ ಕಾಲಕೀರ್ತನೆ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಆ ಮೂಲಕ ಎರಡು ದಿನದ ದಿಂಡಿ ಉತ್ಸವಕ್ಕೆ ಮಂಗಳ ಹಾಡಲಾಗುತ್ತದೆ.

    ದೇವಸ್ಥಾನವನ್ನು ಭಾವಸಾರ್ ಸಮಾಜ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾಗಿದೆ. ದೇವರ ಪ್ರತಿಷ್ಠಾಪನೆಯನ್ನು ವೈದಿಕ ಆಗಮೋಕ್ತ ಸಂಪ್ರದಾಯದಂತೆ ನಡೆಸಲಾಗಿದೆ. ಹನ್ನೊಂದು ವರ್ಷದಿಂದ ಪೂಜಾದಿಗಳು ನಡೆಯುತ್ತಿದ್ದು, ಇಷ್ಟಾರ್ಥವನ್ನು ಬೇಡಿ ಬರುವ ಭಕ್ತರಿಗೆ ಒಳ್ಳೆಯ ಫಲಗಳು ದೊರೆತಿವೆ. ಇಲ್ಲಿನ ಏಕಾದಶಿ ಪೂಜೆಗೆ ವಿಶೇಷ ಮಹತ್ವವಿದೆ.
    ಬಿ.ಸಿ.ತುಕಾರಾಮ್ ರಾವ್ ಅಧ್ಯಕ್ಷ, ಭಾವಸಾರ್ ಕ್ಷತ್ರಿಯ ಸಮಾಜ

    ಪಂಢರಿ ಸಂಪ್ರದಾಯದಲ್ಲಿ ಕೀರ್ತನೆಗಳ ಮೂಲಕ ಸಲ್ಲಿಸುವ ಪೂಜೆಗೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ವೇದೋಕ್ತ ವಿಧಾನದಲ್ಲಿ ನಿತ್ಯ ಪೂಜೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸಲ್ಲಿಸಲಾಗುತ್ತಿದೆ. ಆಷಾಢ ಮಾಸದ ಪ್ರಥಮ ಏಕಾದಶಿ ಮತ್ತು ಕಾರ್ತಿಕ ಏಕಾದಶಿಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರಪೂಜೆ ಮತ್ತು ದರ್ಶನದ ವ್ಯವಸ್ಥೆ ಇರಲಿದೆ.
    ಉದಯಕುಮಾರ್, ಅರ್ಚಕ ವಿಠ್ಠಲ-ರಖುಮಾಯಿ ದೇವಸ್ಥಾನ, ಹಳೇಬೀಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts